ಪ್ರೀತಿಯ ಆಚರಣೆ (ಭಾಗ – 3) : Art of love #44

ಕ್ಷುಲ್ಲಕ ಮತ್ತು ನಿರರ್ಥಕ ಸಂಭಾಷಣೆಯನ್ನ ದೂರ ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ಕೆಟ್ಟ ಸಂಪರ್ಕ (bad company) ವನ್ನು ದೂರ ಮಾಡುವುದು ಕೂಡ. ನನ್ನ ಪ್ರಕಾರ ಬ್ಯಾಡ್ ಕಂಪನಿಯೆಂದರೆ, ಕೇವಲ ಕ್ರೂರ, ವಿನಾಶಕಾರಿ ಜನರಲ್ಲ ; ಯಾರ ಸಹವಾಸ ವಿಷಪೂರಿತ ಮತ್ತು ನಮ್ಮನ್ನ ಖಿನ್ನತೆಗೆ ದೂಡುವುದೋ ಅವರೆಲ್ಲ ಬ್ಯಾಡ್ ಕಂಪನಿಯೇ. ಝಾಂಬಿಗಳು ( ಸ್ವಂತ ವ್ಯಕ್ತಿತ್ವ ಇಲ್ಲದೇ ಇರುವ ಹೃದಯಹೀನರು), ತಮ್ಮ ಆತ್ಮಗಳನ್ನು ಕೊಂದುಕೊಂಡವರು, ಜೀವಂತ ಶವಗಳಂತಿರುವವರು, ಕ್ಷುಲ್ಲಕ ಸಂಭಾಷಣೆಗಳಲ್ಲಿ ತೊಡಗಿಕೊಳ್ಳುವವರು, ಕ್ಷುಲ್ಲಕ ಆಲೋಚನೆಗಳನ್ನ ಹೊಂದಿರುವವರು, ಮಾತಿಗೆ ಬದಲಾಗಿ ವಟ ವಟ ಎಂದು ಬಡಬಡಿಸುವವರು, ಸ್ಪಷ್ಟ ಆಲೋಚನೆಗಳಿಗೆ ಬದಲಾಗಿ ಕ್ಲೀಷೆಯಾದ ಅಭಿಪ್ರಾಯಗಳನ್ನು ಸಮರ್ಥಿಸುವವರು, ಈ ಎಲ್ಲರಿಂದ ದೂರ ಕಾಯ್ದುಕೊಳ್ಳುವುದು ಏಕಾಗ್ರತೆಯನ್ನು ಹೊಂದಲು ಸಹಾಯಕವಾಗಬಲ್ಲದು… | ಎರಿಕ್ ಫ್ರಾಮ್; ಕನ್ನಡಕ್ಕೆ:ಚಿದಂಬರ ನರೇಂದ್ರ

ನಮ್ಮ ಸಂಸ್ಕೃತಿಯಲ್ಲಿ “ಏಕಾಗ್ರತೆ”, ಪ್ರ್ಯಾಕ್ಟೀಸ್ ಮಾಡುವ ವಿಷಯದಲ್ಲಿ ಎಲ್ಲಕ್ಕಿಂತ ಕಠಿಣತರವಾದದ್ದು. ಈ ಪ್ರ್ಯಾಕ್ಟೀಸ್ ನಲ್ಲಿ ಎದುರಾಗುವ ಪ್ರತಿಯೊಂದೂ ಏಕಾಗ್ರತೆಯ ಸಾಮರ್ಥ್ಯಕ್ಕೆ ಪ್ರತಿಕೂಲದಂತೆ ವರ್ತಿಸುತ್ತವೆ. ಏಕಾಗ್ರತೆಯನ್ನ ಕಲಿಯುವ ಪ್ರಕ್ರಿಯೆಯಲ್ಲಿಯ ಮೊದಲ ಮೆಟ್ಟಿಲೆಂದರೆ, ಏನನ್ನೂ ಓದದೆ, ರೇಡಿಯೋ ಕೇಳದೆ, ಧೂಮಪಾನ ಅಥವಾ ಕುಡಿತ ಮುಂತಾದವನ್ನು ಅವಲಂಬಿಸದೆಯೇ ತನ್ನೊಂದಿಗೆಯೇ ಏಕಾಂತದಲ್ಲಿ ಇರುವುದನ್ನ ಅಭ್ಯಾಸ ಮಾಡುವುದು. ಏಕಾಗ್ರತೆಯನ್ನ ಸಾಧಿಸುವುದೆಂದರೆ, ತನ್ನೊಂದಿಗೆ ಏಕಾಂತವನ್ನು ಸಾಧ್ಯ ಮಾಡಿಕೊಳ್ಳುವುದು. ಮತ್ತು ಏಕಾಗ್ರತೆಯನ್ನು ಸಾಧಿಸುವ ಸಾಮರ್ಥ್ಯವೇ ಪ್ರೀತಿಸಲು ಬೇಕಾದ ಸಾಮರ್ಥ್ಯವೂ ಹೌದು. ನನ್ನ ಕಾಲ ಮೇಲೆ ನಾನು ನಿಲ್ಲುವುದು ನನಗೆ ಸಾಧ್ಯವಿಲ್ಲದ ಕಾರಣವಾಗಿ ನಾನು ಇನ್ನೊಬ್ಬರಿಗೆ ಅಟ್ಯಾಚ್ ಆಗಿದ್ದರೆ, ಅವಳು ಅಥವಾ ಅವನು ನಮಗೆ ಕೇವಲ ಜೀವ ರಕ್ಷಕರು ಮಾತ್ರ, ಆದರೆ ಈ ಸಂಬಂಧ (attachment) ಪ್ರೀತಿಯ ಸಂಬಂಧವಲ್ಲ. ದ್ವಂದ್ವ ಅನಿಸಿದರೂ ನಾವು ಅರಿತುಕೊಳ್ಳಬೇಕಾದದ್ದು ಏನೆಂದರೆ,
ಒಂಟಿಯಾಗಿರಲು ಬೇಕಾಗುವ ತಿಳುವಳಿಕೆಯೇ (ability) ಪ್ರೀತಿಸಲು ಬೇಕಾಗುವ ತಿಳುವಳಿಕೆಯ ಸ್ಥಿತಿಯೂ ಹೌದು ಎನ್ನುವುದನ್ನ.

ತನ್ನೊಂದಿಗೆ ತಾನು ಏಕಾಂತದಲ್ಲಿರಲು ಪ್ರಯತ್ನ ಮಾಡುವ ಯಾರಿಗೇ ಆದರೂ ಇದು ಎಷ್ಟು ಕಷ್ಟಕರವಾದದ್ದು ಎನ್ನುವುದು ಗೊತ್ತಾಗುತ್ತದೆ. ಹೀಗೆ ಪ್ರಯತ್ನ ಮಾಡಿದಾಗಲೆಲ್ಲ ಅವನು ಚಡಪಡಿಸುತ್ತಾನೆ, ಅಶಾಂತನಾಗುತ್ತಾನೆ, ಹೆಚ್ಚು ಹೆಚ್ಚು ಆತಂಕಿತನಾಗುತ್ತಾನೆ. ಆಗ ಅವನು ಈ ಏಕಾಗ್ರತೆಯ ಅಭ್ಯಾಸವನ್ನ, ಕೆಲಸಕ್ಕೆ ಬಾರದ್ದು, ಸಿಲ್ಲಿ, ಸಮಯ ವ್ಯರ್ಥ ಮುಂತಾಗಿ ದೂಷಿಸಲು ಆರಂಭಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ಎಲ್ಲ ಬಗೆಯ ಆಲೋಚನೆಗಳು, ಅವನ ಮೈಂಡ್ ನ್ನ ಸ್ವಾಧೀನಪಡಿಸಿಕೊಳ್ಳುವುದನ್ನ ಅವನು ಗಮನಿಸುತ್ತಾನೆ. ನಾಳೆ ಏನು ಮಾಡುವುದು? ನಿತ್ಯದ ಕೆಲಸದಲ್ಲಿ ಎದುರಾಗಿರುವ ಅಡತಡೆಯನ್ನ ಬಗೆಹರಿಸಿಕೊಳ್ಳುವುದು ಹೇಗೆ? ಅಥವಾ ಸಂಜೆ, ಹೊತ್ತು ಕಳೆಯುವುದು ಹೇಗೆ? ಮುಂತಾದ ಆಲೋಚನೆಗಳು ಅವನನ್ನು ಆವರಿಸಿಕೊಂಡು ಅವನ ಮೈಂಡ್ ನ್ನ ಖಾಲಿಯಾಗಿಡಲು ಬಿಡುವುದೇ ಇಲ್ಲ.

ಇಂಥದೊಂದು ಸ್ಥಿತಿಯಿಂದ ಹೊರಬರಲು ಧ್ಯಾನದಂತಹ ಕೆಲವು ಸರಳ ಅಭ್ಯಾಸಗಳು ಸಹಾಯ ಮಾಡಬಲ್ಲವು. ಉದಾಹರಣೆಗೆ , ನಿರಾಳ ಸ್ಥಿತಿಯಲ್ಲಿ ಕುಳಿತುಕೊಂಡು ( ತೀರ ಬಿಗಿಯೂ ಅಲ್ಲದ, ಸಡಿಲವೂ ಅಲ್ಲದ ಭಂಗಿಯಲ್ಲಿ ), ಹಗುರಾಗಿ ಕಣ್ಣು ಮುಚ್ಚಿ, ನಿಮ್ಮ ಕಣ್ಣೆದುರಿಗೆ ಒಂದು ಬಿಳಿ ಪರದೆಯನ್ನ ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮನಸ್ಸಿನಲ್ಲಿ ಮೂಡುತ್ತಿರುವ ಎಲ್ಲ ಚಿತ್ರಗಳ ಕಡೆಗೆ, ಆಲೋಚನೆಗಳ ಕಡೆಗೆ ಗಮನಹರಿಸದೇ ನಿಮ್ಮ ಉಸಿರಾಟವನ್ನ ಗಮನಿಸಲು ಶುರು ಮಾಡಿ. ಉಸಿರಾಟದ ಬಗ್ಗೆ ಯಾವ ಆಲೋಚನೆಯನ್ನೂ ಮಾಡಬೇಡಿ, ಅದರ ಮೇಲೆ ಒತ್ತಾಯ ಹೇರಬೇಡಿ, ನಿಯಂತ್ರಿಸಲು ಹೋಗಬೇಡಿ, ಸುಮ್ಮನೇ ನಿಮ್ಮ ಉಸಿರಾಟವನ್ನ ಫಾಲೋ ಮಾಡಿ, ಆ ಉಸಿರಾಟವನ್ನ ಸೆನ್ಸ್ ಮಾಡುವ ಪ್ರಯತ್ನ ಮಾಡಿ. ಉಸಿರಾಟ ಮುಂದುವರೆದಂತೆಲ್ಲ, “ ನಾನು “ (I) ಎನ್ನುವುದನ್ನ ಅನುಭವಿಸಲು ಪ್ರಯತ್ನಿಸಿ, “ನಾನು”ಎಂದರೆ, ನನ್ನ ಎಲ್ಲ ಶಕ್ತಿಗಳ ಕೇಂದ್ರ, ನನ್ನ ಜಗತ್ತಿನ ಸೃಷ್ಟಿಕರ್ತ ಎನ್ನುವ ಅರ್ಥದಲ್ಲಿ. ಇಂಥ ಏಕಾಗ್ರತೆಯ ಅಭ್ಯಾಸವನ್ನ ಪ್ರತಿ ಮುಂಜಾನೆ, ಕನಿಷ್ಠ ಇಪ್ಪತ್ತು ನಿಮಿಷ (ಸಾಧ್ಯವಾದರೆ ಇನ್ನೂ ಹೆಚ್ಚು ಸಮಯ) ಮತ್ತು ಪ್ರತಿ ರಾತ್ರಿ ಹಾಸಿಗೆಗೆ ಹೋಗುವ ಮುನ್ನ (2) ನಿಯಮಿತವಾಗಿ ಮಾಡಿ.

ಇಂಥ ಅಭ್ಯಾಸಗಳ ಜೊತೆ ಜೊತೆಯೇ, ಮಾಡುವ ಪ್ರತಿ ಕೆಲಸದಲ್ಲೂ ಏಕಾಗ್ರತೆಯನ್ನ ಸಾಧಿಸಲು ಪ್ರಯತ್ನಿಸಬೇಕು, ಸಂಗೀತ ಕೇಳುವಾಗ, ಪುಸ್ತಕ ಓದುವಾಗ, ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುವಾಗ, ಯಾವುದೋ ಒಂದು ದೃಶ್ಯವನ್ನ ನೋಡುವಾಗ, ನಮ್ಮ ಪ್ರತಿಯೊಂದು ಕ್ರಿಯೆಯಲ್ಲೂ ಏಕಾಗ್ರತೆಯನ್ನ ಹೊಂದುವ ಪ್ರಯತ್ನ ಮಾಡಬೇಕು. ನಾವು ಮಾಡುತ್ತಿರುವ ಕ್ರಿಯೆಯ ಸಧ್ಯದ ಕ್ಷಣದಲ್ಲಿ ನಾವು ಒಂದಾಗಬೇಕು, ಈ ಕ್ಷಣವನ್ನು ಬಿಟ್ಟು ಬೇರೆ ಯಾವುದೂ ನಮಗೆ ಮಹತ್ವದ್ದಾಗಬಾರದು. ಏಕಾಗ್ರತೆಯೊಂದಿದ್ದರೆ, ವ್ಯಕ್ತಿ ಮಾಡುತ್ತಿರುವ ಕ್ರಿಯೆ ನಮಗೆ ಮುಖ್ಯವಾಗುವುದಿಲ್ಲ, ಏಕಾಗ್ರತೆ ಇದ್ದಾಗ ಮುಖ್ಯ ಮತ್ತು ಅಮುಖ್ಯ ಎರಡೂ ಕೆಲಸಗಳು, ವ್ಯಕ್ತಿಯ ಸಮಗ್ರ ಗಮನವನ್ನ ಹೊಂದಿರುವುದರಿಂದ, ಹೊಸ ಅರ್ಥವನ್ನ, ವಾಸ್ತವದ ಹೊಸ ಆಯಾಮವನ್ನ ಧರಿಸುತ್ತವೆ.

ಏಕಾಗ್ರತೆಯನ್ನ ಅಭ್ಯಾಸ ಮಾಡಲು, ಎಲ್ಲ ಕ್ಷುಲ್ಲಕ ಸಂಭಾಷಣೆಯನ್ನ, ನೈಜವಲ್ಲದ (genuine) ಎಲ್ಲ ಕ್ರಿಯೆಗಳನ್ನ, ಮಾತುಕತೆಗಳನ್ನ ಸಾಧ್ಯವಾದಷ್ಟು ದೂರ ಇಡಬೇಕು. ಇಬ್ಬರು ವ್ಯಕ್ತಿಗಳು ತಮಗಿಬ್ಬರಿಗೂ ಗೊತ್ತಿರುವ ಒಂದು ಮರದ ವಿಕಾಸದ ಕುರಿತಾಗಿ ಮಾತನಾಡಿಕೊಳ್ಳುವುದು, ಅಥವಾ ತಾವಿಬ್ಬರೂ ಈಗ ತಾನೇ ತಿಂದು ಮುಗಿಸಿರುವ ಬ್ರೆಡ್ ನ ರುಚಿಯ ಕುರಿತಾಗಿ ಚರ್ಚೆ ಮಾಡುವುದು, ಅಥವಾ ತಮ್ಮ ಕೆಲಸದಲ್ಲಿನ ಕಾಮನ್ ಆಗಿರುವ ಅನುಭವವನ್ನು ಹಂಚಿಕೊಳ್ಳುವುದು, ಇವೇ ಮುಂತಾದ ವಿಷಯಗಳು ಪರಸ್ಪರರ ನಡುವಿನ ಸಂಭಾಷಣೆಗೆ ಔಚಿತ್ಯಪೂರ್ಣವಾದರೂ, ಅವರ ಅನುಭವಗಳು ನೈಜವಾಗಿರಬೇಕು ಮತ್ತು ಅವರು ಯಾವುದನ್ನೂ ಅಸ್ಪಷ್ಟವಾಗಿ, ಸಾಮಾನ್ಯೀಕರಿಸಿ ಮಾತನಾಡಬಾರದು. ಅದರ ಬದಲಾಗಿ ಇಬ್ಬರು ವ್ಯಕ್ತಿಗಳು ರಾಜಕೀಯ, ಧರ್ಮ ದಂಥ ಗಹನ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೂ, ಅವರ ಮಾತುಕತೆ ಕ್ಲೀಷೆಯಿಂದ ಕೂಡಿದ್ದರೆ, ಅವರು ಮಾತುಕತೆಯನ್ನ ತಮ್ಮ ವ್ಯಕ್ತಿತ್ವದ ಅಭಿವ್ಯಕ್ತಿ ಎಂದು ಪರಿಗಣಿಸದೇ, ಹೃದಯ ಸಂವಾದದಲ್ಲಿ ತೊಡಗಿಕೊಳ್ಳದೇ ಇರುವ ಸಂದರ್ಭದಲ್ಲಿ, ಇಂಥ ಸಂಭಾಷಣೆಯನ್ನೂ ನಿರರ್ಥಕ, ಕ್ಷುಲ್ಲಕ ಎಂದೇ ಪರಿಗಣಿಸಬೇಕು.

ಇಲ್ಲಿ ನಾನು ಇನ್ನೊಂದು ಮಾತನ್ನ ಸೇರಿಸಬೇಕು, ಕ್ಷುಲ್ಲಕ ಮತ್ತು ನಿರರ್ಥಕ ಸಂಭಾಷಣೆಯನ್ನ ದೂರ ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ಕೆಟ್ಟ ಸಂಪರ್ಕ (bad company) ವನ್ನು ದೂರ ಮಾಡುವುದು ಕೂಡ. ನನ್ನ ಪ್ರಕಾರ ಬ್ಯಾಡ್ ಕಂಪನಿಯೆಂದರೆ, ಕೇವಲ ಕ್ರೂರ, ವಿನಾಶಕಾರಿ ಜನರಲ್ಲ ; ಯಾರ ಸಹವಾಸ ವಿಷಪೂರಿತ ಮತ್ತು ನಮ್ಮನ್ನ ಖಿನ್ನತೆಗೆ ದೂಡುವುದೋ ಅವರೆಲ್ಲ ಬ್ಯಾಡ್ ಕಂಪನಿಯೇ. ಝಾಂಬಿಗಳು ( ಸ್ವಂತ ವ್ಯಕ್ತಿತ್ವ ಇಲ್ಲದೇ ಇರುವ ಹೃದಯಹೀನರು), ತಮ್ಮ ಆತ್ಮಗಳನ್ನು ಕೊಂದುಕೊಂಡವರು, ಜೀವಂತ ಶವಗಳಂತಿರುವವರು, ಕ್ಷುಲ್ಲಕ ಸಂಭಾಷಣೆಗಳಲ್ಲಿ ತೊಡಗಿಕೊಳ್ಳುವವರು, ಕ್ಷುಲ್ಲಕ ಆಲೋಚನೆಗಳನ್ನ ಹೊಂದಿರುವವರು, ಮಾತಿಗೆ ಬದಲಾಗಿ ವಟ ವಟ ಎಂದು ಬಡಬಡಿಸುವವರು, ಸ್ಪಷ್ಟ ಆಲೋಚನೆಗಳಿಗೆ ಬದಲಾಗಿ ಕ್ಲೀಷೆಯಾದ ಅಭಿಪ್ರಾಯಗಳನ್ನು ಸಮರ್ಥಿಸುವವರು, ಈ ಎಲ್ಲರಿಂದ ದೂರ ಕಾಯ್ದುಕೊಳ್ಳುವುದು ಏಕಾಗ್ರತೆಯನ್ನು ಹೊಂದಲು ಸಹಾಯಕವಾಗಬಲ್ಲದು. ಆದರೆ ಯಾವಾಗಲೂ ಇಂಥ ಜನರಿಂದ ದೂರ ಇರುವುದು ಸಾಧ್ಯವಿಲ್ಲ ಮತ್ತು ಅದು ಅವಶ್ಯಕವೂ ಅಲ್ಲ. ಇಂಥ ಜನರೊಂದಿಗೆ ಮಾತನಾಡುವಾಗ ನಾವೂ ಕ್ಲೀಷೆಗಳನ್ನ ಬಳಸುವುದನ್ನ ಬಿಟ್ಟುಬಿಟ್ಟರೆ ಮತ್ತು ಅವರ ಕ್ಷುಲ್ಲಕ ಮಾತುಗಳಿಗೆ ದನಿಗೂಡಿಸದೇ, ನಾವು ನೇರವಾದ, ಪ್ರಾಮಾಣಿಕವಾದ ಮತ್ತು ವಿನಯದ ಮಾತುಗಳನ್ನಾಡಿದರೆ, ಇಂಥ ಜನ ತಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವುದನ್ನ ನಾನು ಗಮನಿಸಿದ್ದೇನೆ. ಅವರು ನಮ್ಮಿಂದ ನಿರೀಕ್ಷೆ ಮಾಡದ ನಮ್ಮ ಆಶ್ಚರ್ಯಕರ ವರ್ತನೆ ಅವರ ಬದಲಾವಣೆಯನ್ನ ಪ್ರೋತ್ಸಾಹಿಸುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply