ಪ್ರೀತಿಯ ಆಚರಣೆ (ಭಾಗ – 6): Art of love 47

ವಸ್ತುನಿಷ್ಠವಾಗಿ ಯೋಚಿಸಲು ಸಹಕರಿಸುವ ಸಂಗತಿಯೇ ವಿವೇಕ (reason) ; ಮತ್ತು ವಿವೇಕದ ಹಿಂದೆ ಇರುವ ಭಾವನಾತ್ಮಕ ಧೋರಣೆ, ವಿನೀತ ಭಾವದ್ದು (humility). ವಸ್ತುನಿಷ್ಠವಾಗಿರಬೇಕಾದರೆ, ವಿವೇಕದಿಂದ ಕಾರ್ಯನಿರ್ವಹಿಸಬೇಕಾದರೆ, ವ್ಯಕ್ತಿ ವಿನೀತ ಭಾವವನ್ನು ಹೊಂದಿರಲೇಬೇಕಾಗುತ್ತದೆ, ಬಾಲ್ಯದಲ್ಲಿ ತಾನು ಹೊಂದಿದ್ದ ಸರ್ವಜ್ಞ , ಸರ್ವಶಕ್ತ ಎನ್ನುವ ಭ್ರಮೆಗಳಿಂದ ಹೊರಬರಬೇಕಾಗುತ್ತದೆ... | ಎರಿಕ್ ಫ್ರಾಮ್ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/08/21/love-61/

ಒಬ್ಬ ಮಾನಸಿಕ ಅಪ್ರಬುದ್ಧ ಅಥವಾ ಕೇವಲ ಕನಸು ಕಾಣುವ ಮನುಷ್ಯ ಮಾತ್ರ ಹೊರ ಜಗತ್ತಿನ ಕುರಿತಾಗಿ ವಸ್ತುನಿಷ್ಠ ದೃಷ್ಟಿಕೋನವನ್ನು (objective attitude) ಹೊಂದುವಲ್ಲಿ ಸಂಪೂರ್ಣವಾಗಿ ವಿಫಲನಾಗಿರುತ್ತಾನೆ ; ನಾವು ಬಹುತೇಕರು ಅಪ್ರಬುದ್ಧರು ಅಥವಾ ಬಹುತೇಕ ನಿದ್ದೆಯಲ್ಲಿರುವವರು; ನಮಗೆಲ್ಲರಿಗೂ ಹೊರ ಜಗತ್ತಿನ ಕುರಿತಾಗಿ ಇರುವುದು, ನಮ್ಮ ನಾರ್ಸಿಸ್ಟಿಕ್ ಮನೋಭಾವದಿಂದಾಗಿ ವಿರೂಪಗೊಂಡಿರುವ ವಸ್ತುನಿಷ್ಠವಲ್ಲದ ದೃಷ್ಟಿಕೋನ. ಇದಕ್ಕೆ ನಾನು ಉದಾಹರಣೆಗಳನ್ನು ಕೊಡಬೇಕ? ಯಾರಾದರೂ ತಮ್ಮನ್ನ, ತಮ್ಮ ನೆರೆಹೊರೆಯವರನ್ನ, ಪತ್ರಿಕೆಗಳನ್ನ ಗಮನಿಸಿದರೆ ಸಾಕು ಸಾಕಷ್ಟು ಉದಾಹರಣೆಗಳು ಎದ್ದು ಕಾಣುತ್ತವೆ. ವಾಸ್ತವವನ್ನು ಕುರಿತಾದ ನಾರ್ಸಿಸ್ಟಿಕ್ ವಿರೂಪತೆಯ ಹಂತಗಳು ಬೇರೆ ಬೇರೆಯಾಗಿರುತ್ತದೆ ಅಷ್ಟೇ. ಉದಾಹರಣೆಗೆ ಒಬ್ಬ ವ್ಯಕ್ತಿ ಅದೇ ದಿನ ಮಧ್ಯಾಹ್ನದ ಅಪೊಯಿಂಟಮೆಂಟ್ ಗಾಗಿ ಡಾಕ್ಟರ್ ಗೆ ಫೋನ್ ಮಾಡುತ್ತಾನೆ. ಆ ಸಮಯಕ್ಕೆ ತಾನು ಫ್ರೀ ಇಲ್ಲವೆಂದೂ, ಮರುದಿನ ಬೇಕಾದರೆ ಅವನು ತನ್ನನ್ನು ಭೇಟಿ ಮಾಡಬಹುದೆಂದು ಡಾಕ್ಟರ್ ಉತ್ತರಿಸುತ್ತಾನೆ. ಆದರೆ ಆ ವ್ಯಕ್ತಿ, “ ಡಾಕ್ಟರ್ ನಾನಿರೋದು ನಿಮ್ಮ ಆಫೀಸ್ ನಿಂದ ಐದು ನಿಮಿಷ ದೂರ ಮಾತ್ರ” ಎಂದು ಡಾಕ್ಟರ್ ನ ಅಪೊಯಿಂಟಮೆಂಟ್ ಗಾಗಿ ಮತ್ತೆ ಒತ್ತಾಯಿಸುತ್ತಾನೆ. ಅವನಿಗೆ, ಡಾಕ್ಟರ್ ಆ ಸಮಯಕ್ಕೆ ಫ್ರೀ ಇಲ್ಲ ಎನ್ನುವುದು ಅರ್ಥವೇ ಆಗುವುದಿಲ್ಲ. ಅವನಿಗೆ, ತಾನು ಕೇವಲ ಐದು ನಿಮಿಷ ತೆಗೆದುಕೊಳ್ಳುವ ಸಂಗತಿಯಷ್ಟೇ ತಲೆಯಲ್ಲಿ, ತನಗೆ ಐದು ನಿಮಿಷವಾದರೂ ಅದು ಡಾಕ್ಟರ್ ಗೆ ಯಾವ ರೀತಿಯಲ್ಲೂ ಸಂಬಂಧಿಸಿದ್ದಲ್ಲ ಎನ್ನುವುದು ಅರ್ಥವೇ ಆಗುವುದಿಲ್ಲ. ಅವನು ಆ ಸನ್ನಿವೇಶವನ್ನು ನಿಭಾಯಿಸುವುದು ನಾರ್ಸಿಸ್ಟಿಕ್ ಆಗಿ : ತನಗೆ ಐದು ನಿಮಿಷವಾದರೆ ಡಾಕ್ಟರ್ ಗೂ ಅಷ್ಟೇ ; ಅವನಿಗೆ, ವಾಸ್ತವ ಯಾವುದೆಂದರೆ ಸ್ವತಃ ಅವನು ಮಾತ್ರ.

ಸ್ವಲ್ಪ ಕಡಿಮೆ ಅತಿರೇಕ – ಅಥವಾ ಪ್ರಾಯಶಃ ಹೆಚ್ಚು ಸ್ಪಷ್ಟವಲ್ಲದ ವಾಸ್ತವದ ವಿರೂಪಗಳನ್ನ ನಾವು, ನಮ್ಮ ದೈನಂದಿನ ಬದುಕಿನ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧದಲ್ಲಿ ಗುರುತಿಸಬಹುದು. ಎಷ್ಟೋ ಜನ ತಂದೆ ತಾಯಂದಿರು, ತಮ್ಮ ಮಗುವಿನ ಪ್ರತಿಕ್ರಿಯೆಯನ್ನ, ತಮಗೆ ವಿಧೆಯತೆ ಎಂದೂ, ತಮಗೆ ಸಂತೋಷಕರ ಎಂದೂ, ತಮಗೆ ಗೌರವಪೂರ್ಣ ಎಂದೂ ತಿಳಿದು ಅನುಭವಿಸುತ್ತಾರೆಯೇ ಹೊರತು, ಮಗು ತನ್ನ ಸ್ವಂತಕ್ಕೆ ಏನು ಬಯಸುತ್ತಿದೆ, ಅದರೆ ಭಾವನೆಗಳೇನು ಎನ್ನುವುದನ್ನ ತಿಳಿದುಕೊಳ್ಳಲು ಯಾವ ಆಸಕ್ತಿಯನ್ನೂ ತೋರಿಸುವುದಿಲ್ಲ. ಎಷ್ಟೋ ಜನ ಗಂಡಂದಿರು, ತಮ್ಮ ಹೆಂಡತಿಗೆ ದಬ್ಬಾಳಿಕೆಯ ಸ್ವಭಾವದ ಹಣೆಪಟ್ಟಿ ಅಂಟಿಸುತ್ತಾರಲ್ಲ ಅವರಲ್ಲಿ ಎಷ್ಟು ಜನರಿಗೆ, ತಮ್ಮ ತಾಯಿಯೊಡನೆಯ ತಮ್ಮ ತೀವ್ರ ಅಟ್ಯಾಚ್ಮೆಂಟ್ ಕಾರಣವಾಗಿಯೇ ತಾವು ಹೆಂಡತಿಯ ಸಕಾರಣ ಬೇಡಿಕೆಗಳನ್ನ ತಮ್ಮ ಸ್ವಾತಂತ್ರ್ಯದಲ್ಲಿನ ಹಸ್ತಕ್ಷೇಪ ಎಂದು ತಿಳಿದಿದ್ದೇವೆ ಎನ್ನುವುದು ಅರಿವೆಗೆ ಬಂದಿರುತ್ತದೆ? ತಾವು ತಮ್ಮ ಬಾಲ್ಯದಲ್ಲಿ ಕಟ್ಟಿಕೊಂಡಿದ್ದ ಸುಂದರ ರಾಜಕುಮಾರನ ಭ್ರಮಾತ್ಮಕ ಕಲ್ಪನೆಯ ಕಾರಣವಾಗಿ, ಎಷ್ಟು ಜನ ಹೆಂಡತಿಯರು, ತಮ್ಮ ಗಂಡಂದಿರನ್ನ ಕೆಲಸಕ್ಕೆ ಬಾರದವರು, ಮೂರ್ಖರು ಎಂದೆಲ್ಲ ದೂರುವುದಿಲ್ಲ?

