ಪ್ರೀತಿಯ ಆಚರಣೆ (ಭಾಗ – 4) : Art of love #45

ಪರಸ್ಪರರನ್ನ ಪ್ರೀತಿಸುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಏಕಾಗ್ರತೆಯ ಅಭ್ಯಾಸ ಇತರರಿಗಿಂತ ಹೆಚ್ಚು ಅವಶ್ಯಕ ಎನ್ನುವುದನ್ನ ಒತ್ತುಕೊಟ್ಟು ಹೇಳಬೇಕಾಗಿಲ್ಲ. ಅವರು ಪರಸ್ಪರರಿಂದ ದೂರವಾಗಲು ಬದುಕಿನಲ್ಲಿ ಸಹಜವಾಗಿ ಎದುರಾಗುವ ಅವಕಾಶಗಳನ್ನು ನಿರಾಕರಿಸುತ್ತ, ಒಬ್ಬರಿಗೊಬ್ಬರು ಹೆಚ್ಚು ಹತ್ತಿರವಾಗುವ, ಹೆಚ್ಚು ಆತ್ಮೀಯರಾಗುವ ಪ್ರಯತ್ನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು… । ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/08/14/love-59/

ಸಂಬಂಧಗಳಲ್ಲಿ ಏಕಾಗ್ರತೆಯಿಂದ ಭಾಗವಹಿಸುವುದೆಂದರೆ ಮೂಲಭೂತವಾಗಿ ಇನ್ನೊಬ್ಬರ ಮಾತುಗಳನ್ನ ಗಮನವಿಟ್ಟು ಕೇಳುವುದು. ಬಹಳಷ್ಟು ಜನ ಇನ್ನೊಬ್ಬರ ಮಾತುಗಳನ್ನ ಕೇವಲ ಕಾಟಾಚಾರಕ್ಕಾಗಿ ಕೇಳುತ್ತಾರೆ ಹಾಗು ಅವರ ಮಾತುಗಳನ್ನ ಗಮನವಿಟ್ಟು ಕೇಳದೆ ತಮ್ಮ ಸಲಹೆಗಳನ್ನೂ ಕೊಡುತ್ತಾರೆ . ಅವರು ಇನ್ನೊಬ್ಬರ ಮಾತುಗಳನ್ನ ಗಂಭೀರವಾಗಿ ಪರಿಗಣಿಸುವುದಿಲ್ಲ, ಅಷ್ಟೇ ಯಾಕೆ ಅವರು ತಮ್ಮ ಉತ್ತರಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಈ ಕಾರಣವಾಗಿ ಇಂಥ ಮಾತುಕತೆ ಅವರನ್ನು ಆಯಾಸಗೊಳಿಸುತ್ತದೆ. ಏಕಾಗ್ರತೆಯಿಂದ ಸಂಹವನ ನಡೆಸುವುದು ಇನ್ನೂ ಹೆಚ್ಚು ಆಯಾಸಕ್ಕೆ ದೂಡುತ್ತದೆ ಎನ್ನುವ ಭ್ರಮೆ ಅವರನ್ನು ಆವರಿಸಿಕೊಂಡಿದೆ. ಆದರೆ ಇದಕ್ಕೆ ವಿರುದ್ಧವಾದದ್ದು ನಿಜ ಎನ್ನುವುದು ಅವರಿಗೆ ಗೊತ್ತಿಲ್ಲ. ಯಾವುದೇ ಕ್ರಿಯೆಯಾಗಲಿ, ಅದರಲ್ಲಿ ನಾವು ಏಕಾಗ್ರತೆಯಿಂದ ಭಾಗವಹಿಸಿದ್ದೇ ಆದರೆ, ಅಂಥ ಭಾಗವಹಿಸುವಿಕೆ ನಮ್ಮನ್ನ ಇನ್ನಷ್ಟು ಎಚ್ಚರಗೊಳಿಸುತ್ತದೆ ( ನಂತರ ಸ್ವಾಭಾವಿಕವಾದ ಮತ್ತು ಅವಶ್ಯಕವಾದ ವಿಶ್ರಾಂತಿಯನ್ನ ಬೇಡುವ ಆಯಾಸ ಆಗುತ್ತದೆ ಎನ್ನುವುದು ನಿಜವಾದರೂ), ಆದರೆ ಏಕಾಗ್ರತೆಯಿಲ್ಲದೆ ಭಾಗವಹಿಸಿದ ಪ್ರತಿ ಕ್ರಿಯೆ ನಮ್ಮನ್ನ ತೂಕಡಿಕೆಗೆ ದೂಡುತ್ತದೆ ಮತ್ತು ದಿನದ ಕೊನೆಗೆ ನಮಗೆ ಅವಶ್ಯಕವಾಗಿರುವ ನಿದ್ದೆಯನ್ನು ಅಸಾಧ್ಯ ಮಾಡುತ್ತದೆ.

ಏಕಾಗ್ರತೆಯನ್ನು ಸಾಧಿಸುವುದೆಂದರೆ ; ಪೂರ್ಣವಾಗಿ ವರ್ತಮಾನದಲ್ಲಿ ಬದುಕುವುದು, ಇಲ್ಲಿ ಮತ್ತು ಈ ಕ್ಷಣದಲ್ಲಿ (here & now) ಮತ್ತು, ಈಗ ಏನೋ ಒಂದು ಔಚಿತ್ಯಪೂರ್ಣ ಕೆಲಸ ಮಾಡುತ್ತಿರುವಾಗ, ಮುಂದೆ ಮಾಡಬೇಕಾಗಿರುವ ಕೆಲಸದ ಬಗ್ಗೆ ಆಲೋಚನೆ ಮಾಡದಿರುವುದು. ಪರಸ್ಪರರನ್ನ ಪ್ರೀತಿಸುತ್ತಿರುವ ಇಬ್ಬರು ವ್ಯಕ್ತಿಗಳಿಗೆ ಏಕಾಗ್ರತೆಯ ಅಭ್ಯಾಸ ಇತರರಿಗಿಂತ ಹೆಚ್ಚು ಅವಶ್ಯಕ ಎನ್ನುವುದನ್ನ ಒತ್ತುಕೊಟ್ಟು ಹೇಳಬೇಕಾಗಿಲ್ಲ. ಅವರು ಪರಸ್ಪರರಿಂದ ದೂರವಾಗಲು ಬದುಕಿನಲ್ಲಿ ಸಹಜವಾಗಿ ಎದುರಾಗುವ ಅವಕಾಶಗಳನ್ನು ನಿರಾಕರಿಸುತ್ತ, ಒಬ್ಬರಿಗೊಬ್ಬರು ಹೆಚ್ಚು ಹತ್ತಿರವಾಗುವ, ಹೆಚ್ಚು ಆತ್ಮೀಯರಾಗುವ ಪ್ರಯತ್ನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.

ಏಕಾಗ್ರತೆಯ ಅಭ್ಯಾಸದ ಮೊದಲ ದಿನಗಳು ತುಂಬ ಕಷ್ಟಕರವಾದವು; ಇಂಥದೊಂದು ಪ್ರಯತ್ನ ತನ್ನ ಗುರಿಯನ್ನ ಸಾಧಿಸಲಾರದು ಎನ್ನುವ ತೀರ್ಮಾನಕ್ಕೆ ನಮ್ಮನ್ನ ನೂಕುವಂಥವು. ಆದ್ದರಿಂದ ಇಂಥದೊಂದು ಸ್ಥಿತಿ, ಸಹನೆಯನ್ನ ಅಪೇಕ್ಷಿಸುತ್ತದೆ ಎನ್ನುವುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ಸಮಯವಿರುತ್ತದೆ ಎನ್ನುವ ವಿಷಯ ಗೊತ್ತಿರದವರು, ಒತ್ತಾಯಕ್ಕೆ (force) ಮುಂದಾದಾಗ ಅವರಿಗೆ ಏಕಾಗ್ರತೆಯಷ್ಟೇ ಅಲ್ಲ ಆರ್ಟ್ ಆಫ್ ಲವಿಂಗ್ ಕೂಡ ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಸಹನೆ ಎಂದರೇನು ಎನ್ನುವುದನ್ನ ಅರ್ಥ ಮಾಡಿಕೊಳ್ಳಲು ಮೊದಲ ಬಾರಿ ನಡಿಗೆ ಕಲಿಯಲು ಪ್ರಯತ್ನಿಸುತ್ತಿರುವ ಮಗುವನ್ನು ಗಮನಿಸಬೇಕು. ಈ ಪ್ರಯತ್ನದಲ್ಲಿ ಮಗು ಬೀಳುತ್ತದೆ, ಮತ್ತೇ ಬೀಳುತ್ತದೆ, ಮತ್ತೊಮ್ಮೆ ಬೀಳುತ್ತದೆ ಆದರೆ ಮಗು ತನ್ನ ಪ್ರಯತ್ನವನ್ನು ನಿಲ್ಲಿಸುವುದಿಲ್ಲ, ಮುಂದೊಂದು ದಿನ ಬೀಳದಂತೆ ನಡೆಯಲು ಕಲಿಯುವ ತನಕ ಮಗು ತನ್ನ ಪ್ರಯತ್ನವನ್ನ ಮುಂದುವರೆಸುತ್ತಲೇ ಇರುತ್ತದೆ. ಮಗುವಿನ ಏಕಾಗ್ರತೆಯನ್ನ ಮತ್ತು ಸಹನೆಯನ್ನ ತಮಗೆ ಮುಖ್ಯವಾದ ಕೆಲಸಗಳಲ್ಲಿ ದೊಡ್ಡವರಾದವರು ರೂಢಿಸಿಕೊಂಡರೆ ಅವರಿಗೆ ಎಲ್ಲವೂ ಸಾಧ್ಯವಾಗುತ್ತ ಹೋಗುತ್ತದೆ.

ವ್ಯಕ್ತಿ ತನ್ನ ಬಗ್ಗೆ ತಾನೇ ಸಂವೇದನಾಶೀಲತೆಯನ್ನ ಬೆಳೆಸಿಕೊಳ್ಳದೇ ಹೋದರೆ, ಅವನಿಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಹೀಗಂದರೇನು ? ಸದಾಕಾಲ ತನ್ನ ಬಗ್ಗೆಯೇ ಯೋಚಿಸುತ್ತಿರಬೇಕೆ? ತನ್ನ ಕುರಿತಾಗಿ ವಿಶ್ಲೇಷಣೆ ಮಾಡಿಕೊಳ್ಳುತ್ತಿರಬೇಕೆ? ಯಂತ್ರಗಳ ಜೊತೆ ಸೆನ್ಸಿಟಿವ್ ಆಗಿ ವ್ಯವಹರಿಸುವ ಬಗ್ಗೆ ಮಾತನಾಡುತ್ತಿದ್ದೆವೆಯಾದರೆ, ಅದನ್ನ ವಿವರಿಸುವುದು ಅಂಥ ಕಷ್ಟವೇನಲ್ಲ. ಉದಾಹರಣೆಗೆ, ಕಾರ್ ಡ್ರೈವ್ ಮಾಡುವವ ಕಾರಿನ ಜೊತೆ ಸೆನ್ಸಿಟಿವ್ ಆಗಿರುತ್ತಾನೆ. ಕಾರಿನಲ್ಲಿ ಯಾವುದೋ ಒಂದು ಸಣ್ಣ ಅಸಹಜ ಸಪ್ಪಳ ಕೇಳಿಸಿದರೂ ಅದು ಡ್ರೈವರ್ ನ ಗಮನಕ್ಕೆ ಬರುತ್ತದೆ. ಗಿಯರ್, ಬ್ರೇಕ್, ಪಿಕಪ್ ಯಾವುದರಲ್ಲಿ ಸಣ್ಣ ವ್ಯತ್ಯಾಸವಾದರೂ ಅದನ್ನ ಡ್ರೈವರ್ ಗುರುತಿಸುತ್ತಾನೆ. ಹಾಗೆಯೇ ಡ್ರೈವರ್ ರಸ್ತೆಯ ಸ್ಥಿತಿಯ ಬಗ್ಗೆ, ತನ್ನ ಹಿಂದೆ ಮುಂದೆ ಚಲಿಸುತ್ತಿರುವ ಇತರೆ ಕಾರುಗಳ ಬಗ್ಗೆಯೂ ಸಂವೇದನಾಶೀಲನಾಗಿರುತ್ತಾನೆ. ಡ್ರೈವರ್ ಇಷ್ಟೆಲ್ಲ ಕಾರಿನ ಜೊತೆ ಸೆನ್ಸಿಟಿವ್ ಆಗಿರುವಾಗಲೂ ಈ ಯಾವುದರ ಬಗ್ಗೆಯೂ ಅವನು ಯೋಚಿಸುತ್ತಿರುವುದಿಲ್ಲ, ಅವನ ಬುದ್ದಿ-ಮನಸ್ಸು (mind) ಒಂದು ಪ್ರಶಾಂತ ಎಚ್ಚರಿಕೆಯಲ್ಲಿರುತ್ತದೆ, ಅವನು ತನಗೆ ಎದುರಾಗಬಹುದಾದ ಎಲ್ಲ ಬದಲಾವಣೆಗಳಿಗೆ ತನ್ನನ್ನು ತಾನು ಮುಕ್ತವಾಗಿ ತೆರೆದುಕೊಳ್ಳುತ್ತ, ತನ್ನ ಮುಖ್ಯ ಉದ್ದೇಶವಾದ ಸೇಫ್ ಡ್ರೈವಿಂಗ್ ಗಾಗಿ ಏಕಾಗ್ರತೆಯನ್ನ ಹೊಂದಿರುತ್ತಾನೆ.

ಇನ್ನೊಬ್ಬ ಮನುಷ್ಯ ಜೀವಿಯ ಜೊತೆಗೆ ಸೆನ್ಸಿಟಿವ್ ಆಗಿ ಇರಬೇಕಾದ ಸಂದರ್ಭವನ್ನು ಗಮನಿಸಿದಾಗ, ನಮಗೆ ಕೂಡಲೇ ನೆನಪಾಗುವಂಥದು, ತಾಯಿ ತನ್ನ ಮಗುವಿನ ಕುರಿತಾಗಿ ಹೊಂದಿರುವಂಥ ಸೆನ್ಸಿಟಿವಿಟಿ ಮತ್ತು ಸ್ಪಂದನೆ. ಆಕೆ ಮಗುವಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳನ್ನ, ಮಗುವಿನ ಬೇಡಿಕೆಗಳನ್ನ, ಆತಂಕಗಳನ್ನ, ಅದು ಬಹಿರಂಗವಾಗಿ ವ್ಯಕ್ತ ಮಾಡುವ ಮುನ್ನವೇ ಗಮನಿಸುತ್ತಾಳೆ. ಮಲಗಿರುವಾಗ ಆದ ದೊಡ್ಡ ಸದ್ದಿಗೂ ಎಚ್ಚರವಾಗದ ಅವಳು, ಮಗು ಸಣ್ಣದಾಗಿ ಅತ್ತರೆ ಕೂಡಲೇ ಎದ್ದು ಕೂಡುತ್ತಾಳೆ. ಇದೆಲ್ಲ ಏನು ಸೂಚಿಸುತ್ತದೆಯೆಂದರೆ ಆಕೆ ಮಗುವಿನ ಬದುಕಿನ ವಿವಿಧ ಅಭಿವ್ಯಕ್ತಿಗಳಿಗೆ ಸೆನ್ಸಿಟಿವ್ ಆಗಿದ್ದಾಳೆ ಎನ್ನುವುದನ್ನ; ಆಕೆ ಆತಂಕಿತಳಲ್ಲ, ಚಿಂತಿತಳಲ್ಲ ಬದಲಾಗಿ ಆಕೆ ಇರುವುದು ಜಾಗೃತ ಸಮತೋಲನದ ಸ್ಥಿತಿಯಲ್ಲಿ, ಮಗುವಿನಿಂದ ಬರಬಹುದಾದ ಎಲ್ಲ ಮುಖ್ಯ ಸೂಚನೆ, ಸಂವಹನಗಳಿಗೆ ಸೆನ್ಸಿಟಿವ್ ಆಗಿ ತೆರೆದುಕೊಂಡವಳಾಗಿ.

ಇದೇ ರೀತಿಯಲ್ಲಿ ವ್ಯಕ್ತಿ, ಸ್ವತಃ ತನ್ನ ಜೊತೆಯೂ ಸೆನ್ಸಿಟಿವ್ ಆಗಿ ಇರಬಹುದು. ಉದಾಹರಣೆಗೆ ವ್ಯಕ್ತಿ, ತನ್ನ ಆಯಾಸವನ್ನ ಅಥವಾ ಖಿನ್ನತೆಯನ್ನ ಗುರುತಿಸುತ್ತ, ಮತ್ತು ಇವುಗಳ ಪಾಲಾಗದೆ ಅಥವಾ ತನಗೆ ಸದಾ ಲಭ್ಯವಿರುವ ಡಿಪ್ರೆಸ್ಸಿವ್ ಥಾಟ್ ಗಳನ್ನ ಪೋಷಿಸುತ್ತ ಇವುಗಳಿಗೆ ಪೂರಕವಾಗಿ ಕೆಲಸ ಮಾಡದೇ ತನ್ನನ್ನು ತಾನು, “ನನಗೆ ಏನಾಗಿದೆ?” “ನಾನು ಯಾಕೆ ಖಿನ್ನತೆಗೆ ಒಳಗಾಗಿರುವೆ?” ಮುಂತಾಗಿ ಪ್ರಶ್ನಿಸಿಕೊಳ್ಳಬಹುದು. ತಾನು ಸಿಟ್ಟಿನಲ್ಲಿರುವಾಗಲೂ, ಹಗಲುಗನಸು ಕಾಣುತ್ತಿರುವೆ ಅಥವಾ ಇನ್ಯಾವುದೋ ಪಲಾಯನವಾದಿ ಕ್ರಿಯೆಗಳಿಗೆ ಬಲಿಯಾಗಿದ್ದೇನೆ ಎಂದುಕೊಳ್ಳುತ್ತಿರುವಾಗಲೂ, ಮನುಷ್ಯ ತನ್ನನ್ನು ತಾನು ಹೀಗೆ ಪ್ರಶ್ನಿಸಿಕೊಳ್ಳಬಹುದು. ಇಂಥ ಪ್ರತಿಯೊಂದು ಸಂದರ್ಭದಲ್ಲೂ ಯಾವುದು ಮುಖ್ಯ ಎಂದರೆ, ತನ್ನನ್ನು ಕಾಡುತ್ತಿರಬಹುದಾದ ಈ ಎಲ್ಲದರ ಕುರಿತಾಗಿ ಮನುಷ್ಯ ಅರಿವು ಹೊಂದುವುದು ಮತ್ತು ಈ ಯಾವುದನ್ನೂ ನೂರಾರು ರೀತಿಯಲ್ಲಿ ತರ್ಕಬದ್ಧಗೊಳಿಸುತ್ತ ಸಮರ್ಥನೆಗೆ ಇಳಿಯದಿರುವುದು ಮತ್ತು ಹಾಗೆಯೇ, ತನ್ನ ಒಳದನಿಗೆ ಮುಕ್ತವಾಗಿ ತೆರೆದುಕೊಂಡಿರುವುದು. ನಮ್ಮ ಒಳದನಿ ಯಾವಾಗಲೂ, ನಾವು ಯಾಕೆ ಆತಂಕಿತರಾಗಿದ್ದೇವೆ, ಯಾಕೆ ಕೆರಳಿದ್ದೇವೆ, ಯಾಕೆ ಖಿನ್ನತೆಗೆ ಒಳಗಾಗಿದ್ದೇವೆ ಎನ್ನುವುದರ ಕುರಿತಾಗಿ ತಕ್ಷಣ ನಮ್ಮ ಗಮನ ಸೆಳೆಯುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply