ಪ್ರೀತಿಯ ಆಚರಣೆ (ಭಾಗ – 7) : Art of love #48

ತರ್ಕಬದ್ಧ ವಿಶ್ವಾಸ ಕೇವಲ ಆಲೋಚನೆ ಮತ್ತು ಜಡ್ಜಮೆಂಟ್ ಗಳ ಕ್ಷೇತ್ರದಲ್ಲಿ ಮಾತ್ರ ಪ್ರಕಟವಾಗುವುದಿಲ್ಲ. ಮನುಷ್ಯ ಸಂಬಂಧಗಳ ವಲಯದಲ್ಲಿ, ವಿಶೇಷವಾಗಿ ಯಾವುದೇ ಮಹತ್ವದ ಗೆಳೆತನ ಅಥವಾ ಪ್ರೇಮ ಸಂಬಂಧಗಳ ವಿಷಯದಲ್ಲಿ ವಿಶ್ವಾಸ, ಅನಿವಾರ್ಯ ಅಗತ್ಯದಂಥ ಒಂದು ಗುಣ. ಇನ್ನೊಬ್ಬ ವ್ಯಕ್ತಿಯಲ್ಲಿ ವಿಶ್ವಾಸವನ್ನು ಹೊಂದುವುದೆಂದರೆ, ಅವರ ಮೂಲಭೂತ ಧೋರಣೆ, ವ್ಯಕ್ತಿತ್ವದ ತಿರುಳು ಮತ್ತು, ಪ್ರೀತಿಯ ವಿಶ್ವಾಸಾರ್ಹತೆ ಮತ್ತು ಸ್ಥಿರತೆಯ ಬಗ್ಗೆ ಖಚಿತತೆಯನ್ನ ಹೊಂದುವುದು… | ಎರಿಕ್ ಫ್ರಾಮ್ ; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2022/08/27/love-62/

‘ವಿಶ್ವಾಸ’ ಎಂದರೇನು? ವಿಶ್ವಾಸವೆಂದರೆ ಮೂಲಭೂತವಾಗಿ ದೇವರಲ್ಲಿ ಅಥವಾ ಧಾರ್ಮಿಕ ಸಿದ್ಧಾಂತಗಳಲ್ಲಿ ಅನಿವಾರ್ಯವಾಗಿ ಮನುಷ್ಯ ಇಟ್ಟಿರುವ ನಂಬಿಕೆಯೆ? ವಿಶ್ವಾಸವೆಂದರೆ, ಅದು ವಿವೇಕಕ್ಕೆ, ತಾರ್ಕಿಕ ಆಲೋಚನೆಗಳಿಗೆ ವಿರುದ್ಧವಾದದ್ದೆ? ಅಥವಾ ಇವುಗಳಿಂದ ಹೊರತಾದದ್ದೆ? ವಿಶ್ವಾಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಮುಂಚೆಯೇ ನಾವು ವಿವೇಕಯುಕ್ತ ಮತ್ತು ವಿವೇಕರಹಿತ ವಿಶ್ವಾಸಗಳನ್ನು (rational & irrational faith) ಪ್ರತ್ಯೇಕಿಸಿ ನೋಡುವುದನ್ನ ಕಲಿಯಬೇಕು. ನನ್ನ ಗ್ರಹಿಕೆಯ ಪ್ರಕಾರ ವಿವೇಕರಹಿತ ವಿಶ್ವಾಸ ಎಂದರೆ ವಿವೇಕ ರಹಿತ ಅಧಿಕಾರ ಕೇಂದ್ರಕ್ಕೆ (ಅದು ವ್ಯಕ್ತಿಯಾಗಿರಬಹುದು ಅಥವಾ ಸಿದ್ಧಾಂತವಾಗಿರಬಹುದು) ತನ್ನನ್ನು ತಾನು ಒಪ್ಪಿಸಿಕೊಳ್ಳುವುದು, ನಂಬಿಕೆಯನ್ನಿಡುವುದು. ಇದಕ್ಕೆ ವಿರುದ್ಧವಾಗಿ, ವಿವೇಕಯುಕ್ತ ವಿಶ್ವಾಸ ಎಂದರೆ ವ್ಯಕ್ತಿ ತನ್ನ ವೈಚಾರಿಕ ಮತ್ತು ಭಾವನಾತ್ಮಕ ಅನುಭವಗಳಲ್ಲಿ ಧೃಡವಾದ ನಂಬಿಕೆಯನ್ನ ಹೊಂದುವುದು. Rational faith ಎಂದರೆ ಯಾವುದೋ ಒಂದು ಸಂಗತಿಯನ್ನು ಸುಮ್ಮನೇ ನಂಬುವುದಲ್ಲ, ನಮ್ಮ ವಿಚಾರಗಳ ಬಗ್ಗೆ, ಭಾವನೆಗಳ ಬಗ್ಗೆ ಧೃಡತೆಯನ್ನ ಖಚಿತತೆಯನ್ನ, ವಿಶ್ವಾಸವನ್ನ ಹೊಂದುವುದು. ವಿಶ್ವಾಸವೆಂದರೆ ನಮ್ಮ ಸಮಗ್ರ ವ್ಯಕ್ತಿತ್ವವನ್ನು ವ್ಯಾಪಿಸಿಕೊಂಡಿರುವ ವಿಶೇಷ ಸ್ವಭಾವ, ಕೇವಲ ನಿರ್ಧಿಷ್ಟ ಸಂಗತಿಯನ್ನು ಕುರಿತಾದ ನಂಬಿಕೆಯಲ್ಲ.

ವಿವೇಕಯುಕ್ತ ವಿಶ್ವಾಸ, ನಮ್ಮ ಸೃಜನಾತ್ಮಕ ಬೌದ್ಧಿಕತೆಯಲ್ಲಿ ಮತ್ತು ಭಾವನಾತ್ಮಕ ಕ್ರಿಯೆಗಳಲ್ಲಿ ಬೇರು ಬಿಟ್ಟಿದೆ. ತರ್ಕಾಧಾರಿತ ಆಲೋಚನಾ ಪದ್ಧತಿಯಲ್ಲಿ (rational thinking), ಎಲ್ಲಿ ನಂಬಿಕೆಗೆ ಯಾವ ಜಾಗವೂ ಇಲ್ಲವೋ ಅಲ್ಲಿ ವಿವೇಕಯುಕ್ತ ವಿಶ್ವಾಸ (rational faith) ಬಹಳ ಮುಖ್ಯವಾದ ಸಂಗತಿ. ಉದಾಹರಣೆಗೆ, ಒಬ್ಬ ವಿಜ್ಞಾನಿ ತನ್ನ ಹೊಸ ಅವಿಷ್ಕಾರ ವನ್ನು ಹೇಗೆ ತಲುಪುತ್ತಾನೆ? ಅವನು ತಾನು ಅವಿಷ್ಕಾರ ಮಾಡಬೇಕಾಗಿರುವ ಸಂಗತಿಯ ಕುರಿತಾಗಿ ಯಾವ ಕಲ್ಪನೆಯೂ ಇಲ್ಲದೆ, ಪ್ರಯೋಗಗಳ ಮೇಲೆ ಪ್ರಯೋಗಗಳನ್ನು ಮಾಡುತ್ತ ಹೋಗುತ್ತಾನೆಯೆ? ಒಂದಾದರಮೇಲೊಂದರಂತೆ ಮಾಹಿತಿಗಳನ್ನು ಸಂಗ್ರಹಿಸುತ್ತ ಹೋಗುತ್ತಾನೆಯೆ? ಯಾವುದೇ ಕ್ಷೇತ್ರದಲ್ಲಿ ಒಂದು ನೈಜ, ಅತ್ಯಂತ ಮಹತ್ವದ ಅವಿಷ್ಕಾರ, ಈ ಪದ್ಧತಿಯಲ್ಲಿ ಬಹಳ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ನಡೆದಿರಬಹುದು. ಸುಮ್ಮನೇ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಜನರು ಅತ್ಯಂತ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದು ಕೂಡ ತೀರ ಅಪರೂಪ. ಯಾವುದೇ ಸೃಜನಶೀಲ ಆಲೋಚನೆಯ ಪ್ರಕ್ರಿಯೆ, ಅದು ಮನುಷ್ಯ ಬದುಕಿನ ಯಾವುದೇ ಕ್ಷೇತ್ರದಲ್ಲಿ ಇರಬಹುದು, ಅದು ಶುರುವಾಗೋದು ಮಾತ್ರ ತರ್ಕಬದ್ಧ ಕಲ್ಪನೆಯ (rational vision) ಬಿಂದುವಿನಿಂದಲೇ, ಮತ್ತು ಈ ತರ್ಕಬದ್ಧ ಕಲ್ಪನೆಯೆನ್ನುವುದು ಕೂಡ ತಾನೇ ತಾನಾಗಿ ಅವತರಿಸಿದ್ದಲ್ಲ, ಬಹಳಷ್ಟು ಅಧ್ಯಯನ, ಸತತ ವಿಚಾರ ಮಂಥನ, ಮತ್ತು ಸೂಕ್ಷ್ಮ ಗಮನಿಸುವಿಕೆಯ ಕಾರಣವಾಗಿ ನಿರ್ಮಾಣಗೊಂಡಿದ್ದು. ಯಾವಾಗ ವಿಜ್ಞಾನಿ, ಸಾಕಷ್ಟು ಸಂಬಂಧಿತ ಮಾಹಿತಿಯನ್ನ ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತಾನೋ, ಅಥವಾ ತನ್ನ ಕಲ್ಪನೆಯ ಸಂಗತಿಗೆ ಗಣಿತದ ಸಮೀಕರಣಗಳನ್ನು (mathematical formulation) ಹೊಂದಿಸುವಲ್ಲಿ ಸಫಲನಾಗುತ್ತಾನೋ, ಆಗ ಅವನು ತನ್ನ ಕಲ್ಪಿತ ಸಿದ್ಧಾಂತದ (hypothesis ) ಹಾದಿಯನ್ನು ಬಹುತೇಕ ಕ್ರಮಿಸಿದಂತಾಗುತ್ತದೆ. ಈ ಪರಿಷ್ಕೃತ ಸಿದ್ಧಾಂತದ ಪರಿಣಾಮಗಳನ್ನು ಅರಿಯಲು ಅದನ್ನು ಮತ್ತಷ್ಟು ಸೂಕ್ಷ್ಮವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ, ಮತ್ತು ಈ ಸಿದ್ಧಾಂತವನ್ನು ಬಲಪಡಿಸುವ ಮತ್ತಷ್ಟು ಮಾಹಿತಿಗಳನ್ನು ಕ್ರೂಢೀಕರಿಸಿದಾಗ, ಹೆಚ್ಚು ಪಕ್ವವಾದ ಸಿದ್ಧಾಂತವೊಂದು, ಇನ್ನೂ ವಿಸ್ತ್ರತ ಥಿಯರಿಯಲ್ಲಿ ಸೇರ್ಪಡೆಗಾಗಿ ಸಿದ್ಧವಾಗುತ್ತದೆ.

ವಿಜ್ಞಾನದ ಇತಿಹಾಸದಲ್ಲಿ, ವಿವೇಕ ಮತ್ತು ಸತ್ಯದ ದರ್ಶನದಲ್ಲಿ ವಿಶ್ವಾಸವನ್ನಿಟ್ಟ ವಿಫುಲವಾದ ಉದಾಹರಣೆಗಳು ಸಿಗುತ್ತವೆ. ಕೋಪರ್ನಿಕಸ್, ಕೆಪ್ಲರ್, ಗೆಲಿಲಿಯೋ, ನ್ಯೂಟನ್ ಮುಂತಾದವರು ವಿವೇಕದಲ್ಲಿ ಅಚಲವಾದ ವಿಶ್ವಾಸವನ್ನಿಟ್ಟವರು. ಈ ಕಾರಣಕ್ಕಾಗಿಯೇ ಬ್ರೂನೋನನ್ನು ಸುಟ್ಟು ಹಾಕಲಾಯಿತು, ಸ್ಪಿನೋಝಾ ನನ್ನು ದೇಶ ಬಿಡಿಸಿ ಓಡಿಸಲಾಯಿತು. ವಿವೇಕಯುತ ದರ್ಶನವೊಂದರ ಕಲ್ಪನೆಯ ಹುಟ್ಟಿನಿಂದ ಹಿಡಿದು ಕೊನೆಗೆ ಅದನ್ನು ಪಕ್ವವಾದ ಥಿಯರಿಯಾಗಿಸುವ ಹಾದಿಯ ಪ್ರತಿ ಮೆಟ್ಟಿಲಲ್ಲೂ ವಿಶ್ವಾಸದ ಅವಶ್ಯಕತೆ ಅನಿವಾರ್ಯ: ತನ್ನ ದರ್ಶನದ ಕುರುತಾಗಿ, ತನ್ನ ಕಲ್ಪಿತ ಸಿದ್ಧಾಂತದ ಕುರಿತಾಗಿ, ಮತ್ತು ಕೊನೆಯದಾಗಿ ತಾನು ಸಿದ್ಧಮಾಡಿ ತೋರಿಸಬಯಸುತ್ತಿರುವ ಥಿಯರಿಯ ಕುರಿತಾಗಿ ಅಚಲವಾದ ವಿಶ್ವಾಸ ಅತ್ಯಗತ್ಯ, ಕೊನೆಪಕ್ಷ ತನ್ನ ಥಿಯರಿ ಸಾರ್ವತ್ರಿಕ ಒಪ್ಪಿಗೆ ಪಡೆಯುವವರೆಗಾದರೂ. ಈ ವಿಶ್ವಾಸದ ಬೇರುಗಳಿರುವುದು ವ್ಯಕ್ತಿಯ ಸ್ವಂತದ ಅನುಭವಗಳಲ್ಲಿ, ತನ್ನ ಆಲೋಚನಾ ಶಕ್ತಿ, ಗ್ರಹಿಕೆ ಮತ್ತು ಜಡ್ಜಮೆಂಟ್ ಕುರಿತಾಗಿ ತನಗಿರುವ ಭರವಸೆಯಲ್ಲಿ. ಆದರೆ ವಿವೇಕರಹಿತ ವಿಶ್ವಾಸ, ಅಥಾರಟಿಯೊಬ್ಬ ಅಥವಾ ಬಹುಸಂಖ್ಯೆಯ ಜನ ಹೇಳುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಹುಟ್ಟಿದ್ದು. ವಿವೇಕಯುತ ವಿಶ್ವಾಸ ಹುಟ್ಟಿಕೊಳ್ಳುವುದು, ವ್ಯಕ್ತಿಯ ಸೃಜನಾತ್ಮಕ ಚಿಂತನೆ ಮತ್ತು ಗ್ರಹಿಕೆಯ ಕಾರಣವಾಗಿ, ಬಹು ಸಂಖ್ಯೆಯ ಜನರ ನಕಾರಾತ್ಮಕ ಅಭಿಪ್ರಾಯದ ಹೊರತಾಗಿಯೂ.

ತರ್ಕಬದ್ಧ ವಿಶ್ವಾಸ ಕೇವಲ ಆಲೋಚನೆ ಮತ್ತು ಜಡ್ಜಮೆಂಟ್ ಗಳ ಕ್ಷೇತ್ರದಲ್ಲಿ ಮಾತ್ರ ಪ್ರಕಟವಾಗುವುದಿಲ್ಲ. ಮನುಷ್ಯ ಸಂಬಂಧಗಳ ವಲಯದಲ್ಲಿ, ವಿಶೇಷವಾಗಿ ಯಾವುದೇ ಮಹತ್ವದ ಗೆಳೆತನ ಅಥವಾ ಪ್ರೇಮ ಸಂಬಂಧಗಳ ವಿಷಯದಲ್ಲಿ ವಿಶ್ವಾಸ, ಅನಿವಾರ್ಯ ಅಗತ್ಯದಂಥ ಒಂದು ಗುಣ. ಇನ್ನೊಬ್ಬ ವ್ಯಕ್ತಿಯಲ್ಲಿ ವಿಶ್ವಾಸವನ್ನು ಹೊಂದುವುದೆಂದರೆ, ಅವರ ಮೂಲಭೂತ ಧೋರಣೆ, ವ್ಯಕ್ತಿತ್ವದ ತಿರುಳು ಮತ್ತು, ಪ್ರೀತಿಯ ವಿಶ್ವಾಸಾರ್ಹತೆ ಮತ್ತು ಸ್ಥಿರತೆಯ ಬಗ್ಗೆ ಖಚಿತತೆಯನ್ನ ಹೊಂದುವುದು. ಹೀಗೆ ಹೇಳುವಾಗ ನಾನು, ಆ ವ್ಯಕ್ತಿ ಬದಲಾವಣೆಗೆ ಒಳಗಾಗಬಾರದು ಎಂದು ಹೇಳುತ್ತಿಲ್ಲ, ಬದಲಾಗಿ ಆ ವ್ಯಕ್ತಿ ತನ್ನ ಮೂಲ ಪ್ರೇರಣೆಗಳನ್ನು ಬದಲಾಯಿಸಿಕೊಳ್ಳಬಾರದು ಎಂದು ಹೇಳುತ್ತಿದ್ದೇನೆ, ಉದಾಹರಣೆಗೆ ಅವನೊಳಗಿರುವ ಬದುಕಿನ ಬಗೆಗಿನ ಮತ್ತು ಮನುಷ್ಯ ಘನತೆಯ ಕುರಿತಾದ ಗೌರವಗಳು ಬದಲಾಗಬಾರದು.

ಇದೇ ರೀತಿಯಲ್ಲಿ ನಮಗೆ ನಮ್ಮ ಬಗ್ಗೆ ವಿಶ್ವಾಸವಿದೆ. ನಮ್ಮ ಸೆಲ್ಫ್ ನ ಅಸ್ತಿತ್ವದ ಬಗ್ಗೆ, ನಮ್ಮ ವ್ಯಕ್ತಿತ್ವದ ತಿರುಳು (core of our personality), ಯಾವುದು ಯಾವತ್ತೂ ಬದಲಾಗುವುದಿಲ್ಲೋ ಮತ್ತು ಬದಲಾಗುತ್ತಿರುವ ಸಂದರ್ಭಗಳ, ಅಭಿಪ್ರಾಯಗಳ, ಭಾವನೆಗಳ ಹೊರತಾಗಿಯೂ ನಮ್ಮ ಇಡೀ ಬದುಕಿನುದ್ದಕ್ಕೂ ಸ್ಥಿರವಾಗಿ ಇರತ್ತದೆಯೋ ಆ ತಿರುಳಿನ ಬಗ್ಗೆ ನಮಗೆ ತಿಳುವಳಿಕೆ ಇದೆ. “ನಾನು” (I) ಎನ್ನುವ ಪದದ ಹಿಂದೆ ಇರುವ ವಾಸ್ತವವೇ ಈ ತಿರುಳು ಮತ್ತು ಈ ತಿರುಳಿನ ಆಧಾರದ ಮೇಲೆಯೇ ನಮ್ಮ ಅಸ್ಮಿತೆಯ ಕುರಿತಾಗಿ ನಾವು ವಿಶ್ವಾಸ ಬೆಳೆಸಿಕೊಂಡಿರುವುದು. ನಮಗೆ ನಮ್ಮ ಅಸ್ತಿತ್ವದ ಬಗ್ಗೆ ವಿಶ್ವಾಸವಿಲ್ಲದೇ ಹೋದರೆ, ನಮ್ಮ ಅಸ್ಮಿತೆಯ ಕುರಿತಾಗಿ ನಾವು ಬೆಳೆಸಿಕೊಂಡಿರುವ ಭಾವನೆಗಳೇ ಸಂಶಯಕ್ಕೊಳಗಾಗುತ್ತವೆ. ಆಗ ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ ಮತ್ತು ಅವರ ಒಪ್ಪಿಗೆ (approval) ನಮ್ಮ ಅಸ್ಮಿತೆಯ ಕುರಿತಾದ ನಮ್ಮ ಭಾವನೆಗಳಿಗೆ ಆಧಾರವಾಗುತ್ತದೆ. ಯಾರಿಗೆ ತಮ್ಮ ಬಗ್ಗೆ ವಿಶ್ವಾಸವಿದೆಯೋ ಕೇವಲ ಅವರು ಮಾತ್ರ ಇನ್ನೊಬ್ಬರ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳಬಲ್ಲರು, ಏಕೆಂದರೆ ಅವರಿಗೆ ಮಾತ್ರ ಭವಿಷ್ಯದಲ್ಲಿ ತಾವು ತಮ್ಮ ಮೂಲಭೂತ ಪ್ರೇರಣೆಗಳ ವಿಷಯದಲ್ಲಿ ಬದಲಾಗುವುದಿಲ್ಲ ಎನ್ನುವ ವಿಶ್ವಾಸವಿರುತ್ತದೆ, ಆದ್ದರಿಂದ ಅವರಿಗೆ ಭವಿಷ್ಯದಲ್ಲಿ ತಾವು ಹೇಗೆ ವರ್ತಿಸುತ್ತೇವೆ ಎನ್ನುವುದರ ಕುರಿತಾದ ಖಚಿತ ತಿಳುವಳಿಕೆ ಇರುತ್ತದೆ. ಇನ್ನೊಬ್ಬರಿಗೆ ಪ್ರಾಮಿಸ್ (ಪ್ರಮಾಣ) ಮಾಡುವ ನಮ್ಮ ಸಾಮರ್ಥ್ಯ, ನಮ್ಮ ಬಗ್ಗೆ ನಾವು ಹೊಂದಿರುವ ವಿಶ್ವಾಸದ ಮೇಲೆ ಡಿಪೆಂಡ್ ಆಗಿರುತ್ತದೆ. ನೀಷೆ ಹೇಳುವಂತೆ ಮನುಷ್ಯನನ್ನು, ಅವನಿಗೆ ಪ್ರಾಮಿಸ್ ಮಾಡಲು (ಮತ್ತು ಅದನ್ನು ಉಳಿಸಿಕೊಳ್ಳಲು) ಇರುವ ಸಾಮರ್ಥ್ಯ ಮೇಲೆ ಡಿಫೈನ್ ಮಾಡಬಹುದು ಹಾಗಾಗಿ, ವಿಶ್ವಾಸ ಎನ್ನುವುದು ಮನುಷ್ಯನ ಅಸ್ತಿತ್ವಕ್ಕೆ ಅತ್ಯಗತ್ಯವಾದ ಅಂಶ. ಪ್ರೀತಿಗೆ ಸಂಬಂಧಿಸಿದಂತೆ ಯಾವುದು ಮುಖ್ಯವಾಗುತ್ತದೆಯೆಂದರೆ, ವ್ಯಕ್ತಿಗೆ ಮೊದಲು ತನ್ನ ಪ್ರೀತಿಯಲ್ಲಿ ವಿಶ್ವಾಸ ಇರಬೇಕಾದದ್ದು; ಮತ್ತು ತನ್ನ ಪ್ರೀತಿ ಇನ್ನೊಬ್ಬರಲ್ಲಿ ಪ್ರೀತಿಯನ್ನು ಹುಟ್ಟಿಸುವುದರ ಕುರಿತಾಗಿ ಮತ್ತು ಅದರ ವಿಶ್ವಾಸಾರ್ಹತೆಯಲ್ಲಿ ನಂಬಿಕೆಯಿರಬೇಕಾದದ್ದು.


About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply