ವಿಚಾರಶೀಲತೆ: ಕುರುಡು ನಂಬಿಕೆಯ ಕಗ್ಗತ್ತಲಲ್ಲಿ ದಾರಿ ತೋರುವ ಕಂದೀಲು ~ ಯೋಗ ವಾಸಿಷ್ಠ

“ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ” ಅನ್ನುತ್ತದೆ ಯೋಗ ವಾಸಿಷ್ಠ ~ ಚೇತನಾ ತೀರ್ಥಹಳ್ಳಿ

ನಿತ್ಯಂ ವಿಚಾರಯುಕ್ತೇನ ಭವಿತವ್ಯಂ ಮಹಾತ್ಮನಾ |
ತಥಾಂಧಕೂಪೇ ಪತತಾಂ ವಿಚಾರೋ ಹ್ಯವಲಂಬನಮ್ || ಯೋಗ ವಾಸಿಷ್ಠ ||

ಅರ್ಥ : ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. (ಸಂಸಾರವೆಂಬ) ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ.

ಈ ದಿನಗಳಲ್ಲಿ ಅತ್ಯಂತ ತುರ್ತು ಅಗತ್ಯವಿರುವ ಬೋಧನೆ ಇದು. “ವಿಚಾರಶೀಲರಾಗಿರುವುದು”. ನಾವಿಂದು ಬಹುತೇಕ ವಿಚಾರಹೀನ ಸ್ಥಿತಿ ತಲುಪಿಬಿಟ್ಟಿದ್ದೇವೆ. ನಮ್ಮ ಚಿಂತನೆಗಳನ್ನು ಹೊರಗುತ್ತಿಗೆ ಕೊಟ್ಟುಬಿಟ್ಟಿದ್ದೇವೆ. ನಮ್ಮಲ್ಲಿ ನಮ್ಮ ಸ್ವಂತ ವಿಚಾರದಿಂದ ಅಭಿಪ್ರಾಯ ಉತ್ಪಾದನೆಯಾಗುವುದೇ ಕಡಿಮೆಯಾಗಿಬಿಟ್ಟಿದೆ. ನಾವೇನು ತಿನ್ನಬೇಕು,  ನಾವೇನು ಕುಡಿಯಬೇಕು, ನಾವೇನು ಮಾತಾಡಬೇಕು, ನಾವು ಹೇಗೆ ಬದುಕಬೇಕು, ಯಾರನ್ನು ಆಯ್ಕೆ ಮಾಡಬೇಕು – ಎಲ್ಲವನ್ನೂ ಮಾರುಕಟ್ಟೆ ಮತ್ತು ರಾಜಕಾರಣ ನಿರ್ಧರಿಸುತ್ತವೆ. ನಾವು ಜಾಹೀರಾತುಗಳಿಗೆ, ಗೂಗಲ್ ಸರ್ಚ್ ಇಂಜಿನ್ನಿಗೆ ಮತ್ತು ಅಂತರ್ಜಾಲದ ಬಲೆಗೆ ನಮ್ಮನ್ನು ಬರೆದುಕೊಟ್ಟು ನಿರುಮ್ಮಳವಾಗಿಬಿಟ್ಟಿದ್ದೇವೆ.

‘ತಥಾಂಧಕೂಪೇ ಪತತಾಂ’ – ನಾವು ಅದಾಗಲೇ ಕತ್ತಲ ಬಾವಿಯಲ್ಲಿ ಮುಳುಗುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ವಾತಾವರಣ ಹಾಳುಗೆಡವಿದ್ದೇವೆ. ಸಾಮಾಜಿಕ ಪರಿಸರವನ್ನು ತಾರತಮ್ಯ ಮತ್ತು ಸಂಕುಚಿತ ಬುದ್ಧಿಯಿಂದ ಕಲುಷಿತಗೊಳಿಸುತ್ತಿದ್ದೇವೆ. ಸ್ವತಃ ನಮ್ಮ ದೇಹವನ್ನು ಕಾಯಿಲೆಗಳ ಕೊಂಪೆಯಾಗಿ ಮಾಡಿಕೊಳ್ಳುತ್ತಿದ್ದೇವೆ. ಕೊಳ್ಳುಬಾಕತನ ಸಮುರಾಯ್ ಯೋಧನ ಬೊಜ್ಜಿನಂತೆ ನಮ್ಮ ಮೈಯಡರಿ ಕುಳಿತಿದೆ. ಇಂಥಾ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು? ಹೋಗಲಿ, ನಮಗಿದರ ಅರಿವಾದರೂ ಇದೆಯೇ? ನಾವಿರುವುದು ಕತ್ತಲಲ್ಲಿ ಎಂಬ ಅರಿವಿದೆಯೇ? ಅಥವಾ ಲೋಕವೇ ಕಪ್ಪಾಗಿದೆ ಎಂದು ನಮ್ಮನ್ನು ನಂಬಿಸಲಾಗಿದೆಯೇ? ಅಷ್ಟೆಲ್ಲ ಹಾಳುಗೇಡಿತನ ತೋರಿಯೂ ನಮಗೆ ಸಿಗುವ ಸುಖವೇನು? ಕ್ಷಣ ಹೊತ್ತು ಅಥವಾ ಒಂದೆರಡು ದಿನಗಳ ಕಾಲ ಮೋಜಿನಲ್ಲಿ ಮೈಮರೆಯಬಹುದು. ಅದರ ಹತ್ತಾರು ಪಟ್ಟು ಹೆಚ್ಚು ದುಗುಡ, ನಮಗೇ ಅರಿಯಾಲಗದ ದುಃಖ, ಅಶಾಂತಿ, ಅಸಹನೆ ಕಲಕುತ್ತಲೇ ಇರುತ್ತದಲ್ಲ, ಇದಕ್ಕೇನು ಪರಿಹಾರ?

‘ವಿಚಾರೋಹ್ಯವಲಂಬನಮ್’ – ವಿಚಾರ ಮಾಡಿ. ವೈಚಾರಿಕತೆಯನ್ನು ಅವಲಂಬಿಸಿ. ರಾಸಾಯನಿಕ ಸುರಿದು ಬೆಳೆ ಬೆಳೆಯುವುದು ದೊಡ್ಡ ವಿಷಯವಲ್ಲ. ಅದರ ಸೈಡ್ ಎಫೆಕ್ಟ್’ಗಳನ್ನು ವಿಚಾರ ಮಾಡಿ. ಹಸಿವಿನಿಂದ ಸಾಯುವ ಜನರಿಗಿಂತ ಹೆಚ್ಚು, ರಾಸಾಯನಿಕ ಸೇವನೆಯಿಂದ ರೋಗಕ್ಕೆ ತುತ್ತಾಗಿ ಸಾಯುವವರ ಸಂಖ್ಯೆ ಹೆಚ್ಚು.

ವಿಚಾರ ಮಾಡಿ… ನಮ್ಮ ಕೊಳ್ಳುಬಾಕತನ ಶ್ರಮಿಕರ ಜೇಬು ತುಂಬಿಸುತ್ತಿಲ್ಲ. ನಮ್ಮನ್ನು ನಿರಂತರ ಮಧ್ಯಮವರ್ಗದಲ್ಲಿ ಮೊಳೆಹೊಡೆದು ನಿಲ್ಲಿಸುತ್ತಿದೆ ಮತ್ತು ಶ್ರೀಮಂತ ಉದ್ದಿಮೆದಾರರನ್ನಷ್ಟೆ ಮತ್ತಷ್ಟು ಶ್ರೀಮಂತರಾಗಿಸುತ್ತಿದೆ. ನಿಮಗೆ ಗೊತ್ತೇ? ನಮ್ಮ ದೇಶದ ಶೇ.73ರಷ್ಟು ಸಂಪತ್ತು ಕೇವಲ 1% ಶ್ರೀಮಂತರ ಕೈಯಲ್ಲಿದೆ. ಉಳಿದ 27% ಸಂಪತ್ತನ್ನು ನಾವು 99% ಭಾರತೀಯರು ಹಂಚಿಕೊಂಡಿದ್ದೇವೆ. ಅದರಲ್ಲೂ ಕೆಳಮಧ್ಯಮ ವರ್ಗ ದಾಟಿ ಬಡತನ ರೇಖೆ ಅಂಚಿನಲ್ಲಿರುವವರು ಕವಡೆಕಾಸಿಗೂ ಪಾಲುದಾರರಲ್ಲ ಎನ್ನುವ ಸ್ಥಿತಿ ಇದೆ. ನಮ್ಮ ಕೊಳ್ಳುಬಾಕತನದ ಪರಿಣಾಮ ಇದು. ಕೊತ್ತಂಬರಿ ಸೊಪ್ಪನ್ನು ಮನೆ ಮುಂದೆ ಮಾರಿಕೊಂಡು ಬರುವ ಬುಟ್ಟಿಯವಳ ಬಳಿ ಕೊಂಡರೆ ಅಲ್ಲೊಂದು ವಹಿವಾಟು ನಡೆಯುತ್ತದೆ, ಆಕೆಗೊಂದು ಆಸರೆಯಾಗುತ್ತದೆ. ಅದನ್ನೇ ಏರ್ ಕೂಲರ್ ಕಟ್ಟಡದ ದೊಡ್ಡ ಬಾಜಾರುಗಳಲ್ಲಿ ಕೊಂಡರೆ? ಅದರ ಒಡೆಯರ ಹಣದ ಹಳ್ಳಕ್ಕೆ ನಮ್ಮದೊಂದು ಹನಿ ಸೇರಿದಂತಾಗುತ್ತದೆ, ಅಷ್ಟೇ…!

ವಿಚಾರ ಮಾಡಿ… ಜಾತಿ ಧರ್ಮಗಳ ಹೆಸರಲ್ಲಿ ನಮ್ಮ ನಡುವೆ ದ್ವೇಷ ಬಿತ್ತಲಾಗಿದೆ. ಒಡೆದಾಳುವ ನೀತಿ ಬಹಳ ಹಳೆಯ ತಂತ್ರ. ಮನುಷ್ಯ ಸಮುದಾಯಗಳನ್ನು ಕಟ್ಟಿಕೊಂಡು ಬಾಳತೊಡಗಿದಾಗಿಂದಲೂ ಚಾಲ್ತಿಯಲ್ಲಿರುವ ಸಾಮಾಜಿಕ ಆಯುಧವಿದು. ಆದರೂ ನಾವು ಬುದ್ಧಿ ಕಲಿತಿಲ್ಲ. ನಮ್ಮನ್ನು ಶ್ರೇಷ್ಠರೆನ್ನುವವರೂ ನಮ್ಮನ್ನು ಒಡೆಯುತ್ತಿದ್ದಾರೆ, ನಮ್ಮನ್ನು ಕನಿಷ್ಠರೆನ್ನುವವರೂ ನಮ್ಮನ್ನು ಒಡೆಯುತ್ತಿದ್ದಾರೆ. ಇದು ಎಲ್ಲ ಜಾತಿ ಧರ್ಮಗಳಿಗೂ ಅನ್ವಯ. ತುರ್ತು ಬಿದ್ದಾಗ ನಮ್ಮ ದೇಹಕ್ಕೆ ಪೂರೈಸುವ ರಕ್ತ ಯಾರದೆಂದು ನಾವು ಯೋಚಿಸಲು ಹೋಗುವುದಿಲ್ಲ. ನಾವು ತಿನ್ನುವ ಅನ್ನ ಬೆಳೆದವರ ಬೆವರಿನ ಜಾತಿ ನಮಗೆ ಬೇಕಾಗುವುದಿಲ್ಲ. ಆದರೂ ಪರಸ್ಪರ ವಿರೋಧಿ ಬಣಗಳು ನಮ್ಮ ಮೇಲೆ ಶ್ರೇಷ್ಠತೆಯ ವ್ಯಸನವನ್ನೂ ಕನಿಷ್ಠರೆಂಬ ಕೀಳರಿಮೆಯನ್ನೂ ಹುಟ್ಟುಹಾಕಿದ್ದಾರೆ. ವಿಚಾರಶೂನ್ಯತೆಯ ಕತ್ತಲ ಬಾವಿಯಲ್ಲಿ ಬಿದ್ದಿರುವ ನಾವು ಅದಕ್ಕೆ ಬಲಿಯಾಗುತ್ತಲೇ ಇದ್ದೇವೆ.

vichara

ವಿಚಾರ ಮಾಡಿ. ಕಾಲಧರ್ಮ ಎಂಬುದೊಂದಿದೆ. ಕಾಲಕ್ಕೆ ತಕ್ಕಂತೆ ಜನರು ಅನುಸರಿಸುತ್ತ, ಪುನರ್ರಚಿಸುತ್ತ ಹೋಗುವ ಜೀವನಧಾರೆಯೇ ಸಂಸ್ಕೃತಿ ಎಂದು ಕರೆಯಲ್ಪಡುವುದು. ಬದಲಾವಣೆಯೊಂದೇ ನಿರಂತರ ಮತ್ತು ಚಲನಶೀಲತೆಯೇ ಶಾಶ್ವತ ಸತ್ಯ. ಆದರೆ ನಾವೇನು ಮಾಡುತ್ತಿದ್ದೇವೆ? ಮದುವೆ ಮನೆಯಲ್ಲಿ ಬುಟ್ಟಿಯೊಳಗೆ ಬೆಕ್ಕು ಮುಚ್ಚಿಟ್ಟಂತೆ ಅರ್ಥಾರ್ಥ ಸಂಬಂಧವಿಲ್ಲದ್ದನ್ನೆಲ್ಲ ಸಂಸ್ಕೃತಿ ಅಂದುಬಿಡುತ್ತೇವೆ.

ಒಂದಾನೊಂದು ಕಾಲದಲ್ಲಿ ಒಂದು ಕುಟುಂಬದಲ್ಲಿ ಮಗಳ ಮದುವೆ ನಡೆಯುತ್ತಿತ್ತು. ಆ ಮಗಳ ಮುದ್ದಿನ ಬೆಕ್ಕು ಬೀಗರ ಕೋಣೆಯಲ್ಲಿ ಜೋಡಿಸಿಟ್ಟ ಸಾಮಾನುಗಳ ಮೇಲೆಲ್ಲ ಜಿಗಿದಾಡಿ ಉಪದ್ರ ಮಾಡುತ್ತಿತ್ತು. ಅದಕ್ಕೆ ಆ ಮನೆಯ ಯಜಮಾನಿತಿ ಅದನ್ನು ಬೀಗರ ಕೋಣೆಯಲ್ಲೇ ಒಂದು ಬುಟ್ಟಿ ಕವುಚಿ ಹಾಕಿ ಮುಚ್ಚಿಟ್ಟಳು. ಮದುವೆ ಮುಗಿದ ಮೇಲೆ ಕೋಣೆಯಲ್ಲಿ ಬುಟ್ಟಿಯೊಳಗಿನ ಬೆಕ್ಕನ್ನು ನೋಡಿದ ಬೀಗರು ಇದೇನೋ ಸಂಪ್ರದಾಯವಿರಬೇಕು ಅಂದುಕೊಂಡರು. ಮುಂದೆ ಆ ಮಗಳೂ ತನ್ನ ಮಗಳ ಮದುವೆ ದಿನ ಬೀಗರ ಕೋಣೆಯಲ್ಲಿ ಬುಟ್ಟಿಯಡಿ ಮುಚ್ಚಿಡಲೆಂದೇ ಒಂದು ಬೆಕ್ಕನ್ನು ಹಿಡಿದು ತಂದಳು. ಹೀಗೆ ಹಲವು ತಲೆಮಾರುಗಳವರೆಗೆ ಅದು ಮುಂದುವರಿಯಿತು. ಮದುವೆಗಳಲ್ಲಿ ಬೆಕ್ಕು ಮುಚ್ಚಿಡುವುದೊಂದು ಸಂಪ್ರದಾಯವಾಗಿಹೋಯಿತು. ಯಾರಿಗೂ ಅಸಲು ವಿಷಯ ಗೊತ್ತಾಗಲೇ ಇಲ್ಲ!
ನಾವಿಂದು ಸಂಸ್ಕೃತಿ ಎಂದು ಕರೆಯುತ್ತಿರುವುದು ಇಂಥಾ ಅಕಾರಣ ಆಚರಣೆಗಳನ್ನು!!

ಆದ್ದರಿಂದ, ವಿಚಾರ ಮಾಡಿ. ‘ನಿತ್ಯಂ ವಿಚಾರಯುಕ್ತೇನ ಭವಿತವ್ಯಂ ಮಹಾತ್ಮನಾ’. ನಿತ್ಯವೂ ವಿಚಾರಪೂರ್ಣವಾಗಿ ಬದುಕುವವರು ಮಹಾತ್ಮರೆನಿಸಿಕೊಳ್ಳುತ್ತಾರೆ. ನಿಮಗೆ ಮಹಾತ್ಮರಾಗುವುದು ಬೇಕಿಲ್ಲದೆ ಹೋದರೂ, ಸ್ವಂತ ವ್ಯಕ್ತಿತ್ವ ಹೊಂದಿರುವ ಮನುಷ್ಯರೆಂದು ಗುರುತಿಸಿಕೊಳ್ಳಬೇಕೆಂದರೆ ನೀವು ವಿಚಾರಶೀಲರಾಗಲೇಬೇಕು. ಇಲ್ಲವಾದರೆ ನೀವು ಕೇವಲ ಹಿಂಬಾಲಕರಾಗಿ ಉಳಿದುಬಿಡುತ್ತೀರಿ. ಕೇವಲ ಮಂದೆಕುರಿಯಾಗುತ್ತೀರಿ. ಮಂದೆಯಲ್ಲೇ ಹುಟ್ಟಿ, ಮಂದೆಯಲ್ಲೇ ಮೆದ್ದು, ಮಂದೆಯಲ್ಲೇ ಮುಗಿದೂ ಹೋಗುತ್ತೀರಿ.

ಆದ್ದರಿಂದ, ‘ಯೋಗ ವಾಸಿಷ್ಠ’ ಹೇಳುತ್ತದೆ – ‘ತಥಾಂಧಕೂಪೇ ಪತತಾಂ ವಿಚಾರೋ ಹ್ಯವಲಂಬನಮ್’. ವಿಚಾರಶೂನ್ಯತೆ ಎಂಬ ಬಾವಿಯ ಕತ್ತಲನ್ನು ವಿಚಾರಶೀಲತೆಯ ಬೆಳಕಿನಿಂದ ತೊಡೆಯೋಣ. ಮತ್ತು ಸ್ವಂತ ವ್ಯಕ್ತಿತ್ವ ಹೊಂದಿದ ಮನುಷ್ಯರಾಗಿ ಬಾಳೋಣ.

ಯೋಗ ವಾಸಿಷ್ಠ ಎಂದರೇನು? ಇಲ್ಲಿ ನೋಡಿ : https://aralimara.com/2019/05/03/yogav/

Leave a Reply