ನಾವು’ಏನು ಅಲ್ಲವೋ’ ಅದನ್ನು ಬದುಕುವ ಪ್ರಯತ್ನವೇ ನಮ್ಮೆಲ್ಲ ತಪ್ಪುಗಳಿಗೆ ಕಾರಣ

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು. 

ಪ್ಪು ಮಾಡದವರು ಯಾರಿದ್ದಾರೆ!? ತಪ್ಪುಗಳು ಕಲಿಕೆಯ ವಿಧಾನವೂ ಆಗಿದೆ. ಆದರೆ ಬಹಳ ಬಾರಿ ತಪ್ಪುಗಳು ನಮ್ಮನ್ನು ಅಪಾಯಕ್ಕೆ ನೂಕಿಬಿಡುತ್ತವೆ. ಅಂತಹ ತಪ್ಪನ್ನು ಮಾಡಿದ ಪರಿಣಾಮದಿಂದ ನರಳುವಾಗ, ಬಹುತೇಕ ಎಲ್ಲರೂ ”ಇದೊಂದು ಬಾರಿ ಪಾರಾದರೆ ಸಾಕು, ಇನ್ನೆಂದೂ ತಪ್ಪು ಮಾಡುವುದಿಲ್ಲ” ಎಂದು ಸಂಕಲ್ಪಿಸುತ್ತೇವೆ. ಈ ಸಂಕಲ್ಪ ಪ್ರಾಮಾಣಿಕವೂ ಆಗಿರುತ್ತದೆ. ಆದರೆ ಒಮ್ಮೆ ಅನಾಹುತವನ್ನು ತಪ್ಪಿಸಿಕೊಂಡ ನಂತರ ನಮ್ಮ ಸಂಕಲ್ಪ ಮರೆತೇಹೋಗುವುದು! ಮತ್ತೆ ಮತ್ತೆ ಅದೇ ತಪ್ಪು ಮಾಡುವುದು; ಅದರಿಂದ ನರಳುತ್ತಲೇ ಇರುವುದು- ಈ ವಿಷವೃತ್ತ ದಲ್ಲಿ ಸಿಲುಕಿದ್ದೇವೆ. ಆದ್ದರಿಂದ ನಮ್ಮ ಜೀವನದಲ್ಲಿ ಬಹುತೇಕ ದುಃಖವೇ ತುಂಬಿಕೊಂಡಿದೆ.  

ಈ ವ್ಯೂಹದಿಂದ ಹೊರಬರಲು ಸಾಧ್ಯವೇ ಇಲ್ಲವೇ?! ದುಃಖದಿಂದ ಕೂಡಿದ ಜೀವನವನ್ನು ಆನಂದಮಯವಾಗಿಸುವುದು ಹೇಗೆ!? 

ತಪ್ಪು ಮಾಡುವ ಅಭ್ಯಾಸವು ಕತ್ತಲೆ ಇದ್ದಂತೆ. ಕತ್ತಲೆಗೆ ತನ್ನದೇ ಆದ ಅಸ್ತಿತ್ವವಿಲ್ಲ. ಬೆಳಕಿನ ಅಭಾವವೇ ಕತ್ತಲೆಯಾಗಿದೆ. ಯಾವುದಕ್ಕೆ ಅಸ್ತಿತ್ವವೇ ಇಲ್ಲವೋ ಅದರೊಂದಿಗೆ ವ್ಯವಹರಿಸುವುದು ಹೇಗೆ? ಕತ್ತಲೆ ಯನ್ನು ಖಂಡಿಸಲಾಗದು, ಓಡಿಸಲಾಗದು, ಅದರೊಂದಿಗೆ ಏನೂ ಮಾಡಲಾಗದು. ಅಂತೆಯೇ ತಪ್ಪು ಮಾಡುವ ಅಭ್ಯಾಸದೊಂದಿಗೆ ನೇರವಾಗಿ ವ್ಯವಹರಿಸಲಾಗದು. ಒಳಿತಿನ ಅನುಪಸ್ಥಿತಿಯೇ ತಪ್ಪು ಮಾಡುವ ಅಭ್ಯಾಸವಾಗಿದೆ. ಕತ್ತಲೆ ಕಳೆಯಲು ಬೆಳಕು ತರುವಂತೆ, ಅಜ್ಞಾನದ ನಿವಾರಣೆಗೆ ಜ್ಞಾನವನ್ನು ಹೊಂದಬೇಕು. ಅಂತಹ ಜ್ಞಾನವನ್ನು ಹೊಂದುವ ಮಾರ್ಗವನ್ನು ಅರಿಯುವ ಮೊದಲು, ತಪ್ಪು  ಮಾಡುವ ಅಭ್ಯಾಸದಿಂದ  ಹೊರಬರುವ ದಾರಿಯನ್ನು ಹುಡುಕುವ ಮೊದಲು, ಈ ಸಮಸ್ಯೆಯ ಮೂಲವನ್ನು ಅರಿಯಬೇಕು.

ಬಹುತೇಕ ತಪ್ಪುಗಳನ್ನು ನೈತಿಕತೆಯು  ‘ಪಾಪ’ ಎಂದು ನಿಷೇದಿಸಿದೆ. ಅಸೂಯೆ, ಮಹತ್ವಾಕಾಂಕ್ಷೆ, ದುರಾಸೆ, ಕಾಮುಕತೆ, ಅಸುರಕ್ಷಾ ಭಾವ, ಅಧಿಕಾರದ ಅಪೇಕ್ಷೆ, ಕ್ರೋಧ ಇತ್ಯಾದಿಗಳನ್ನು ಮಾಡುವುದಿರಲಿ, ಯೋಚಿಸುವಂತೆಯೂ ಇಲ್ಲ!  ಇವುಗಳನ್ನು ಪಾಪಿ ಮಾತ್ರ ಮಾಡುವನು. ತಪ್ಪನ್ನು  ಮಾಡಲು, ತಿದ್ದಿಕೊಳ್ಳಲು, ಮತ್ತೆ ಮಾಡದಿರುವ ಅವಕಾಶಗಳಿವೆ. ಪಾಪವನ್ನಾದರೋ, ಎಂದಿಗೂ ಮಾಡುವಂತಿಲ್ಲ. ಪಾಪವನ್ನು ಮಾಡಲಾಗದು, ಕೇಳಲಾಗದು, ನೋಡಲಾಗದು, ಚರ್ಚಿಸಲೂ ಆಗದು. ಇಳಿ ವಯಸ್ಸಿನಲ್ಲಿ ಕಾಮುಕತೆ ಇರುವುದೇ ಪಾಪ ಎಂದಾದರೆ ಅದರಿಂದ ಹೊರಬರುವುದು ಹೇಗೆ?!  ಆದ್ದರಿಂದ ಹತ್ತಿಕ್ಕಲಾಗದ ವಾಂಛೆಯನ್ನು ಪಾಪಭೀತಿಯಿಂದ ಮಾಡಲಾರೆದೆ ಉಳಿದಿದ್ದರೂ ಅದನ್ನು ಮನಸ್ಸಲ್ಲಿ ದಬ್ಬಿಟ್ಟುಕೊಳ್ಳುವವರೂ ಇದ್ದಾರೆ. ಪ್ರಾಯೋಗಿಕವಾಗಿ ನಡೆಸುವ ಕ್ರಿಯೆಗಳು ಮಾತ್ರವಲ್ಲ, ಇಂಥವೂ ತಪ್ಪುಗಳ ಸಾಲಿಗೇ ಸೇರುತ್ತವೆ. ಪಾಪಪ್ರಜ್ಞೆ ಕಾಡತೊಡಗುತ್ತದೆ.

ತಪ್ಪೆಂದರೆ ‘ಕಂಡು ತಿಳಿಯುವ’ ದಾರಿ

ಆದ್ದರಿಂದ, ತಪ್ಪುಗಳನ್ನು ಮಾಡುತ್ತಲೇ ಇರುವ ಆಭ್ಯಾಸದಿಂದ ಹೊರಬರಲು ಮೊದಲಿಗೆ- ತಪ್ಪನ್ನು ಕೇವಲ ತಪ್ಪಾಗಿ ಮಾತ್ರ ನೋಡಬೇಕಿದೆಯೇ ಹೊರತು ಪಾಪವೆಂದಲ್ಲ. ಎರಡನೆಯದಾಗಿ, ತಪ್ಪಿನಿಂದ ತನಗೆ ಮತ್ತು ಇತರರಿಗೆ ಆಗುವ ಅನಾಹುತವನ್ನು ವಾಸ್ತವದಲ್ಲಿ ‘ಕಂಡು- ತಿಳಿಯುವ’ ದಾರಿ ಬೇಕಿದೆ. ತಪ್ಪುಗಳನ್ನೇಕೆ ಮಾಡುತ್ತೇವೆ ಎಂಬುದಕ್ಕಿಂತ” ತಪ್ಪುಗಳಿಂದ ನಾವು ಪಾಠ ಕಲಿಯುವುದಿಲ್ಲವೇಕೆ” ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ.

ನಮ್ಮೀ ಜೀವನದಲ್ಲಿ ಪ್ರತಿಯೊಂದನ್ನೂ ನಾವು ಹೇಗೆ ಕಲಿತೆವು? ಲೆಕ್ಕವನ್ನಾಗಲೀ, ಸೈಕಲ್, ಅಡುಗೆ ಏನನ್ನಾದರೂ  ತಪ್ಪು ಮಾಡದೇ, ಏಳದೇ ಬೀಳದೇ ಕಲಿತುಬಿಟ್ಟೇವಾ?! ನೋಡಿ, ಕೇಳಿ, ಮಾಡಿ, ಚರ್ಚಿಸಿ, ಅನುಭವಿಸಿ ತಾನೇ ಕಲಿತಿದ್ದು!?

ತಪ್ಪು ಮಾಡುವುದು ಪಾಪವಲ್ಲ. ಆದರೆ, ತಪ್ಪನ್ನು ಪಾಪವನ್ನಾಗಿ ಪರಿಗಣಿಸಿದುದರಿಂದ ಬಹುತೇಕ ಎಲ್ಲರೂ ಎಂದೂ ತಪ್ಪೇ ಮಾಡಿಲ್ಲವೆಂಬಂತೆ ಅನುಕ್ಷಣ ತೋರಿಸಿಕೊಳ್ಳುವರು. ತಮ್ಮ ತಪ್ಪು ಬೆಳಕಿಗೆ ಬರುತ್ತಿದ್ದಂತೆ  ಮೊದಲಿಗೆ ಮಾಡಿಯೇ ಇಲ್ಲ ಎಂಬ ಸಮರ್ಥನೆ ನಂತರ ಅದರಲ್ಲಿಯೂ ಒಳಿತನ್ನುಎತ್ತಿ ತೋರಿಸುವ ಪ್ರಯತ್ನ ಮಾಡುವರು. ಜೊತೆಗೆ ಒಳಗೊಳಗೇ ಅಪರಾಧಿ ಭಾವದಿಂದ ನರಳುವರು! ಇತರರೆಲ್ಲ ಹೇಗೆ ವರ್ತಿಸುವರೆಂದರೆ, ಆದಮ್ – ಈವರ ನಂತರ ಘಟಿಸುತ್ತಿರುವ ಮೊದಲ  ತಪ್ಪೇ  ಇದು  ಎಂಬಂತೆ  ಮುಗಿಬೀಳುವರು!  ತಪ್ಪು ಮಾಡಿದವನು  ಮಾತ್ರಒಂದು ಕಡೆ;  ಇಡೀ ಸಮಾಜವೇ ಮತ್ತೊಂದು ಕಡೆ ಮರ್ಯಾದಾ  ಪುರುಷೋತ್ತಮನಂತೆ!! ಕಾರಣ ಈಗ ತಮ್ಮ ತಪ್ಪುಗಳು ಯಾವುವೂ ಅವರಿಗೆ ನೆನಪಿರುವುದಿಲ್ಲ. ಅವರು ಜಾಣ ವಿಸ್ಮರಣೆಯಲ್ಲಿದ್ದಾರೆ!ತಾವು ಇಂತಹವರು  ಎಂಬ ”ಪ್ರದರ್ಶನ” ದ ಜೀವನದಲ್ಲಿ ಕಳೆದುಹೋಗಿದ್ದಾರೆ. ತಾವು ಇಂತಹ ತಪ್ಪು ಮಾಡಿಲ್ಲ,  ಮಾಡುವುದೂ ಇಲ್ಲ ಎಂದು ತಮಗೆ ತಾವೇ ನಂಬಿಕೊಂಡಿದ್ದಾರೆ!

ಹಾಗೆಂದು ತಪ್ಪೆಸಗಿದವರು ತಮ್ಮ ತಪ್ಪನ್ನು ಮುಚ್ಚಿಡಲು ಅಥವಾ ತಾನು ಮಾಡಿಯೇ ಇಲ್ಲವೆಂದು ಸಾಧಿಸಲು ಹೆಣಗಬಾರದು. ಹಾಗೆ ಮುಚ್ಚಿಡುವ ರೂಢಿಯಾಗಿಬಿಟ್ಟರೆ, ಅದರಿಂದ ಹೊರಬರುವುದು ಕಷ್ಟವಾಗಿಬಿಡುತ್ತದೆ. ಮಾಡಿದ್ದನ್ನು ಉಣ್ಣುವ, ಆ ಯಾತನೆಯನ್ನು ಅದು ಇರುವ ಹಾಗೆ ಮೌನದಿಂದ ಅನುಭವಿಸಿದಾಗ ಮಾತ್ರ ಅಂತಹ ‘ತಪ್ಪಿನ’ ಅಭ್ಯಾಸದಿಂದ ಹೊರಬರಬಹುದು. ಪ್ರಜ್ಞಾಪೂರ್ವಕವಾಗಿ ಇರುವುದೆಂದರೆ ಇದೇ ಆಗಿದೆ. ಈ ಮಾರ್ಗ ಬಿಟ್ಟು ಸಮರ್ಥನೆ, ವಾಗ್ವಾದ, ವ್ಯಸನ ಮೊದಲಾದ ಅಡ್ಡದಾರಿಗೆ ಇಳಿದರೆ ಉಂಟಾಗುವ ಪರಿಣಾಮ ಅನಾಹುತಕಾರಿ. ಇಂತಹ ಎಸ್ಕೇಪಿಸಮ್ ನಿಂದ, ತಲೆತಪ್ಪಿಸಿಕೊಳ್ಳುವಿಕೆಯಿಂದ ನಾವು ಮಾಡಿದ ತಪ್ಪು ದೇಹದ, ಮನಸ್ಸಿನ, ಭಾವದ ಹಾಗೂ ಸಂಬಂಧದ ಮೇಲೆ ಉಂಟು ಮಾಡುವ ಅನಾಹುತದ ಅರಿವು ದಕ್ಕದೆಹೋಗುವುದು. ಆದ್ದರಿಂದ ಅದೇ ತಪ್ಪು ಪುನರಾವರ್ತನೆ ಆಗುವುದು. ಇದೇ ಅಪ್ರಜ್ಞಾಪೂರ್ವಕ ನಡವಳಿಕೆ. ಇದೇ ಎಚ್ಚರದಪ್ಪಿದ ನಡವಳಿಕೆ. ಇದು ಒಂದು ತಪ್ಪಿನ ಮೇಲೆ ಮತ್ತಷ್ಟನ್ನು ಪೇರಿಸುತ್ತ ಹೋಗುವುದು.

ಪಾಪ – ಪುಣ್ಯ ಎಂಬುದೇ ಇಲ್ಲ!

ನಾವಿಲ್ಲಿ ತಪ್ಪು ಮಾಡುವುದೇಕೆ ಅನ್ನುವ ಬಗ್ಗೆ ಚರ್ಚಿಸುತ್ತಿದ್ದೇವೆ. ವಾಸ್ತವದಲ್ಲಿ ಸರಿತಪ್ಪುಗಳೆಂಬ ಭೇದವೇ ಇಲ್ಲ. ಅಂಥ ಯಾವ ಸಂಗತಿಗಳೂ ಇಲ್ಲವೆಂದು ಸಾಧು ಸಂತರೆಲ್ಲರೂ ಹೇಳಿದ್ದಾರೆ. ಹಾಗೆ ಇದು ಪಾಪ, ಇದು ಪುಣ್ಯ ಎಂಬ ಭೇದಗಳನ್ನು ಮಾಡುವವರು ಇನ್ನೂ ಜ್ಞಾನೋದಯ ಹೊಂದಿರುವುದಿಲ್ಲ. ಅವರು ಭೇದಬುದ್ಧಿಯಲ್ಲೆ ಮುಂದುವರೆದವರಾಗಿರುತ್ತಾರೆ ಅನ್ನುತ್ತಾರೆ ಓಶೋ.

ಸರಿ ಮತ್ತು ತಪ್ಪು – ಇವು ಸಾಪೇಕ್ಷ. ದೇಶಕಾಲಗಳ ನಡವಳಿಕೆಗೆ ತಕ್ಕಂತೆ ಮನುಷ್ಯ ತನ್ನ ಸಮಾಜದ ಗೋಜಲು ತಪ್ಪಿಸಿಕೊಳ್ಳಲು ಹಾಕಿಕೊಂಡ ಚೌಕಟ್ಟುಗಳವು. ಆದರೆ ಈ ಬೇಲಿಗಳನ್ನೆ ಮಿತಿಯಾಗಿಸಿಕೊಂಡು ನಾವು ಪಾಪ ಪ್ರಜ್ಞೆಯಲ್ಲಿ ನರಳುತ್ತೇವೆ. ಬಹಳ ಬಾರಿ ಬೇಲಿ ಮೀರಿದರೆ ಬಯಲು ದಕ್ಕುತ್ತದೆ. ಆದರೆ ನಾವು ಪಾಪಭೀತಿಯಿಂದ ಸಂಕುಚಿತ ಪರಿಧಿಯೊಳಗೆ ಮುದುಡುತ್ತ ಹೋಗುತ್ತೇವೆ.

ನಾವು ಏನೇ ಮಾಡಿದರೂ ಪ್ರಜ್ಞಾಪೂರ್ವಕವಾಗಿ ಮಾಡಿದರಾಯ್ತು. ಸಮಾಜ ಯಾವುದನ್ನು ತಪ್ಪು ಎನ್ನುತ್ತದೆಯೋ ಅದನ್ನು ಕೂಡ. ಆದರೆ, ಹಾಗೆ ಮಾಡುವಾಗ ನಮ್ಮಲ್ಲಿ ಪ್ರಜ್ಞೆ ಇರುವುದು ಖಾತ್ರಿ ಇರಬೇಕು ಮತ್ತು ತಪ್ಪು ಅಲ್ಲವೇ ಅಲ್ಲ ಅನ್ನುವ ಆತ್ಮವಿಶ್ವಾಸ ಕೂಡ!

