ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? : ಪರಹಂಸ ವಿಚಾರಧಾರೆ

ಶ್ರೀರಾಮಕೃಷ್ಣ ಪರಮಹಂಸರು ಮತ್ತು ಮಾರ್ವಾಡಿ ಭಕ್ತರ ನಡುವೆ ನಡೆದ ಆಧ್ಯಾತ್ಮಿಕ ಪ್ರಶ್ನೋತ್ತರ ಸಂಭಾಷಣೆಯ ತುಣುಕು ಇಲ್ಲಿದೆ. “ಶಾಸ್ತ್ರಗಳನ್ನೇನೊ ಓದುತ್ತೇವೆ, ಆದರೂ ಜೀವನ ಮಾರ್ಪಾಟು ಹೊಂದುತ್ತಿಲ್ಲವಲ್ಲ?” ಅನ್ನುವ, ಈಗಿನ ನಾವು ಈ ಕಾಲಕ್ಕೂ ಕೇಳಿಕೊಳ್ಳುತ್ತಿರುವ ಪ್ರಶ್ನೆಗೂ ಉತ್ತರ ಇಲ್ಲಿದೆ । ಆಕರ ಕೃಪೆ: ‘ಎಮ್’ ಎಂದೇ ಖ್ಯಾತರಾದ ಮಾಸ್ಟರ್ ಮಹಾಶಯರು ದಾಖಲಿಸಿ ಸಂಕಲಿಸಿದ ಶ್ರೀರಾಮಕೃಷ್ಣ ವಚನವೇದ

ಮಾರ್ವಾಡಿ ಭಕ್ತ : “ಹೇ ಭಗವಂತ! ನಾನು ನಿನ್ನ ದಾಸ” ಎಂದು ಹೇಳುತ್ತಿರುವ ಈ ‘ನಾನು’ ಎಂಬುದು ಯಾವುದು?

ಪರಮಹಂಸರು : ಲಿಂಗಶರೀರ ಅಥವಾ ಜೀವಾತ್ಮ ಮನಸ್ಸು. ಬುದ್ಧಿ, ಚಿತ್ತ, ಅಹಂಕಾರ ಈ ನಾಲ್ಕೂ ಸೇರಿ ಲಿಂಗಶರೀರವಾಗಿದೆ.

ಮಾರ್ವಾಡಿ ಭಕ್ತ : ಜೀವಾತ್ಮ ಎಂಬುದು ಯಾವುದು? ಚಿತ್ತ ಎಂಬುದು ಯಾವುದು?

ಶ್ರೀರಾಮಕೃಷ್ಣರು : ಅಷ್ಟಪಾಶಬಂಧಿತ ಆತ್ಮ. ಯಾವುದರಿಂದ “ಅಹಂ’ ಎಂಬುದು ಉದ್ಭವವಾಗುವುದೊ

ಅದು ಚಿತ್ತ.

ಮಾರ್ವಾಡಿ ಭಕ್ತ : ಸತ್ತ ಮೇಲೆ ಏನಾಗುತ್ತದೆ?

ಪರಮಹಂಸರು: ಗೀತೆಯ ಪ್ರಕಾರ, ಸಾಯುವಾಗ ಯಾವ ಭಾವನೆ ಬರುತ್ತದೆಯೊ, ಅದರಂತೆ ಮುಂದಿನ ಜನ್ಮವಾಗುತ್ತದೆ. ಭರತರಾಜ ಕೊನೆಗಾಲದಲ್ಲಿ ಜಿಂಕೆಯ ಚಿಂತನೆ ಮಾಡಿ ಜಿಂಕೆಯಾಗಿ ಹುಟ್ಟಿದ. ಆದ್ದರಿಂದ ಭಗವಂತನನ್ನು ಪಡೆಯುವುದಕ್ಕೆ ಸಾಧನೆ ಆವಶ್ಯಕ. ಹಗಲು ಇರುಳು ಆತನ ಚಿಂತನೆ ಮಾಡಿದರೆ, ಸಾಯುವಾಗಲೂ ಆತನ ಚಿಂತನೆಯೇ ಬರುತ್ತದೆ. ಆಗ ಸತ್ತಮೇಲೆ ಭಗವಂತನನ್ನು ಹೊಂದಬಹುದು.

ಮಾರ್ವಾಡಿ ಭಕ್ತ : ವಿಷಯ ವಸ್ತುಗಳನ್ನು ಕಂಡರೆ ನಮಗೇಕೆ ವೈರಾಗ್ಯ ಉಂಟಾಗೋದಿಲ್ಲ?”

ಪರಮಹಂಸರು: ಮಾಯೆ ಎಂದರೆ ಇದೇನೆ, ಮಾಯೆಯ ದೆಸೆಯಿಂದ ಸತ್‌ ಅಸತ್ತಾಗಿಯೂ, ಅಸತ್‌ ಸತ್ತಾಗಿಯೂ ಕಾಣಿಸಿಕೊಳ್ಳುತ್ತದೆ. ಸತ್ತ್‌ ಅಂದರೆ ನಿತ್ಯವಾದ್ದು – ಪರಬ್ರಹ್ಮ. ಅಸತ್‌ ಅಂದರೆ ಅನಿತ್ಯವಾದ್ದು – ಸಂಸಾರ.

ಮಾರ್ವಾಡಿ ಭಕ್ತ: ಶಾಸ್ತ್ರಗಳನ್ನೇನೊ ಓದುತ್ತೇವೆ, ಆದರೂ ಜೀವನ ಮಾರ್ಪಾಟು ಹೊಂದುತ್ತಿಲ್ಲವಲ್ಲ?

ಪರಮಹಂಸರು; ಸುಮ್ಮನೆ ಓದಿಬಿಟ್ಟರೆ ಏನಾದೀತು? ಸಾಧನೆ, ತಪಸ್ಸು ಬೇಕು. ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? ಅರೆದು ಕುಡಿಯಬೇಕು. ಈ ಸಂಸಾರ ಒಂದು ಮುಳ್ಳು ಗಿಡ. ಕೈ ಹಾಕಿತು ಅಂದರೆ ತರಚಿ ರಕ್ತ ಸುರಿಯಲಾರಂಭಿಸುತ್ತದೆ. ಒಂದು ಮುಳ್ಳುಗಿಡ ತೆಗೆದುಕೊಂಡು ಬಂದು ಅದರ ಹತ್ತಿರ ಕುಳಿತುಕೊಂಡು ಜಪಿಸು, “ಈ ಗಿಡ ಸುಟ್ಟುಹೋಯಿತು, ಈ ಗಿಡ ಸುಟ್ಟುಹೋಯಿತು” ಎಂದು. ಆಗ ಅದಷ್ಟಕ್ಕೆ ಅದು ಸುಟ್ಟುಹೋಗುತ್ತದೆಯೆ? ಜ್ಞಾನಾಗ್ನಿಯನ್ನು ಹೊತ್ತಿಸಿಕೊ. ಆ ಆಗ್ನಿಯಿಂದ ಅದನ್ನು ಸುಡು. ಆಗಮಾತ್ರವೇ ಅದು ಸುಟ್ಟು ಬೂದಿಯಾಗುವುದು.

ಸಾಧನೆಯ ಸಮಯದಲ್ಲಿ ಸ್ವಲ್ಪ ಹೆಚ್ಚು ಶ್ರಮ ತೆಗೆದುಕೊಳ್ಳಬೇಕು. ಆ ಬಳಿಕ ರಾಜರಸ್ತೆ. ನದಿ ಡೊಂಕಾಗಿ ಹರಿಯುವ ಜಾಗದಲ್ಲಿ ಸ್ವಲ್ಪ ಶ್ರಮ ತೆಗೆದುಕೊಂಡು ಮುಂದುವರಿದು, ಬಳಿಕ ಅನುಕೂಲವಾದ ಗಾಳಿ ದೊರೆತಾಗ ದೋಣಿಯನ್ನು ಸುಮ್ಮನೆ ತೇಲಿಬಿಡು. 

ಎಲ್ಲಿಯವರೆಗೆ ನೀನು ಮಾಯೆಯ ಮನೆಯೊಳಗೆ ಇರುವೆಯೊ, ಎಲ್ಲಿಯನರೆಗೆ ಮಾಯೆಯ ಮೋಡ ಮೇಲೆ ಕವಿದುಕೊಂಡಿರುತ್ತದೆಯೊ, ಅಲ್ಲಿಯವರೆಗೆ ಜ್ಞಾನಸೂರ್ಯನ ಪ್ರಭಾವ ಗೊತ್ತಾಗದು. ಮಾಯೆಯ ಗೃಹವನ್ನು ತ್ಯಜಿಸಿ ಹೊರಗಡೆ ಬಂದು ನಿಂತುಕೊಂಡರೆ ಜ್ಞಾನಸೂರ್ಯ ಅವಿದ್ಯೆಯನ್ನು ನಾಶಮಾಡುತ್ತಾನೆ.

ಮನೆಯ ಒಳಗೆ ನಿಂತಕೆ ಲೆನ್ಸು ಕಾಗದವನ್ನು ಸುಡಲಾರದು. ಮನೆಯಿಂದ ಹೊರಗೆ ಬಂದು ನಿಂತರೆ ಬಿಸಿಲು ಲೆನ್ಸಿನ ಮೇಲೆ ಬೀಳುತ್ತದೆ. ಆಗ ಕಾಗದ ಸುಟ್ಟು ಹೋಗುತ್ತದೆ. ಹಾಗೇ, ಆಕಾಶ ಮೋಡವಾಗಿದ್ದರೂ ಲೆನ್ಸು ಕಾಗದವನ್ನು ಸುಡಲಾರದು. ಮೇಘ ಚದುರಿಹೋದರೆ, ಆಗ ಅದು ಸುಟ್ಟು ಹೋಗುತ್ತದೆ. ಹಾಗೇ, ಕಾಮಕಾಂಚನದ ಮನೆಯನ್ನು ಬಿಟ್ಟು ಸ್ವಲ್ಪ ಹೊರಗೆ ನಿಂತರೆ ಅವಿದ್ಯೆ ಸುಟ್ಟುಹೋಗುತ್ತದೆ.

Leave a Reply