ಪ್ರೀತಿಯ ಆಚರಣೆ (ಭಾಗ – 10) : Art of love #51

ಪ್ರೀತಿಸುವುದೆಂದರೆ ಎಲ್ಲರ ಜೊತೆಗೂ ಪ್ರೀತಿಯ ದೃಷ್ಟಿಕೋನವನ್ನು ಹೊಂದುವುದು ಎಂದಾದರೆ,
ಪ್ರೀತಿಯನ್ನ ಒಂದು ಗುಣ ವಿಶೇಷ ಎನ್ನುವುದಾದರೆ, ಅದು ಮನುಷ್ಯನ ಕುಟುಂಬ ಮತ್ತು ಗೆಳೆಯರ ವಲಯಕ್ಕೆ ಮಾತ್ರ ಸೀಮಿತಗೊಳ್ಳದೇ, ಅವನ ಕೆಲಸ, ವ್ಯಾಪಾರ, ವೃತ್ತಿ, ಹಾಗು ಅವನ ಸಂಪರ್ಕದ ಎಲ್ಲ ವಲಯಕ್ಕೂ ಹಬ್ಬಿಕೊಳ್ಳಬೇಕು. ನಮ್ಮವರ ಕುರಿತಾದ ಪ್ರೀತಿ ಮತ್ತು ಅಪರಿಚಿತರ ಬಗ್ಗೆಯ ಪ್ರೀತಿ ಎಂದು ಪ್ರೀತಿಯನ್ನು ಭಾಗ ಮಾಡುವುದು ಸಾಧ್ಯವಿಲ್ಲ… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಆರ್ಟ್ ಆಫ್ ಲವಿಂಗ್ ನ ಆಚರಣೆ, ಅಭ್ಯಾಸದಲ್ಲಿ ಕಲಿಯಲೇಬೇಕಾದ ಒಂದು ಗುಣ ವಿಶೇಷದ ಬಗ್ಗೆ ಈ ಹಿಂದೆ ಸೂಚ್ಯವಾಗಿ ಹೇಳಲಾಗಿದೆಯಾದರೂ ಅದು ಪ್ರೀತಿಯ ಆಚರಣೆಯ ಅತ್ಯಂತ ಮುಖ್ಯ ಮತ್ತು ಮೂಲಭೂತ ಸಂಗತಿಯಾದ್ದರಿಂದ ಈಗ ಅದನ್ನು ಪೂರ್ಣ ವಿವರಗಳಲ್ಲಿ ಚರ್ಚಿಸಬೇಕಾಗಿದೆ. ಆರ್ಟ್ ಆಫ್ ಲವಿಂಗ್ ನ ಅಭ್ಯಾಸದ ಈ ಅತ್ಯಂತ ಪ್ರಮುಖ ಸಂಗತಿಯೇ ‘ಕ್ರಿಯಾಶೀಲತೆ’ ಯನ್ನು ಬೆಳೆಸಿಕೊಳ್ಳುವುದು. ನಾನು ಹಿಂದೆಯೂ ಹೇಳಿದ್ದೇನೆ, ಕ್ರಿಯಾಶೀಲತೆ ಎಂದರೆ “ಏನನ್ನಾದರೂ ಮಾಡುತ್ತಿರುವುದಲ್ಲ,” ಅದು ಮನುಷ್ಯನ ಒಂದು ಅಂತರಂಗದ ಕ್ರಿಯೆ, ಮನುಷ್ಯ ಶಕ್ತಿ ಸಾಮರ್ಥ್ಯಗಳನ್ನ ಸೃಜನಾತ್ಮಕವಾಗಿ ಬಳಕೆ ಮಾಡುವುದು.

ಪ್ರೀತಿ ಎನ್ನುವುದು ಒಂದು ಕ್ರಿಯೆ; ನಾನು ಪ್ರೀತಿಸುತ್ತಿದ್ದೇನೆಂದರೆ, ಪ್ರೀತಿಸುತ್ತಿರುವ ವ್ಯಕ್ತಿಯೊಂದಿಗೆ ನಾನು ಸದಾ ಕ್ರಿಯಾತ್ಮಕ ಅಂತಃಕರಣದ ಸ್ಥಿತಿಯಲ್ಲಿದ್ದೇನೆ. ಆದರೆ ಕೇವಲ ಆಕೆಯೊಂದಿಗೆ ಅಥವಾ ಅವನೊಂದಿಗೆ ಮಾತ್ರ ಅಲ್ಲ, ಎಲ್ಲರೊಂದಿಗೆಯೂ. ಕ್ರಿಯಾಶೀಲನಾಗದೇ ಸೋಮಾರಿಯಾಗುವೆನಾದರೆ, ಎಚ್ಚರದ ಸ್ಥಿತಿಯಲ್ಲಿರಲು ವಿಫಲನಾಗುವೆನಾದರೆ, ಪ್ರೀತಿಸುವ ವ್ಯಕ್ತಿಯೊಂದಿಗೆ ಕ್ರಿಯಾತ್ಮಕವಾಗಿ ಸಂಬಂಧವನ್ನು ಹೊಂದುವುದರಲ್ಲಿ ನಾನು ಅಸಮರ್ಥನಾಗುತ್ತೇನೆ. ನಿದ್ದೆ ಮಾತ್ರ ಒಂದು ಸರಿಯಾದ ನಿಷ್ಕ್ರೀಯತೆಯ ಸ್ಥಿತಿ; ಎಲ್ಲಿ ಸೋಮಾರಿತನಕ್ಕೆ ಜಾಗವಿಲ್ಲವೋ ಅದು ಮಾತ್ರ ನಿಜವಾದ ಎಚ್ಚರದ ಸ್ಥಿತಿ. ಇವತ್ತಿನ ದ್ವಂದ್ವಾತ್ಮಕ ಸ್ಥಿತಿ ಎಂದರೆ, ಬಹಳಷ್ಟು ಜನರು ಎಚ್ಚರವಾಗಿರುವಾಗ ಅರ್ಧ ನಿದ್ದೆಯಲ್ಲಿರುತ್ತಾರೆ ಮತ್ತು ನಿದ್ದೆಯಲ್ಲಿರುವಾಗ ಅಥವಾ ನಿದ್ದೆ ಮಾಡಬೇಕೆನ್ನುವಾಗ ಅರ್ಧ ಎಚ್ಚರವಾಗಿರುತ್ತಾರೆ. ಬೋರ್ ಆಗದಿರುವುದು ಮತ್ತು ಇನ್ನೊಬ್ಬರನ್ನ ಬೋರ್ ಮಾಡದಿರುವುದು ಎಚ್ಚರದ ಸ್ಥಿತಿಯ ಗುಣ ಲಕ್ಷಣವಷ್ಟೇ ಅಲ್ಲ, ಪ್ರೀತಿಯ ಅತ್ಯಂತ ಪ್ರಮುಖವಾದ ಕರಾರು ಕೂಡ ಹೌದು. ನಮ್ಮ ಸೋಮಾರಿತನ, ಗ್ರಹಿಸುವಲ್ಲಿ, ಗುಟ್ಟು ಮಾಡುವುದರಲ್ಲಿ, ಇನ್ನೊಬ್ಬರ ಸಮಯವನ್ನು ವ್ಯರ್ಥ ಮಾಡುವುದರಲ್ಲಿ ವ್ಯಕ್ತವಾಗುತ್ತಿರುತ್ತದೆ ಮತ್ತು, ನಮ್ಮ ಒಳಗಿನ ಸೋಮಾರಿತನವನ್ನು ನೀಗಿಸಿಕೊಳ್ಳುವುದಕ್ಕಾಗಿ ಕಣ್ಣು ಮತ್ತು ಕಿವಿಗಳನ್ನು ಸದಾ ತೆರೆದುಕೊಂಡು, ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ಯಾವಾಗಲೂ ಕ್ರಿಯಾತ್ಮಕವಾಗಿ ಎಚ್ಚರದಿಂದಿರಿಸಿಕೊಳ್ಳುವುದು ಆರ್ಟ್ ಆಫ್ ಲವಿಂಗ್ ನ ಅಭ್ಯಾಸದ ತೆಗೆದುಹಾಕಲಾಗದಂಥ ಕಂಡಿಷನ್. ಪ್ರೀತಿಯ ಕ್ಷೇತ್ರದಲ್ಲಿ ಮಾತ್ರ ಕ್ರಿಯಾಶೀಲವಾಗಿ ಮತ್ತು ಇತರ ಕ್ಷೇತ್ರಗಳಲ್ಲಿ ನಿಷ್ಕ್ರೀಯರಾಗಿ ಇರಬಹುದೆಂದು ನಂಬಿ, ಬದುಕನ್ನ ಭಾಗ ಮಾಡಿಕೊಳ್ಳಲು ಬಯಸುವುದು ಒಂದು ಭ್ರಮೆ. ಕ್ರಿಯಾಶೀಲತೆ, ಶ್ರಮವನ್ನು ಹೀಗೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಮನುಷ್ಯನ ಪ್ರೀತಿಸುವ ಸಾಮರ್ಥ್ಯಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದದ್ದು ತೀವ್ರತೆ, ಎಚ್ಚರಿಕೆ ಮತ್ತು ವಿಸ್ತ್ರತ ಚೈತನ್ಯ, ಇವನ್ನು ಮನುಷ್ಯ ಪಡೆದುಕೊಳ್ಳುವುದು ಬದುಕಿನ ಇತರ ಅನೇಕ ಕ್ಷೇತ್ರಗಳಲ್ಲಿ ಅವನು ಸೃಜನಾತ್ಮಕವಾಗಿ ಮತ್ತು ಕ್ರಿಯಾಶೀಲನಾಗಿ ಭಾಗವಹಿಸಿದಾಗ ಮಾತ್ರ. ಮನುಷ್ಯ ಬೇರೆ ಕ್ಷೇತ್ರಗಳಗಳಲ್ಲಿ ಕ್ರಿಯಾಶೀಲನಾಗಿ, ಸೃಜನಶೀಲನಾಗಿ ಇರದೇ ಹೋದರೆ, ಅವನಿಂದ ಪ್ರೀತಿಯ ಕ್ಷೇತ್ರದಲ್ಲೂ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

ಆರ್ಟ್ ಆಫ್ ಲವಿಂಗ್ ಕುರಿತಾದ ಈ ಚರ್ಚೆಯನ್ನು ನಮ್ಮ ವೈಯಕ್ತಿಕ ವ್ಯಾಪ್ತಿಗೆ ಅಳವಡಿಸಿಕೊಂಡು, ಈ ಚರ್ಚೆಯಲ್ಲಿ ವಿವರಿಸಲಾದ ಗುಣ ಲಕ್ಷಣಗಳನ್ನು ಹೊಂದುವುದಕ್ಕೆ ಮತ್ತು ಬೆಳೆಸಿಕೊಳ್ಳುವುದಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಈ ಚರ್ಚೆಯ ಸಂಬಂಧ ಅವಿನಾಭಾವವಾಗಿ ಸಮಾಜದ ವ್ಯಾಪ್ತಿಯ ಜೊತೆಗೂ ಬೆಸೆದುಕೊಂಡಿದೆ. ಪ್ರೀತಿಸುವುದೆಂದರೆ ಎಲ್ಲರ ಜೊತೆಗೂ ಪ್ರೀತಿಯ ದೃಷ್ಟಿಕೋನವನ್ನು ಹೊಂದುವುದು ಎಂದಾದರೆ,
ಪ್ರೀತಿಯನ್ನ ಒಂದು ಗುಣ ವಿಶೇಷ ಎನ್ನುವುದಾದರೆ, ಅದು ಮನುಷ್ಯನ ಕುಟುಂಬ ಮತ್ತು ಗೆಳೆಯರ ವಲಯಕ್ಕೆ ಮಾತ್ರ ಸೀಮಿತಗೊಳ್ಳದೇ, ಅವನ ಕೆಲಸ, ವ್ಯಾಪಾರ, ವೃತ್ತಿ, ಹಾಗು ಅವನ ಸಂಪರ್ಕದ ಎಲ್ಲ ವಲಯಕ್ಕೂ ಹಬ್ಬಿಕೊಳ್ಳಬೇಕು. ನಮ್ಮವರ ಕುರಿತಾದ ಪ್ರೀತಿ ಮತ್ತು ಅಪರಿಚಿತರ ಬಗ್ಗೆಯ ಪ್ರೀತಿ ಎಂದು ಪ್ರೀತಿಯನ್ನು ಭಾಗ ಮಾಡುವುದು ಸಾಧ್ಯವಿಲ್ಲ.

ಹಾಗೆ ನೋಡಿದರೆ ಮೊದಲನೇಯದರ ಇರುವಿಕೆ ನಿಜವಾದರೆ ಎರಡನೇಯದು ಇರುವುದೂ ನಿಶ್ಚಿತ. ಈ ತಿಳುವಳಿಕೆಯನ್ನ ಗಂಭೀರವಾಗಿ ತೆಗೆದುಕೊಂಡಾಗ ಸಮಾಜದ ಜೊತೆಗಿನ ಮನುಷ್ಯನ ಸಾಂಪ್ರದಾಯಿಕ ಸಂಬಂಧಗಳಲ್ಲಿ ತೀವ್ರ ಬದಲಾವಣೆಗಳನ್ನು ನಿರೀಕ್ಷಿಸಬಹುದು. “ ನಿಮ್ಮ ನೆರಹೊರೆಯವರನ್ನು ನಿಮ್ಮಂತೆಯೇ ಪ್ರೀತಿಸಿ” ಎನ್ನುವ ಧಾರ್ಮಿಕ ಆದರ್ಶಕ್ಕೆ ನಾವು ಮರ್ಯಾದೆ ಕೊಡುವುದು ಕೇವಲ ಮಾತಿನಲ್ಲಿ ಮಾತ್ರವಾದರೆ, ನೆರೆಯವರ ಜೊತೆಗಿನ ನಮ್ಮ ಸಂಬಂಧ ಅತೀ ಹೆಚ್ಚೆಂದರೆ ಒಂದು ನ್ಯಾಯದ ಪರಿಕಲ್ಪನೆಯ ಮೇಲೆ ರೂಪಿತವಾಗಿರುತ್ತದೆ. ಇಲ್ಲಿ ನ್ಯಾಯ ಎಂದರೆ ಇನ್ನೊಬ್ಬರ ಜೊತೆಗಿನ ಭಾವನೆಗಳ (feelings) ಹಾಗು ವಸ್ತುಗಳ (commodity) ಮತ್ತು ಸೇವೆಯ (service) ವಿಷಯದಲ್ಲಿ ಮೋಸ ಮತ್ತು ವಂಚನೆಗಳಿಗೆ ಅವಕಾಶ ನೀಡದಿರುವುದು. ಭೌತಿಕ ವಸ್ತುಗಳ ವಿಷಯದಲ್ಲಿಯೇ ಆಗಲಿ ಅಥವಾ ಪ್ರೀತಿಯ ವಿಷಯದಲ್ಲಿಯೇ ಆಗಲಿ, “ ನನಗೆ ನೀನು ಕೊಟ್ಟಷ್ಟೇ ನಾನು ನಿನಗೆ ಕೊಡುತ್ತೇನೆ” ಎನ್ನುವುದು, ತತ್ಕಾಲೀನ ಬಂಡವಾಳಶಾಹಿ ಸಮಾಜದ ನೀತಿಸಂಹಿತೆಯಾಗಿದೆ. ಇಂಥ ನ್ಯಾಯ ಸಂಹಿತೆಯ ಬೆಳವಣಿಗೆಯೊಂದೇ, ಬಂಡವಾಳಶಾಹಿ ಸಮಾಜದ ವಿಶಿಷ್ಟ ನೈತಿಕ ಕೊಡುಗೆಯಾಗಿದೆ ಎಂದು ಹೇಳಬಹುದು.

ಇಂಥದೊಂದು ಸ್ಥಿತಿಗೆ ಕಾರಣಗಳನ್ನು ನಾವು ಬಂಡವಾಳಶಾಹಿ ಸಮಾಜದ ಮೂಲ ಸ್ವಭಾವದಲ್ಲಿಯೇ ಕಾಣಬಹುದು.

ಬಂಡವಾಳಶಾಹಿ ಪೂರ್ವದ ಸಮಾಜಗಳಲ್ಲಿ, ವಸ್ತುಗಳ ವಿನಿಮಯ ನಿರ್ಧರಿತವಾಗುತ್ತಿದುದು ಸಾಂಪ್ರದಾಯಿಕವಾಗಿ ಬಲ ಪ್ರಯೋಗದಿಂದ ಅಥವಾ, ಪ್ರೀತಿ ಮತ್ತು ಗೆಳೆತನಗಳ ವೈಯಕ್ತಿಕ ಸಂಬಂಧ ಕಾರಣವಾಗಿ. ಬಂಡವಾಳಶಾಹಿ ಸಮಾಜದಲ್ಲಿ, ಮಾರುಕಟ್ಟೆಯ ವಿನಿಮಯ ನೀತಿಯೇ ಎಲ್ಲವನ್ನೂ ನಿರ್ಧರಿಸುತ್ತದೆ. ವಸ್ತು, ಶ್ರಮ ಮತ್ತು ಸೇವೆ ಮಾರುಕಟ್ಟೆ ಯಾವುದೇ ಆಗಿರಬಹುದು, ಪ್ರತಿಯೊಬ್ಬ ಮನುಷ್ಯನು ತಾನು ಮಾರಾಟ ಮಾಡಬಯಸುವುದನ್ನ, ಮಾರುಕಟ್ಟೆಯ ಸಧ್ಯದ ಪರಿಸ್ಥಿತಿಯಲ್ಲಿ ತನಗೆ ಬೇಕಾದ ಸಂಗತಿಗಳ ಜೊತೆ ಮಾತ್ರ ವಿನಿಮಯ ಮಾಡಿಕೊಳ್ಳುತ್ತಾನೆ, ಯಾವ ಬಲ ಪ್ರಯೋಗ ಮತ್ತು ಮೋಸಕ್ಕೂ ಅವಕಾಶವಿಲ್ಲದಂತೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply