ಪ್ರೀತಿಯ ಆಚರಣೆ : Art of love #42

ಕಾರ್ಪೆಂಟರಿ ಆಗಿರಬಹುದು, ವೈದ್ಯಕೀಯ ಕಲೆ ಆಗಿರಬಹುದು, ಪ್ರೀತಿ ಎನ್ನುವ ಕಲೆಯೇ ಆಗಿರಬಹುದು, ಯಾವುದೇ ಕಲೆಯನ್ನ ಪ್ರ್ಯಾಕ್ಟೀಸ್ ಮಾಡಬಯಸುವ ವ್ಯಕ್ತಿ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಯಾವುದೇ ಕಲೆಯನ್ನು ಪ್ರ್ಯಾಕ್ಟೀಸ್ ಮಾಡಲು ಮೊಟ್ಟ ಮೊದಲನೇಯದಾಗಿ ಬೇಕಾಗಿರುವುದು ‘ಶಿಸ್ತು’. ಶಿಸ್ತು ಇಲ್ಲದೆ ಮಾಡಿದ ಯಾವುದೇ ಕೆಲಸದಲ್ಲಿ ನಾವು ಪರಿಣತಿಯನ್ನು ಸಾಧಿಸುವುದು ಸಾಧ್ಯವಿಲ್ಲ. ನನಗೆ ಮೂಡ್ ಇದ್ದಾಗ ಮಾತ್ರ ಪ್ರ್ಯಾಕ್ಟೀಸ್ ಮಾಡುತ್ತೇನೆ ಎನ್ನುವುದು, ಒಂದು ಮನೋರಂಜನೆಯ ಹವ್ಯಾಸವಾಗಬಹುದೇ ಹೊರತು ಆ ಕಲೆಯ ಮಾಸ್ಟರ್ ಆಗಲು ನಮಗೆ ಸಹಾಯ ಮಾಡುವುದಿಲ್ಲ. ಆದರೆ ಸಮಸ್ಯೆ, ನಿರ್ಧಿಷ್ಟ ಕಲೆಯಲ್ಲಿ ನಾವು ಆಚರಿಸಬಹುದಾದ ಶಿಸ್ತಿನದು ಅಲ್ಲ ( ಉದಾಹರಣೆಗೆ, ಪ್ರತಿನಿತ್ಯ ಕೆಲವು ಗಂಟೆಗಳಷ್ಟು ಸಮಯವನ್ನ ಪ್ರ್ಯಾಕ್ಟೀಸ್ ಗಾಗಿ ಮೀಸಲಿಡುವುದು),ಸಮಸ್ಯೆ ನಮ್ಮ ಸಮಗ್ರ ಬದುಕಿನಲ್ಲಿ ನಾವು ಅಳವಡಿಸಿಕೊಂಡಿರುವ ಶಿಸ್ತಿನದು… । ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಕಂತು ಇಲ್ಲಿ ಓದಿ… : https://aralimara.com/2022/08/06/love-56/

ಈ ಪುಸ್ತಕದ ಹಿಂದಿನ ಅಧ್ಯಾಯಗಳಲ್ಲಿ ಪ್ರೀತಿ ಎನ್ನುವ ಕಲೆಯ ( the art of loving) ಥಿಯಾರಿಟಿಕಲ್ ಅಂಶಗಳನ್ನ ಗಮನಿಸಿದ ಮೇಲೆ, ಈಗ ನಮ್ಮ ಮುಂದಿರುವ ಸಮಸ್ಯೆ, ಇನ್ನೂ ಹೆಚ್ಚು ಸವಾಲಿನದಾಗಿದೆ, ಆ ಸಮಸ್ಯೆ ಎಂದರೆ, ಪ್ರೀತಿ ಎನ್ನುವ ಕಲೆಯನ್ನ ಪ್ರಾಕ್ಟೀಸ್ ಮಾಡುವುದು ಹೇಗೆ ಎನ್ನುವುದು. ಯಾವುದಾದರೂ ಕಲೆಯನ್ನ ಪ್ರ್ಯಾಕ್ಟೀಸ್ ಮಾಡುವುದು ಹೇಗೆ ಎನ್ನುವುದನ್ನ, ಅದನ್ನ ಸ್ವತಃ ಪ್ರ್ಯಾಕ್ಟೀಸ್ ಮಾಡದೇ ತಿಳಿದುಕೊಳ್ಳುವ ಬೇರೆ ಯಾವುದಾದರೂ ವಿಧಾನ ಇದೆಯಾ?

ಇವತ್ತಿನ ಬಹಳಷ್ಟು ಜನರು, ಹಾಗಾಗಿ ಈ ಪುಸ್ತಕದ ಹೆಚ್ಚಿನ ಓದುಗರು ಕೂಡ, “How to do it yourself” ರೀತಿಯ ಸಲಹೆಗಳನ್ನ, ಹಾಗೆಂದರೆ ನಮ್ಮ ಸಂದರ್ಭದಲ್ಲಿ “ಹೇಗೆ ಪ್ರೀತಿಸಬೇಕು” ಎನ್ನುವುದನ್ನ ನೇರವಾಗಿ step by step ರೀತಿಯಲ್ಲಿ ಬಯಸುವುದು, ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುತ್ತದೆ. ಈ ಮನೋಭಾವನೆಯಿಂದ ಕೊನೆಯ ಅಧ್ಯಾಯವನ್ನು ಕೈಗೆತ್ತಿಕೊಳ್ಳುವ ಯಾರಿಗಾದರೂ, ನಿರಾಶೆ ಕಟ್ಟಿಟ್ಟ ಬುತ್ತಿ. ಪ್ರೀತಿಸುವುದು ಒಂದು ವೈಯಕ್ತಿಕ ಅನುಭವ, ಈ ಅನುಭವ ಪ್ರತಿಯೊಬ್ಬರಿಗೂ ವಿಶಿಷ್ಚವಾದದ್ದು ಮತ್ತು ಅದನ್ನು ಅವರೇ ಕಂಡುಕೊಳ್ಳಬೇಕು ; ಹಾಗೆ ನೋಡಿದರೆ ಪ್ರತಿ ವ್ಯಕ್ತಿಯೂ ತನ್ನ ಬದುಕಿನ ಪ್ರತಿ ಹಂತದಲ್ಲಿ, ಮಗುವಾಗಿ, ಹದಿಹರೆಯದವರಾಗಿ, ವಯಸ್ಕರರಾಗಿ ಪ್ರಾಥಮಿಕವಾಗಿ ಒಂದಿಲ್ಲ ಒಂದು ರೀತಿಯಲ್ಲಾದರೂ ಪ್ರೀತಿಯ ಅನುಭವವನ್ನು ಪಡೆದಿರುತ್ತಾನೆ. ಪ್ರೀತಿಯ ಆಚರಣೆಯ ಕುರಿತಾದ ಈ ಚರ್ಚೆ ಕೊನೆಪಕ್ಷ ಏನು ಮಾಡಬಹುದೆಂದರೆ, ಆರ್ಟ್ ಆಫ್ ಲವಿಂಗ್ ನ ಕುರಿತಾದ ಒಟ್ಟಾರೆ ಆವರಣವನ್ನ (premise) , ಮತ್ತು ಪ್ರೀತಿಯನ್ನ ಹೇಗೆ ಎದುರುಗೊಳ್ಳಬೇಕು (approach) ಎನ್ನುವುದರ ಪೂರ್ವ ಸಿದ್ಧತೆ ಮತ್ತು ಪ್ರ್ಯಾಕ್ಟೀಸ್ ನ ಕುರಿತಾದ ವಿವರಗಳನ್ನ ಇಲ್ಲಿ ಚರ್ಚಿಸಬಹುದು. ತಮ್ಮ ಗುರಿಯತ್ತ ಎಲ್ಲರೂ ತಾವೇ ಸ್ವತಃ ಹೆಜ್ಜೆ ಹಾಕುವುದನ್ನ ಪ್ರ್ಯಾಕ್ಟೀಸ್ ಮಾಡಬೇಕು ಮತ್ತು ಇದು ಕೇವಲ ಪೂರ್ವಸಿದ್ಧತೆಯ ಬಗ್ಗೆಯ ಚರ್ಚೆ ಆಗಿರುವುದರಿಂದ, ವ್ಯಕ್ತಿ ತನ್ನ ಗುರಿಯೆಡೆಗೆ ನಿರ್ಧಾರಿತ ಹೆಜ್ಜೆ ಇಡುವ ಮುನ್ನವೇ ಈ ಚರ್ಚೆ ಮುಗಿದುಹೋಗುತ್ತದೆ. ನನ್ನ ನಂಬಿಕೆಯೆಂದರೆ ಪ್ರೀತಿಯನ್ನ ಅಪ್ರೋಚ್ ಮಾಡುವ ಕುರಿತಾದ ಈ ಚರ್ಚೆ, ಯಾರು ಪ್ರಿಸ್ಕ್ರಿಪ್ಷನ್ ರೀತಿಯ ಸಲಹೆಗಳನ್ನು ಬಯಸುವುದಿಲ್ಲವೋ ಅವರಿಗಾದರೂ ಕಲೆಯ ಮೇಲೆ ಪ್ರಭುತ್ವ ಸಾಧಿಸುವಲ್ಲಿ ಕೊಂಚ ಸಹಾಯ ಮಾಡಬಹುದು.

ಕಾರ್ಪೆಂಟರಿ ಆಗಿರಬಹುದು, ವೈದ್ಯಕೀಯ ಕಲೆ ಆಗಿರಬಹುದು, ಪ್ರೀತಿ ಎನ್ನುವ ಕಲೆಯೇ ಆಗಿರಬಹುದು, ಯಾವುದೇ ಕಲೆಯನ್ನ ಪ್ರ್ಯಾಕ್ಟೀಸ್ ಮಾಡಬಯಸುವ ವ್ಯಕ್ತಿ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಯಾವುದೇ ಕಲೆಯನ್ನು ಪ್ರ್ಯಾಕ್ಟೀಸ್ ಮಾಡಲು ಮೊಟ್ಟ ಮೊದಲನೇಯದಾಗಿ ಬೇಕಾಗಿರುವುದು ‘ಶಿಸ್ತು’. ಶಿಸ್ತು ಇಲ್ಲದೆ ಮಾಡಿದ ಯಾವುದೇ ಕೆಲಸದಲ್ಲಿ ನಾವು ಪರಿಣತಿಯನ್ನು ಸಾಧಿಸುವುದು ಸಾಧ್ಯವಿಲ್ಲ. ನನಗೆ ಮೂಡ್ ಇದ್ದಾಗ ಮಾತ್ರ ಪ್ರ್ಯಾಕ್ಟೀಸ್ ಮಾಡುತ್ತೇನೆ ಎನ್ನುವುದು, ಒಂದು ಮನೋರಂಜನೆಯ ಹವ್ಯಾಸವಾಗಬಹುದೇ ಹೊರತು ಆ ಕಲೆಯ ಮಾಸ್ಟರ್ ಆಗಲು ನಮಗೆ ಸಹಾಯ ಮಾಡುವುದಿಲ್ಲ. ಆದರೆ ಸಮಸ್ಯೆ, ನಿರ್ಧಿಷ್ಟ ಕಲೆಯಲ್ಲಿ ನಾವು ಆಚರಿಸಬಹುದಾದ ಶಿಸ್ತಿನದು ಅಲ್ಲ ( ಉದಾಹರಣೆಗೆ, ಪ್ರತಿನಿತ್ಯ ಕೆಲವು ಗಂಟೆಗಳಷ್ಟು ಸಮಯವನ್ನ ಪ್ರ್ಯಾಕ್ಟೀಸ್ ಗಾಗಿ ಮೀಸಲಿಡುವುದು),ಸಮಸ್ಯೆ ನಮ್ಮ ಸಮಗ್ರ ಬದುಕಿನಲ್ಲಿ ನಾವು ಅಳವಡಿಸಿಕೊಂಡಿರುವ ಶಿಸ್ತಿನದು. ಆಧುನಿಕ ಮನುಷ್ಯನಿಗೆ ಶಿಸ್ತಿಗಿಂತ ಸುಲಭವಾಗಿ ಕಲಿಯಬಹುದಾದ ಸಂಗತಿ ಬೇರೆ ಯಾವುದೂ ಇಲ್ಲ ಎಂದು ಕೆಲವರಿಗೆ ಅನಿಸಬಹುದು, ಅವನು ದಿನದ ಎಂಟು ಗಂಟೆಗಳನ್ನ ಶಿಸ್ತಿನಿಂದ ತನ್ನ ಆಫೀಸಿನ ರೂಟೀನ್ ಕೆಲಸಕ್ಕಾಗಿ ಬಳಸುತ್ತಿಲ್ಲವೆ? ಆದರೆ ವಾಸ್ತವದ ಸಂಗತಿ ಎಂದರೆ ತನ್ನ ರೂಟೀನ್ ಕೆಲಸದ ಹೊರತಾಗಿ ಆಧುನಿಕ ಮನುಷ್ಯನಿಗೆ ಸ್ವಯಂ ಶಿಸ್ತು (self discipline) ತುಂಬಾ ಕಡಿಮೆ. ಕೆಲಸ ಇಲ್ಲದಿರುವಾಗ ಅವನು ಸೋಮಾರಿಯಂತೆ ವರ್ತಿಸುತ್ತಾನೆ, ಕಾಲಹರಣ ಮಾಡಲು ಇಚ್ಛಿಸುತ್ತಾನೆ, ಒಳ್ಳೆಯ ಮಾತುಗಳಲ್ಲಿ ನಯವಾಗಿ ಹೇಳಬೇಕೆಂದರೆ, ರಿಲ್ಯಾಕ್ಸ್ ಮಾಡಬಯಸುತ್ತಾನೆ. ಅವನ ಈ ಸೋಮಾರಿತನದ ಬಯಕೆ, ಏಕತಾನತೆಯ (routine) ಬದುಕಿಗೆ ಅವನು ನೀಡುತ್ತಿರುವ ಪ್ರತಿಕ್ರಿಯೆಯಾಗಿದೆ. ಪ್ರತಿನಿತ್ಯ ಎಂಟು ಗಂಟೆ, ತನ್ನ ಸಾಮರ್ಥ್ಯವನ್ನು ತನ್ನದಲ್ಲದ ಉದ್ದೇಶಕ್ಕೆ, ತನ್ನ ಇಷ್ಟಕ್ಕೆ ಸರಿ ಹೊಂದದ ದಾರಿಯಲ್ಲಿ, ಆದರೆ ಉದ್ದೇಶದ ಧಾಟಿಗೆ ಸರಿಹೊಂದುವಂತೆ ತನಗೆ ವಹಿಸಲಾಗಿರುವ ಕೆಲಸಕ್ಕಾಗಿ ಖರ್ಚು ಮಾಡಲು ಮನುಷ್ಯನನ್ನು ಒತ್ತಾಯಿಸಿದಾಗ, ಅವನು ಪ್ರತಿಭಟಿಸುತ್ತಾನೆ, ಮತ್ತು ಅವನ ಈ ಪ್ರತಿಭಟನೆ ಮಕ್ಕಳು ಹಟ ಮಾಡುವ ರೂಪ ತಾಳುತ್ತದೆ. ಇದರ ಜೊತೆಗೆ ತನ್ನ ಮೇಲಿನ ಬೇರೆಯವರ ಅಧಿಕಾರವನ್ನು ವಿರೋಧಿಸುವ ಭರದಲ್ಲಿ ಅವನು, ಅವರು ತರ್ಕರಹಿತವಾಗಿ ಅವನ ಮೇಲೆ ಹೇರಿರುವ ಹಾಗು ಸ್ವತಃ ಅವನೇ ತನ್ನೊಳಗೆ ತರ್ಕಬದ್ಧವಾಗಿ ಬೆಳೆಸಿಕೊಂಡಿರುವ, ಎರಡೂ ಬಗೆಯ ಶಿಸ್ತಿನ ವಿರುದ್ಧವೂ ಅಪನಂಬಿಕೆಯನ್ನ ಅನಾಸಕ್ತಿಯನ್ನ ಬೆಳೆಸಿಕೊಳ್ಳುತ್ತಾನೆ. ಆದರೆ ಅವನಲ್ಲಿ ಶಿಸ್ತು ಇಲ್ಲದಾದಾಗ ಅವನು ಬದುಕು ಛಿದ್ರವಾಗುತ್ತದೆ, ಅಸ್ತವ್ಯಸ್ತವಾಗುತ್ತದೆ, ಮತ್ತು ಏಕಾಗ್ರತೆಯನ್ನ ಕಳೆದುಕೊಳ್ಳುತ್ತದೆ.

ಒಂದು ಕಲೆಯಲ್ಲಿ ಪರಿಣಿತಿಯನ್ನು ಸಾಧಿಸಲು ಏಕಾಗ್ರತೆ ಅತ್ಯವಶ್ಯ ಎನ್ನುವುದನ್ನ ಪ್ರೂವ್ ಮಾಡುವ ಅವಶ್ಯಕತೆಯೇನಿಲ್ಲ. ಒಂದು ಕಲೆಯನ್ನ ಕಲಿಯಲು ಪ್ರಯತ್ನಿಸಿರುವ ಯಾರಿಗಾದರೂ ಇದು ಗೊತ್ತಿರುವ ವಿಷಯವೇ. ಆದರೂ ನಮ್ಮ ಸಂಸ್ಕೃತಿಯಲ್ಲಿ ಏಕಾಗ್ರತೆಯು, ಸ್ವಯಂ ಶಿಸ್ತಿಗಿಂತ ಬಹಳ ಅಪರೂಪ. ಬದಲಾಗಿ ನಮ್ಮ ಸಂಸ್ಕೃತಿಗಳು ನಮ್ಮನ್ನು ಎಲ್ಲೂ ಕಾಣ ಸಿಗದಂಥ ಏಕಾಗ್ರತಾರಹಿತವಾದ, ಹರಿದು ಹಂಚಿಹೋಗುವ ಜೀವನ ವಿಧಾನದೆಡೆ ನಮ್ಮನ್ನ ಕರೆದೊಯ್ಯುತ್ತವೆ. ಏಕ ಕಾಲದಲ್ಲಿ ನೀವು ಹಲವು ಕೆಲಸಗಳನ್ನು ಮಾಡುತ್ತಿರುತ್ತೀರಿ; ಓದುತ್ತೀರಿ, ರೇಡಿಯೋ ಕೇಳುತ್ತೀರಿ, ಮಾತನಾಡುತ್ತೀರಿ, ಸ್ಮೋಕ್ ಮಾಡುತ್ತೀರಿ, ಉಣ್ಣುತ್ತೀರಿ, ಕುಡಿಯುತ್ತೀರಿ. ಎಲ್ಲವನ್ನೂ ನುಂಗಲು ಬಾಯಿ ತೆರೆದುಕೊಂಡು ಕಾಯುತ್ತಿರುವ ಗ್ರಾಹಕರು ನಾವು – ಚಿತ್ರಗಳು, ಪಾನೀಯಗಳು, ಜ್ಞಾನ ಎಲ್ಲವನ್ನೂ. ಈ ಏಕಾಗ್ರತೆಯ ಕೊರತೆ, ನಮ್ಮೊಂದಿಗೆ ನಾವು ಏಕಾಂತದಲ್ಲಿರಲು ಸಾಧ್ಯವಾಗದಿರುವ ಸಮಸ್ಯೆಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಮಾತನಾಡದೇ, ಸ್ಮೋಕ್ ಮಾಡದೇ, ಓದದೇ, ಕುಡಿಯದೇ, ಸುಮ್ಮನೇ ಒಂದು ಜಾಗದಲ್ಲಿ ಅಲುಗಾಡದಂತೆ ಕುಳಿತುಕೊಳ್ಳುವುದು ಬಹುತೇಕರಿಗೆ ಸಾಧ್ಯವಿಲ್ಲದ ಸಂಗತಿ. ಆಗ ಅವರು ನರ್ವಸ್ ಆಗುತ್ತಾರೆ, ಚಡಪಡಿಸುತ್ತಾರೆ, ಅವರು ತಮ್ಮ ಕೈ ಬಾಯಿಗಳಿಗೆ ಸದಾ ಕೆಲಸ ಕೊಡುತ್ತಲೇ ಇರಬೇಕು ಎಂದು ಬಯಸುತ್ತಾರೆ. (ಸ್ಮೋಕಿಂಗ್, ಏಕಾಗ್ರತೆಯ ಕೊರತೆಗೆ ಒಂದು ಉತ್ತಮ ಉದಾಹರಣೆ, ಅದು ಕೈ, ಬಾಯಿ, ಕಣ್ಣು, ಮೂಗು ಎಲ್ಲಕ್ಕೂ ಕೆಲಸ ಕೊಡುತ್ತದೆ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply