ವಿವಿಧ ಪುರಾಣಗಳು ಹೇಳುವ ಗಣಪತಿಯ ಜನ್ಮ ಕಥೆ

ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ, ವಿಘ್ನೇಶ್ವರನ ಹುಟ್ಟಿನ ಕೆಲವು ಪೌರಾಣಿಕ ಪಾಠಾಂತರಗಳನ್ನು ಚುಟುಕಾಗಿ ಇಲ್ಲಿ ನೀಡಿದ್ದೇವೆ. ಇವುಗಳಲ್ಲಿ ಯಾವ ಕಥೆ ಅಧಿಕೃತ, ಯಾವುದು ಪ್ರಕ್ಷೇಪ ಅನ್ನುವ ಪ್ರಶ್ನೆಯೇ ಇಲ್ಲ! ಏಕೆಂದರೆ, ಮನಸಿನಂತೆ ಮಾದೇವ…. ನೋಟದಂತೆ ಕಾಣ್ಕೆ!! ~ ಗಾಯತ್ರಿ

ನಸಿನಂತೆ ಮಹಾದೇವ ಅನ್ನುವ ಮಾತಿದೆ. ಇಲ್ಲಿ ಮಹಾದೇವ ಅಂದರೆ ಭಗವಂತ. ನಿರಾಕಾರವೂ ನಿರ್ಗುಣವೂ ಆದ ಸೃಷ್ಟಿಯ ಪರಮ ಅಸ್ತಿತ್ವವು ಸಾಕಾರವೂ ಸಗುಣವೂ ಆಗಿ ಹೊರಹೊಮ್ಮುವುದು ನಮ್ಮ ಕಲ್ಪನೆಯಲ್ಲಿ, ಧ್ಯಾನಿಗಳ ಕಾಣ್ಕೆಯಲ್ಲಿ ಅಥವಾ ದ್ರಷ್ಟಾರರ ದರ್ಶನದಲ್ಲಿ. ಜೊತೆಗೆ, ಸನಾತನ ಧರ್ಮ, ಒಂದು ಭೂಭಾಗದ ಹಲವು ಧಾರೆಗಳು ಸಮ್ಮಿಳಿತವಾಗಿರುವ ಸುಂದರ ಸರೋವರ. ಬಹುತ್ವವೇ ಇದರ ಸೌಂದರ್ಯ. ಆದ್ದರಿಂದಲೇ ಇಲ್ಲಿ ದೇವತೆಗಳು ವೇದ ವೇದಾಂಗಗಳ ಘನಗಂಭೀರರೂ ಜನಪದಗಳ ಸಹಜ ಜೀವಿಗಳೂ ಆಗಿ ಒಟ್ಟೊಟ್ಟಿಗೆ ಅಸ್ತಿತ್ವದಲ್ಲಿದ್ದಾರೆ. ಇಲ್ಲಿ ಒಂದೊಂದು ದೇವತೆಯ ಕುರಿತೂ ಹತ್ತಾರು ಕಥೆಗಳಿವೆ. ಹಾಗೆಯೇ ಪ್ರತಿಯೊಂದು ಹಬ್ಬಕ್ಕೂ ಹಲವು ಹಿನ್ನೆಲೆಗಳು. ಇವೆಲ್ಲವೂ ಆಯಾ ಪ್ರಾಂತ್ಯಗಳ ಪರಿಸರ, ಆಚಾರವಿಚಾರಗಳಿಗೆ ತಕ್ಕಂತೆ ಒಡಮೂಡಿ ಜನಮಾನಸದಲ್ಲಿ ನೆಲೆನಿಂತ ಸಂಗತಿಗಳಾಗಿವೆ.

ಗಣಪತಿ ಹಬ್ಬವೂ ಇದಕ್ಕೆ ಹೊರತಲ್ಲ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ, ವಿಘ್ನೇಶ್ವರನ ಹುಟ್ಟಿನ ಕೆಲವು ಪೌರಾಣಿಕ ಪಾಠಾಂತರಗಳನ್ನು ಚುಟುಕಾಗಿ ಇಲ್ಲಿ ನೀಡಿದ್ದೇವೆ. ಇವುಗಳಲ್ಲಿ ಯಾವ ಕಥೆ ಅಧಿಕೃತ, ಯಾವುದು ಪ್ರಕ್ಷೇಪ ಅನ್ನುವ ಪ್ರಶ್ನೆಯೇ ಇಲ್ಲ! ಏಕೆಂದರೆ, “ನೋಟದಂತೆ ಕಾಣ್ಕೆ”. ಆದರೂ, ಮುಂದೆ ಜಗಳ ಬೇಡವೆಂದು ನಮ್ಮ ಪೂರ್ವಜರು “ಕಲ್ಪ”ಗಳನ್ನು ಮುಂದಿಟ್ಟು, “ಒಂದೊಂದು ಕಲ್ಪದಲ್ಲಿ ಒಂದೊಂದು ದೇವತೆಗಳು, ಪ್ರಕರಣಗಳು ವಿಭಿನ್ನ ಘಟನಾಚಕ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ” ಎಂಬ ವಿವರಣೆ ನೀಡಿದರು.
ಅದೇನೇ ಇರಲಿ… ಸಹಿಷ್ಣುತೆ ಮತ್ತು ಪರಸ್ಪರ ಗೌರವಗಳೊಡನೆ ಈ ಎಲ್ಲ ಕಥನಗಳನ್ನು ಓದಿ, ಅದರ ಸಾರ ಗ್ರಹಿಸುವುದರಿಂದ ನಮಗೆ ಲಾಭವೇ ಹೊರತು ನಷ್ಟವೇನಿಲ್ಲ.

ಈಗ ಗಣಪತಿಯ ಹುಟ್ಟಿನ ಕಥೆಗಳನ್ನು ನೋಡೋಣ.
ಶಿವ ಪುರಾಣ: ಇದರ ಪ್ರಕಾರ, ಪಾರ್ವತಿ ಏಕಾಂತದಲ್ಲಿದ್ದಾಗ ತನ್ನ ಮೈಯಿಂದ ಉಜ್ಜಿ ತೆಗೆದ ಮೃತ್ತಿಕೆಯಿಂದ ಬಾಲಕನ ಮೂರ್ತಿಯನ್ನು ಸೃಷ್ಟಿಸಿದಳು. ಅದರಲ್ಲಿ ಜೀವ ತುಂಬಿ ‘ವಿನಾಯಕ’ನೆಂದು ಕರೆದಳು. ಈ ವೇಳೆ ಕೈಲಾಸದಲ್ಲಿ ಯಾರೂ ಇರಲಿಲ್ಲವಾಗಿ, ತನ್ನ ಸ್ನಾನಗೃಹದ ಬಾಗಿಲಲ್ಲಿ ಅವನನ್ನು ಕಾವಲಿಗೆ ನಿಲ್ಲಿಸಿದಳು.

ವಿನಯವಂತನಾದ ವಿನಾಯಕ, ಮಾತೆಯ ಆದೇಶವನ್ನು ಶಿರಸಾವಹಿಸುವವನು. ಪಾರ್ವತಿ “ಯಾರು ಬಂದರೂ ಒಳಗೆ ಬಿಡಬೇಡ” ಎಂದ ಮಾತನ್ನು ತಪ್ಪದೆ ನಡೆಸುವ ಪ್ರಮಾಣ ಮಾಡಿದನು. ಹಾಗೆಂದೇ ಶಿವ ಬಂದರೂ ಅವನನ್ನು ಒಳಗೆ ಬಿಡದೆ ತಡೆದನು. ಶಿವ ಎಷ್ಟು ತಡೆದರೂ ಕೇಳದೆ ಅಹಂಕಾರದಿಂದ ಉತ್ತರಿಸಿದನು. ಇದರಿಂದ ಕೋಪಗೊಂಡ ಶಿವ ಅವನ ತಲೆಯನ್ನೇ ಕತ್ತರಿಸಿಹಾಕಿದನು.

ನಂತರ ಪಾರ್ವತಿಯ ಆಗ್ರಹದಂತೆ, ತನ್ನ ಭಕ್ತ ಗಜವೊಂದಕ್ಕೆ ನೀಡಿದ್ದ ಆಶಿರ್ವಾದವನ್ನೂ ನೆನೆಸಿಕೊಂಡು, ಅದರ ತಲೆಯನ್ನು ತರಿಸಿ ವಿನಾಯಕನ ದೇಹಕ್ಕೆ ಜೋಡಿಸಿದನು.

ಬ್ರಹ್ಮವೈವರ್ತ ಪುರಾಣ : ಈ ಪುರಾಣದ ಪ್ರಕಾರ, ತನಗೊಂದು ಮಗು ಬೇಕು ಎಂದು ಪಾರ್ವತಿ ಶಿವನನ್ನು ಕೇಳಿದಾಗ, ತಪಸ್ಸು ಮಾಡಿ ವಿಷ್ಣುವನ್ನು ಒಲಿಸಿಕೊಂಡರೆ ಖಂಡಿತವಾಗಿಯೂ ಕರುಣಿಸುತ್ತೇನೆ ಅನ್ನುತ್ತಾನೆ. ಅದರಂತೆ ಪಾರ್ವತಿಯು ಒಂದು ವರ್ಷ ಉಪವಾಸ ಮಾಡಿ ಪುಣ್ಯಕ ವ್ರತ ನಡೆಸುತ್ತಾಳೆ.

ಭಗವಾನ್ ಕೃಷ್ಣನು ಅವತಾರ ಸಮಾಪ್ತಿಯಾದ ನಂತರ, ಪ್ರತಿಯೊಂದು ಕಲ್ಪದಲ್ಲೂ ತಾನು ಪಾರ್ವತಿಯ ಮಗನಾಗಿ ಅವತರಿಸುವೆನೆಂದು ಘೋಷಿಸುತ್ತಾನೆ. ಅದರಂತೆಯೇ ಮನೋಹರ ರೂಪದ ಶಿಶುವಾಗಿ ಪಾರ್ವತಿಯ ಗರ್ಭದಿಂದ ಜನ್ಮ ತಳೆಯುತ್ತಾನೆ. ಈ ಮಗುವನ್ನು ನೋಡಲು ಪಾರ್ವತಿ ಎಲ್ಲ ದೇವತೆಗಳನ್ನೂ ಆಹ್ವಾನಿಸುತ್ತಾಳೆ.
ಆದರೆ ಸೂರ್ಯನ ಮಗನಾದ ಶನಿಯು ತನ್ನ ದೃಷ್ಟಿ ಶಿಶುವಿಗೆ ಹಾನಿಕಾರಕವಾದುದರಿಂದ ಅದನ್ನು ದಿಟ್ಟಿಸಿ ನೋಡುವುದಿಲ್ಲ. ಆದರೆ ಪಾರ್ವತಿ ಒತ್ತಾಯ ಮಾಡಿದ್ದರಿಂದ ಮಗುವನ್ನು ನೋಡುತ್ತಾನೆ. ಅವನು ನೋಡಿದ್ದೇ ತಡ, ಶಿಶುವಿನ ತಲೆ ಉರುಳಿ ಬಿದ್ದು ಗೋಲೋಕಕ್ಕೆ ಹಾರಿ ಹೋಗುತ್ತದೆ.

ದುಃಖದಲ್ಲಿ ಮುಳುಗಿದ ಪಾರ್ವತಿಯನ್ನು ಕಂಡು, ವಿಷ್ಣು ತನ್ನ ವಾಹನವಾದ ಗರುಡನನ್ನು ಏರಿ, ಪುಷ್ಪಭದ್ರವೆಂಬ ನದೀತೀರದಿಂದ ಆನೆಮರಿಯೊಂದರ ತಲೆಯನ್ನು ತರುತ್ತಾನೆ. ಅದನ್ನು ವಿನಾಯಕನ ರುಂಡವಿಲ್ಲದ ದೇಹಕ್ಕೆ ಜೋಡಿಸಿ, ಅವನನ್ನು ಪುನರುಜ್ಜೀವಿತಗೊಳಿಸುತ್ತಾನೆ. ಆ ಶಿಶುವನ್ನು ಗಜಾನನ ಎಂದು ಕರೆದು ದೇವತೆಗಳೆಲ್ಲರೂ ಆಶೀರ್ವದಿಸುತ್ತಾರೆ. ಅವನಿಗೆ ಪ್ರಥಮ ಪೂಜ್ಯನೆಂಬ ಮನ್ನಣೆ ನೀಡಿ ಹರಸುತ್ತಾರೆ.

ಹರಚರಿತ ಚಿಂತಾಮಣಿ : ಪಾರ್ವತಿಯ ಸ್ನಾನ ಚೂರ್ಣದಿಂದ ಶಕ್ತಿಯೊಂದು ಮೈದಾಳಿ, ಅವಳ ಸ್ನಾನಜಲದೊಂದಿಗೆ ಗಂಗಾಮುಖವನ್ನು ಸೇರಿ, ಅಲ್ಲಿ ಗಜಮುಖಳಾದ ಮಾಲಿನಿಯೆಂಬ ದೇವತೆಯ ಗರ್ಭವನ್ನು ಸೇರಿ, ಚತುರ್ಭುಜ ಮತ್ತು ಪಂಚಗಜಮುಖಗಳಿಂದ ಗಣಪತಿ ಹುಟ್ಟಿದ ಅನ್ನುತ್ತದೆ ಹರಚರಿತ ಚಿಂತಾಮಣಿ.
ಗಜಾನನ ಜನಿಸಿದಾಗ ಗಂಗೆ ಅವನನ್ನು ತನ್ನ ಮಗನೆಂದರೂ ಪಾರ್ವತಿ ನನ್ನ ಮಗನೆಂದೂ ಜಗಳಾಡುತ್ತಾರಂತೆ. ಕೊನೆಗೆ ಶಿವ ನಡುವೆ ಬಂದು, ಅದು ಪಾರ್ವತಿಯ ಮಗನೇ ಎಂದು ತೀರ್ಮಾನ ಮಾಡಿದ ಅನ್ನುತ್ತದೆ ಚಿಂತಾಮಣಿ. ಆಮೇಲೆ ಶಿವ, ಪಂಚಮುಖಿ ಗಜಾನನನ್ನು ಏಕಮುಖನನ್ನಾಗಿ ಮಾಡಿ, ಅಂಜನಗಿರಿಯಲ್ಲಿ ಅವನಿಗೆ ವಿಘ್ನವಿನಾಶಕನೆಂದು ಪಟ್ಟ ಕಟ್ಟುತ್ತಾನೆ.

ಯಾಜ್ಞವಲ್ಕ್ಯ ಸ್ಮೃತಿ : ಇದರ ಪ್ರಕಾರ ಗಣಪತಿ ಅಂಬಿಕೆಯ ಮಗ. ಅಂಬಿಕೆ, ಪಾರ್ವತಿಯದೇ ಮತ್ತೊಂದು ರೂಪ. ಇವನು ಮಾತೆಯ ಆಜ್ಞಾನುವರ್ತಿ. ಅದಕ್ಕಾಗಿ ತನ್ನ ತಲೆಯನ್ನೂ ತೆರಲು ಸಿದ್ಧನಾದವನು. ಈ ಸ್ಮೃತಿಯ ಪ್ರಕಾರವೂ ಗಣಪತಿಯ ಶಿರೋಹರಣವಾಗುವುದು ಶಿವನಿಂದಲೇ. ಬಾಲ ಗಣಪನ ‘ಅಹಂಕಾರ ತುಂಬಿದ್ದ’ ತಲೆಯನ್ನು ಶಿವ ತುಂಡರಿಸುತ್ತಾನೆ ಮತ್ತು ಅಲ್ಲಿ ವಿವೇಚನೆ ಹಾಗೂ ದೂರದೃಷ್ಟಿಗೆ ಹೆಸರಾದ ಗಜದ ಶಿರವನ್ನು ಇರಿಸುತ್ತಾನೆ ಅನ್ನುತ್ತದೆ ಯಾಜ್ಞವಲ್ಕ್ಯ ಸ್ಮೃತಿ.

Leave a Reply