ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ

ಬಂದು ಹೋಗಲು ಮಾರ್ಗವಿದೆ. ಆದರೂ ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ ಬಂಧಿಸಿಕೊಂಡು, ತಾನಾಗಿಯೇ ಸಾಯುತ್ತದೆ. ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು ~ ರಾಮಕೃಷ್ಣ ಪರಮಹಂಸ


ಭಕ್ತ : ಮಹಾಶಯರೆ, ಈ ಸಂಸಾರ ಮಿಥ್ಯೆಯಾದುದೇನು?

ಶ್ರೀರಾಮಕೃಷ್ಣರು: ಹೌದು, ಭಗವಂತನ ಸಾಕ್ಷಾತ್ಕಾರವನ್ನು ಪಡೆಯದವರೆಗೆ ಈ ಜಗತ್ತು ಮಿಥ್ಯೆಯಾದುದೇ. ಅಜ್ಞಾನವಶದಿಂದ ಮನುಷ್ಯ ಭಗವಂತನನ್ನು ಮರೆತು `ನನ್ನದು…ನನ್ನದು..’ ಅನ್ನುತ್ತಲೇ ಇರುತ್ತಾನೆ. ಮಾಯೆಯಿಂದ ಬದ್ಧನಾಗಿ, ಕಾಮಕಾಂಚನದಿಂದ ಮುಗ್ಧನಾಗಿ ಅಧೋಗತಿಗೆ ಇಳಿಯುತ್ತಲೇ ಇರುತ್ತಾನೆ. ಮಾಯೆಯ ದೆಸೆಯಿಂದ ಮನುಷ್ಯ ಅಂಥ ಅಜ್ಞಾನಿಯಾಗುತ್ತಾನೆ. ಈ ಸಂಸಾರದಿಂದ ಮುಕ್ತನಾಗಲು ದಾರಿಯಿದ್ದರೂ ಕೂಡ ಅದನ್ನು ಪತ್ತೆ ಮಾಡಲಾರದವನಾಗಿಬಿಡುತ್ತಾನೆ!

ಈ ಜಗತ್ತು ಎಷ್ಟು ಅನಿತ್ಯವಾದುದ ಎಂಬುದನ್ನು ನೀವು ನಿಮ್ಮ ಸ್ವಂತ ಅನುಭವದಿಂದಲೇ ಅರಿತುಕೊಂಡಿದ್ದೀರಿ. ಈ ದೃಷ್ಟಿಯಿಂದ ಅದನ್ನು ನೋಡಿ. ಎಷ್ಟೊಂದು ಜನ ಈ ಜಗತ್ತಿನಲ್ಲಿ ಹುಟ್ಟಿ ಸತ್ತಿದ್ದಾರೆ! ಜನ ಹುಟ್ಟುತ್ತಾರೆ ಮತ್ತು ಸಾಯುತ್ತಾರೆ. ಈ ಜಗತ್ತು ಈಗಿದೆ, ಈಗಿಲ್ಲ… ಇದು ಅನಿತ್ಯವಾದುದು. ಯಾರನ್ನು `ನನ್ನವರು, ನನ್ನವರು’ ಅನ್ನುತ್ತಿದ್ದೀರೊ, ನೀವು ಸಾಯುವಾಗ ಕಣ್ಣು ಮುಚ್ಚಿದೊಡನೆ ಯಾರೂ ಜೊತೆಯಲ್ಲಿ ಬರುವುದಿಲ್ಲ.

`ಬಂದು ಹೋಗಲು ಮಾರ್ಗವಿದೆ. ಆದರೂ ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ ಬಂಧಿಸಿಕೊಂಡು, ತಾನಾಗಿಯೇ ಸಾಯುತ್ತದೆ. ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು. ಅದಕ್ಕೆ ಬದಲಾಗಿ, ‘ನೀನು, ನಿನ್ನದು’ ಎಂಬ ಭಾವನೆಯೇ ಜ್ಞಾನ; `ನಾನು, ನನ್ನದು’ ಎಂಬುದು ಅಜ್ಞಾನ. ಜ್ಞಾನ, “ಹೇ ಭಗವಂತ, ನೀನೇ ಕರ್ತ, ನಾನು ಅಕರ್ತ” ಎಂಬ ಭಾವನೆಯನ್ನು ಮೂಡಿಸುತ್ತದೆ. “ಎಲ್ಲವೂ ನಿನಗೆ ಸೇರಿವೆ. ದೇಹ, ಮನಸ್ಸು, ಗೃಹ, ಪರಿವಾರ, ಜೀವ, ಜಗತ್ತು ಎಲ್ಲವೂ ನಿನಗೆ ಸೇರಿವೆ. ಈ ಯಾವುದೂ ನನ್ನವಲ್ಲ” ಎಂಬ ತಿಳಿವು ನೀಡುತ್ತದೆ.

ಭಗವಂತನ ಮಾಯೆಯಿಂದಲೇ ಈ ಜಗತ್ತು, ಈ ಸಂಸಾರಗಳೆಲ್ಲವೂ ಉದ್ಭವಿಸಿವೆ. ಮಹಾಮಾಯೆಯಲ್ಲಿ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಇವೆ. ವಿದ್ಯಾಮಾಯೆಯನ್ನು ಅವಲಂಬಿಸಿದರೆ, ಸಾಧುಸಂಗ, ಜ್ಞಾನ, ಭಕ್ತಿ, ಪ್ರೇಮ, ವೈರಾಗ್ಯ ಇವೆಲ್ಲಾ ಉಂಟಾಗುತ್ತದೆ. ಅವಿದ್ಯಾಮಾಯೆ ಎಂದರೆ ಪಂಚಭೂತಗಳು ಮತ್ತು ಪಂಚೇಂದ್ರಿಯಗಳ ವಸ್ತುಗಳು. ರೂಪ, ರಸ, ಗಂಧ, ಸ್ಪರ್ಶ, ಶಬ್ದ, ಇವು ಭಗವಂತನನ್ನು ಮರೆಸಿಬಿಡುತ್ತವೆ.

Leave a Reply