ಹಾಗೆಂದೇ ಬುದ್ಧ ನಡುರಾತ್ರಿಯಲ್ಲಿ ಸಂಸಾರ ತೊರೆಯಲು ಸಾಧ್ಯವಾಗಿದ್ದು. ರಾಮ ವಾಲಿಯನ್ನು ಕೊಲ್ಲುವುದೂ ಕೃಷ್ಣ ಕುರುಕ್ಷೇತ್ರದಲ್ಲಿ ತಂತ್ರಗಳನ್ನು ಹೂಡುವುದೂ ಸಾಧ್ಯವಾಗಿದ್ದು. ಹಾಗೆಂದೇ ನಮ್ಮ ಸಾಲು ಸಾಲು ಸಂತರೆಲ್ಲ ಲೌಕಿಕ ಜೀವನ ವಿಮುಖರಾಗಿ ತಮ್ಮತಮ್ಮದೆ ಹಾದಿ ಕಂಡುಕೊಳ್ಳಲು ಸಾಧ್ಯವಾಗಿದ್ದು. ಅವರೆಲ್ಲರ ಬದುಕನ್ನೊಮ್ಮೆ ಗಮನಿಸಿ ನೋಡಿ. ಅವರವರ ಕಾಲಘಟ್ಟದಲ್ಲಿ ಅವರಿಟ್ಟ ಹೆಜ್ಜೆ, ಬೇಲಿ ದಾಟಿದ ಘಳಿಗೆಗಳು ‘ತಪ್ಪು’ ಅಂತಲೇ ಪರಿಗಣಿಸಲ್ಪಟ್ಟಿದ್ದವು. ಮಾಡುವುದೇ ಆದರೆ ಇಂಥ ತಪ್ಪುಗಳನ್ನೆ ಮಾಡಬೇಕು. ಸರಿಯಾಗಿರುವಂಥವನ್ನು!

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು. ಪ್ರಜ್ಞೆಯಿಂದ  ಪ್ರಾಪ್ತಿಯಾಗುವುದು- ಇರುವಿಕೆ ಮತ್ತು ಗಮನಿಸುವಿಕೆ; ಗಮನಿಸುವಿಕೆಯಿಂದ ಜ್ಞಾನ; ಜ್ಞಾನದ ಬದುಕುವಿಕೆಯಿಂದ ವಿವೇಕ;  ವಿವೇಕಪೂರ್ಣ ಬದುಕಿನಲ್ಲಿ ಪ್ರೇಮ, ಅನುಕಂಪ, ಸಮಭಾವ, ಸಹಯೋಗ, ಸಮಗ್ರದಲ್ಲಿ  ಸ್ನೇಹ ಸಾಮರಸ್ಯ ಇರುವುದರಿಂದ ತಪ್ಪುಗಳಾಗುವುದು ಅಸಂಭವ. ತಪ್ಪುಗಳಾಗದಂತೆ  ನೋಡಿಕೊಳ್ಳಬೇಕು ಎಂಬುದು ನಕಾರಾತ್ಮಕ ಧೋರಣೆ; ಸದ್ಭಾವದಲ್ಲಿ ಬದುಕಬೇಕು ಎಂಬುದು ಸಕಾರಾತ್ಮಕ.

           ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ

            ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯಾ

            ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ

            ಕೂಡಲ ಸಂಗನ ಶರಣರ ಅನುಭಾವದ ಬಲದಿಂದ

            ಎನ್ನ ಭವದ ಕೇಡು ನೋಡಯ್ಯ..

–         ಎನ್ನುತ್ತಾರೆ ಬಸವಣ್ಣ.

ವಾಸ್ತವದಲ್ಲಿ ನಾವು ‘ಏನು ಆಗಿರುವೆವೋ’ ಅದನ್ನು ಬದುಕದಿರುವುದು ಇಲ್ಲವೇ ನಾವು’ಏನು ಅಲ್ಲವೋ’ ಅದನ್ನು ಬದುಕುವ ಪ್ರಯತ್ನವೇ ನಮ್ಮೆಲ್ಲ ತಪ್ಪುಗಳಿಗೆ ಕಾರಣವಾಗಿದೆ.

1 Comment

Leave a Reply