ಹೊರ ದೇಶಗಳ ಕುರಿತಾಗಿ ನಿರ್ಣಯಿಸುವಾಗ ಎದುರಾಗುವ ವಸ್ತುನಿಷ್ಠತೆಯ ಕೊರತೆಯಂತೂ ನೊಟೋರಿಯಸ್ ಆಗಿದೆ. ದಿನದಿಂದ ದಿನಕ್ಕೆ ನಾವು ಇನ್ನೊಂದು ದೇಶಕ್ಕೆ, ಮಹಾ ಕೆಟ್ಟ ದೇಶವೆಂದೂ, ಕ್ರೂರ ದೇಶವೆಂದೂ ಹಣೆಪಟ್ಟಿ ಕಟ್ಟುತ್ತಲೇ ಹೋಗುತ್ತೇವೆಯಾದರೆ, ನಮ್ಮ ಸ್ವಂತ ದೇಶವನ್ನ ಮಾತ್ರ ಎಲ್ಲ ಒಳ್ಳೆಯತನದ ಮತ್ತು ಉದಾತ್ತತೆಯ ಪ್ರತಿನಿಧಿಯಂತೆ ಕೊಂಡಾಡುತ್ತೇವೆ. ಶತ್ರುವಿನ ಪ್ರತಿಯೊಂದು ಕ್ರಿಯೆಯನ್ನ ಒಂದು ಸ್ಟ್ಯಾಂಡರ್ಡ್ ನಿಂದ ಜಡ್ಜ್ ಮಾಡುತ್ತೇವೆಯಾದರೆ, ನಮ್ಮ ಸ್ವಂತದ ಕ್ರಿಯೆಗಳನ್ನ ಇನ್ನೊಂದು ಸ್ಟ್ಯಾಂಡರ್ಡ್ ನಿಂದ ಜಡ್ಜ್ ಮಾಡುತ್ತೇವೆ. ವೈರಿಗಳ ಕೆಲ ಒಳ್ಳೆಯ ಕೆಲಸಗಳನ್ನು, ಜಗತ್ತಿಗೆ ಹಾಗು ನಮಗೆ ಮೋಸಮಾಡುವ ತಂತ್ರಗಳನ್ನಾಗಿ ಕಾಣುತ್ತೇವೆಯಾದರೆ, ನಮ್ಮ ಕೆಲ ಕೆಟ್ಟ ಕೆಲಸಗಳು ದೇಶದ ಒಳಿತಿಗಾಗಿನ ಮಹೋನ್ನತ ಮಾಸ್ಟರ್ ಸ್ಟ್ರೋಕ್ ಗಳ ಪಟ್ಟ ಪಡೆಯುತ್ತವೆ. ದೇಶಗಳ ನಡುವಿನ ಸಂಬಂಧವನ್ನು ಹಾಗು ವ್ಯಕ್ತಿಗಳ ನಡುವಿನ ಸಂಬಂಧವನ್ನು ತುಲನಾತ್ಮಕವಾಗಿ ಗಮನಿಸಿದಾಗ ಎದ್ದು ಕಾಣುವ ಅಂಶವೆಂದರೆ, ವಸ್ತು ನಿಷ್ಠತೆಯ ವಿಷಯದಲ್ಲಿ ಸ್ವಲ್ಪ ಅಪವಾದಗಳಿರಬಹುದೇ ಹೊರತು ನಾರ್ಸಿಸ್ಟಿಕ್ ಸ್ವಭಾವ ಮಾತ್ರ ತೀವ್ರತೆಯ ವಿಷಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಿಯಮದಂತೆ ಗೋಚರವಾಗುತ್ತದೆ.

ವಸ್ತುನಿಷ್ಠವಾಗಿ ಯೋಚಿಸಲು ಸಹಕರಿಸುವ ಸಂಗತಿಯೇ ವಿವೇಕ (reason) ; ಮತ್ತು ವಿವೇಕದ ಹಿಂದೆ ಇರುವ ಭಾವನಾತ್ಮಕ ಧೋರಣೆ, ವಿನೀತ ಭಾವದ್ದು (humility). ವಸ್ತುನಿಷ್ಠವಾಗಿರಬೇಕಾದರೆ, ವಿವೇಕದಿಂದ ಕಾರ್ಯನಿರ್ವಹಿಸಬೇಕಾದರೆ, ವ್ಯಕ್ತಿ ವಿನೀತ ಭಾವವನ್ನು ಹೊಂದಿರಲೇಬೇಕಾಗುತ್ತದೆ, ಬಾಲ್ಯದಲ್ಲಿ ತಾನು ಹೊಂದಿದ್ದ ಸರ್ವಜ್ಞ , ಸರ್ವಶಕ್ತ ಎನ್ನುವ ಭ್ರಮೆಗಳಿಂದ ಹೊರಬರಬೇಕಾಗುತ್ತದೆ.

ಆ ಆಫ್ ಲವಿಂಗ್ ಪ್ರ್ಯಾಕ್ಟೀಸ್ ನ ಕುರಿತಾದ ನಮ್ಮ ಈ ಚರ್ಚೆಯಲ್ಲಿ ಇದನ್ನು ಹೀಗೆ ಅರ್ಥೈಸಬಹುದು: ಪ್ರೀತಿಸುವ ಸಾಮರ್ಥ್ಯ ಹೆಚ್ಚು ಕಡಿಮೆ ನಾರ್ಸಿಸಿಸಂ ನ ಗೈರು ಹಾಜರಿಯನ್ನ ಅವಲಂಬಿಸಿರುವುದರಿಂದ, ವಿನಯಶೀಲತೆ ಹಾಗು ವಿವೇಕಗಳನ್ನು ಬೆಳೆಸಿಕೊಳ್ಳುವುದು ಕೂಡ ವ್ಯಕ್ತಿಗೆ ಅವಶ್ಯಕವಾಗಿದೆ. ವ್ಯಕ್ತಿಯ ಇಡೀ ಬದುಕು ಈ ಗುರಿಯ ಸಾಧನೆಗಾಗಿ ಮೀಸಲಾಗಿರಬೇಕು. ವಿನಯ ಮತ್ತು ವಸ್ತುನಿಷ್ಠತೆ ಎರಡೂ ಪ್ರೀತಿಯಂತೆ ಅವಿಭಾಜ್ಯ ಸಂಗತಿಗಳು. ನನ್ನ ಕುಟುಂಬದೊಂದಿಗೆ ವಸ್ತುನಿಷ್ಠನಾಗಿ ಇರುವುದು ನನಗೆ ಸಾಧ್ಯವಾಗದೇ ಹೋದರೆ, ಅಪರಿಚಿತರೊಂದಿಗೆ ಕೂಡ ನನಗೆ ವಸ್ತುನಿಷ್ಠತೆ ಸಾಧ್ಯವಾಗುವುದಿಲ್ಲ ಮತ್ತು vice versa ಕೂಡ ನಿಜ. ನಾನು ಆರ್ಟ್ ಆಫ್ ಲವಿಂಗ್ ಅಭ್ಯಾಸ ಮಾಡಬಯಸುವೆನಾದರೆ, ಪ್ರತಿ ಸಂದರ್ಭದಲ್ಲೂ ವಸ್ತುನಿಷ್ಠತೆಗಾಗಿ ನಾನು ಪ್ರಯತ್ನಿಸಬೇಕು, ಮತ್ತು ಎಲ್ಲಿ ನನಗೆ ವಸ್ತುನಿಷ್ಠನಾಗಿ ಇರುವುದು ಸಾಧ್ಯವಾಗುವುದಿಲ್ಲವೋ ಅಂಥ ಸಂದರ್ಭಗಳ ಬಗ್ಗೆ ನಾನು ಸೆನ್ಸಿಟಿವ್ ಆಗಿರಬೇಕು. ನನ್ನ ನಾರ್ಸಿಸಿಸಂ ನ ಕಾರಣವಾಗಿ ವಿರೂಪಗೊಂಡಿರುವ ವ್ಯಕ್ತಿಯೊಬ್ಬನ ಕುರಿತಾದ ನನ್ನ ಕಲ್ಪನೆಯ ಚಿತ್ರ ಹಾಗು ನನ್ನ ಭಯ, ಬಯಕೆ, ಆಸಕ್ತಿಗಳಿಂದ ಪ್ರಭಾವಿತವಾಗದ ಆ ವ್ಯಕ್ತಿಯ ವಾಸ್ತವದ ಚಿತ್ರಗಳ ನಡುವಿನ ವ್ಯತ್ಯಾಸವನ್ನ ಗಮನಿಸಲು ನಾನು ಪ್ರಯತ್ನ ಮಾಡಬೇಕು. ವಸ್ತುನಿಷ್ಠತೆ ಮತ್ತು ವಿವೇಕವನ್ನು ಮೈಗೂಡಿಸಿಕೊಳ್ಳುವುದೆಂದರೆ, ಆರ್ಟ ಆಫ್ ಲವಿಂಗ್ ಅಭ್ಯಾಸದ ನಮ್ಮ ಗುರಿಯ ಅರ್ಧ ದೂರವನ್ನು ಕ್ರಮಿಸಿದಂತೆ. ಆದರೆ ಈ ವಸ್ತುನಿಷ್ಠತೆ ಮತ್ತು ವಿವೇಕ ನಮ್ಮ ಸಹವಾಸದಲ್ಲಿ ಬರುವ ಎಲ್ಲರಿಗೂ ಅನ್ವಯವಾಗುವ ಹಾಗಿರಬೇಕು. ಯಾರಾದರೂ ತಮ್ಮ ವಸ್ತುನಿಷ್ಠತೆಯನ್ನ ತಮ್ಮ ಪ್ರೀತಿಪಾತ್ರರಿಗೆ ಮಾತ್ರ ಮೀಸಲಾಗಿಡಲು ಬಯಸುವರಾದರೆ, ಮತ್ತು ಇತರೆ ಜಗತ್ತಿನೊಡನೆಯ ತನ್ನ ಸಂಬಂಧದಲ್ಲಿ ವಸ್ತುನಿಷ್ಠತೆಯನ್ನು ಬಳಸದೆ ಹಾಗೇ ವ್ಯವಹರಿಸ ಬಯಸಿದರೆ, ಆದಷ್ಟು ಬೇಗ ಅವರು ಸೋಲನ್ನು ಎದುರಿಸಬೇಕಾಗುತ್ತದೆ ಎರಡೂ ಕಡೆ.

ವ್ಯಕ್ತಿಯ ಪ್ರೀತಿಸುವ ಸಾಮರ್ಥ್ಯ ಡಿಪೆಂಡ್ ಆಗಿರುವುದು, ನಾರ್ಸಿಸಿಸಂ ನಿಂದ ಹೊರತಾಗುವ, ಮತ್ತು ತಾಯಿ ಹಾಗು ಕುಟುಂಬದ ಜೊತೆಗಿನ ತನ್ನ ಅತ್ಯಂತ ಹತ್ತಿರದ (incestuous fixation) ಸಂಬಂಧದಿಂದ ಬಿಡಿಸಿಕೊಳ್ಳುವ ಅವರ ಸಾಮರ್ಥ್ಯದ ಮೇಲೆ . ಇದು ಅವಲಂಬಿತವಾಗಿರುವುದು ನಮ್ಮ ಬೆಳವಣಿಗೆಯ ಮೇಲೆ ಮತ್ತು ಜಗತ್ತಿನೊಡನೆ ಹಾಗು ಸ್ವತಃ ನಮ್ಮೊಡನೆಯ ಸಂಬಂಧಗಳಲ್ಲಿ ನಾವು ಬೆಳೆಸಿಕೊಳ್ಳುವ ಸೃಜನಾತ್ಮಕ ದೃಷ್ಟಿಕೋನದ ಮೇಲೆ. ಈ ಹೊರಹೊಮ್ಮುವಿಕೆಯ ಪ್ರಕ್ರಿಯೆ, ಈ ಹೊಸಹುಟ್ಟು, ಈ ಎಚ್ಚರಗೊಳ್ಳುವಿಕೆಗೆ ಅವಶ್ಯಕವಾಗಿ ಬೇಕಾಗಿರುವ ಗುಣಲಕ್ಷಣವೆಂದರೆ “ವಿಶ್ವಾಸ” (faith). ಹಾಗಾಗಿ ಆರ್ಟ್ ಆಫ್ ಲವಿಂಗ್ ನ ಅಭ್ಯಾಸ ಕ್ಕೆ ಅತ್ಯಂತ ಅವಶ್ಯಕವಾದದ್ದು ಯಾವುದೆಂದರೆ, ವಿಶ್ವಾಸವನ್ನು ರೂಢಿಸಿಕೊಳ್ಳುವುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply