ಪ್ರೀತಿಯ ಆಚರಣೆ (ಭಾಗ – 12) : Art of love ಕೊನೆಯ ಕಂತು

ಇದು ಎರಿಕ್ ಫ್ರಾಮ್ ಅವರ ಬಹುಚರ್ಚಿತ ಕೃತಿ “ಆರ್ಟ್ ಆಫ್ ಲವ್” ಅನುವಾದದ ಕೊನೆಯ ಕಂತು. ಕಾಲ, ದೇಶ, ಅಗತ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ಪ್ರೀತಿಯ ವ್ಯಾಖ್ಯಾನಗಳು ಬದಲಾಗುತ್ತಲೇ ಇರುತ್ತವೆ. ಆ ಎಲ್ಲ ವ್ಯಾಖ್ಯಾನಗಳನ್ನೂ ಆರ್ಟ್ ಆಫ್ ಲವ್ ಸಮಗ್ರವಾಗಿ, ತಾರ್ಕಿಕವಾಗಿ, ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ. ಪ್ರೀತಿಯ ಹಲವು ಆಯಾಮಗಳನ್ನು ಎಳೆ ಎಳೆಯಾಗಿ ಬಿಡಿಸಿ ತೆರೆದಿಟ್ಟಿರುವ ಎರಿಕ್ ಫ್ರಾಮ್, ತಮ್ಮ ವಿಶಿಷ್ಟ ಒಳನೋಟಗಳ ಮೂಲಕ ಇದನ್ನು ಸಾರ್ವಕಾಲಿಕ ಕೃತಿಯಾಗಿಸಿದ್ದಾರೆ. ಈ ಕೃತಿಯನ್ನು ಇಂಗ್ಲಿಶ್`ನಿಂದ ಬಹಳ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಕನ್ನಡಕ್ಕೆ ತಂದ ಚಿದಂಬರ ನರೇಂದ್ರ ಅವರಿಗೆ ಧನ್ಯವಾದಗಳು.

ಹಿಂದಿನ ಕಂತು ಇಲ್ಲಿ ಓದಿ: https://aralimara.com/2022/10/22/love-67/

ಬಂಡವಾಳಶಾಹಿಯ ಹಿಂದಿರುವ ತತ್ವ ಸಿದ್ಧಾಂತ ಮತ್ತು ಪ್ರೀತಿಯ ಹಿಂದಿರುವ ತತ್ವ ಸಿದ್ಧಾಂತಗಳ ನಡುವೆ ಸಾಮರಸ್ಯ ಸಾಧ್ಯವಿಲ್ಲ ಎನ್ನುವುದನ್ನ ನಾವು ಗುರುತಿಸುವಾಗ, “ಬಂಡವಾಳಶಾಹಿ” ಎನ್ನುವುದು ಒಂದು ಸಂಕೀರ್ಣ ಹಾಗು ಸದಾ ಬದಲಾಗುತ್ತಲೇ ಇರುವ ವ್ಯವಸ್ಥೆ ಹಾಗು ಇಲ್ಲಿ ವೈಯಕ್ತಿಕ ಶುದ್ಧತೆ ಮತ್ತು ಅಭಿಪ್ರಾಯ ಭೇದಕ್ಕೆ ಸಾಕಷ್ಟು ಅವಕಾಶ ಇದೆ ಎನ್ನುವುದನ್ನೂ ಗಮನಿಸಬೇಕು. ಆದರೆ ಹೀಗೆ ಹೇಳುವಾಗ, ಪ್ರಸ್ತುತ ಸಾಮಾಜಿಕ ವ್ಯವಸ್ಥೆಯೇ ಅನಿರ್ಧಿಷ್ಟವಾಗಿ ಮುಂದುವರೆಯುತ್ತದೆ ಮತ್ತು ಅದೇ ಕಾಲಕ್ಕೆ ನಾವು, ನೆರೆಯವರ ಕುರಿತಾದ ನಮ್ಮ ಪ್ರೀತಿಯ ಆದರ್ಶವನ್ನು ವಾಸ್ತವದಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಭರವಸೆಯನ್ನ ಹೊಂದಬಹುದು ಎಂದು ನಾನು ಹೇಳಬಯಸುವುದಿಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ, ಪ್ರೀತಿಸುವ ಸಾಮರ್ಥ್ಯ ಉಳ್ಳವರನ್ನು ನಾವು ಅಪವಾದಗಳೆಂದೇ ತಿಳಿಯಬೇಕು; ಪ್ರಸ್ತುತ ಪಾಶ್ಚಿಮಾತ್ಯ ಸಮಾಜದಲ್ಲಿ ಪ್ರೀತಿ ಎನ್ನುವುದು ಒಂದು ಕಡೆಗಣಿಸಲ್ಪಟ್ಟಿರುವ ವಿದ್ಯಮಾನ. ಇದಕ್ಕೆ ಕಾರಣ ಬಹಳಷ್ಟು ವೃತ್ತಿಗಳು ಪ್ರೀತಿಯ ಮನೋಭಾವನೆಯನ್ನ ಹೊಂದಲು ಪೂರಕವಾಗಿಲ್ಲ ಎನ್ನುವುದಲ್ಲ, ಇದಕ್ಕೆ ಕಾರಣವಾಗಿರುವುದು ನಮ್ಮ ಉತ್ಪಾದನಾ ಕೇಂದ್ರಿತ (production centered), ಮತ್ತು ಸರಕುಗಳಿಗಾಗಿ ಹಸಿದಿರುವ (commodity greed) ಸಾಮಾಜಿಕ ವ್ಯವಸ್ಥೆ. ಕೇವಲ ಒಬ್ಬ ಪ್ರತಿಭಟನಾ ಶಕ್ತಿಯ (non conformist) ಮನುಷ್ಯ ಮಾತ್ರ ತನ್ನನ್ನು ತಾನು ಇಂಥದೊಂದು ವ್ಯವಸ್ಥೆಯಿಂದ ರಕ್ಷಿಸಿಕೊಳ್ಳಬಲ್ಲ. ಮನುಷ್ಯನ ಅಸ್ತಿತ್ವದ ಸಮಸ್ಯೆಗಳಿಗೆ ಪ್ರೀತಿಯೊಂದೇ ಪರಿಹಾರ ಎಂದು ನಂಬಿರುವ ಮತ್ತು ಪ್ರೀತಿ ವೈಯಕ್ತಿಕವಾಗಿರದೇ ಸಾಮುದಾಯಿಕವಾಗಿಬೇಕು, ಹಾಗು ಪ್ರೀತಿ, ಬದುಕಿನಲ್ಲಿ ಕೇವಲ ಗೌಣ (marginal) ಸಂಗತಿಯಾಗಬಾರದು ಎಂದು ಬಯಸುವ ಗಂಭೀರ ಕಾಳಜಿಯ ಜನ, ನಮ್ಮ ಸಾಮಾಜಿಕ ವ್ಯವಸ್ಥೆಯ ರಚನೆಯಲ್ಲಿ ಬಹುಮುಖ್ಯವಾದ ಮತ್ತು ಮೂಲಭೂತವಾದ ಕ್ರಾಂತಿಕಾರಕ ಬದಲಾವಣೆಗಳ ಅವಶ್ಯಕತೆ ಇದೆ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಈ ಪುಸ್ತಕದ ಪರಿಮಿತಿಯೊಳಗೆ ಇಂಥ ಬದಲಾವಣೆಯ ದಿಕ್ಕನ್ನು ಕೇವಲ ಸೂಚ್ಯವಾಗಿ ತಿಳಿಯಪಡಿಸುವುದು ಮಾತ್ರ ಸಾಧ್ಯ.

ನಮ್ಮ ಸಮಾಜ ಮುನ್ನಡೆಯುತ್ತಿರುವುದು, ಮ್ಯಾನೇಜರಿಯಲ್ ಅಧಿಕಾರಶಾಹಿಯಿಂದ ಮತ್ತು ವೃತ್ತಿಪರ ರಾಜಕಾರಣಿಗಳಿಂದಾಗಿ; ಜನ ಪ್ರಭಾವಿತರಾಗುವುದು ಸಮೂಹ ಸೂಚನೆಗಳಿಂದಾಗಿ (mass suggestion), ಅವರ ಗುರಿ ಹೆಚ್ಚು ಸರಕನ್ನ ಉತ್ಪಾದಿಸುವುದು ಮತ್ತು ಹೆಚ್ಚು ಹೆಚ್ಚು ಸರಕುಗಳನ್ನ ಬಳಸುವುದು, ಉತ್ಪಾದನೆ ಮತ್ತು ಬಳಕೆ ತಮಗೆ ತಾವೇ ಅವರ ಧ್ಯೇಯಗಳಾಗಿಬಿಟ್ಟಿವೆ. ನಮ್ಮ ಬದುಕಿನ ಪ್ರತಿಯೊಂದು ಚಟುವಟಿಕೆಯೂ, ನಮ್ಮ ಆರ್ಥಿಕ ಗುರಿಯಿಂದ ನಿರ್ದೇಶಿಸಲ್ಪಡುತ್ತದೆ, ಬದುಕು ಗುರಿಯಾಗದೇ, ಬದುಕಿಗೆ ಬೇಕಾಗುವ ಸಾಧನೆಗಳೇ ನಮ್ಮ ಗುರಿಯಾಗಿವೆ; ಮನುಷ್ಯ, ತನ್ನ ವಿಶಿಷ್ಟ ಮಾನವೀಯ ಸ್ವಭಾವ ಮತ್ತು ಕರ್ತವ್ಯದ ಬಗ್ಗೆ ಯಾವ ಆತ್ಯಂತಿಕ ಕಾಳಜಿಗಳನ್ನು ಹೊಂದದೇ ಕೇವಲ ಒಳ್ಳೆಯ ಊಟ ಮಾಡುವ, ಒಳ್ಳೆಯ ಬಟ್ಟೆ ಧರಿಸುವ ಯಾಂತ್ರಿಕ ಮನುಷ್ಯನಾಗಿದ್ದಾನೆ. ಮನುಷ್ಯನಿಗೆ ಪ್ರೀತಿಸುವುದು ಸಾಧ್ಯವಾಗಬೇಕಾದರೆ, ಅವನಿಗೆ ಅವನ ಸರ್ವೋಚ್ಚ ಸಾಧ್ಯತೆಯ ಲಭ್ಯವಾಗಬೇಕು. ಅವನು ಆರ್ಥಿಕ ವ್ಯವಸ್ಥೆಯನ್ನು ಸಲಹುವ ಬದಲಿಗೆ, ಆರ್ಥಿಕ ವ್ಯವಸ್ಥೆಯೇ ಅವನನ್ನು ಸಲಹುವಂತಾಗಬೇಕು. ಅವನು ಕೇವಲ ತನ್ನ ಲಾಭವನ್ನು ಮಾತ್ರ ಇತರರೊಡನೆ ಹಂಚಿಕೊಳ್ಳುವಂತಾಗದೇ, ತನ್ನ ಕೆಲಸ ಮತ್ತು ಅನುಭವವನ್ನೂ ಹಂಚಿಕೊಳ್ಳುವಂತಾಗಬೇಕು. ಸಮಾಜ ತನ್ನನ್ನು ತಾನು ಹೇಗೆ ಕಟ್ಟಿಕೊಳ್ಳಬೇಕೆಂದರೆ, ಮನುಷ್ಯನ ಸಾಮಾಜಿಕ ಮತ್ತು ಪ್ರೀತಿಯ ಸ್ವಭಾವ ಅವನ ಸಾಮಾಜಿಕ ಅಸ್ತಿತ್ವದಿಂದ ಪ್ರತ್ಯೇಕಗೊಳ್ಳದಂತೆ, ಎಲ್ಲವೂ ಒಂದಾಗಿ ಬೆಳೆಯುವಂತೆ ಅವಕಾಶಗಳು ಸೃಷ್ಟಿಯಾಗಬೇಕು.

ಪ್ರೀತಿಯೊಂದೇ ಮನುಷ್ಯನ ಅಸ್ತಿತ್ವದ ಸಮಸ್ಯೆಗಳಿಗೆ ಸಮಾಧಾನಕರ ಪರಿಹಾರ ಒದಗಿಸಬಲ್ಲದು ಎಂದು ಈವರೆಗೂ ನಾನು ಹೇಳಲು ಪ್ರಯತ್ನಿಸಿದ್ದು ನಿಜವಾಗಿದ್ದರೆ, ಪ್ರೀತಿಯ ಬೆಳವಣಿಗೆಯನ್ನ ಸಹಿಸದ, ನಿರಾಕರಿಸುವ ಸಮಾಜ, ಕೊನೆಗೊಮ್ಮೆ ಮನುಷ್ಯ ಸ್ವಭಾವಕ್ಕೆ ವಿರುದ್ಧವಾಗಿ ತಾನು ಕಾರ್ಯನಿರ್ವಹಿಸುತ್ತಿರುವುದರಿಂದ ನಾಶವಾಗಲೇಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ಪ್ರೀತಿಯ ಬಗ್ಗೆ ಮಾತನಾಡುವುದೆಂದರೆ ಮನುಷ್ಯನ ಪರಮ ಮತ್ತು ನೈಜ ಅವಶ್ಯಕತೆಯ ಬಗ್ಗೆ ಮಾತನಾಡಿದಂತೆ ಹಾಗಾಗಿ, ಪ್ರೀತಿಯ ಬಗ್ಗೆ ಚರ್ಚೆ ಮಾಡುವುದು ಖಂಡಿತವಾಗಿಯೂ ಒಣ ಉಪದೇಶದ ಸಂಗತಿಯಲ್ಲ. ಮನುಷ್ಯನ ಈ ಅವಶ್ಯಕತೆ ಅಷ್ಟು ಸ್ಪಷ್ಟವಾಗಿಲ್ಲ ಎಂದ ಮಾತ್ರಕ್ಕೆ, ಅದು ಅಸ್ತಿತ್ವದಲ್ಲಿ ಇಲ್ಲ ಎಂದಲ್ಲ. ಪ್ರೀತಿಯ ಸ್ವಭಾವವನ್ನು ವಿಶ್ಲೇಷಿಸುವುದೆಂದರೆ, ಸಮಾಜದಲ್ಲಿ ಅದರ ಸಾಮಾನ್ಯ ಗೈರುಹಾಜರಿಯನ್ನ ಗುರುತಿಸುವುದು ಮತ್ತು ಈ ಕೊರತೆಗೆ ಕಾರಣವಾಗಿರುವ ಸಾಮಾಜಿಕ ಕಟ್ಟಳೆಗಳನ್ನು ಪಟ್ಟಿಮಾಡಿ ಸರಿಪಡಿಸುವುದು. ಪ್ರೀತಿಯನ್ನ ಕೇವಲ ಅಪರೂಪದ ವೈಯಕ್ತಿಕ ವಿದ್ಯಮಾನ ಎಂದು ತಿಳಿಯದೆೇ, ಸಾಮಾಜಿಕ ಅವಶ್ಯಕತೆ ಎಂದು ನಂಬುವುದು, ಮನುಷ್ಯ ಸ್ವಭಾವದ ಒಳಗನ್ನು ಆಧರಿಸಿದ ತರ್ಕಬದ್ಧ ವಿಶ್ವಾಸ.

(ಮುಕ್ತಾಯ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply