ನವರಾತ್ರಿಯ ನಾಲ್ಕನೆಯ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ…
ಕೂಷ್ಮಾಂಡ ಪದದಲ್ಲಿ ಕು ಎಂದರೆ ಚಿಕ್ಕದು, ಉಷ್ಮ ಎಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳಬೇಕೆಂದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯ ಶಕ್ತಿಯನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ.
ಈ ದೇವಿ ಸದಾ ಮಂದಸ್ಮಿತೆ. ಪುರಾಣಗಳ ಪ್ರಕಾರ ದುರ್ಗಾ ದೇವಿಯ ನಾಲ್ಕನೆಯ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ದುರ್ಗೆಯ ಈ ಅವತಾರವೇ ಜಗತ್ತಿನ ಅಂಧಕಾರವನ್ನೂ ಕಳೆದಿದ್ದು ಎಂಬ ಉಲ್ಲೇಖವಿದೆ. ಪರಮೇಶ್ವರನ ಪತ್ನಿಯ ಸ್ವರೂಪವೂ ಆಗಿರುವ ಕೂಷ್ಮಾಂಡ ದೇವಿಯನ್ನು ಪ್ರಾರ್ಥಿಸುವುದರಿಂದ ಆರೋಗ್ಯ, ಐಶ್ವರ್ಯ, ಶಕ್ತಿ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ.