ಪ್ರೇಮ ಒಂದು ನಿತ್ಯ ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ

ಪ್ರೇಮಿಯ ಜೊತೆಯಲ್ಲೇ ಇರುವಾಗಲೂ ಅವನ/ಅವಳ/ಅದರ ಪ್ರೇಮಕ್ಕೆ ಹಂಬಲಿಸುವುದು ಮತ್ತು ಮಿಲನದಲ್ಲೂ ವಿರಹವನ್ನೇ ಕಂಡು ಹಾತೊರೆಯುವುದು ನಮಗೆ ಒಂದಷ್ಟು ನೈಜ ಪ್ರೇಮದ ಅನುಭೂತಿ ಮೂಡಿಸಬಲ್ಲದು. ಪ್ರೇಮದಲ್ಲಿ ತೃಪ್ತಿ ಸಿಕ್ಕಿಬಿಟ್ಟರೆ, ಅದು ಪ್ರೇಮದ ವಿನಾಶಕ್ಕೆ ಮುನ್ನುಡಿಯಾಗುವುದು.

ಅಲಾವಿಕಾ

ಪ್ರೇಮ ಸೃಷ್ಟಿಯ ಮೂಲಸ್ರೋತ. ಪ್ರೇಮ ಒಂದು ಭಾವನೆ ಅಲ್ಲ, ಅದು ನಮ್ಮ ಸಹಜತೆ. ಅದು ನಮ್ಮಲ್ಲಿ ನಿತ್ಯವಾಗಿರುವ, ನಮ್ಮಲ್ಲೇ ನಿಹಿತವಾಗಿರುವ ಸಂಗತಿ. ಪ್ರೇಮವನ್ನು ಯಾರಾದರೂ ವ್ಯಾಖ್ಯಾನಿಸಲು ಸಾಧ್ಯವಾದರೆ, ಅವರು ಪ್ರೇಮವನ್ನು ವ್ಯಾಖ್ಯಾನಿಸುತ್ತಿರುವುದಿಲ್ಲ, ಅವರು ಪ್ರೇಮದ ಕುರಿತು ತಮ್ಮ ಗ್ರಹಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ, ಅಷ್ಟೇ.

ಪ್ರೇಮ ಬ್ರಹ್ಮಕ್ಕಿಂತ ಬೇರೆಯಲ್ಲ. ಪ್ರೇಮವೇ ಬ್ರಹ್ಮ ಅಥವಾ ಬ್ರಹ್ಮವೇ ಪ್ರೇಮ. ಬ್ರಹ್ಮವನ್ನು ಅರಿಯುವುದು ಅಂದರೆ ನಮ್ಮನ್ನು ನಾವು ಅರಿಯುವುದು. ಹಾಗೇ ಪ್ರೇಮವನ್ನು ಅರಿಯುವುದು ಅಂದರೂ ಅಷ್ಟೇ. ಆದರೆ ನಮ್ಮನ್ನು ನಾವು ಹೇಗೆ ಅರಿಯಬಲ್ಲೆವು? ನಮ್ಮ ಮುಖ ನಾವು ನೋಡಬಲ್ಲೆವೇ? ಇಲ್ಲ. ನಮ್ಮ ಮುಖ ನೋಡಿಕೊಳ್ಳಲು ನಮಗೊಂದು ಹೊರಗಿನ – ಪ್ರತಿಫಲಿಸುವ ವಸ್ತು ಬೇಕು. ನೀರಿನ ಮೇಲ್ಮೈ, ನಯವಾದ ಗೋಡೆ, ಲೋಹಗಳ ನುಣುಪು ಮೈ, ಅಥವಾ ಸರಳವಾಗಿ ನಾವು ನಿತ್ಯ ಬಳಸುವ ಕನ್ನಡಿ. ಹೊರಗಿನ ಆಸರೆ ಇಲ್ಲದೆ ನಮ್ಮ ಮುಖ ನಾವು ನೋಡಿಕೊಳ್ಳಲು ಆಗದು. ಹಾಗೇ ನಮ್ಮ ಪ್ರೇಮವನ್ನು ಕಂಡುಕೊಳ್ಳಲು ನಮಗೆ ಮತ್ತೊಬ್ಬ/ರು ಬೇಕು. ಅದು ಜಡವಾದರೂ ಚೇತನಾವದರೂ ಯಾವುದಾದರೂ ಸರಿ. ನಾವು ನಮ್ಮ ಪ್ರೇಮ ಕಂಡುಕೊಳ್ಳಲು ಮತ್ತೊಂದು ವ್ಯಕ್ತಿಯೇ ಬೇಕು ಅಂತೇನಿಲ್ಲ. ಪಶು ಪಕ್ಷಿ ಕೀಟ ಜಂತುಗಳೂ ಆದಾವು. ಮರ ಗಿಡ ಬಳ್ಳಿಗಳೂ ಆದಾವು. ಬೆಟ್ಟ ಗುಡ್ಡ ನಾಡು – ನೆಲಗಳಾದರೂ ಆದಾವು. ನಾವು ಯಾವುದರ ಮೇಲೆ ಪ್ರೇಮ ತೋರ್ಪಡಿಸುತ್ತೀವೋ ಅದರ ಕಾಳಜಿ, ಕನವರಿಕೆ, ಸಮರ್ಪಣೆ, ಸೇವೆ, ತೀವ್ರತೆ ಈ ಎಲ್ಲದರ ಮೊತ್ತವೇ ಪ್ರೇಮವನ್ನು ಕಂಡುಕೊಳ್ಳುವ ತೋರುಬೆರಳು.

ಪ್ರೇಮ ಒಂದು ನಿತ್ಯ ಹಂಬಲ ಮತ್ತು ನಿತ್ಯ ವಿರಹದ ಸ್ಥಿತಿ. ಇವು ನಾವು ನಮ್ಮ ಪ್ರೇಮ ಕಂಡುಕೊಳ್ಳಲು ಆಯ್ದುಕೊಂಡ ವ್ಯಕ್ತಿ/ವಸ್ತುವನ್ನು ಹೊಂದಿದ ಮೇಲೂ ಅಷ್ಟೇ ತೀವ್ರತೆಯಲ್ಲಿ ಇವೆ ಎಂದಾದರೆ, ನಾವು ನಿಜಕ್ಕೂ ಆ ವ್ಯಕ್ತಿ/ವಸ್ತುವಿನಲ್ಲಿ ಪ್ರೇಮ ಕಾಣುತ್ತಿದ್ದೇವೆ ಎಂದರ್ಥ. ಅಕಸ್ಮಾತ್ ಹೊಂದಿದ ಕೂಡಲೇ ತೃಪ್ತರಾಗಿಬಿಟ್ಟರೆ, ಆ ವ್ಯಕ್ತಿ/ವಸ್ತುವನ್ನು ಇನ್ನು ನಮ್ಮದು ಎಂದು ಘೋಷಿಸಿಕೊಂಡುಬಿಟ್ಟರೆ, ಅದನ್ನು ಬಿಟ್ಟಿರಲಾರೆ ಅನ್ನುವ ಭಾವುಕತೆಗೆ ಒಳಗಾದರೆ, ಅದು ನನಗೆ ಮಾತ್ರ ಸೇರಬೇಕು ಅನ್ನುವ ಸ್ವಾರ್ಥ ಬೆಳೆದರೆ, ಅದರಿಂದ ನನಗೆ ಇಂತಿಂಥಾ ಪ್ರಯೋಜನ ಬೇಕು ಅನ್ನುವ ನಿರೀಕ್ಷೆ ಹುಟ್ಟಿಕೊಂಡರೆ, ಅದು ನನಗೆ ನಾನು ಬಯಸಿದಂತೆಯೇ ಸ್ಪಂದಿಸಬೇಕು ಅನ್ನುವ ಅಹಂಪೋಷಣೆಯ ಖಯಾಲಿ ಬೆಳೆಸಿಕೊಂಡರೆ, ಕ್ಷಮಿಸಿ, ಅದು ಪ್ರೇಮವಲ್ಲ. ನೀವು ಆ ವ್ಯಕ್ತಿ/ವಸ್ತುವಿನಲ್ಲಿ ಪ್ರೇಮ ಕಾಣುತ್ತಿಲ್ಲ. ಬದಲಿಗೆ ನಿಮ್ಮ ಲೌಕಿಕದ ಯಾವುದೋ ಒಂದು ಅಗತ್ಯವನ್ನು ಪೂರೈಸಿಕೊಳ್ಳುತ್ತಿದ್ದೀರಿ, ಅಷ್ಟೇ. ಬದಲಿಗೆ, ಪ್ರೇಮಿಯ ಜೊತೆಯಲ್ಲೇ ಇರುವಾಗಲೂ ಅವನ/ಅವಳ/ಅದರ ಪ್ರೇಮಕ್ಕೆ ಹಂಬಲಿಸುವುದು ಮತ್ತು ಮಿಲನದಲ್ಲೂ ವಿರಹವನ್ನೇ ಕಂಡು ಹಾತೊರೆಯುವುದು ನಮಗೆ ಒಂದಷ್ಟು ನೈಜ ಪ್ರೇಮದ ಅನುಭೂತಿ ಮೂಡಿಸಬಲ್ಲದು. ಪ್ರೇಮದಲ್ಲಿ ತೃಪ್ತಿ ಸಿಕ್ಕಿಬಿಟ್ಟರೆ, ಅದು ಪ್ರೇಮದ ವಿನಾಶಕ್ಕೆ ಮುನ್ನುಡಿಯಾಗುವುದು.

ಆದರೆ ಇಂಥಾ ಪ್ರೇಮದ ಬಗ್ಗೆ ನಮ್ಮ ಲೌಕಿಕದಲ್ಲಿ ಮಾತಾಡಿಕೊಳ್ಳುವುದು ಅರ್ಥಹೀನ. ನಮ್ಮಲ್ಲಿ ಪ್ರೇಮವೆಂದರೆ ಒಂದು ಗಂಡು ಒಂದು ಹೆಣ್ಣು (ಗಂಡು + ಗಂಡು; ಹೆಣ್ಣು + ಹೆಣ್ಣು ಕೂಡಾ) ಪರಸ್ಪರ ಆಕರ್ಷಣೆ ಬೆಳೆಸಿಕೊಂಡು, ಆ ಆಕರ್ಷಣೆಯನ್ನು ಮದುವೆಯ ಚೌಕಟ್ಟಿನಲ್ಲಿ ಕೂರಿಸಿ ಅದಕ್ಕೊಂದು ಹೆಸರಿಟ್ಟು ಸಾಯುವ ತನಕ ಹೋರಾಡುವುದು (ಅಥವಾ ನೀನು ಮೊದಲಿನ ಹಾಗೆ ಇಲ್ಲ ಅಂತ ಗೋಳಾಡುವುದು). ತೀರಾ ಶುಷ್ಕವಾಗಿ ಹೇಳಬೇಕೆಂದರೆ ಬಹುತೇಕ ಮನುಷ್ಯರಲ್ಲಿ ಪ್ರೇಮಭಾವನೆ ಲೈಂಗಿಕ ಸಂಬಂಧಕ್ಕೆ ಒಂದು ಸೂಚನೆಯಷ್ಟೆ. ಪ್ರಾಣಿ ಪಕ್ಷಿಗಳು ಬೆದೆಗೆ ಬಂದಾಗ ಪರಸ್ಪರ ವೈಯಾರ ಮಾಡಿಕೊಳ್ಳುತ್ತಾ ನಂಟು ಬೆಳೆಸಿಕೊಳ್ಳುತ್ತವಲ್ಲ, ಆ ಚರ್ಯೆಯೇ ಇಲ್ಲಿ ಭಾವನೆ, ಚೆಂದ ಚೆಂದದ ಮಾತು – ಕವಿತೆ, ಉಡೂಗೊರೆ, ಆಣೆ ಪ್ರಮಾಣಗಳ ಮೂಲಕವೆಲ್ಲ ಅಭಿವ್ಯಕ್ತಗೊಂಡು ಕೊನೆಗೆ ಹಾಸಿಗೆಯಲ್ಲಿ ಅಧಿಕೃತವಾಗುತ್ತದೆ. ಅದಕ್ಕೆ ಮದುವೆಯೇ ಆಗಬೇಕೆಂದಿಲ್ಲ. ನಮ್ಮ ದೇಶ ಬಹುತೇಕ ಇನ್ನೂ ಸಂಪ್ರದಾಯವಾದಿಯಾಗೇ ಉಳಿದಿರುವುದರಿಂದ ಬಹುಪಾಲು ಪ್ರೇಮಿಗಳು ಮದುವೆಗೆ ಹಾತೊರೆಯುತ್ತಾರೆ. ಪರಸ್ಪರ ದೇಹ ನಿಷ್ಠೆ ಉಳಿಸಿಕೊಂಡು ಪರಸ್ಪರರ ಸಾಂಸಾರಿಕ ಅಗತ್ಯಗಳನ್ನು ಪೂರೈಸುತ್ತಾ ಬಾಳುವುದನ್ನೇ ಪ್ರೇಮದ ಸಫಲತೆ ಅಂದುಕೊಳ್ಳುತ್ತಾರೆ. ಆದರೆ, ಹೀಗೆ ಮುದ್ರೆ ಒತ್ತಿದ ಕ್ಷಣದಲ್ಲೇ ಅವರ ನವಿರುತನವೆಲ್ಲ ಕೊಚ್ಚಿ ಹೋಗಿ ಬರಡಾಗುವುದು, ಪ್ರೇಮವೊಂದು ಜವಾಬ್ದಾರಿಯಾಗಿ, ಹೊಣೆಗಾರಿಕೆಯಾಗಿಯಷ್ಟೆ ಉಳಿಯುವುದು ಅವರ ಗಮನಕ್ಕೆ ಬರುವುದೇ ಇಲ್ಲ. ಆದರೆ ನಮ್ಮ ಅಂತರಂಗಕ್ಕೆ ಇದು ಪ್ರೇಮವಲ್ಲ ಅನ್ನುವ ಎಚ್ಚರ ಮೂಡಿರುತ್ತದೆ. ಅದಕ್ಕೇ ನೋಡಿ ನಮಗೆ ಎಂದೆಂದೂ ಒಂದಾಗದವರ ಪ್ರೇಮಕಥೆಗಳೇ ಅತ್ಯದ್ಭುತವಾಗಿ ತೋರುವುದು!

ಆದರೂ ನಾವು ಸಂಬಂಧದ ಚೌಕಟ್ಟಿನಲ್ಲಿ ಒಂದಾದರೂ ನಮ್ಮ ಸಂಗಾತಿಯಲ್ಲಿ ನಮ್ಮ ಪ್ರೇಮದ ಪ್ರತಿಫಲನವನ್ನು ಕಾಣಲು ಬಯಸಿದರೆ, ಅದಕ್ಕೊಂದು ದಾರಿಯಿದೆ. ಅದು, ಸಂಗಾತಿಯಿಂದ ಏನನ್ನೂ ಬಯಸದೆ ಇರುವುದು. ಕನಿಷ್ಠ ಸ್ಪಂದನೆಯನ್ನು ಕೂಡಾ. ಬರಿದೇ ನಮ್ಮ ಪ್ರೇಮವನ್ನು ಸುರಿಸುತ್ತಾ ಹೋಗುವುದು. ಆಗಷ್ಟೆ ನಮಗೆ ನಮ್ಮ ಪ್ರೇಮದ ಸಾಕ್ಷಾತ್ಕಾರವಾಗುವುದು. ಮತ್ತು ಒಮ್ಮೆ ಈ ಪ್ರೇಮದ ಸಾಕ್ಷಾತ್ಕಾರವಾಗಿಬಿಟ್ಟರೆ, ಆಗ ಅದನ್ನು ಕಂಡುಕೊಳ್ಳಲು ಸಹಾಯ ಮಾಡಿದ ಪರಿಕರವೂ (ಪ್ರೇಮಿ) ನಗಣ್ಯವಾಗಿ ಪ್ರತಿಯೊಂದರಲ್ಲೂ ನಮಗೆ ನಮ್ಮ ಬಿಂಬ ಕಾಣತೊಡಗುವುದು. ಆಗ, ಮತ್ತು ಆಗ ಮಾತ್ರ ನಾವು ನಿಜದ ಪ್ರೇಮಿಗಳಾಗಬಲ್ಲೆವು.

Leave a Reply