ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ ಪ್ರೀತಿ ಮತ್ತು ಅದರ ವಿಘಟನೆ… (ಭಾಗ- 9) : Art of love #41

ಮಧ್ಯ ಯುಗದ ಧಾರ್ಮಿಕ ಸಂಸ್ಕೃತಿಗಳಲ್ಲಿ, ಸಾಮಾನ್ಯ ಮನುಷ್ಯ ದೇವರನ್ನು ತನಗೆ ಸಹಾಯ ಮಾಡುವ ತಂದೆಯಂತೆ, ತಾಯಿಯಂತೆ ಕಾಣುತ್ತಿದ್ದ. ಅದೇ ಸಮಯದಲ್ಲಿ ಅವನು ದೇವರನ್ನು ತುಂಬ ಗಂಭೀರವಾಗಿಯೂ ಪರಿಗಣಿಸಿದ್ದ, ತನ್ನ ಬದುಕಿನ ಆತ್ಯಂತಿಕ ಗುರಿ ದೇವರ ತತ್ವಗಳಿಗನುಸಾರವಾಗಿ ಬದುಕುವುದು ಎಂದು ತಿಳಿದುಕೊಂಡಿದ್ದ ಮತ್ತು, “ಮುಕ್ತಿ”ಯನ್ನ ಅವನ ಬದುಕಿನ ಘನ ಉದ್ದೇಶವೆಂದೂ ಹಾಗು ಬೇರೆಲ್ಲವೂ ಈ ಉದ್ದೇಶಕ್ಕೆ ಪೂರಕ ಎಂದೂ ಅರ್ಥ ಮಾಡಿಕೊಂಡಿದ್ದ. ಈಗ ಇಂಥ ಯಾವ ಪ್ರಯತ್ನಗಳೂ ಚಾಲ್ತಿಯಲ್ಲಿಲ್ಲ . ದೈನಂದಿನ ಬದುಕು ಕಟ್ಟು ನಿಟ್ಟಾಗಿ ಧಾರ್ಮಿಕ ಮೌಲ್ಯಗಳಿಂದ ಪ್ರತ್ಯೇಕವಾಗಿದೆ. ಈಗ ಬದುಕನ್ನು ಭೌತಿಕ ಸೌಕರ್ಯಗಳಿಗಾಗಿ, ಮತ್ತು ವ್ಯಕ್ತಿತ್ವದ ಮಾರುಕಟ್ಟೆಯಲ್ಲಿನ (personality market) ಯಶಸ್ಸಿಗಾಗಿ ತುಡಿಯಲು ಮೀಸಲಿಡಲಾಗಿದೆ. ನಮ್ಮ ಸೆಕ್ಯುಲರ್ ಪ್ರಯತ್ನಗಳೆಲ್ಲ ಕಟ್ಟಲ್ಪಟ್ಟಿರುವುದು ಉಪೇಕ್ಷೆ (indifference) ಮತ್ತು ಅಹಂಭಾವಗಳ (egotism) ತಳಹದಿಯ ಮೇಲೆ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… : https://aralimara.com/2022/07/31/love-55/

ಇಬ್ಬರು ವ್ಯಕ್ತಿಗಳು ತಮ್ಮ ಅಸ್ತಿತ್ವದ ಕೇಂದ್ರದಿಂದ ಪರಸ್ಪರ ಸಂಹವನ ಸಾಧಿಸಿದಾಗ ಮಾತ್ರ ಅವರಿಬ್ಬರ ನಡುವೆ ಪ್ರೀತಿ ಸಾಧ್ಯ. ಕೇವಲ ಈ “ಕೇಂದ್ರ -ಅನುಭವದಲ್ಲಿ” ಮಾತ್ರ ಅಡಗಿದೆ ಮನುಷ್ಯನ ವಾಸ್ತವ, ಇಲ್ಲಿ ಮಾತ್ರ ಇದೆ ಜೀವಂತಿಕೆ, ಇಲ್ಲಿ ಮಾತ್ರ ಇದೆ ಪ್ರೀತಿಯ ನೆಲೆ. ಹೀಗೆ ಅನುಭವಕ್ಕೆ ಬಂದ ಪ್ರೀತಿ, ನಿರಂತರ ಸವಾಲಿನ ರೀತಿಯದು; ಇದು ವಿಶ್ರಾಂತಿಯ ತಾಣವಲ್ಲ, ಇದು ಚಲನೆಯ, ಬೆಳವಣಿಗೆಯ ಸಹಯೋಗದ ರೀತಿಯದು. ಈ ರೀತಿಯ ಪ್ರೀತಿಯಲ್ಲಿನ ಸಾಮರಸ್ಯ ಅಥವಾ ಸಂಘರ್ಷ, ಖುಶಿ ಅಥವಾ ದುಗುಡ, ಇಬ್ಬರು ವ್ಯಕ್ತಿಗಳು ತಮ್ಮ ಅಸ್ತಿತ್ವದ ತಿರುಳಿನಿಂದ ಪರಸ್ಪರರನ್ನ ಅನುಭವಿಸುತ್ತಿದ್ದಾರೆ ಮತ್ತು ಅವರು ತಮ್ಮೊಳಗೆ ತಾವು ಒಂದಾಗುವುದರ ಮೂಲಕ ಪರಸ್ಪರರಲ್ಲೂ ಒಂದಾಗಿದ್ದಾರೆ ಎನ್ನುವ ನಿಜಕ್ಕೆ ಸೆಕಂಡರಿಯಾದದ್ದು. ಪ್ರೀತಿಯ ಉಪಸ್ಥಿತಿಗೆ ಇರುವ ಸಾಕ್ಷ್ಯ ಒಂದೇ : ಸಂಬಂಧದಲ್ಲಿ ಕಂಡುಬರುವ ಆಳ, ಮತ್ತು ಪ್ರತಿ ಸಂಬಂಧಿತ ವ್ಯಕ್ತಿಯಲ್ಲಿ ನಾವು ಕಾಣಬಹುದಾದ ಅಪಾರ ಜೀವಂತಿಕೆ ಮತ್ತು ಸಾಮರ್ಥ್ಯ; ಪ್ರೀತಿಯನ್ನ ಗುರುತಿಸಲು ಬೇಕಾದ ಫಲ ಇದು.

ಹೇಗೆ ಯಂತ್ರ ಮಾನವರು ಪರಸ್ಪರರನ್ನ ಪ್ರೀತಿಸಲಾರರೋ, ಹಾಗೆಯೇ ಅವರಿಗೆ ದೇವರ ಕುರಿತ ಪ್ರೀತಿಯೂ ಸಾಧ್ಯವಾಗುವುದಿಲ್ಲ. ಮನುಷ್ಯ ಪ್ರೀತಿಯ ವಿಘಟನೆ ತಲುಪಿರುವ ಹಂತವನ್ನೇ, ದೈವ ಪ್ರೀತಿಯ ವಿಘಟನೆಯೂ ತಲುಪಿದೆ. ಈ ಕಾಲಮಾನ ಧಾರ್ಮಿಕ ಪುನರುತ್ಥಾನಕ್ಕೆ ಸಾಕ್ಷಿಯಾಗುತ್ತಿದೆ ಎನ್ನುವ ತಿಳುವಳಿಕೆಗೆ ಈ ವಾಸ್ತ,ವ ಸ್ಪಷ್ಟ ವೈರುಧ್ಯದಂತಿದೆ. ಸತ್ಯದ ಆಚೆ ಬೇರೆ ಯಾವುದೂ ಇಲ್ಲ. ನಮ್ಮ ಕಣ್ಣ ಮುಂದೆ ( ಕೆಲ ಅಪವಾದಗಳು ಇದ್ದಾಗ್ಯೂ ) ಈಗ ನಡೆಯುತ್ತಿರುವುದೇನೆಂದರೆ, ವಿಗ್ರಹ ಕಲ್ಪನೆಯ ದೇವರ ಆರಾಧನೆಗೆ ಕಂಡುಬರುತ್ತಿರುವ ಹಿನ್ನಡೆ ಮತ್ತು ದೈವ ಪ್ರೀತಿಯು, ಪರಕೀಯ ವ್ಯಕ್ತಿತ್ವವನ್ನು ಒಳಗೊಂಡ ಸಂಬಂಧವಾಗಿ ಮಾರ್ಪಾಡಾಗುತ್ತಿರುವುದು. ವಿಗ್ರಹಾರಾಧನೆಯ ದೈವದ ಪರಿಕಲ್ಪನೆಯ ಹಿನ್ನಡೆಯನ್ನು ಸುಲಭವಾಗಿ ಗಮನಿಸಬಹುದು. ಜನರು ಆತಂಕಭರಿತರಾಗಿದ್ದಾರೆ, ತತ್ವ ಸಿದ್ಧಾಂತ, ನಂಬಿಕೆಗಳನ್ನು ಕಳೆದುಕೊಂಡಿದ್ದಾರೆ, ಮುಂದೆ ಸಾಗಬೇಕು ಎನ್ನುವುದರ ಹೊರತಾಗಿ ಅವರಿಗೆ ಬೇರೆ ಯಾವ ಗುರಿಗಳೂ ಇಲ್ಲ ; ಆದ್ದರಿಂದ ಅವರು ಇನ್ನೂ ಮಕ್ಕಳಾಗಿಯೇ ಉಳಿದಿದ್ದಾರೆ, ತಮಗೆ ಸಹಾಯ ಬೇಕಾದಾಗ ಸಹಾಯ ಮಾಡಲು ಬರುವ ತಂದೆ ಅಥವಾ ತಾಯಿಗಾಗಿ ಎದುರು ನೋಡುತ್ತ.

ನಿಜ, ಮಧ್ಯ ಯುಗದ ಧಾರ್ಮಿಕ ಸಂಸ್ಕೃತಿಗಳಲ್ಲಿ, ಸಾಮಾನ್ಯ ಮನುಷ್ಯ ದೇವರನ್ನು ತನಗೆ ಸಹಾಯ ಮಾಡುವ ತಂದೆಯಂತೆ, ತಾಯಿಯಂತೆ ಕಾಣುತ್ತಿದ್ದ. ಅದೇ ಸಮಯದಲ್ಲಿ ಅವನು ದೇವರನ್ನು ತುಂಬ ಗಂಭೀರವಾಗಿಯೂ ಪರಿಗಣಿಸಿದ್ದ, ತನ್ನ ಬದುಕಿನ ಆತ್ಯಂತಿಕ ಗುರಿ ದೇವರ ತತ್ವಗಳಿಗನುಸಾರವಾಗಿ ಬದುಕುವುದು ಎಂದು ತಿಳಿದುಕೊಂಡಿದ್ದ ಮತ್ತು, “ಮುಕ್ತಿ”ಯನ್ನ ಅವನ ಬದುಕಿನ ಘನ ಉದ್ದೇಶವೆಂದೂ ಹಾಗು ಬೇರೆಲ್ಲವೂ ಈ ಉದ್ದೇಶಕ್ಕೆ ಪೂರಕ ಎಂದೂ ಅರ್ಥ ಮಾಡಿಕೊಂಡಿದ್ದ. ಈಗ ಇಂಥ ಯಾವ ಪ್ರಯತ್ನಗಳೂ ಚಾಲ್ತಿಯಲ್ಲಿಲ್ಲ . ದೈನಂದಿನ ಬದುಕು ಕಟ್ಟು ನಿಟ್ಟಾಗಿ ಧಾರ್ಮಿಕ ಮೌಲ್ಯಗಳಿಂದ ಪ್ರತ್ಯೇಕವಾಗಿದೆ. ಈಗ ಬದುಕನ್ನು ಭೌತಿಕ ಸೌಕರ್ಯಗಳಿಗಾಗಿ, ಮತ್ತು ವ್ಯಕ್ತಿತ್ವದ ಮಾರುಕಟ್ಟೆಯಲ್ಲಿನ (personality market) ಯಶಸ್ಸಿಗಾಗಿ ತುಡಿಯಲು ಮೀಸಲಿಡಲಾಗಿದೆ. ನಮ್ಮ ಸೆಕ್ಯುಲರ್ ಪ್ರಯತ್ನಗಳೆಲ್ಲ ಕಟ್ಟಲ್ಪಟ್ಟಿರುವುದು ಉಪೇಕ್ಷೆ (indifference) ಮತ್ತು ಅಹಂಭಾವಗಳ (egotism) ತಳಹದಿಯ ಮೇಲೆ. ( ಅಹಂಭಾವವನ್ನ “ವೈಯಕ್ತಿಕತೆ”, “ವೈಯಕ್ತಿಕ ಉಪಕ್ರಮ” ಎಂದೂ ಲೇಬಲ್ ಮಾಡಲಾಗುತ್ತದೆ). ನೈಜ ಧಾರ್ಮಿಕ ಸಂಸ್ಕೃತಿಯ ಮನುಷ್ಯನನ್ನು ಎಂಟು ವರ್ಷ ವಯಸ್ಸಿನ ಮಗುವಿಗೆ ಹೋಲಿಸಿ ನೋಡಬಹುದು. ಇಂಥ ಮಗುವಿಗೆ ಸಹಾಯಕನಾಗಿ ತಂದೆಯ ಅವಶ್ಯಕತೆಯಿದೆ, ಆದರೆ ತಂದೆಯ ಮಾತುಗಳನ್ನ ಮತ್ತು ತತ್ವ ಸಿದ್ಧಾಂತಗಳನ್ನ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಅವರು ನಿರತರಾಗಿದ್ದಾರೆ. ಸಮಕಾಲೀನ ಮನುಷ್ಯ ಮೂರು ವರ್ಷ ವಯಸ್ಸಿನ ಮಗುವಿನಂತೆ, ತನಗೆ ತಂದೆ ಬೇಕಾದಾಗ ಅದು ಅಳಲು ಶುರು ಮಾಡುತ್ತದೆ ಆದರೆ ಆಟ ಆಡುವಾಗ ಮಾತ್ರ ಅದಕ್ಕೆ ಯಾರ ಸಹಾಯವೂ ಬೇಕಿಲ್ಲ.

ಒಂದು ರೀತಿಯಲ್ಲಿ, ದೈವ ನಿಯಮಗಳಿಗನುಗುಣವಾಗಿ ಯಾವ ಬದಲಾವಣೆಗೂ ಒಳಗಾಗದೇ, ಮಕ್ಕಳಂತೆ ಮಾನವರೂಪಿ ದೇವರನ್ನು ಅವಲಂಬಿಸಿರುವ ಸಮಕಾಲೀನ ಮನುಷ್ಯ , ಮಧ್ಯಯುಗದ ಧಾರ್ಮಿಕ ಸಂಸ್ಕೃತಿಗಿಂತಲೂ, ಪ್ರಾಚೀನ ವಿಗ್ರಹಾರಾಧಕ ಬುಡಕಟ್ಟಿಗೆ ಹತ್ತಿರವಾಗಿದ್ದಾನೆ. ಇನ್ನೊಂದು ದೃಷ್ಟಿಯಲ್ಲಿ ನಮ್ಮ ಧಾರ್ಮಿಕ ಸನ್ನಿವೇಶ ತೋರ್ಪಡಿಸುವ ಗುಣ ಲಕ್ಷಣಗಳು ಪೂರ್ತಿ ಹೊಸದು, ಮತ್ತು ಇವು ಸಮಕಾಲೀನ ಪಾಶ್ಚಾತ್ಯ ಬಂಡವಾಳಶಾಹಿ ಸಮಾಜಕ್ಕೆ ಮಾತ್ರ ಹೊಂದಿಕೊಳ್ಳುವಂಥವು. ನಾನು ಈ ಪುಸ್ತಕದ ಹಿಂದಿನ ಭಾಗದಲ್ಲಿ ನೀಡಿರುವ ಹೇಳಿಕೆಗಳನ್ನ ಇಲ್ಲಿ ರೆಫರ್ ಮಾಡುತ್ತೇನೆ. ಆಧುನಿಕ ಮನುಷ್ಯ ತನ್ನನ್ನು ತಾನು ವ್ಯಾಪಾರದ ವಸ್ತುವಾಗಿ ಬದಲಾಯಿಸಿಕೊಂಡಿದ್ದಾನೆ ; ಅವನು ತನ್ನ ಮತ್ತು ವ್ಯಕ್ತಿತ್ವದ ಮಾರುಕಟ್ಟೆಯ ಸ್ಥಿತಿಗೆ ಪೂರಕವಾಗಿ ತನ್ನ ಬದುಕಿನ ಸಾಮರ್ಥ್ಯವನ್ನು (life energy) ತನಗೆ ಅತ್ಯಂತ ಹೆಚ್ಚಿನ ಲಾಭವನ್ನು ತಂದುಕೊಡುವ ಬಂಡವಾಳವನ್ನಾಗಿ ಅನುಭವಿಸುತ್ತಾನೆ. ಅವನು ತನ್ನ ಜೊತೆಯವರಿಂದ, ತನ್ನ ಸುತ್ತಲಿನ ಪ್ರಕೃತಿಯಿಂದ ಕೊನೆಗೆ ತನಗೆ ತಾನೇ ಪರಕೀಯನಾಗಿದ್ದಾನೆ. ಅವನ ಮುಖ್ಯ ಉದ್ದೇಶ, ತನ್ನ ಕೌಶಲ್ಯವನ್ನ, ಜ್ಞಾನವನ್ನ, ಸ್ವತಃ ತನ್ನನ್ನ, ಮತ್ತು ತನ್ನ ಇಡೀ personality package ನ್ನ, ತನ್ನ ಹಾಗೆಯೇ ಉದ್ದೇಶ ಮತ್ತು ಉತ್ಸುಕತೆಯನ್ನ ಹೊಂದಿದವರೊಂದಿಗೆ ಲಾಭದಾಯಕವಾಗಿ ವಿನಿಮಯ ಮಾಡಿಕೊಳ್ಳುವುದು. ಅವನ ಬದುಕಿಗೆ ಮುಂದೆ ಚಲಿಸುವುದನ್ನ ಬಿಟ್ಟರೆ ಬೇರೆ ಯಾವ ಉದ್ದೇಶವೂ ಇಲ್ಲ, ಅವನಿಗೆ ಒಳ್ಳೆಯ ವಿನಿಮಯ (fair exchange) ಬಿಟ್ಟರೆ ಯಾವ ತತ್ವ ಸಿದ್ಧಾಂತಗಳೂ ಇಲ್ಲ, ವಸ್ತುಗಳನ್ನ ಬಳಸುವುದನ್ನ, ಅನುಭವಿಸುವುದನ್ನ ( to consume) ಬಿಟ್ಟರೆ ಯಾವ ತೃಪ್ತಿಯೂ ಇಲ್ಲ.

ಸುತ್ತ ಇಂಥ ಸನ್ನಿವೇಶ ಇರುವಾಗ ದೇವರ ಪರಿಕಲ್ಪನೆಗೆ ಯಾವ ಅರ್ಥ ತಾನೇ ಇರುವುದು ಸಾಧ್ಯ? ಅದು ತನ್ನ ಮೂಲ ಧಾರ್ಮಿಕ ಅರ್ಥವನ್ನು, ಅನಾಥ ಸಂಸ್ಕೃತಿಯ (alienated culture) ಯಶಸ್ಸಿಗೆ ಸೂಕ್ತವಾಗುವಂತೆ ಬದಲಾಯಿಸಿಕೊಂಡಿದೆ. ಇತ್ತೀಚಿನ ದಿನಗಳ ಧಾರ್ಮಿಕ ಪುನರುತ್ಥಾನದಲ್ಲಿ, ದೇವರ ಕುರಿತಾದ ನಂಬಿಕೆಯು ಮನಶಾಸ್ತ್ರದ ಸಾಧನವಾಗಿ ಪರಿವರ್ತಿತವಾಗಿ, ಮನುಷ್ಯನನ್ನು ಸ್ಪರ್ಧಾತ್ಮಕ ಸಂಘರ್ಷಕ್ಕೆ ತಯಾರು ಮಾಡುವಲ್ಲಿ ಬಳಕೆಯಾಗುತ್ತಿದೆ.

ಮನುಷ್ಯನಿಗೆ ಅವನ ವ್ಯಾಪಾರ ವ್ಯವಹಾರಗಳಲ್ಲಿ ಸಹಾಯ ಮಾಡಲು ಧರ್ಮ, ಸ್ವಯಂ ಸೂಚನೆ (auto-suggestion) ಮತ್ತು ಮನೋ ವಿಶ್ಲೇಷಣಾತ್ಮಕ ಚಿಕಿತ್ಸೆಯ (psychotherapy) ಜೊತೆ ಸೇರಿ ಬಳಕೆಯಾಗುತ್ತಿದೆ. ಇಪ್ಪತ್ತರ ದಶಕದ ತನಕ (1920s) ಯಾರೂ ದೇವರನ್ನು ತಮ್ಮ ವ್ಯಕ್ತಿತ್ವದ ಸುಧಾರಣೆಗಾಗಿ (personality development) ಕೇಳಿಕೊಂಡಿರಲಿಲ್ಲ. 1938 ರಲ್ಲಿ ಪ್ರಕಟವಾದ ಡೇಲ್ ಕಾರ್ನೆಗಿಯ ಬೆಸ್ಟ್ ಸೆಲ್ಲರ್ “ How to win friends and influence people” ಕೂಡ ಕಟ್ಟು ನಿಟ್ಟಾಗಿ ಸೆಕ್ಯುಲರ್ ಆಗಿಯೇ ಇತ್ತು. ಆ ಕಾಲದಲ್ಲಿ ಕಾರ್ನೆಗಿಯ ಪುಸ್ತಕ ಮಾಡಿದ ಕೆಲಸವನ್ನ ಇವತ್ತಿನ ಬೆಸ್ಟ್ ಸೆಲ್ಲರ್ ರೆವರೆಂಡ್ N.V.Peale ಯವರ “ The power of positive thinking “ ಮಾಡುತ್ತಿದೆ. ಈ ಧಾರ್ಮಿಕ ಪುಸ್ತಕದಲ್ಲಿ, ತನ್ನ ಯಶಸ್ಸನ್ನ ಕುರಿತಾದ ಆಧುನಿಕ ಮನುಷ್ಯನ ಪ್ರಮುಖ ಕಾಳಜಿ, ಏಕದೇವತಾ ವಾದದ ಜೀವಾಳಕ್ಕೆ ಪೂರಕವಾಗಿದೆಯಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆಯನ್ನೇ ಎತ್ತಲಾಗಿಲ್ಲ, ಮನುಷ್ಯನ ಈ ಪರಮ ಉದ್ದೇಶವನ್ನ ಯಾವತ್ತೂ ಸಂಶಯದಿಂದ ನೋಡಲಾಗಿಲ್ಲ ಬದಲಾಗಿ, ದೈವ ನಂಬಿಕೆ ಮತ್ತು ಪ್ರಾರ್ಥನೆಯನ್ನ ಯಶಸ್ಸು ಗಳಿಸಲು ಬೇಕಾಗಿರುವ ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನಗಳನ್ನಾಗಿ ಶಿಫಾರಸ್ಸು ಮಾಡಲಾಗಿದೆ.

ಗ್ರಾಹಕರು ಸಂತೃಪ್ತರಾಗಬೇಕಾದರೆ ಕೆಲಸಗಾರರು ಸಂತೋಷದಿಂದಿರಬೇಕು ಎಂದು ಆಧುನಿಕ ಮನಶಾಸ್ತ್ರಜ್ಞರು ಸಲಹೆ ಮಾಡಿದ ರೀತಿಯಲ್ಲಿಯೇ, ಪಾದ್ರಿಗಳು ಮನುಷ್ಯ ಯಶಸ್ಸು ಗಳಿಸಬೇಕೆಂದರೆ ಅವನು ದೇವರಲ್ಲಿ ನಂಬಿಕೆ ಇಡಬೇಕೆಂದು ಶಿಫಾರಸ್ಸು ಮಾಡುತ್ತಾರೆ. “ ದೇವರನ್ನ ನಿನ್ನ ಪಾಲುದಾರನನ್ನಾಗಿಸಿಕೋ” ಎನ್ನುವ ಹೇಳಿಕೆಯ ಅರ್ಥ, ದೇವರನ್ನು ನಿನ್ನ ವ್ಯಾಪಾರದಲ್ಲಿ ಪಾಲುದಾರನನ್ನಾಗಿಸಿಕೋ ಎಂದೇ ಹೊರತು, ಪ್ರೀತಿ, ನ್ಯಾಯ ಮತ್ತು ಸತ್ಯ ದ ವಿಷಯದಲ್ಲಿ ದೇವರಲ್ಲಿ ಒಂದಾಗು ಎಂದಲ್ಲ. ಸೋದರ ಪ್ರೀತಿಯ ಜಾಗವನ್ನು ವಸ್ತುನಿಷ್ಠ ನ್ಯಾಯದ ಪರಿಕಲ್ಪನೆ ಆಕ್ರಮಿಸಿಕೊಂಡಂತೆ ದೇವರು, remote General Director of Universe Inc ಆಗಿ ಮಾರ್ಪಾಡುಗೊಂಡಿದ್ದಾನೆ ; ನಿಮಗೆ ಗೊತ್ತು ಅವನಿದ್ದಾನೆ, ಅವನು ಈ ಬದುಕನ್ನ ಮುನ್ನಡೆಸುತ್ತಿದ್ದಾನೆ (ಅವನಿಲ್ಲದಿದ್ದರೂ ಬಹುಶಃ ಬದುಕು ಮುಂದೆ ಸಾಗುತ್ತಿತ್ತು), ಅವನನ್ನು ನೀವು ಯಾವತ್ತೂ ನೋಡಿಲ್ಲ, ಆದರೂ ನೀವು ಅವನ ನಾಯಕತ್ವವನ್ನ ಒಪ್ಪಿಕೊಳ್ಳುತ್ತೀರಿ, ನಿಮ್ಮ ಕೆಲಸವನ್ನು ನೀವು ಮುಂದುವರೆಸುತ್ತ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply