ಕನಸಿನ ಅರ್ಥ ಬೇರೆಯೇ ಇತ್ತು! : ಝೆನ್ ಕಥೆ

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ.
ಮರುದಿನ ಮುಂಜಾನೆ ಆತ ಆ ಕಾಡನ್ನು ಹುಡುಕುತ್ತ ಹೊರಟ.

ದಾರಿಯಲ್ಲಿ ವಿಶ್ರಾಂತಿಗಾಗಿ ಆತ ಒಂದು ಮರದ ಕೆಳಗೆ ಕುಳಿತುಕೊಂಡಾಗ ಹತ್ತಿರದಲ್ಲಿ ಅವನಿಗೆ ಬಂಡೆಯ ಕೆಳಗೆ ಒಂದು ನರಿ ಮಲಗಿರುವುದು ಕಾಣಿಸಿತು. ಆ ನರಿಗೆ ಕಾಲುಗಳಿರಲಿಲ್ಲ. ಕಾಲುಗಳಿಲ್ಲದ ನರಿ ಹೇಗೆ ಬದುಕಬಲ್ಲದು? ಆಹಾರ ಹೇಗೆ ಹುಡುಕಿಕೊಳ್ಳುತ್ತದೆ ಎಂದು ಆ ಮನುಷ್ಯ ವಿಚಾರ ಮಾಡುತ್ತಿರುವಾಗಲೇ ಒಂದು ಆಶ್ಚರ್ಯ ಗಮನಿಸಿದ.

ಒಂದು ಭಾರೀ ಸಿಂಹ, ನರಿಯ ಹತ್ತಿರ ಬಂದು ಮಾಂಸದ ತುಣುಕುಗಳನ್ನು ಎಸೆದು ಹೋಯಿತು. ಈ ಘಟನೆಯನ್ನು ನೋಡುತ್ತಿದ್ದಂತೆಯೇ ಆ ಮನುಷ್ಯನಿಗೆ ಏನೋ ಹೊಳೆದಂತಾಯಿತು. ಭಗವಂತನಿಗೆ ನನ್ನನ್ನು ಪೂರ್ತಿಯಾಗಿ ಸಮರ್ಪಿಸಿಕೊಂಡು ಬಿಟ್ಟರೆ ಸಾಕು, ಅವ ನನ್ನ ಎಲ್ಲ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಾನೆ. ಇದೇ ಮನುಷ್ಯ ಬದುಕಿನ ಯಶಸ್ಸಿನ ಗುಟ್ಟು ಎಂದು ಆತ ಧೃಡವಾಗಿ ನಿಶ್ಚಯ ಮಾಡಿದ.

ಎರಡು ವಾರಗಳ ನಂತರ ಹಸಿವಿನಿಂದ ಬಳಲುತ್ತ, ನರಳುತ್ತ ಮಲಗಿದ್ದ ಆ ಮನುಷ್ಯನಿಗೆ ಇನ್ನೊಂದು ಕನಸು ಬಿತ್ತು. ಕನಸಿನಲ್ಲಿ ಒಂದು ಭಾರಿ ದೊಡ್ಡ ದನಿ ಕೂಗಿಕೊಂಡಿತು,
“ಹುಚ್ಚಾ , ಆ ಕನಸಿನ ಅರ್ಥ ಸಿಂಹದಂತಾಗು ಎಂದು!”

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply