ಪ್ರೀತಿಯ ಆಚರಣೆ (ಭಾಗ – 9) : Art of love #50

ವಿಶ್ವಾಸದ ಬಗ್ಗೆ ಧೈರ್ಯದ ಬಗ್ಗೆ ಪ್ರ್ಯಾಕ್ಟೀಸ್ ಮಾಡಬಹುದಾದದ್ದು ಏನಾದರೂ ಇದೆಯಾ? ಖಂಡಿತ, ವಿಶ್ವಾಸವನ್ನು ಪ್ರತೀ ಕ್ಷಣವೂ ಪ್ರ್ಯಾಕ್ಟೀಸ್ ಮಾಡಬಹುದು. ಮಗುವನ್ನು ಬೆಳೆಸಲು ವಿಶ್ವಾಸದ ಅವಶ್ಯಕತೆಯಿದೆ, ಸುಖವಾಗಿ ನಿದ್ದೆ ಮಾಡಲು ವಿಶ್ವಾಸ ಬೇಕಾಗುತ್ತದೆ, ಯಾವುದಾದರೂ ಒಂದು ಕೆಲಸವನ್ನು ಆರಂಭಿಸಲು ವಿಶ್ವಾಸ ಅಗತ್ಯ. ಆದರೆ ಈ ರೀತಿಯ ವಿಶ್ವಾಸ ಎಲ್ಲರಿಗೂ ಪರಿಚಿತ. ಯಾರಲ್ಲಿ ಈ ಬಗೆಯ ವಿಶ್ವಾಸದ ಕೊರತೆಯಿದೆಯೋ, ಅವರು ಮಗುವಿನ ಬೆಳವಣಿಗೆಯ ಬಗ್ಗೆ ಕಳವಳಕ್ಕೀಡಾಗಿರುತ್ತಾರೆ… ~ ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ : https://aralimara.com/2022/10/10/love-64/

ವಿಶ್ವಾಸವನ್ನು ಹೊಂದುವುದಕ್ಕೆ ಅತ್ಯಂತ ಅವಶ್ಯಕವಾದದ್ದು ಧೈರ್ಯ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ, ನೋವು ಮತ್ತು ನಿರಾಶೆಗಳನ್ನು ಮುಕ್ತವಾಗಿ ಸ್ವೀಕರಿಸಲು ಬೇಕಾದ ಮನಸ್ಥಿತಿ. ಯಾರು ಸುರಕ್ಷತೆ ಮತ್ತು ಭದ್ರತೆಯನ್ನು ತಮ್ಮ ಬದುಕಿನ ಪ್ರಾಥಮಿಕ ಅವಶ್ಯಕತೆಗಳೆಂದು ಒತ್ತಾಯಿಸುತ್ತಾರೋ ಅವರು ವಿಶ್ವಾಸವನ್ನು ಹೊಂದಲು ಅಸಮರ್ಥರು; ಯಾರು ತಮ್ಮನ್ನು ತಾವು ರಕ್ಷಣಾ ವ್ಯವಸ್ಥೆಯ ಹಿಂದೆ ಅಡಗಿಸಿಟ್ಟುಕೊಳ್ಳುತ್ತಾರೋ, ಯಾರು ಅಂತರ ಕಾಯ್ದುಕೊಳ್ಳುವುದನ್ನ ಮತ್ತು ಒಡೆತನ ಸಾಧಿಸುವುದನ್ನ ತಮ್ಮ ಸುರಕ್ಷತೆಯ ದಾರಿ ಎಂದು ತಿಳಿದುಕೊಳ್ಳುತ್ತಾರೋ ಅವರು ತಮ್ಮನ್ನು ತಾವು ಕೈದಿಯಾಗಿಸಿಕೊಳ್ಳುತ್ತಾರೆ. ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಅತ್ಯಂತ ಅವಶ್ಯಕವಾದದ್ದು ಧೈರ್ಯ, ಕೆಲವೊಂದು ಮೌಲ್ಯಗಳನ್ನು ಪರಮೊಚ್ಚ ಕಾಳಜಿಯ ಮೌಲ್ಯಗಳೆಂದು ತಿಳಿಯುವ ಧೈರ್ಯ ಮತ್ತು ಆ ಮೌಲ್ಯಗಳಿಗಾಗಿ ಎಲ್ಲವನ್ನೂ ಪಣಕ್ಕಿಡುವ ಧೈರ್ಯ.

ಪ್ರಖ್ಯಾತ ಸೊಕ್ಕಿನ ಮನುಷ್ಯ ಮುಸ್ಸೋಲಿನಿ ಹೇಳುವ “ ಅಪಾಯಕಾರಿಯಾಗಿ ಬದುಕುವುದು “ ಎನ್ನುವ ಘೋಷಣೆಗೆ ಬೇಕಾಗುವ ಧೈರ್ಯ ಮತ್ತು ಮೇಲೆ ಚರ್ಚಿಸಲಾದ ಧೈರ್ಯಗಳ ನಡುವೆ ಬಹಳ ವ್ಯತ್ಯಾಸವಿದೆ. ಅವನ ರೀತಿಯ ಧೈರ್ಯ ನಕಾರಾತ್ಮಕವಾದದ್ದು, ಅದು ಬೇರು ಬಿಟ್ಟಿರುವುದು ಬದುಕಿನೆಡಗಿನ ವಿನಾಶಾತ್ಮಕ ದೃಷ್ಟಿಕೋನದಲ್ಲಿ, ಬದುಕನ್ನ ಪ್ರೀತಿಸುವುದು ಸಾಧ್ಯವಿಲ್ಲದ ಕಾರಣ ಅದನ್ನು ನಾಶ ಮಾಡಬೇಕು ಎನ್ನುವ ಸಿದ್ಧತೆಯಲ್ಲಿ. ಹೇಗೆ ಅಧಿಕಾರದಲ್ಲಿ ಇಡುವ ವಿಶ್ವಾಸ, ಬದುಕಿನಲ್ಲಿ ಇಡುವ ವಿಶ್ವಾಸಕ್ಕೆ ವಿರುದ್ಧವೋ ಹಾಗೆಯೇ, ಹತಾಶೆ ಹುಟ್ಟು ಹಾಕುವ ಧೈರ್ಯ, ಪ್ರೀತಿ ಸೃಷ್ಟಿಸುವ ಧೈರ್ಯಕ್ಕೆ ವಿರುದ್ಧವಾದದ್ದು.

ವಿಶ್ವಾಸದ ಬಗ್ಗೆ ಧೈರ್ಯದ ಬಗ್ಗೆ ಪ್ರ್ಯಾಕ್ಟೀಸ್ ಮಾಡಬಹುದಾದದ್ದು ಏನಾದರೂ ಇದೆಯಾ? ಖಂಡಿತ, ವಿಶ್ವಾಸವನ್ನು ಪ್ರತೀ ಕ್ಷಣವೂ ಪ್ರ್ಯಾಕ್ಟೀಸ್ ಮಾಡಬಹುದು. ಮಗುವನ್ನು ಬೆಳೆಸಲು ವಿಶ್ವಾಸದ ಅವಶ್ಯಕತೆಯಿದೆ, ಸುಖವಾಗಿ ನಿದ್ದೆ ಮಾಡಲು ವಿಶ್ವಾಸ ಬೇಕಾಗುತ್ತದೆ, ಯಾವುದಾದರೂ ಒಂದು ಕೆಲಸವನ್ನು ಆರಂಭಿಸಲು ವಿಶ್ವಾಸ ಅಗತ್ಯ. ಆದರೆ ಈ ರೀತಿಯ ವಿಶ್ವಾಸ ಎಲ್ಲರಿಗೂ ಪರಿಚಿತ. ಯಾರಲ್ಲಿ ಈ ಬಗೆಯ ವಿಶ್ವಾಸದ ಕೊರತೆಯಿದೆಯೋ, ಅವರು ಮಗುವಿನ ಬೆಳವಣಿಗೆಯ ಬಗ್ಗೆ ಕಳವಳಕ್ಕೀಡಾಗಿರುತ್ತಾರೆ, ತಮ್ಮ ನಿದ್ದೆಯ ಬಗ್ಗೆ ಆತಂಕಿತರಾಗಿರುತ್ತಾರೆ, ಅಥವಾ ಯಾವುದಾದರೂ ಸೃಜನಾತ್ಮಕ ಕೆಲಸ ಆರಂಭಿಸಲು ಬೇಕಾಗುವ ತಮ್ಮ ಸಾಮರ್ಥ್ಯದ ಕುರಿತಾಗಿ ಚಿಂತಿತರಾಗಿರುತ್ತಾರೆ; ಅಥವಾ ಅವರು ಇನ್ನೊಬ್ಬರ ಬಗ್ಗೆ ಸಂಶಯದಿಂದಿರುತ್ತಾರೆ, ತಾವು ಅವರಿಗೆ ಹತ್ತಿರವಾಗದಂತೆ ನೋಡಿಕೊಳ್ಳುತ್ತಾರೆ, ಅಥವಾ ತನಗೆ ಇರದ ರೋಗ ಇದೆಯೆಂದುಕೊಂಡು (hypo-chondriacal) ಭಯಗ್ರಸ್ತನಾಗಿರುತ್ತಾರೆ, ಅಥವಾ ದೂರಗಾಮಿ ಯೋಜನೆಗಳನ್ನು ರೂಪಿಸುವಲ್ಲಿ ಅಸಮರ್ಥನಾಗಿರುತ್ತಾರೆ. ಸಾರ್ವಜನಿಕ ಅಭಿಪ್ರಾಯಗಳು ವ್ಯತಿರಿಕ್ತವಾಗಿರುವಾಗಲೂ, ಇನ್ನೊಬ್ಬರ ಬಗ್ಗೆ ನಾವು ಹೊಂದಿರುವ ತೀರ್ಮಾನಗಳ ವಿರುದ್ಧವಾಗಿ ಕೆಲ ಆಕಸ್ಮಿಕ ಸಂಗತಿಗಳು ಸಾಕ್ಷ್ಯ ನುಡಿಯುತ್ತಿರುವಾಗಲೂ, ನಮ್ಮ ನಂಬಿಕೆಗಳಿಗೆ ನಾವು ಬದ್ಧವಾಗಿರುವುದಕ್ಕೆ (ಅವು ಎಷ್ಟೇ ಅನ್ ಪಾಪ್ಯುಲರ್ ಆಗಿರುವಾಗಲೂ) ನಮಗೆ ಧೈರ್ಯ ಬೇಕು, ವಿಶ್ವಾಸ ಬೇಕು. ಸಮಸ್ಯಗಳನ್ನ, ಹಿನ್ನಡೆಗಳನ್ನ ಮತ್ತು ಬದುಕಿನ ನೋವುಗಳನ್ನ ಸವಾಲಾಗಿ ಸ್ವೀಕರಿಸುತ್ತ, ಅವು ನಮಗೆ ಎದುರಾಗಿರುವ ಅನ್ಯಾಯದ ಶಿಕ್ಷೆಗಳೆಂದು ತಿಳಿದುಕೊಳ್ಳದೆ, ಅವು ನಮ್ಮನ್ನು ಗಟ್ಟಿಗೊಳಿಸುವ ಸಾಧನಗಳು ಎಂದುಕೊಂಡು ಮುನ್ನಡೆಯಲು ಧೈರ್ಯ ಬೇಕು, ವಿಶ್ವಾಸ ಬೇಕು.

ಧೈರ್ಯ ಮತ್ತು ವಿಶ್ವಾಸಗಳ ಪ್ರ್ಯಾಕ್ಟೀಸ್ ಶುರುವಾಗೋದು ಪ್ರತಿನಿತ್ಯದ ಬದುಕಿನ ಸಣ್ಣ ಸಣ್ಣ ವಿವರಗಳಲ್ಲಿ. ಈ ಪ್ರ್ಯಾಕ್ಟೀಸ್ ನ ಮೊದಲ ಹೆಜ್ಜೆಯೆಂದರೆ, ಎಲ್ಲಿ, ಯಾವಾಗ, ಯಾವ ಸಂದರ್ಭಗಳಲ್ಲಿ ನಾವು ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ ಎನ್ನುವುದನ್ನ, ಮತ್ತು ಈ ವಿಶ್ವಾಸದ ಕೊರತೆಯನ್ನ ಮುಚ್ಚಿ ಹಾಕಲು ಹೇಗೆ ನಾವು ತರ್ಕವನ್ನು ಬಳಸುತ್ತೇವೆ (rationalise) ಎನ್ನುವುದನ್ನ ಗಮನಿಸುವುದು, ಮತ್ತು ಯಾವ ಯಾವ ಸಂದರ್ಭಗಳಲ್ಲಿ ನಾವು ಹೇಡಿಗಳಂತೆ ವರ್ತಿಸುತ್ತೇವೆ ಮತ್ತು ನಮ್ಮ ಹೇಡಿತನವನ್ನ ಹೇಗೆ ತರ್ಕಬದ್ಧವಾಗಿ ವಿವರಿಸಲು ಪ್ರಯತ್ನಿಸುತ್ತೇವೆ ಎನ್ನುವುದನ್ನ ಗುರುತು ಮಾಡಿಕೊಳ್ಳುವುದು. ಪ್ರತೀಬಾರಿ ನಾವು ವಿಶ್ವಾಸವನ್ನು ವಂಚಿಸಿದಾಗ, ಅದು ಹೇಗೆ ನಮ್ಮನ್ನು ದುರ್ಬಲಗೊಳಿಸುತ್ತದೆ ಮತ್ತು ಹೀಗೆ ದುರ್ಬಲಗೊಳ್ಳುತ್ತ ಹೋದಾಗ ಮತ್ತೆ ಹೇಗೆ ಹೊಸ ಹೊಸ ವಂಚನೆಗಳಿಗೆ ನಾವು ಮುಂದಾಗುತ್ತೇವೆ ಮತ್ತು ಇದು ಎಂಥ ವಿಷವೃತ್ತ ಎನ್ನುವುದನ್ನ ತಿಳಿದುಕೊಳ್ಳುವುದು. ಆಗ ನಮಗೆ ಗೊತ್ತಾಗುತ್ತದೆ, ‘ಎಚ್ಚರದ ಸ್ಥಿತಿಯಲ್ಲಿ ಯಾರೂ ನಮ್ಮನ್ನು ಪ್ರೀತಿಸುತ್ತಿಲ್ಲ ಅನಿಸಿದರೂ, ನಿಜವಾಗಿ ಸುಪ್ತ ಪ್ರಜ್ಞೆಯಲ್ಲಿ ನಮ್ಮನ್ನು ಕಾಡುತ್ತಿರುವುದು, ನಮಗೆ ಯಾರನ್ನೂ ಪ್ರೀತಿಸುವುದು ಸಾಧ್ಯವಾಗುತ್ತಿಲ್ಲ ಎನ್ನುವ ಭಯ.’ ಪ್ರೀತಿಸುವುದೆಂದರೆ, ಭವಿಷ್ಯದ ಬಗ್ಗೆ ಯಾವ ಗ್ಯಾರಂಟಿಯನ್ನೂ ಇಟ್ಟುಕೊಳ್ಳದೆ ನಾವು ಇನ್ನೊಬ್ಬರಿಗೆ ಬದ್ಧರಾಗುವುದು, ನಮ್ಮ ಪ್ರೀತಿ ಆ ಇನ್ನೊಬ್ಬರಲ್ಲಿ ಪ್ರೀತಿಯನ್ನು ಹುಟ್ಟಿಸುತ್ತದೆ ಎನ್ನುವ ಭರವಸೆಯನ್ನ ಹೊಂದುವುದು. ಪ್ರೀತಿ, ಒಂದು ವಿಶ್ವಾಸದ ಕ್ರಿಯೆ, ಯಾರಲ್ಲಿ ವಿಶ್ವಾಸದ ಕೊರತೆಯಿದೆಯೋ, ಅವರ ಪ್ರೀತಿಯಲ್ಲಿ ಕೂಡ ಕೊರತೆಯನ್ನ ಕಾಣಬಹುದು. ವಿಶ್ವಾಸದ ಪ್ರ್ಯಾಕ್ಟೀಸ್ ನ ಕುರಿತಾಗಿ ಇನ್ನೂ ಹೆಚ್ಚು ಏನಾದರೂ ಹೇಳಬಹುದೇ? ಬೇರೆ ಯಾರಿಗಾದರೂ ಸಾಧ್ಯವಾಗಬಹುದು; ಕವಿಯಾಗಿದ್ದರೆ ಅಥವಾ ಬೋಧಕನಾಗಿದ್ದರೆ ನಾನೂ ಪ್ರಯತ್ನಿಸಬಹುದಾಗಿತ್ತು. ಆದರೆ ನಾನು ಹಾಗಿಲ್ಲವಾದ್ದರಿಂದ ವಿಶ್ವಾಸದ ಪ್ರ್ಯಾಕ್ಟೀಸ್ ಕುರಿತಾಗಿ ಇನ್ನೂ ಹೆಚ್ಚು ಹೇಳುವುದು ನನಗೆ ಸಾಧ್ಯವಿಲ್ಲ, ಆದರೆ ಈ ಬಗ್ಗೆ ನಿಜವಾಗಿ ಕಾಳಜೀ ಇರುವ ಯಾರಾದರೂ ವಿಶ್ವಾಸವನ್ನು ಮಗು ನಡೆಯಲು ಕಲಿಯುವಂತೆ ಸಹಜವಾಗಿ ಕಲಿಯಬಹುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply