ಲೌಕಿಕದಲ್ಲಿ ಸತ್ಯ ಸಾಪೇಕ್ಷ, ಕಾಣ್ಕೆ ವೈಯಕ್ತಿಕ! : ಅಧ್ಯಾತ್ಮ ಡೈರಿ

ಲೌಕಿಕದಲ್ಲಿ ಸತ್ಯ ಅನ್ನುವುದು ಹೇಗೆ ಏಕೈಕ ಅಲ್ಲವೋ, ಹೇಗೆ ಸತ್ಯ ಅನ್ನುವುದು ಇಲ್ಲಿ ಸಾಪೇಕ್ಷವೋ; ಹಾಗೇ ಕಾಣ್ಕೆಯೂ ಸಾರ್ವತ್ರಿಕ ಅಲ್ಲ. ಇಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಅಭಿಮತಗಳು. ಎಷ್ಟು ಮತಗಳಿದ್ದಾವೋ ಅಷ್ಟು ದಾರಿಗಳು. ಕಾಣುವ ಕಣ್ಣುಗಳು ಎಷ್ಟಿವೆಯೋ ಅಷ್ಟೂ ಕಾಣ್ಕೆಗಳು!! ~ ಚೇತನಾ ತೀರ್ಥಹಳ್ಳಿ

ಮಾತು ಹೇಳಲಾಗದ್ದನ್ನು ಮೌನ ಹೇಳುತ್ತೆ ಅಂತ ಒಬ್ಬರಿಗೆ ಅನಿಸಿದ್ದಿರಬಹುದು. ಮೌನವೂ ಅಪಾರ್ಥಕ್ಕೆ ಒಳಗಾಗುತ್ತೆ, ಮಾತಲ್ಲೇ ಹೇಳಿಬಿಡೋದು ಒಳ್ಳೇದು ಅಂತ ಮತ್ತೊಬ್ಬರಿಗೆ ಅನಿಸಿರಬಹುದು.

ಪ್ರಯಾಣ ಮಾಡು, ಯಾರಿಗೂ ಹೇಳ್ಬೇಡ; ನಿನ್ನ ಖುಷಿಗಷ್ಟೆ ನಿನ್ನ ಯಾನ ಅಂತ ಒಬ್ಬರು ಹೇಳಬಹುದು. ಪ್ರಯಾಣದ ಖುಷಿಯನ್ನ ಹತ್ತು ಜನಕ್ಕೆ ಹಂಚಿ ಅವರನ್ನೂ ಯಾನಕ್ಕೆ ಅನುವುಗೊಳಿಸುವ ಉದ್ದೇಶ ಮತ್ತೊಬ್ಬರಿಗೆ ಇರಬಹುದು.

ಓದಿದಷ್ಟೂ ಬುದ್ಧಿವಂತಿಕೆ ಹೆಚ್ಚುತ್ತೆ ಅನ್ನಬಹುದು ಒಬ್ಬರು. ವಿಪರೀತ ಓದಿದಷ್ಟೂ ಕಾಮನ್ ಸೆನ್ಸ್ ಮತ್ತು ಸ್ವಯಂ ಚಿಂತನೆ ಕ್ಷೀಣಿಸುತ್ತಾ ಹೋಗುತ್ತೆ ಅಂತ ಮತ್ತೊಬ್ಬರು ಅನ್ನಬಹುದು!

ಸತ್ಯಕ್ಕೆ ಸಾವಿಲ್ಲ ಅಂತ ಒಬ್ಬರಿಗೆ ಅನಿಸಿದರೆ; ಸತ್ಯ ಸಾಪೇಕ್ಷ, ಒಬ್ಬರ ಪಾಲಿನ ಸತ್ಯ ಮತ್ತೊಬ್ಬರ ಪಾಲಿಗೆ ಸಾಯುತ್ತೆ ಅಂತ ಮತ್ತೊಬ್ಬರಿಗೆ ಅನಿಸಬಹುದು.

ಬ್ರಹ್ಮಚರ್ಯವೇ ವರ್ಚ್ಯೂ ಅಂತ ಒಬ್ಬರು ಹೇಳಿದರೆ, ಸುರತ ಸುಖವನ್ನು ಅರಿಯದೆ ಲೌಕಿಕ ಜೀವನ ಅರ್ಥವಾಗದು ಅಂತ ಮತ್ತೊಬ್ಬರು ಹೇಳಬಹುದು.

ಕಲಿಕೆಗೆ ಗುರು ಬೇಡವೆಂದು ಒಬ್ಬರು, ಬೇಕೆಂದು ಮತ್ತೊಬ್ಬರು; ಅರಿವೇ ಗುರುವೆಂದು ಒಬ್ಬರು, ಅರಿವು ಮೂಡಿಸುವವರೇ ಗುರುವೆಂದು ಇನ್ನೊಬ್ಬರು;

ಕೊನೆಗೆ ಬಲವೆಂದು ನಾವು, ಎಡವೆಂದು ಕನ್ನಡಿಯ ಬಿಂಬ!!

ಸೃಷ್ಟಿಯಲ್ಲಿ ಯಾವುದೂ ಸತ್ಯವಲ್ಲ, ಯಾವುದೂ ಸುಳ್ಳೂ ಅಲ್ಲ. ಯಾವುದೂ ಸರಿಯಲ್ಲ, ಯಾವುದೂ ತಪ್ಪೂ ಅಲ್ಲ. ಅವರವರ ಅನ್ನಿಸಿಕೆ ಸಾರ್ವಕಾಲಿಕ, ಸರ್ವಸಾಧ್ಯ ಹೇಳಿಕೆ ಅಥವಾ ಮಾರ್ಗದರ್ಶನವಾಗಲು ಸಾಧ್ಯವಿಲ್ಲ.

ಪ್ರತಿಯೊಬ್ಬ ಯುಧಿಷ್ಟಿರರ ‘ಹತಃ ಕುಂಜರ’ ನಮಗೆ ಕೇಳಿಸಿರುವುದಿಲ್ಲ.

ಆದ್ದರಿಂದ ಮತ್ತೊಬ್ಬರು ಹೇಳಿಹೋಗಿದ್ದೇ ಅಂತಿಮ ಸತ್ಯ ಅನ್ನುವ ನೆಚ್ಚಿಕೆ ಅರ್ಥಹೀನ. ಪ್ರತಿಕ್ಷಣದ ಕಾಣ್ಕೆ, ಪ್ರತಿಕ್ಷಣದ ಪಾಠವಾಗಬಲ್ಲದು, ಅಷ್ಟೇ.

ಅಂದ ಹಾಗೆ, ಈ ಬರಹವೂ ಇದಮಿತ್ಥಂ ಅಲ್ಲ. ಯಾಕೆಂದರೆ ಲೌಕಿಕದಲ್ಲಿ ಸತ್ಯ ಅನ್ನುವುದು ಹೇಗೆ ಏಕೈಕ ಅಲ್ಲವೋ, ಹೇಗೆ ಸತ್ಯ ಅನ್ನುವುದು ಇಲ್ಲಿ ಸಾಪೇಕ್ಷವೋ; ಹಾಗೇ ಕಾಣ್ಕೆಯೂ ಸಾರ್ವತ್ರಿಕ ಅಲ್ಲ. ಇಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಅಭಿಮತಗಳು. ಎಷ್ಟು ಮತಗಳಿದ್ದಾವೋ ಅಷ್ಟು ದಾರಿಗಳು. ಕಾಣುವ ಕಣ್ಣುಗಳು ಎಷ್ಟಿವೆಯೋ ಅಷ್ಟೂ ಕಾಣ್ಕೆಗಳು!!

Leave a Reply