‘ಅರಳಿಮರ’ದ ಎಲ್ಲ ಓದುಗರಿಗೂ ಮತ್ತು ಬರಹಗಾರರಿಗೂ ‘ಅರಳಿ ಬಳಗ’ದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸಾರುವ ಆಶಯ ಶ್ಲೋಕ ಇಲ್ಲಿದೆ…
ಉಪಶಮಿತ ಮೇಘನಾದಂ
ಪ್ರಜ್ವಲಿತ ದಶಾನನಂ ರಮಿತರಾಮಂ|
ರಾಮಾಯಣಮಿದಂ ಸುಭಗಂ
ದೀಪದಿನಂ ಹರತು ವೋ ದುರಿತಂ || ಭವಿಷ್ಯೋತ್ತರ ಪುರಾಣ ||
ಅರ್ಥ: ರಾಮಾಯಣದಲ್ಲಿ ಮೇಘನಾದನು (ರಾವಣನ ಮಗ ಇಂದ್ರಜಿತ್) ಶಾಂತನಾಗುವಂತೆ ಈ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗಿಬಿಟ್ಟಿರುತ್ತದೆ. ರಾಮಾಯಣದಲ್ಲಿ ದಶಮುಖರಾವಣನು ಸುಡಲ್ಪಡುವಂತೆ ಇದರಲ್ಲಿ ದಶೆ(ಬತ್ತಿ)ಗಳನ್ನು ಉರಿಸಲ್ಪಡುವುದು. ಅಲ್ಲಿ ರಾಮನು ರಮಿಸುವಂತೆ ಇಲ್ಲಿ ಶ್ರೀರಾಮನೂ ಮತ್ತು ರಮಣಿಯರೂ ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿಯು ನಮ್ಮ ಸಂಕಷ್ಟಗಳನ್ನು ಹೋಗಲಾಡಿಸಲಿ.
– ಈ ಶ್ಲೋಕದಲ್ಲಿ ದೀಪ ಬೆಳಗುವ ಪ್ರಕ್ರಿಯೆಯೇ ರಾಮಾಯಣದ ಸಾರವನ್ನು ಸಂಕೇತಿಸುವಂತಿದೆ.
ದೀಪ ಬೆಳಗುವ ಸಂಭ್ರಮದ ಹಬ್ಬವು ನಮ್ಮ ಬದುಕಿನ ಅಂಧಕಾರವನ್ನು ನಿವಾರಿಸುವ ಸಂಕೇತವಾಗಲಿ ಎಂಬುದು ಇದರ ಒಟ್ಟು ಆಶಯ. ಈ ಅಂಧಕಾರ ನಾಶವಾಗುವುದು ಹೇಗೆ? ಜ್ಞಾನದಿಂದ. ಎಲ್ಲ ಬಗೆಯ ಅಂಧಕಾರಕ್ಕೂ ಜ್ಞಾನದ ಹಣತೆ ಬೆಳಗುವುದೇ ಉತ್ತರ.
ಈ ಜ್ಞಾನ ಎಲ್ಲಿಂದ ದೊರೆಯುತ್ತದೆ? ಪ್ರೇಮದಿಂದ, ಭಕ್ತಿಯಿಂದ, ಶರಣಾಗತಿಯಿಂದ ಮತ್ತು ಸತತ ಸ್ವಾಧ್ಯಾಯದಿಂದ.
ನಮ್ಮ ಜ್ಞಾನದ ತೈಲ ಸುರಿದು, ನಮ್ಮ ದುರ್ದೆಶೆಗಳನ್ನು ಸುಟ್ಟು, ಹೊಮ್ಮುವ ಬೆಳಕು ಎಲ್ಲ ಸಂಕಷ್ಟಗಳನ್ನು ಹೋಗಲಾಡಿಸಲಿ. ದೀಪಾವಳಿ ನಮ್ಮೆಲ್ಲರ ಬದುಕಿನಲ್ಲಿ ಸಂತಸದ ಬೆಳಕು ತುಂಬಲಿ.
ಅರಳಿಮರದ ಸಮಸ್ತ ಓದುಗರಿಗೆ, ಅರಳಿಬಳಗದ ಪರವಾಗಿ ಹಬ್ಬದ ಶುಭ ಹಾರೈಕೆಗಳು.