ಪ್ರೀತಿಯ ಆಚರಣೆ (ಭಾಗ 2) : Art of love #43

ಯಾವುದೇ ಕಲೆಯ ಕಲಿಕೆಗೆ ಬೇಕಾಗುವ ಸಾಮಾನ್ಯ ಅಂಶಗಳ ಕುರಿತಾಗಿ ನಾನು ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಬೇಕು. ಯಾರೂ ಕಲೆಯನ್ನ ನೇರವಾಗಿ ಕಲಿಯಲು ಶುರು ಮಾಡುವುದಿಲ್ಲ, ಎಲ್ಲ ಶುರು ಮಾಡೋದು ಪರೋಕ್ಷ ರೀತಿಯಲ್ಲೇ. ಕಲೆಯ ಕಲಿಕೆ ಬಹುತೇಕ ಶುರುವಾಗೋದು, ಹೊರಗಿನಿಂದ ಪರಸ್ಪರ ಸಂಬಂಧವಿಲ್ಲದಂತೆ ಕಾಣಿಸುವ ಹಲವಾರು ಸಂಗತಿಗಳನ್ನು ಕಲಿಯುವ ಮೂಲಕ. ಇನ್ನು ರ್ಟ್ ಆಫ್ ಲವಿಂಗ್ ಗೆ ಸಂಬಂಧಿಸಿದಂತೆ ಇದನ್ನು ಹೇಳುವುದಾದರೆ, ಪ್ರೀತಿಸುವುದನ್ನ ಕಲಿಯಬಯಸುವವರು, ತಮ್ಮ ಕಲಿಕೆಯನ್ನ ತಮ್ಮ ಬದುಕಿನ ಪ್ರತಿ ಕ್ಷೇತ್ರದಲ್ಲಿ, ಶಿಸ್ತು, ಏಕಾಗ್ರತೆ ಮತ್ತು ಸಹನೆಗಳನ್ನ ಪ್ರ್ಯಾಕ್ಟೀಸ್ ಮಾಡುವುದರ ಮೂಲಕ ಶುರು ಮಾಡಬೇಕು… । ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೀತಿ ಎನ್ನುವ ಕಲೆಯನ್ನ ಪ್ರ್ಯಾಕ್ಟೀಸ್ ಮಾಡಲು ಅತ್ಯವಶ್ಯಕವಾದ ಮೂರನೇಯ ಅಂಶವೆಂದರೆ ‘ಸಹನೆ’. ಕಲೆಯಲ್ಲಿ ಪರಿಣಿತಿ ಸಾಧಿಸಲು ಪ್ರಯತ್ನಿಸಿದ ಪ್ರತಿಯೊಬ್ಬರಿಗೂ ಗೊತ್ತು, ಏನನ್ನಾದರೂ ಸಾಧಿಸಲು ಸಹನೆ ತುಂಬ ಮುಖ್ಯ ಎನ್ನುವುದು. ಶೀಘ್ರ ಫಲಿತಾಂಶಗಳನ್ನು ಬಯಸುವವರು, ಎಂದೂ ಯಾವ ಕಲೆಯನ್ನೂ ಕಲಿಯಲಾರರು. ಆದರೂ ಆಧುನಿಕ ಮನುಷ್ಯನಿಗೆ ಸಹನೆ, ಶಿಸ್ತು ಮತ್ತು ಏಕಾಗ್ರತೆಯಷ್ಟೇ ರೂಢಿಸಿಕೊಳ್ಳಲು ಕಠಿಣವಾದದ್ದು. ಆದರೆ ನಮ್ಮ ಔದ್ಯೋಗಿಕ ವ್ಯವಸ್ಥೆ ಕಲೆಯನ್ನು ರೂಢಿಸಿಕೊಳ್ಳಲು ನಮಗೆ ಬೇಕಾದ ಎಲ್ಲ ಅವಶ್ಯಕತೆಗಳಿಗೆ ತದ್ವಿರುದ್ಧವಾದ ಅಂಶಗಳನ್ನು ಪೋಷಿಸುತ್ತದೆ. ನಮ್ಮ ಔದ್ಯೋಗಿಕ ವ್ಯವಸ್ಥೆಗೆ ಬೇಕಾದದ್ದು ಸಹನೆ ಅಲ್ಲ ‘ತ್ವರಿತಗತಿ’ (quickness). ನಮ್ಮ ಎಲ್ಲ ಯಂತ್ರಗಳು ತಯಾರಾಗಿರುವುದು ತ್ವರಿಗತಿಯಲ್ಲಿ ಕೆಲಸ ಮಾಡಲು. ಕಾರ್ ಮತ್ತು ಏರೋಪ್ಲೇನ್ ಗಳನ್ನ ಕಂಡುಹಿಡಿದಿರುವುದೇ ನಮ್ಮನ್ನ ತ್ವರಿತಗತಿಯಲ್ಲಿ ನಮಗೆ ಬೇಕಾದ ಜಾಗೆಗಳಿಗೆ ಮುಟ್ಟಿಸಲು. ಅರ್ಧ ಸಮಯದಲ್ಲಿ ತನ್ನ ಉದ್ದೇಶಿತ ಕೆಲಸ ಮಾಡುವ ಯಂತ್ರ, ಹಳೆಯ ಮತ್ತು ನಿಧಾನಗತಿಯ ಯಂತ್ರಕ್ಕಿಂತ ಎರಡುಪಟ್ಟು ಒಳ್ಳೆಯ ಯಂತ್ರ. ನಮ್ಮ ಔದ್ಯೋಗಿಕ ವ್ಯವಸ್ಥೆ, ತ್ವರಿತಗತಿಯ ಕಾರ್ಯನಿರ್ವಹಣೆಯನ್ನ ಬಯಸುವ ಉದ್ದೇಶದ ಹಿಂದೆ, ಆರ್ಥಿಕ ಮೌಲ್ಯಗಳಿರುವುದು ನಿಜ. ಆದರೆ ಯಂತ್ರಗಳಿಗೆ ಯಾವುದು ಒಳ್ಳೆಯದೋ, ಮನುಷ್ಯರಿಗೂ ಅವೇ ಮೌಲ್ಯಗಳು ಒಳ್ಳೆಯದೆನ್ನುವುದು ಈ ಎಲ್ಲದರ ಹಿಂದಿರುವ ತರ್ಕ. ತ್ವರಿತಗತಿಯಲ್ಲಿ ಕೆಲಸ ಮಾಡದಿರುವಾಗ ತಾನು ಏನನ್ನೋ (ಸಮಯ) ಕಳೆದುಕೊಳ್ಳುತ್ತಿದ್ದೇನೆ ಎಂದು ಆಧುನಿಕ ಮನುಷ್ಯ ಭಾವಿಸುತ್ತಾನಾದರೂ ಅವನಿಗೆ, ತಾನು ಉಳಿಸಿರುವ ಸಮಯವನ್ನು ಹೇಗೆ ಉಪಯೋಗಿಸಬೇಕೆನ್ನುವುದು ಗೊತ್ತಿಲ್ಲ, ಅವನಿಗೆ ಗೊತ್ತಿರುವುದು ಅದನ್ನ ವ್ಯರ್ಥ ಮಾಡುವುದೊಂದೇ.

ಯಾವುದೇ ಕಲೆಯನ್ನು ಕಲಿಯುವ ಪ್ರಕ್ರಿಯೆಯಲ್ಲಿ ಅತ್ಯಂತ ಅವಶ್ಯಕ ಅಂಶವೆಂದರೆ, ಆ ಕಲೆಯಲ್ಲಿ ಪರಿಣಿತಿಯನ್ನು ಸಾಧಿಸುವುದು ಅವರ ಪರಮ ಕಾಳಜಿಯಾಗಿರಬೇಕು. ಕಲೆ ಅವರ ಪರಮ ಕಾಳಜಿಯಾಗಿರದ ಸ್ಥಿತಿಯಲ್ಲಿ ಅವರಿಗೆ ಕಲೆಯನ್ನು ಕಲಿಯುವುದು ಸಾಧ್ಯವಾಗುವುದಿಲ್ಲ. ಅವರು ಒಬ್ಬ ಹವ್ಯಾಸಿ ಕಲೆಗಾರರಾಗಬಹುದೇ ಹೊರತು, ಆ ಕಲೆಯಲ್ಲಿ ಮಾಸ್ಟರ್ ಆಗುವುದು ಅವರಿಗೆ ಸಾಧ್ಯವಾಗುವುದಿಲ್ಲ. ಬೇರೆ ಎಲ್ಲ ಕಲೆಗಳಂತೆಯೇ, ಆರ್ಟ್ ಆಫ್ ಲವಿಂಗ್ ಗೆ ಕೂಡ ಈ ಷರತ್ತು ಲಾಗೂ ಆಗುತ್ತದೆ. ಆರ್ಟ ಆಫ್ ಲವಿಂಗ್ ನಲ್ಲಿಯೇ ಹವ್ಯಾಸಿಗಳ ಸಂಖ್ಯೆ ಮಾಸ್ಟರ್ ಗಳಿಗಿಂತ ಹೆಚ್ಚು, ಬೇರೆ ಎಲ್ಲ ಕಲೆಗಳಿಗಿಂತ.

ಯಾವುದೇ ಕಲೆಯ ಕಲಿಕೆಗೆ ಬೇಕಾಗುವ ಸಾಮಾನ್ಯ ಅಂಶಗಳ ಕುರಿತಾಗಿ ನಾನು ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಬೇಕು. ಯಾರೂ ಕಲೆಯನ್ನ ನೇರವಾಗಿ ಕಲಿಯಲು ಶುರು ಮಾಡುವುದಿಲ್ಲ, ಎಲ್ಲ ಶುರು ಮಾಡೋದು ಪರೋಕ್ಷ ರೀತಿಯಲ್ಲೇ. ಕಲೆಯ ಕಲಿಕೆ ಬಹುತೇಕ ಶುರುವಾಗೋದು, ಹೊರಗಿನಿಂದ ಪರಸ್ಪರ ಸಂಬಂಧವಿಲ್ಲದಂತೆ ಕಾಣಿಸುವ ಹಲವಾರು ಸಂಗತಿಗಳನ್ನು ಕಲಿಯುವ ಮೂಲಕ. ಕಾರ್ಪೆಂಟರಿ ಕಲಿಯಲು ಬಯಸುತ್ತಿರುವ ಹೊಸ ವಿದ್ಯಾರ್ಥಿ, ಮೊದಲು ಶುರುಮಾಡೋದು, ಕಟ್ಟಿಗೆಯನ್ನ ಸಪಾಟು ಮಾಡುವುದನ್ನ ಕಲಿಯುವ ಮೂಲಕ ; ಪಿಯಾನೋ ಕಲಿಯಬಯಸುತ್ತಿರುವ ಹೊಸ ವಿದ್ಯಾರ್ಥಿ ತನ್ನ ಕಲಿಕೆಯನ್ನ ಶುರು ಮಾಡೋದು ಪಿಯಾನೋದ ಸ್ಕೇಲ್ ಗಳ ಅಭ್ಯಾಸದ ಮೂಲಕ ; ಝೆನ್ ರೀತಿಯ ಬಿಲ್ಲುಗಾರಿಕೆಯನ್ನ ಕಲಿಯುತ್ತಿರುವ ಹೊಸ ವಿದ್ಯಾರ್ಥಿ, ತನ್ನ ಕಲಿಕೆಯನ್ನ ಶುರು ಮಾಡೋದು ಉಸಿರಾಟದ ವ್ಯಾಯಾಮಗಳ ಅಭ್ಯಾಸದ ಮೂಲಕ (1). ಯಾವುದೇ ಕಲೆಯಲ್ಲಿ ಮಾಸ್ಟರ್ ಆಗಬೇಕೆನ್ನುವ ಅಭಿಲಾಷೆಯುಳ್ಳವರು, ತಮ್ಮ ಇಡೀ ಬದುಕನ್ನ ಆ ಕಲೆಗಾಗಿ ಸಮರ್ಪಿಸಿಕೊಳ್ಳಲು ಸಿದ್ಧರಾಗಿರಬೇಕು, ಕೊನೆಪಕ್ಷ ಆ ಕಲೆಗೆ ಸದಾ ಅಂಟಿಕೊಂಡವರಾಗಿರಬೇಕು. ಕಲೆಯ ಕಲಿಕೆಯಲ್ಲಿ ಒಬ್ಬರ ಸ್ವಂತ ವ್ಯಕ್ತಿತ್ವ, ಮುಖ್ಯ ಸಾಧನದಂತೆ ಕೆಲಸ ಮಾಡುತ್ತದೆಯಾದ್ದರಿಂದ, ಕೆಲ ನಿರ್ಧಿಷ್ಟ ಕೆಲಸಗಳನ್ನ ಸಮರ್ಪಕವಾಗಿ ನಿರ್ವಹಿಸುವಂತೆ ಅದನ್ನ ಯಾವಾಗಲೂ ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳಬೇಕು. ಆರ್ಟ್ ಆಫ್ ಲವಿಂಗ್ ಗೆ ಸಂಬಂಧಿಸಿದಂತೆ ಇದನ್ನು ಹೇಳುವುದಾದರೆ, ಪ್ರೀತಿಸುವುದನ್ನ ಕಲಿಯಬಯಸುವವರು, ತಮ್ಮ ಕಲಿಕೆಯನ್ನ ತಮ್ಮ ಬದುಕಿನ ಪ್ರತಿ ಕ್ಷೇತ್ರದಲ್ಲಿ, ಶಿಸ್ತು, ಏಕಾಗ್ರತೆ ಮತ್ತು ಸಹನೆಗಳನ್ನ ಪ್ರ್ಯಾಕ್ಟೀಸ್ ಮಾಡುವುದರ ಮೂಲಕ ಶುರು ಮಾಡಬೇಕು.

ಶಿಸ್ತನ್ನು ಪ್ರ್ಯಾಕ್ಟೀಸ್ ಮಾಡುವುದು ಹೇಗೆ? ನಮ್ಮ ತಾತ ಮುತ್ತಾತಂದಿರು ಈ ಪ್ರಶ್ನೆಗೆ ಉತ್ತರ ಕೊಡಲು ಹೆಚ್ಚು ಸಮರ್ಥರಾಗಿದ್ದರು. ಮುಂಜಾನೆ ಬೇಗ ಏಳುವುದು, ಅನವಶ್ಯಕ ಭೋಗ ವಿಲಾಸದಲ್ಲಿ ತೊಡಗಿಸಿಕೊಳ್ಳದಿರುವುದು, ಕಷ್ಟಪಟ್ಟು ಕೆಲಸ ಮಾಡುವುದು …. ಮುಂತಾದವನ್ನು ಅವರು ಶಿಸ್ತು ಪ್ರ್ಯಾಕ್ಟೀಸ್ ಮಾಡಲು ಶಿಫರಾಸು ಮಾಡುತ್ತಿದ್ದರು. ಸಹಜವಾಗಿಯೇ ಇಂಥ ಶಿಸ್ತಿನಲ್ಲಿ ಹಲವಾರು ಕೊರತೆಗಳಿವೆ. ಈ ಬಗೆಯ ಶಿಸ್ತು, ಜಡವಾದದ್ದು ಮತ್ತು ದಬ್ಬಾಳಿಕೆಯ ಮನೋಭಾವದ್ದು, ಜಿಪುಣತನ, ಮಿತವ್ಯಯ ಮತ್ತು ಉಳಿತಾಯಗಳ ಸುತ್ತ ಕೇಂದ್ರೀಕೃತವಾದದ್ದು ಹಾಗು ಬಹಳಷ್ಟು ರೀತಿಯಲ್ಲಿ ಜೀವ ವಿರೋಧಿಯಾದದ್ದು. ಆದರೆ ಈ ಬಗೆಯ ಶಿಸ್ತಿಗೆ ಪ್ರತಿರೋಧವಾಗಿ ಎನ್ನುವಂತೆ, ಎಲ್ಲ ತರದ ಶಿಸ್ತಿನ ವಿರುದ್ಧ ಅಪನಂಬಿಕೆ ಬೆಳೆಸಿಕೊಳ್ಳಲಾಗುತ್ತದೆ, ಮತ್ತು ನಮ್ಮ ಮೇಲೆ ಹೇರಲಾಗಿರುವ ನಿತ್ಯದ 8 ಗಂಟೆಯ ರೂಟೀನ್ ಆದ ಕೆಲಸವನ್ನ ಬ್ಯಾಲನ್ಸ್ ಮಾಡಲು ಅಥವಾ ಧಿಕ್ಕರಿಸಲು ಎನ್ನುವಂತೆ ಅಶಿಸ್ತಿನ ಅಥವಾ ಆರಾಮ್ ಆದ ಜೀವನ ಪದ್ಧತಿಯನ್ನ ಬೆಳೆಸಿಕೊಳ್ಳಲಾಗುತ್ತದೆ.

ಪ್ರತಿನಿತ್ಯ ಮುಂಜಾನೆ ಒಂದು ನಿರ್ಧಿಷ್ಟ ಸಮಯಕ್ಕೆ ನಿದ್ದೆಯಿಂದ ಏಳುವುದು, ಒಂದು ನಿರ್ಧಿಷ್ಟ ಅವಧಿಯನ್ನ ಧ್ಯಾನ, ಓದು, ಸಂಗೀತ, ವಾಕಿಂಗ್, ಮುಂತಾದವಕ್ಕೆ ಮೀಸಲಾಗಿಡುವುದು, ಪಲಾಯನಾವಾದಿ ಸಂಗತಿಗಳೆಂದು ಗುರುತಿಸಲ್ಪಟ್ಟಿರುವ ಪತ್ತೆದಾರಿ ಕತೆ ಕಾದಂಬರಿಗಳನ್ನ ಓದುವುದು, ಟೀವಿ, ಸಿನಿಮಾ ನೋಡುವುದು ಮುಂತಾದವುಗಳನ್ನು ಅತಿಯಾಗಿ ಮಾಡದಿರುವುದು, ಮಿತಿ ಮೀರಿ ತಿನ್ನದಿರುವುದು ಕುಡಿಯದಿರುವುದು, ಇವೇ ಮುಂತಾದವು ಶಿಸ್ತಿನ ಕೆಲವು ಪ್ರಾಥಮಿಕ ನಿಯಮಗಳು ಎಂದು ಗುರುತಿಸಲ್ಪಟ್ಟಿವೆ. ಶಿಸ್ತನ್ನು ಬಲವಂತವಾಗಿ ತಮ್ಮ ಮೇಲೆ ಹೇರಿಕೊಂಡು ಪ್ರ್ಯಾಕ್ಟೀಸ್ ಮಾಡದಿರುವುದು ಬಹಳ ಅವಶ್ಯಕ, ಶಿಸ್ತು ತಮ್ಮ ಸ್ವಂತದ ಬಯಕೆಗಳ ಅಭಿವ್ಯಕ್ತಿ ಎನ್ನುವಂತೆ, ತಮ್ಮ ಖುಶಿ ಎನ್ನುವಂತೆ, ಪ್ರೀತಿಯ ಹವ್ಯಾಸದಂತೆ ನಮ್ಮೊಳಗೆ ಮೂಡಿ ಬರಬೇಕು, ಒಮ್ಮೊಮ್ಮೆ ಸಾಧ್ಯವಾಗದ ಸ್ಥಿತಿಯಲ್ಲಿ ಮಿಸ್ ಮಾಡಿಕೊಂಡಂತೆ ಅನಿಸಬೇಕು. ಶಿಸ್ತಿನ ಕುರಿತಾದ ಪಾಶ್ಚಾತ್ಯ ಪರಿಕಲ್ಪನೆಯ ( ಎಲ್ಲ ಬಗೆಯ ಮೌಲ್ಯಗಳ ಕುರಿತಾಗಿ ಕೂಡ) ಒಂದು ದುರದೃಷ್ಟಕರ ಅಂಶವೆಂದರೆ, ನಾವು ಶಿಸ್ತನ್ನ ಆಚರಿಸಿದಾಗ ನಮಗೆ ನೋವಾಗುವಂತಿರಬೇಕು ಎನ್ನುವ ತಿಳುವಳಿಕೆ. ನೋವನ್ನುಂಟು ಮಾಡಿದರೆ ಮಾತ್ರ ಶಿಸ್ತನ್ನು ಯಶಸ್ವಿಯಾಗಿ ಆಚರಿಸಿದಂತೆ ಎನ್ನುವ ಗ್ರಹಿಕೆ. ಆದರೆ ಪೌರಸ್ತರು (The east) ಬಹಳ ಹಿಂದೆಯೇ ಕಂಡುಕೊಂಡದ್ದೆನೆಂದರೆ, ಮನುಷ್ಯನಿಗೆ ಯಾವುದು ಒಳ್ಳೆಯದು, ಅವನ ದೇಹಕ್ಕೆ, ಆತ್ಮಕ್ಕೆ ಯಾವುದು ಒಳ್ಳೆಯದು ಎನ್ನುವುದು ಅವನಿಗೆ ಒಪ್ಪಿತವೂ ಆಗಿರಬೇಕು, ಮೊದ ಮೊದಲು ಕೆಲವು ವಿರೋಧವನ್ನು ಎದುರಿಸಬೇಕಾಗಿ ಬಂದರೂ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply