ಪ್ರೀತಿಯ ಆಚರಣೆ (ಭಾಗ – 8) : Art of love #49

ಒಂದು ಚಿಕ್ಕ ವಿರಾಮದ ನಂತರ ‘ಆರ್ಟ್ ಆಫ್ ಲವ್’ ಸರಣಿಯ ಮುಂದುವರಿದ ಭಾಗ, ನಿಮ್ಮ ಓದಿಗಾಗಿ… ।ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ:ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2022/08/28/love-63/

ಇನ್ನೊಬ್ಬ ಮನುಷ್ಯನಲ್ಲಿ ವಿಶ್ವಾಸವನ್ನು ಹೊಂದುವುದು ಎನ್ನುವುದರ ಇನ್ನೊಂದು ಅರ್ಥ, ಆ ಇನ್ನೊಬ್ಬರ ಸಂಭಾವ್ಯ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನಿಡುವುದು. ಇಂಥದೊಂದು ವಿಶ್ವಾಸಕ್ಕೆ ನೀಡಬಹುದಾದ ಸರಳ ಉದಾಹರಣೆಯೆಂದರೆ, ತಾಯಿ ಆಗ ತಾನೇ ಹುಟ್ಟಿರುವ ತನ್ನ ಮಗುವಿನಲ್ಲಿ ಇಟ್ಟಿರುವ ವಿಶ್ವಾಸ : ಆ ಮಗು ಬದುಕುತ್ತದೆ, ಬೆಳೆಯುತ್ತದೆ, ನಡೆಯುತ್ತದೆ ಮತ್ತು ಮಾತನಾಡುತ್ತದೆ ಎನ್ನುವ ವಿಶ್ವಾಸ. ಈ ರೀತಿಯಲ್ಲಿ ಮಗುವಿನ ಬೆಳವಣಿಗೆ ಎಷ್ಟು ಸಾಮಾನ್ಯವಾಗಿಬಿಟ್ಟಿದೆಯೆಂದರೆ, ತಾಯಿಯ ಇಂಥ ನಿರೀಕ್ಷೆಗಳಿಗೆ, ವಿಶ್ವಾಸದಂಥ ಸಂಗತಿಯ ಅವಶ್ಯಕತೆ ಏನೂ ಇಲ್ಲ. ಆದರೆ ಇಂಥ ಸಾಮಾನ್ಯವಲ್ಲದ (ಮುಂದೆ ಮಗುವಿನಲ್ಲಿ ಕಾಣಿಸಿಕೊಳ್ಳದೇ ಹೋಗಬಹುದಾದ) ಮಗುವಿನ ಸಂಭಾವ್ಯ ಸಾಮರ್ಥ್ಯಗಳ ವಿಷಯದಲ್ಲಿ ತಾಯಿಯ ವಿಶ್ವಾಸ ಅಗಾಧವಾದದ್ದು : ಪ್ರೀತಿಸುವ, ಖುಶಿಯಾಗಿರುವ, ವಿವೇಕವನ್ನು ಬೆಳೆಸಿಕೊಳ್ಳುವ, ತನಗೆ ಗಿಫ್ಟ್ ಆಗಿ ಬಂದಿರುವ ಕಲೆಗಳನ್ನು ಬೆಳೆಸಿಕೊಳ್ಳುವ, ಇವೇ ಮುಂತಾದವು ಮಗು ತನ್ನ ಭವಿಷ್ಯದ ಬದುಕಿನಲ್ಲಿ ರೂಢಿಸಿಕೊಳ್ಳಬಹುದಾದ ಸಂಭಾವ್ಯ ಸಾಮರ್ಥ್ಯಗಳು. ಇವು ಮಗುವಿನ ಮುಂದಿನ ಬದುಕಿನಲ್ಲಿ ತಕ್ಕ ವಾತಾವರಣ, ಪ್ರೋತ್ಸಾಹ ಸಿಕ್ಕಾಗ ಚಿಗುರಿ ಗಿಡವಾಗುವ ಮತ್ತು ಸಿಗದಿದ್ದಾಗ ಮೊಳಕೆಯಲ್ಲೇ ಚಿವುಟಲ್ಪಡುವ ಬೀಜಗಳು.

ಮಗುವಿನ ಇಂಥದೊಂದು ಸಮಗ್ರ ಬೆಳವಣಿಗೆಯಾಗಬೇಕಾದರೆ, ಮಗುವಿನ ಬದುಕಿನಲ್ಲಿರುವ ಅತ್ಯಂತ ಮಹತ್ವದ ವ್ಯಕ್ತಿಯೊಬ್ಬರಿಗೆ, ಮಗುವಿನ ಈ ಸಂಭಾವ್ಯ ಸಾಮರ್ಥ್ಯಗಳ ಬಗ್ಗೆ ವಿಶ್ವಾಸವಿರಬೇಕು. ಇಂಥದೊಂದು ವಿಶ್ವಾಸದ ಹಾಜರಾತಿ ಮಗುವಿಗೆ ಅಗತ್ಯ ಶಿಕ್ಷಣವನ್ನು ಒದಗಿಸಿದರೆ ಗೈರುಹಾಜರಾತಿ ಮಗುವನ್ನು, ಹಿರಿಯರ ಬಯಕೆಗಳಿಗೆ ಬಲಿಪಶು ಮಾಡುತ್ತದೆ. ಶಿಕ್ಷಣ ಎಂದರೆನೇ, ಮಗುವಿನ ಸಂಭಾವ್ಯ ಸಾಮರ್ಥ್ಯಗಳನ್ನು ಸಾಕಾರಗೊಳಿಸಲು ಸಹಾಯ ಮಾಡುವುದು (3). ಶಿಕ್ಷಣಕ್ಕೆ (education) ವಿರುದ್ಧವಾದದ್ದೇ ಮ್ಯಾನಿಪುಲೇಶನ್, ಇದರ ಆಧಾರವೇ ಮಗುವಿನ ಸಂಭಾವ್ಯ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ವಿಶ್ವಾಸವಿಲ್ಲದಿರುವುದು ಮತ್ತು, ಹಿರಿಯರು ಮಗುವಿಗೆ ಯಾವುದು ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎನ್ನುವುದನ್ನ ತಾವೇ ನಿರ್ಧರಿಸಿ ಪೋಷಿಸುವುದು ಹಾಗು ಮಗುವಿಗೆ ಯಾವ ಆಯ್ಕೆಯ ಅವಕಾಶವನ್ನೂ ನೀಡದೆ ಅದರ ಒಳಿತು ಕೆಡಕುಗಳನ್ನು ತಾವೇ ನಿರ್ಧರಿಸುವುದು. ರೊಬೋಟ್ ಲ್ಲಿ ಯಾವ ವಿಶ್ವಾಸವನ್ನು ಹೊಂದುವುದೂ ಬೇಕಾಗಿಲ್ಲ, ಏಕೆಂದರೆ ಅದರಲ್ಲಿ ಯಾವ ಜೀವಂತಿಕೆಯೂ ಇಲ್ಲ.

ಇನ್ನೊಬ್ಬರಲ್ಲಿ ನಾವು ಇಡುವ ವಿಶ್ವಾಸ, ಮಾನವತೆಯಲ್ಲಿ ನಾವು ಇಡುವ ವಿಶ್ವಾಸದಲ್ಲಿ ತನ್ನ ಅಂತಿಮ ಗುರಿಯನ್ನು ಕಂಡುಕೊಳ್ಳುತ್ತದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ ಈ ವಿಶ್ವಾಸವು ಜ್ಯೂಡಾಯಿಕ್-ಕ್ರಿಶ್ಚಿಯನ್ ಧರ್ಮಗಳಲ್ಲಿನ ಧಾರ್ಮಿಕ ಪರಿಭಾಷೆಯಲ್ಲಿ ಅಭಿವ್ಯಕ್ತಿಗೊಂಡರೆ, ಧಾರ್ಮಿಕವಲ್ಲದ ಪರಿಭಾಷೆಯಲ್ಲಿ ಅದು ತನ್ನ ಅತ್ಯಂತ ಪ್ರಬಲ ಅಭಿವ್ಯಕ್ತಿಯನ್ನ ಕಂಡುಕೊಂಡದ್ದು ಕಳೆದ ನೂರು ನೂರೈವತ್ತು ವರ್ಷಗಳ ಮಾನವೀಯತೆಯ ಪ್ರಭಾವದ ರಾಜಕೀಯ ಮತ್ತು ಸಾಮಾಜಿಕ ತತ್ವ ಸಿದ್ಧಾಂತಗಳಲ್ಲಿ. ಮಗುವಿನ ಸಂಭಾವ್ಯ ಸಾಮರ್ಥ್ಯದಲ್ಲಿ ಇಡುವ ವಿಶ್ವಾಸದಂತೆ ಇದು ಕೂಡ ಮನುಷ್ಯನ ಸಂಭಾವ್ಯ ಸಾಮರ್ಥ್ಯದಲ್ಲಿ ನಂಬಿಕೆಯನ್ನಿಡುವುದು. ಸರಿಯಾದ ಅವಕಾಶಗಳು ಮತ್ತು ಪರಿಸ್ಥಿತಿಯನ್ನು ಮನುಷ್ಯನಿಗೆ ಲಭ್ಯ ಮಾಡಿದಾಗ, ಅವನಿಗೆ ಸಮಾನತೆ, ನ್ಯಾಯ ಮತ್ತು ಪ್ರೀತಿಯ ಆಧಾರದ ಮೇಲೆ ಒಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಸಾಮರ್ಥ್ಯ ಸಾಧ್ಯವಾಗುತ್ತದೆ ಎಂದು ನಂಬಿಕೆಯಿಡುವುದು. ಮನುಷ್ಯನಿಗೆ ಇಂಥದೊಂದು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ ಆದ್ದರಿಂದ ಮನುಷ್ಯನಿಗೆ ಇಂಥದೊಂದು ಸಾಮರ್ಥ್ಯ ಇದೆ ಎಂದು ನಂಬಲು ಧೃಡ ವಿಶ್ವಾಸದ ಅಗತ್ಯವಿದೆ. ಆದರೆ ಎಲ್ಲ ತರ್ಕಾಧಾರಿತ ವಿಶ್ವಾಸಗಳಂತೆ ಇದು ಕೇವಲ ಮನುಷ್ಯನ ಇಚ್ಛೆಯನ್ನಾಧರಿಸಿದ ವಿಶ್ವಾಸವಲ್ಲ, ಈ ವಿಶ್ವಾಸದ ಹಿಂದೆ ಇಲ್ಲಿಯವರೆಗಿನ ಮಾನವ ಜನಾಂಗದ ಸಾಧನೆ ಮತ್ತು ಪ್ರತಿ ವ್ಯಕ್ತಿಯ ತರ್ಕ ಮತ್ತು ಪ್ರೀತಿಯ ಕುರಿತಾದ ಸ್ವಂತ ಅನುಭವದ ಹಿನ್ನೆಲೆ ಇದೆ.

ತಾರ್ಕಿಕವಲ್ಲದ ವಿಶ್ವಾಸವು ಅತ್ಯಂತ ಪ್ರಬಲ, ಸರ್ವಶಕ್ತ, ಸರ್ವಜ್ಞ ಶಕ್ತಿಗೆ ಶರಣಾಗುವುದರಲ್ಲಿ ಮತ್ತು ತನ್ನ ಸ್ವಂತದ ಶಕ್ತಿ ಸಾಮರ್ಥ್ಯಗಳನ್ನು ತ್ಯಜಿಸಿ ಆ ಪ್ರಭಾವಶಾಲಿ ಶಕ್ತಿಗೆ ಸಮರ್ಪಿಸಿಕೊಳ್ಳುವುದರಲ್ಲಿ ತನ್ನ ಗುರುತನ್ನು ಕಂಡುಕೊಂಡರೆ, ತಾರ್ಕಿಕ ವಿಶ್ವಾಸವು ಇದಕ್ಕೆ ತದ್ವಿರುದ್ಧವಾದ ಅನುಭವದಲ್ಲಿ ತನ್ನ ಹುಟ್ಟನ್ನು ಕಂಡುಕೊಂಡಿದೆ. ಒಂದು ವಿಚಾರದಲ್ಲಿ ನಾವು ಯಾಕೆ ವಿಶ್ವಾಸವನ್ನಿಡುತ್ತೇವೆಯೆಂದರೆ, ಆ ವಿಚಾರ ನಮ್ಮ ಒಟ್ಟು ಚಿಂತನೆ ಮತ್ತು ಗ್ರಹಿಕೆಯ ಫಲಿತಾಂಶವಾಗಿರುವುದರಿಂದ. ನಮ್ಮ ಸ್ವಂತದ ಸಂಭಾವ್ಯ ಶಕ್ತಿ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ಆದ ಅನುಭವ, ನಮ್ಮ ವ್ಯಕ್ತಿತ್ವದ ಬೆಳವಣಿಗೆಯ ನೈಜತೆ, ಮತ್ತು ನಮ್ಮ ಪ್ರೀತಿ ಹಾಗು ವಿವೇಕದ ಸಾಮರ್ಥ್ಯಗಳ ಆಧಾರದ ಮೇಲೆ ನಾವು ನಮ್ಮ, ಇನ್ನೊಬ್ಬರ ಹಾಗು ಮನುಕುಲದ ಸಂಭಾವ್ಯ ಶಕ್ತಿ ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನಿಡುತ್ತೇವೆ. ಸೃಜನಶೀಲತೆಯೇ ತಾರ್ಕಿಕ ವಿಶ್ವಾಸದ ಮೂಲ ತಳಹದಿ; ವಿಶ್ವಾಸವನ್ನು ಬದುಕುವುದೆಂದರೆ ಸೃಜನಶೀಲವಾಗಿ ಬದುಕುವುದು. ಹಾಗಾಗಿ ನಮ್ಮ ಶಕ್ತಿಯಲ್ಲಿ ವಿಶ್ವಾಸವನ್ನು ಹೊಂದುವುದು ಎಂದರೆ ಹೇರಿಕೆ, ದಬ್ಬಾಳಿಕೆ ಎನ್ನುವ ಅರ್ಥದಲ್ಲಿ ಅಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ನಮ್ಮ ಈಗಿನ ಶಕ್ತಿ ಸಾಮರ್ಥ್ಯಗಳಲ್ಲಿ ಮಾತ್ರ ವಿಶ್ವಾಸವನ್ನು ಹೊಂದುವುದೆಂದರೆ, ನಮ್ಮ ಸಂಭಾವ್ಯ, ಇನ್ನೂ ಅನಾವರಣಗೊಳ್ಳಬೇಕಿರುವ ಶಕ್ತಿ ಸಾಮರ್ಥ್ಯಗಳ ಬೆಳವಣಿಗೆಯಲ್ಲಿ ವಿಶ್ವಾಸವನ್ನಿಡದಿರುವುದು. ಹೀಗೆ ಮಾಡುವುದೆಂದರೆ ಸಧ್ಯದ ಪರಿಸ್ಥಿತಿಯ ಆಧಾರದ ಮೇಲೆ ಭವಿಷ್ಯವನ್ನು ಊಹೆ ಮಾಡುವುದು. ಆದರೆ ಇದು ಮಹಾ ತಪ್ಪು ಲೆಕ್ಕಾಚಾರ, ಮತ್ತು ಮನುಷ್ಯನ ಸಂಭಾವ್ಯ ಶಕ್ತಿ ಸಾಮರ್ಥ್ಯ ಹಾಗು ಮನುಕುಲದ ಬೆಳವಣಿಗೆಯ ಇತಿಹಾಸವನ್ನು ನಿರ್ಲಕ್ಷಿಸುವಂಥ ಮಹತ್ತರವಾದ ತಪ್ಪು ನಡೆ.

ಅಧಿಕಾರಕ್ಕೆ ತಲೆಬಾಗುವುದರಲ್ಲಿ ವಿಶ್ವಾಸವನ್ನು ಹೊಂದುವುದರಲ್ಲಿ ಯಾವ ತಾರ್ಕಿಕತೆಯೂ ಇಲ್ಲ. ಇಲ್ಲಿ ನಾವು ಅಧಿಕಾರದ ಎದುರು ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು ಅಥವಾ ಈ ಅಧಿಕಾರವನ್ನು ಹೊಂದಿದವರು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುವುದನ್ನು ಬಯಸಬೇಕು. ಬಹುತೇಕರಿಗೆ ಅಧಿಕಾರ, ಜಗತ್ತಿನ ಅತ್ಯಂತ ವಾಸ್ತವದ ಸಂಗತಿ ಎಂದು ಅನಿಸುತ್ತದೆಯಾದರೂ ಒಮ್ಮೆ ನಾವು ಮನುಕುಲದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸುವೆವಾದರೆ ಅಧಿಕಾರ ಎನ್ನುವುದು ಮನುಷ್ಯನ ಅತ್ಯಂತ ಅಸ್ಥಿರ ಸಾಧನೆಗಳಲ್ಲೊಂದು ಎನ್ನುವುದು ಮೇಲಿಂದ ಮೇಲೆ ಸಾಬೀತಾಗಿದೆ. ಈ ಕಾರಣವಾಗಿ ವಿಶ್ವಾಸ ಮತ್ತು ಅಧಿಕಾರ ಎರಡೂ ಒಂದಕ್ಕೊಂದು ಪ್ರತಿಕೂಲ ಸಂಗತಿಗಳಾಗಿವೆ. ಆದ್ದರಿಂದಲೇ ತಾರ್ಕಿಕ ವಿಶ್ವಾಸದ ಆಧಾರದ ಮೇಲೆ ಕಟ್ಟಲ್ಪಟ್ಟ ಎಲ್ಲ ಧರ್ಮಗಳು ಮತ್ತು ರಾಜಕೀಯ ವ್ಯವಸ್ಥೆಗಳು ಭ್ರಷ್ಟಾಚಾರದ ಕೂಪಗಳಾಗಿವೆ ಮತ್ತು ಅವು ಅಧಿಕಾರದ ಮೇಲಿನ ತಮ್ಮ ಅವಲಂಬನೆಯನ್ನ ಅಥವಾ ಅಧಿಕಾರದ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ಆಸ್ಥೆಯನ್ನ ಮುಂದುವರೆಸಿದರೆ ಕೊನೆಗೆ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ನಿರ್ಜೀವವಾಗುತ್ತವೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply