ಎಲ್ಲ ಲೆಕ್ಕಾಚಾರಗಳನ್ನು ಮೀರಿದ ಶೂನ್ಯವೊಂದಿದೆ! : ಅಧ್ಯಾತ್ಮ ಡೈರಿ

ವಾಸ್ತವ ಹಾಗಿರಲೇಬೇಕೆಂದಿಲ್ಲ. ಯಾವುದೇ ವ್ಯಕ್ತಿಗೆ ಪ್ರತಿಯೊಂದರ ಮೇಲೂ ಒಂದು ಅಭಿಪ್ರಾಯ ಇರಲೇಬೇಕು ಅಂತ ನಿರೀಕ್ಷಿಸೋದೇ ಒಂದು ಹೇರಿಕೆ. ನಮಗೆ ಆ ಹಕ್ಕಿಲ್ಲ. ಯಾವುದೇ ವ್ಯಕ್ತಿಗೆ ಗುಲಾಬಿ ಇಷ್ಟವಾದರೆ ಅವರು ಚೆಂಡು ಹೂವನ್ನು ಬೇಕಂತಲೇ ಇಷ್ಟಪಡುತ್ತಿಲ್ಲ, ಅವರಿಗೆ ಚೆಂಡುಹೂ ಅಸಹ್ಯ ಅಂತ ತೀರ್ಪು ಕೊಡಬೇಕಿಲ್ಲ. ಆ ವ್ಯಕ್ತಿಗೆ ಚೆಂಡುಹೂವಿನ ಪರಿಚಯವೇ ಇಲ್ಲದಿರಬಹುದು. ಅಥವಾ ಅವರಿಗೆ ಅದರ ಬಗ್ಗೆ ಆಕರ್ಷಣೆ ಬೆಳೆದಿಲ್ಲದೆ ಇರಬಹುದು. ಅವರಿಗೆ ಅದರ ಬಗ್ಗೆ ಯಾವುದೇ ಅಭಿಪ್ರಾಯವೂ ಇಲ್ಲದೆ ಇರಬಹುದು… । ಚೇತನಾ ತೀರ್ಥಹಳ್ಳಿ

ಒಂದು ಸರಿಯಾಗಿದೆ ಅಂದರೆ

ಮತ್ತೊಂದು ತಪ್ಪೆಂದಲ್ಲ.

ಒಂದನ್ನು ಸುಂದರವೆಂದರೆ

ಮತ್ತೊಂದು ಕುರೂಪ ಎಂದಲ್ಲ.

ಒಂದು ಹಿರಿದೆಂದರೆ,

ಮತ್ತೊಂದು ಕಿರಿದೆಂದಲ್ಲ.

ಶೂನ್ಯ, ಬೈನರಿಯನ್ನು ಮೀರಿದ್ದು.

ಅತೀತವೂ ಬೈನರಿಯನ್ನು ಮೀರಿದ್ದೇ.

ಈ ಶೂನ್ಯ ಮತ್ತು ಅತೀತ ಯಾವತ್ತೂ

ಅನಂತ ಸಾಧ್ಯತೆಯ ದಿಬ್ಬಗಳು.

ಪ್ರತಿಯೊಂದನ್ನೂ ಹೌದು ಅಥವಾ ಇಲ್ಲ, ಸರಿ ಅಥವಾ ತಪ್ಪು, ಪರ ಅಥವಾ ವಿರೋಧ, ಸ್ನೇಹ ಅಥವಾ ವೈರ, ಪ್ರೀತಿ ಅಥವಾ ದ್ವೇಷ – ಇತ್ಯಾದಿ ಬೈನರಿಯಲ್ಲೇ ನೋಡುವ ರೂಢಿ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಕುತ್ತಿಗೆಯ ಮೇಲೆ ಕತ್ತಿ ಇಟ್ಟಂತೆ ನಾಲಿಗೆ ಹರಿತಗೊಳಿಸಿ ಬಹುತೇಕರು ನಿಮಗೊಂದು ಹಣೆಪಟ್ಟಿ ಹಚ್ಚಲು ಕಾದು ಕೂತಿರುತ್ತಾರೆ. ಮತ್ತೊಬ್ಬರ ಪಾಲಿಗೆ ಹಾಗೆ ಕೂತವರಲ್ಲಿ ನೀವೂ ಇರುತ್ತೀರಿ, ನೆನಪಿರಲಿ!

ಆದರೆ ವಾಸ್ತವ ಹಾಗಿರಲೇಬೇಕೆಂದಿಲ್ಲ. ಯಾವುದೇ ವ್ಯಕ್ತಿಗೆ ಪ್ರತಿಯೊಂದರ ಮೇಲೂ ಒಂದು ಅಭಿಪ್ರಾಯ ಇರಲೇಬೇಕು ಅಂತ ನಿರೀಕ್ಷಿಸೋದೇ ಒಂದು ಹೇರಿಕೆ. ನಮಗೆ ಆ ಹಕ್ಕಿಲ್ಲ. ಯಾವುದೇ ವ್ಯಕ್ತಿಗೆ ಗುಲಾಬಿ ಇಷ್ಟವಾದರೆ ಅವರು ಚೆಂಡು ಹೂವನ್ನು ಬೇಕಂತಲೇ ಇಷ್ಟಪಡುತ್ತಿಲ್ಲ, ಅವರಿಗೆ ಚೆಂಡುಹೂ ಅಸಹ್ಯ ಅಂತ ತೀರ್ಪು ಕೊಡಬೇಕಿಲ್ಲ. ಆ ವ್ಯಕ್ತಿಗೆ ಚೆಂಡುಹೂವಿನ ಪರಿಚಯವೇ ಇಲ್ಲದಿರಬಹುದು. ಅಥವಾ ಅವರಿಗೆ ಅದರ ಬಗ್ಗೆ ಆಕರ್ಷಣೆ ಬೆಳೆದಿಲ್ಲದೆ ಇರಬಹುದು. ಅವರಿಗೆ ಅದರ ಬಗ್ಗೆ ಯಾವುದೇ ಅಭಿಪ್ರಾಯವೂ ಇಲ್ಲದೆ ಇರಬಹುದು.

ಬೇಕೆಂದೇ ಒಂದು ವಸ್ತು, ಬಣ್ಣ, ಆಚರಣೆ, ಆಹಾರ ಇತ್ಯಾದಿಗಳನ್ನು ತರತಮ ದೃಷ್ಟಿಯಿಂದ ನೋಡುವುದು ಬೇರೆ. ಯಾವುದೇ ಮೇಲು ಕೀಳಿನ ಅಭಿಪ್ರಾಯವಿಲ್ಲದೆ ಆಯ್ಕೆಗೋಸ್ಕರ ತರ-ತಮ ಮಾಡೋದು ಬೇರೆ. ಇದು ಬಟ್ಟೆ ಆಯ್ಕೆ ಮಾಡುವಂತೆ. ಅಂಗಡಿಯಲ್ಲಿ ಸಾಕಷ್ಟು ಬಟ್ಟೆ ಇಷ್ಟವಾದರೂ ಕೊನೆಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಒಂದು ಆಯ್ಕೆ ಮಾಡುತ್ತೇವೆ. ಹಾಗಂತ ಉಳಿದ ಬಟ್ಟೆಗಳು ಕಳಪೆ ಅಂತ ನಮಗೆ ಅನಿಸಿರೋದಿಲ್ಲ. ಒಂದನ್ನು ಆಯ್ಕೆ ಮಾಡಿದ್ದಕ್ಕೆ, ಮಾಡಿದವರ ಕೊರಳು ಪಟ್ಟಿ ಹಿಡಿದು ಮಿಕ್ಕವನ್ನು ತಿರಸ್ಕಾರ ಮಾಡಿದೆ ಅಂತ ತಕರಾರು ತೆಗಿಯಲು ಬರೋದಿಲ್ಲ.

ವಸ್ತು, ಒಂದೇ ಇದ್ದಾಗ ಅಲ್ಲಿ ಆಯ್ಕೆಯ ಪ್ರಶ್ನೆ ಇರೋದಿಲ್ಲ. ಎರಡಿದೆ ಅಂತಾದ ಕೂಡಲೇ ಅಲ್ಲಿ ಆಯ್ಕೆಯ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಬಹುತೇಕವಾಗಿ, ಎರಡರಲ್ಲಿ ಒಂದರ ಆಯ್ಕೆ ಅನುಕೂಲದ ಅನಿವಾರ್ಯವೇ ಹೊರತು ಮತ್ತೊಂದರ ತಿರಸ್ಕಾರವಲ್ಲ.

ಆದರೆ,  ಅದೂ ಇಷ್ಟ, ಇದೂ ಇಷ್ಟ ಎಂದು ಎರಡೂ ಕಡೆಯಲ್ಲೂ ನಯವಾಗಿರುತ್ತಲೇ ಅವಕಾಶ ಬಂದಾಗ ಒಂದನ್ನು ಗಪ್ಪನೆ ಹಿಡಿದುಕೊಳ್ಳೋದು ಮಾತ್ರ ನಯವಂಚಕತನ!! ಆಯ್ಕೆ ತಪ್ಪಲ್ಲ, ಮಧ್ಯದಲ್ಲಿ ನಿಂತು ಗಾಳಿ ಬಂದತ್ತ ತೂರಿಕೊಳ್ಳೋದು ಸರಿಯಲ್ಲ ಅಷ್ಟೇ.

ಹೀಗೆ ಆಯ್ಕೆಯ ಪ್ರಶ್ನೆ ಬಂದಾಗ ತೀರ್ಮಾನ ಮಾಡಲಾಗದೇ, ಎರಡರ (ಅಥವಾ ಯಾವುದರ) ಮೇಲೂ ಯಾವುದೇ ಅಭಿಪ್ರಾಯ ಮೂಡದೇ ಹೋದಾಗ ತಟಸ್ಥವಾಗಿರೋದು ಉತ್ತಮ. ಈ ತಟಸ್ಥ ಸ್ಥಿತಿಯನ್ನು ಎಲ್ಲ ಅಂಕಿಸಂಕೆಯನ್ನೂ ಮೀರಿದ ‘ಸೊನ್ನೆ’ಗೆ ಹೋಲಿಸಬಹುದು.

ಈ ಸೊನ್ನೆಯೂ ಒಂದು ಅಭಿಪ್ರಾಯವೇ. ಆದರೆ ಗಾಳಿ ಬಂದಾಗ ತೂರಿಕೊಳ್ಳುವ ಅವಕಾಶವಾದಿ ಅಭಿಪ್ರಾಯವಲ್ಲ.

ಇದು ನಿರಂತರ ಅವಲೋಕನದಿಂದ ಎಂದಾದರೂ ಯಾವುದಾದರೂ ಅಭಿಪ್ರಾಯ ತಳೆಯಬಹುದಾದ ಸಾಧ್ಯತೆ. ಮನಸ್ಸು ಗೊಂದಲದ ಗೂಡಾದಾಗ ಈ ಸಾಧ್ಯತೆಯಲ್ಲಿ ನೆಲೆಸಿ ಅವಲೋಕನ ಮಾಡುವುದು ಜಾಣತನ.

ಇಲ್ಲಿ ನೆಲೆಸಲು ಸಾಧ್ಯವಾಗೋದು, ನೆಲೆಸಿದವರನ್ನು ಒಪ್ಪಿಕೊಳ್ಳಲು ಸಾಧ್ಯವಾಗೋದು, “ಆಚೆ ಈಚೆಗಳನ್ನೂ ಮೀರಿದ ಅತೀತವೊಂದಿದೆ, ಎಲ್ಲ ಲೆಕ್ಕಾಚಾರಗಳನ್ನೂ ಮೀರಿದ ಶೂನ್ಯವೊಂದಿದೆ” ಎಂದು ಅರಿತಾಗ ಮಾತ್ರ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply