ಅರಳಿಮರ ಓದುಗರೆಲ್ಲರಿಗೂ ‘ಅರಳಿ ಬಳಗ’ದ ವತಿಯಿಂದ ವಿಜಯ ದಶಮಿ ಶುಭಾಶಯಗಳು. ಬನ್ನಿ ಪತ್ರೆ ನೀಡುವಾಗ ಹೇಳಬೇಕಾದ ಶ್ಲೋಕ ಮತ್ತು ಅರ್ಥ ಇಲ್ಲಿ ನೀಡಲಾಗಿದೆ. ಅರ್ಹರೆಲ್ಲರಿಗೂ ಗೆಲುವಾಗಲಿ.
ಬನ್ನಿಮರ ಪೂಜಿಸುವಾಗ, ಬನ್ನಿ ಪತ್ರೆ ಕೊಡುವಾಗ ಹೇಳುವ ಶ್ಲೋಕವಿದು…
ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ
ಧಾರಿಣ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ
ಕರಿಷ್ಯಮಾಣ ಯಾತ್ರಾಯಾಂ ಯಥಾಕಾಲಂ ಸುಖಂ ಮಯಾ
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮ ಪೂಜಿತೇ
ಅರ್ಥ: ಕೆಂಪು ಮುಳ್ಳುಗಳಿಂದ ಕಂಗೊಳಿಸುವ ‘ಶಮೀ’ ವೃಕ್ಷವು ಪಾಪಗಳನ್ನು ಶಮನಗೊಳಿಸುವುದು. ಅರ್ಜುನನ ಬಾಣಗಳನ್ನು ಇರಿಸಲಾಗಿದ್ದ ದಿವ್ಯವಾದ ವೃಕ್ಷವದು. ಶ್ರೀರಾಮನಿಗೂ ಒಳಿತನ್ನು ನುಡಿದ ಮರವಿದು. ಶ್ರೀರಾಮನಿಂದ ಪೂಜಿತವಾದ ಈ ದಿವ್ಯವೃಕ್ಷ ಈಗ ನನ್ನ ವಿಜಯ ಯಾತ್ರೆಗೂ ನೆರವಾಗಲಿ
‘ಬನ್ನಿ’ ಎನ್ನುವುದು ಸಂಸ್ಕೃತದ ‘ವಹ್ಹಿ’ ಎಂಬುದರ ಕನ್ನಡರೂಪ. ‘ವಹ್ಹಿ’ ಎಂದರೆ ಅಗ್ನಿ. ಶಮೀವೃಕ್ಷವನ್ನು ಬನ್ನಿಮರ ಎಂದು ಕರೆಯಲಾಗುತ್ತದೆ. ಶಮೀವೃಕ್ಷವನ್ನು ‘ಅಗ್ನಿಗರ್ಭಾ’ ಎಂದೂ ಕರೆಯಲಾಗುತ್ತದೆ. ಅಗ್ನಿಯ ಮೂಲ ಎಂಬುದು ಇದರ ತಾತ್ಪರ್ಯ. ಹಿಂದಿನ ಕಾಲದಲ್ಲಿ ಯಜ್ಞಗಳನ್ನು ಮಾಡಲು ಅಗ್ನಿಯನ್ನು ಪಡೆಯಲು ಈ ಮರದ ಕೊರಡುಗಳನ್ನು ಕಡೆಯಲಾಗುತ್ತಿತ್ತು. ಹೀಗಾಗಿ ಈ ಮರಕ್ಕೆ ‘ಅಗ್ವಿಗರ್ಭಾ’ ಎಂದು ಹೆಸರು.
ಈ ಮರದಲ್ಲಿರುವ ಅಗ್ನಿಯನ್ನು ‘ದುರ್ಗಾ’ ಎಂದೂ ಕರೆಯಲಾಗುವುದು. ದುರ್ಗೆ ಎಂದರೆ ನಮ್ಮ ಎಲ್ಲ ಕಷ್ಟಗಳನ್ನು ಪರಿಹರಿಸುವವಳು ಎಂದು ಅರ್ಥ.