ಒಂದು ದಳ ಶ್ರೀ ತುಳಸಿ ಪರಮಾತ್ಮಗರ್ಪಿಸಿ….

ಇಂದು ಕೃಷ್ಣ ಜನ್ಮಾಷ್ಟಮಿ. ನಮ್ಮೆಲ್ಲರ ಒಳಗೂ ನೆಲೆಸಿರುವ ಕೃಷ್ಣತತ್ತ್ವವನ್ನು ಜಾಗೃತಗೊಳಿಸಿಕೊಂಡರೆ, ಅದೇ ಉತ್ಸವದ ಸಾರ್ಥಕತೆ!


ಕೃಷ್ಣ, ಗೆಳೆಯನಂಥ ಭಗವಂತ. ಸಖ್ಯಭಾವದಲ್ಲಿ ಕೃಷ್ಣನನ್ನು ಭಾವಿಸಿ ಪೂಜಿಸಬಹುದಾದಂತೆ ಬಹುಶಃ ಬೇರೆ ದೇವತೆಗಳನ್ನು ಆರಾಧಿಸಿದ ಉಲ್ಲೇಖವಿಲ್ಲ. ಆಪದ್ಬಾಂಧವ ಎಂದೇ ಕರೆಸಿಕೊಳ್ಳುವ ಕೃಷ್ಣ, ಪರಮ ಪ್ರೇಮದಿಂದ ಹಿಡಿ ಅವಲಕ್ಕಿ ತಿನ್ನಿಸಿದರೆ ಅಷ್ಟೈಶ್ವರ್ಯವನ್ನೇ ನೀಡುತ್ತಾನೆ. ಪುರಂದರ ದಾಸರು ಹಾಡಿದಂತೆ, “ಒಂದು ದಳ ಶ್ರೀ ತುಳಸಿ, ಬಿಂದು ಗಂಗೋದಕ” ನೀಡಿದರೂ ತೃಪ್ತನಾಗುತ್ತಾನೆ. ಹೂವು ನೀಡಿದವರ ಮನೆಗೆ ಹುಲ್ಲಿನ ಹೊರೆಯನ್ನೇ ಹೊತ್ತು ತಂದು ಹಾಕುತ್ತಾನೆ… ಅಷ್ಟು ಸರಳ, ಈ ನಮ್ಮ ಗೋಪಾಲ.

ಅವತಾರಿಯಾಗಿದ್ದರೂ, ಸ್ವತಃ ದನಗಾಹಿಯಾಗಿ, ಹಳ್ಳಿಯ ಹುಡುಗನಾಗಿ, ಸರಳವಾಗಿ ಬದುಕಿದ ಶ್ರೀಕೃಷ್ಣ ಅತ್ಯಂತ ಉಲ್ಲಾಸದಾಯಕ ಪರಮ ಅಸ್ತಿತ್ವ. ಹಾಗೆಂದೇ, ಸಹಜೀವಿಗಳಿಗೆ ಸಂತಸವಾಗುವಂತೆ ಸೌಹಾರ್ದದಿಂದ ಬದುಕಿದರೆ, ಅದಕ್ಕಿಂತ ದೊಡ್ಡ ಕೃಷ್ಣಪೂಜೆಯಿಲ್ಲ. ಆದ್ದರಿಂದ, ಪರಸ್ಪರ ಪ್ರೀತಿಸುತ್ತಾ, ಸಂತಸ ಹಂಚುವ ಮೂಲಕ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸೋಣ.

ಈ ಸಂದರ್ಭದಲ್ಲಿ, ಕೃಷ್ಣನ ಸರಳತೆ ಮತ್ತು ಸಖ್ಯ ಪ್ರೇಮವನ್ನು ಸಾರುವ ಪುರಂದರ ದಾಸರ ಗೀತೆ:

ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮಿಪತಿ ಇವಗಿಲ್ಲ ಗರುವ ||
ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೆ ಮನದಲಿ ಸಾಧುಶಯನ ಮುಕುಂದ ಎನೆ
ಎಂದೆಂದು ವಾಸಿಪನಾಮಂದಿರದೊಳಗೆ ||
ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ
ಪರಿಪೂರ್ಣನೆಂದು ಪೂಜೆಯನು ಮಾಡೆ
ಪರಮ ಆಸಕ್ತಿಯಲಿ ಸೇವೆಯನು ಮಾಡಿದರೆ
ಸರಿಭಾಗ ಕೊಡುವ ತನ್ನರಮನೆಯೊಳಗೆ ||
ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು
ಪುಂಡರೀಕಾಕ್ಷ ಹುಲ್ಲನು ತಿನಿಸಿದ
ಅಂಡಜವಾಹನ ಶ್ರೀಪುರಂದರವಿಠಲನು
ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ||

Leave a Reply