ಪ್ರೀತಿಯ ಆಚರಣೆ (ಭಾಗ – 11) : Art of love #52

ನಮ್ಮ ಇಡೀ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ, ಪ್ರತಿಯೊಬ್ಬರೂ ತಮ್ಮ ಲಾಭವನ್ನು ಮಾತ್ರ ಬಯಸುವ ತತ್ವದ ಮೇಲೆ ಅವಲಂಬಿತವಾಗಿದ್ದರೆ, ಮತ್ತು ಅಹಂ ಪೋಷಿತವಾದ ನ್ಯಾಯ ನೀತಿಯ ಸಿದ್ಧಾಂತದಿಂದ ಮಾತ್ರ ನಿರ್ದೇಶಿತವಾಗುವುದಾದರೆ, ವ್ಯಾಪಾರ ವ್ಯವಹಾರವನ್ನ ನಡೆಸುವುದಾದರೂ ಹೇಗೆ? ಇಂಥ ಸಮಾಜ ವ್ಯವಸ್ಥೆಯ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದಾದರೂ ಹೇಗೆ? ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದೆಂದರೆ, ತಮ್ಮ ಲೌಕಿಕ ಬದುಕಿನ ಎಲ್ಲ ಕಾಳಜಿಗಳನ್ನ ತೊರೆದು ಬಡತನದ ಜೊತೆ ಬದುಕನ್ನ ಹಂಚಿಕೊಳ್ಳುವುದಲ್ಲವೆ? । ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/10/16/love-66/

ಈ ನ್ಯಾಯದ ನೀತಿಯನ್ನ (fairness ethics), ನೀತಿಶಾಸ್ತ್ರದ ಬಂಗಾರದ ನಿಯಮದ ಜೊತೆ ಹೋಲಿಕೆ ಮಾಡಿ ಗೊಂದಲ ಮಾಡಿಕೊಳ್ಳಲಾಗುತ್ತದೆ. “ ನಿನ್ನನ್ನ ಬೇರೆಯವರು ಹೇಗೆ ನೋಡಬೇಕೆಂದು ಬಯಸುವೆಯೋ, ನೀನು ಕೂಡ ಅವರನ್ನು ಹಾಗೆಯೇ ನೋಡಬೇಕು” ಎನ್ನುವ ನೀತಿಯ ಮಾತನ್ನ “ ಇನ್ನೊಬ್ಬರ ಜೊತೆಗಿನ ನಿನ್ನ ವ್ಯವಹಾರದಲ್ಲಿ ನ್ಯಾಯವನ್ನು ಪಾಲಿಸು” ಎಂದು ಅರ್ಥೈಸಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಈ ಮಾತು ಮೊದಲು ರೂಪಗೊಂಡಿದ್ದು, “ನಿನ್ನ ನೆರೆಯವರನ್ನ ನಿನ್ನಂತೆಯೇ ಪ್ರೀತಿಸು” ಎನ್ನುವ ಬೈಬಲ್ ನ ಪ್ರಸಿದ್ಧ ಮಾತಿನ ಜನಪ್ರಿಯ ಆವೃತ್ತಿಯಾಗಿ.
ಜ್ಯೂಯಿಶ್-ಕ್ರಿಶ್ಚಿಯನ್ ಧಾರ್ಮಿಕತೆಯಲ್ಲಿ ಕಂಡುಬರುವ ಭ್ರಾತೃತ್ವದ ಕಲ್ಪನೆಯು ಖಂಡಿತವಾಗಿ ಈ ನ್ಯಾಯದ ನೀತಿ ಮಾತಿಗಿಂತ ಪೂರ್ಣವಾಗಿ ವಿಭಿನ್ನವಾಗಿದೆ. ನಿಮ್ಮ ನೆರೆಯವರನ್ನು ಪ್ರೀತಿಸುವುದೆಂದರೆ ಅವರ ಸುಖ-ದುಃಖಗಳಲ್ಲಿ ಒಂದಾಗುವುದು ಮತ್ತು ಆ ಕುರಿತು ಜವಾಬ್ದಾರಿಯನ್ನ ಹೊತ್ತುಕೊಳ್ಳುವುದು, ಆದರೆ ನ್ಯಾಯದ ನೀತಿಯ (fairness ethics) ಪ್ರಕಾರ ನಾವು ಹೀಗೆ ನೆರೆಯವರ ಸುಖ-ದುಃಖಗಳಲ್ಲಿ ಒಂದಾಗಬೇಕಿಲ್ಲ, ಆ ಕುರಿತಾದ ಜವಾಬ್ದಾರಿಯನ್ನೂ ಹೊರಬೇಕಿಲ್ಲ, ಅವರನ್ನ ಪ್ರೀತಿಸ ಬೇಕಿಲ್ಲ, ಅವರ ಹಕ್ಕುಗಳನ್ನ ಗೌರವಿಸಿದರೆ ಸಾಕು, ಅವರಿಂದ ಸೂಕ್ತ ಅಂತರ ಕಾಯ್ದುಕೊಳ್ಳುತ್ತ ಅವರಿಗೆ ನಮ್ಮಿಂದ ತೊಂದರೆ ಆಗದಂತೆ ನೋಡಿಕೊಂಡರೆ ಸಾಕು. ಹಾಗಾಗಿಯೇ ಈಗ ನೀತಿಶಾಸ್ತ್ರದ ಬಂಗಾರದ ನಿಯಮ, ಧಾರ್ಮಿಕ ನಿಯಮವಾಗಿಯೂ ಅತ್ಯಂತ ಜನಪ್ರಿಯವಾಗಿರುವುದು ಆಕಸ್ಮಿಕವೇನಲ್ಲ ಏಕೆಂದರೆ, ಈ ಬಂಗಾರದ ನಿಯಮವನ್ನ ನ್ಯಾಯದ ನೀತಿಯನ್ನಾಗಿ ಬಹು ಸುಲಭವಾಗಿ ವ್ಯಾಖ್ಯಾನ ಮಾಡಬಹುದು ಮತ್ತು ಈ ಧಾರ್ಮಿಕ ನೀತಿಯನ್ನ ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಹಾಗು ಪ್ರ್ಯಾಕ್ಟೀಸ್ ಮಾಡಲು ಒಪ್ಪುತ್ತಾರೆ. ಆದರೆ ಪ್ರೀತಿಯ ಅನುಷ್ಠಾನ ಸಾಧ್ಯವಾಗಬೇಕಿರುವುದು, ನ್ಯಾಯ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದರ ಮೂಲಕ.

ಆದರೆ ಈಗ ಇಲ್ಲಿ ಒಂದು ಮುಖ್ಯ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಮ್ಮ ಇಡೀ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ, ಪ್ರತಿಯೊಬ್ಬರೂ ತಮ್ಮ ಲಾಭವನ್ನು ಮಾತ್ರ ಬಯಸುವ ತತ್ವದ ಮೇಲೆ ಅವಲಂಬಿತವಾಗಿದ್ದರೆ, ಮತ್ತು ಅಹಂ ಪೋಷಿತವಾದ ನ್ಯಾಯ ನೀತಿಯ ಸಿದ್ಧಾಂತದಿಂದ ಮಾತ್ರ ನಿರ್ದೇಶಿತವಾಗುವುದಾದರೆ, ವ್ಯಾಪಾರ ವ್ಯವಹಾರವನ್ನ ನಡೆಸುವುದಾದರೂ ಹೇಗೆ? ಇಂಥ ಸಮಾಜ ವ್ಯವಸ್ಥೆಯ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದಾದರೂ ಹೇಗೆ? ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡುವುದೆಂದರೆ, ತಮ್ಮ ಲೌಕಿಕ ಬದುಕಿನ ಎಲ್ಲ ಕಾಳಜಿಗಳನ್ನ ತೊರೆದು ಬಡತನದ ಜೊತೆ ಬದುಕನ್ನ ಹಂಚಿಕೊಳ್ಳುವುದಲ್ಲವೆ? ಈ ಪ್ರಶ್ನೆಯನ್ನ ಎತ್ತುತ್ತಲೇ ಇದಕ್ಕೆ ಕ್ರಾಂತಿಕಾರಕ ಉತ್ತರಗಳನ್ನೂ ಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ ಕ್ರಿಶ್ಚಿಯನ್ ಸಂತರು ಮತ್ತು ಟಾಲ್ಸ್ಟೊಯ್, ಆಲ್ಬರ್ಟ್ ಷ್ವೆಟ್ಝರ್ ಹಾಗು ಸಿಮೋನ್ ವೇಲ್ ರಂಥ ವ್ಯಕ್ತಿಗಳು. ಇನ್ನೂ ಕೆಲವರು ನಮ್ಮ ಸಮಾಜದಲ್ಲಿ, ಪ್ರೀತಿ ಮತ್ತು ಸಾಮಾನ್ಯ ಲೌಕಿಕ ಬದುಕಿನ ನಡುವೆ ಇರಬಹುದಾದ ಮೂಲಭೂತ ಸಾಮರಸ್ಯದ ಕೊರತೆಯನ್ನ (incompatibility) ಒಪ್ಪಿಕೊಳ್ಳುತ್ತಾರೆ ಮತ್ತು ಇವತ್ತು ಪ್ರೀತಿಯ ಬಗ್ಗೆ ಮಾತನಾಡುವುದೆಂದರೆ ಒಂದು ಜನರಲ್ ಫ್ರಾಡ್ ನ ಭಾಗವಾಗುವುದು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅವರ ಪ್ರಕಾರ ಒಬ್ಬ ಹುತಾತ್ಮ ಅಥವಾ ಹುಚ್ಚು ಮನುಷ್ಯ ಮಾತ್ರ ಈವತ್ತಿನ ಬದುಕಿನಲ್ಲಿ ಪ್ರೀತಿ ಮಾಡಬಲ್ಲ, ಹಾಗಾಗಿ ಪ್ರೀತಿಯ ಕುರಿತಾದ ಎಲ್ಲ ಚರ್ಚೆಗಳು ಕೇವಲ ಒಣ ಉಪದೇಶಗಳು. ಇಂಥ ಒಂದು ಮನೋಭಾವನೆ, ಬಹುಬೇಗ ಸಿನಿಕತೆಯನ್ನ ತರ್ಕಬದ್ಧಗೊಳಿಸಲು ಸಹಾಯ ಮಾಡುತ್ತದೆ. “ ನಾನು ಒಬ್ಬ ಒಳ್ಳೆಯ ಕ್ರಿಶ್ಚಿಯನ್ ಆಗಲು ಬಯಸುತ್ತೇನೆ, ಆದರೆ ಈ ಬಯಕೆಯನ್ನ ನಾನು ಗಂಭೀರವಾಗಿ ಪರಿಗಣಿಸುವೆನಾದರೆ, ಹಸಿವೆಯಿಂದ ಬಳಲಬೇಕಾಗುತ್ತದೆ” ಎಂದು ಒಬ್ಬ ಸಾಮಾನ್ಯ ಮನುಷ್ಯ ಹೇಳುವಾಗ, ಅವನು ಇಂಥ ಸಿನಿಕತೆಯನ್ನೇ ವ್ಯಕ್ತ ಮಾಡುತ್ತಿರುತ್ತಾನೆ. ಇಂಥದೊಂದು ತರ್ಕಬದ್ಧಗೊಳಿಸುವಿಕೆಯ ಫಲಿತಾಂಶವೇ ನೈತಿಕ ಮೌಲ್ಯಗಳ ನಿರಾಕರಣೆ. “ಕ್ರಾಂತಿಕಾರಿ ಚಿಂತಕ” ಮತ್ತು “ಸಾಮಾನ್ಯ ಮನುಷ್ಯ” ಇಬ್ಬರು ಕೂಡ ಪ್ರೀತಿ ರಹಿತವಾದ ಸ್ವಯಂಚಾಲಿತ ಯಂತ್ರಗಳು, ಮತ್ತು ಇವರ ನಡುವಿನ ವ್ಯತ್ಯಾಸವೆಂದರೆ, ಸಾಮಾನ್ಯ ಮನುಷ್ಯನಿಗೆ ಈ ಬಗ್ಗೆ ಅರಿವಿಲ್ಲ ಹಾಗು ಕ್ರಾಂತಿಕಾರಿ ಚಿಂತಕನಿಗೆ ಈ ಕುರಿತು ಗೊತ್ತಿದ್ದರೂ, ಅವನು ಅದನ್ನ “ಐತಿಹಾಸಿಕ ಅವಶ್ಯಕತೆ” ಎಂದು ಗುರುತಿಸುತ್ತಾನೆ.

ಪ್ರೀತಿ ಮತ್ತು ಸಾಮಾನ್ಯ ಬದುಕುಗಳ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎನ್ನುವುದಕ್ಕೆ ಕಾರಣಗಳು ಅಮೂರ್ತ ರೀತಿಯಲ್ಲಿ ಮಾತ್ರ ನಿಜ ಎನ್ನುವುದರಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಬಂಡವಾಳಶಾಹಿ ಸಮಾಜದ ತಳಹದಿಯಾಗಿರುವ ತತ್ವ ಸಿದ್ಧಾಂತ ಮತ್ತು ಪ್ರೀತಿಯ ತತ್ವ ಸಿದ್ಧಾಂತಗಳ ನಡುವೆ ಯಾವುದೇ ಸಾಮರಸ್ಯ (compatibility) ಇಲ್ಲ. ಆದರೆ ಈಗ ನಮ್ಮೆದುರಿಗೆ ಇರುವ ಆಧುನಿಕ ಸಮಾಜ, ಒಂದು ಸಂಕೀರ್ಣ ವಿದ್ಯಮಾನ. ಉದಾಹರಣೆಗೆ, ಉಪಯೋಗಕ್ಕೆ ಬಾರದ ಸರಕನ್ನ ಮಾರಾಟ ಮಾಡುವ ಸೇಲ್ಸಮನ್, ಸುಳ್ಳು ಹೇಳದೆ ಆರ್ಥಿಕವಾಗಿ ಬದುಕುವುದು ಸಾಧ್ಯವೇ ಇಲ್ಲ; ಆದರೆ ಒಬ್ಬ ಸಮರ್ಥ ಕುಶಲಕರ್ಮಿ, ಒಬ್ಬ ಕೆಮಿಸ್ಟ್ ಅಥವಾ ಒಬ್ಬ ಡಾಕ್ಟರ್ ಗೆ ಇದು ಸಾಧ್ಯ. ಇದೇ ರೀತಿ, ಒಬ್ಬ ರೈತ, ಒಬ್ಬ ಶಿಕ್ಷಕ, ಒಬ್ಬ ಕಾರ್ಮಿಕ, ಮತ್ತು ಇಂಥ ಅನೇಕ ವೃತ್ತಿಯವರು ತಮ್ಮ ಆರ್ಥಿಕ ಬದುಕಿಗೆ ಧಕ್ಕೆ ಬಾರದಂತೆ ಪ್ರೀತಿಯನ್ನ ಪ್ರ್ಯಾಕ್ಟೀಸ್ ಮಾಡಬಹುದು. ಬಂಡವಾಳಶಾಹಿಯ ಹಿಂದಿರುವ ತತ್ವ ಸಿದ್ಧಾಂತ ಮತ್ತು ಪ್ರೀತಿಯ ಹಿಂದಿರುವ ತತ್ವ ಸಿದ್ಧಾಂತಗಳ ನಡುವೆ ಸಾಮರಸ್ಯ ಸಾಧ್ಯವಿಲ್ಲ ಎನ್ನುವುದನ್ನ ನಾವು ಗುರುತಿಸುವಾಗ, “ಬಂಡವಾಳಶಾಹಿ” ಎನ್ನುವುದು ಒಂದು ಸಂಕೀರ್ಣ ಹಾಗು ಸದಾ ಬದಲಾಗುತ್ತಲೇ ಇರುವ ವ್ಯವಸ್ಥೆ ಹಾಗು ಇಲ್ಲಿ ವೈಯಕ್ತಿಕ ಶುದ್ಧತೆ ಮತ್ತು ಅಭಿಪ್ರಾಯ ಭೇದಕ್ಕೆ ಸಾಕಷ್ಟು ಅವಕಾಶ ಇದೆ ಎನ್ನುವುದನ್ನೂ ಗಮನಿಸಬೇಕು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply