ಕಾಣ್ಕೆ ಮತ್ತು ನೋಟ : ಅಧ್ಯಾತ್ಮ ಡೈರಿ

ಮತ್ತೊಬ್ಬರು ಕಂಡುಕೊಂಡ ಕಾಣ್ಕೆಯನ್ನಿಟ್ಟುಕೊಂಡು ನಾವು ‘ಕಾಣುತ್ತಿರುವ’ ಬಗೆ ಸರಿಯಾಗಿದೆಯೋ ಇಲ್ಲವೋ ಎಂದು ಒರೆಹಚ್ಚಿ ನೋಡಿಕೊಳ್ಳಬಹುದಷ್ಟೆ ಹೊರತು ಅವರ ನೋಟದಿಂದ ನಮ್ಮ ಕಾಣ್ಕೆಯನ್ನು ಪಡೆಯಲಾಗದು... । ಚೇತನಾ ತೀರ್ಥಹಳ್ಳಿ

‘ಕಂಡಿದ್ದೆಲ್ಲವೂ’ ಕಾಣ್ಕೆ; ನೋಡಿದ್ದು ‘ನೋಟ’ವಷ್ಟೇ.

ಒಬ್ಬರು ಕಂಡುಕೊಂಡ ಕಾಣ್ಕೆ ಅವರದಷ್ಟೆ ಆಗಿರುತ್ತದೆ. ಹೇಗೆ ಹೊರಗಣ್ಣಿನ ನೋಟ ವ್ಯಕ್ತಿಗಿಂತ ವ್ಯಕ್ತಿಗೆ, ಜೀವಿಯಿಂದ ಜೀವಿಗೆ ಭಿನ್ನವೋ, ಹಾಗೇ ಕಾಣ್ಕೆಗಳೂ ಭಿನ್ನವೇ.

ಮತ್ತೊಬ್ಬರು ಕಂಡುಕೊಂಡ ಕಾಣ್ಕೆಯನ್ನಿಟ್ಟುಕೊಂಡು ನಾವು ‘ಕಾಣುತ್ತಿರುವ’ ಬಗೆ ಸರಿಯಾಗಿದೆಯೋ ಇಲ್ಲವೋ ಎಂದು ಒರೆಹಚ್ಚಿ ನೋಡಿಕೊಳ್ಳಬಹುದಷ್ಟೆ ಹೊರತು ಅವರ ನೋಟದಿಂದ ನಮ್ಮ ಕಾಣ್ಕೆಯನ್ನು ಪಡೆಯಲಾಗದು.

ಯಾರೂ ಮತ್ತೊಬ್ಬರ ಕಾಣ್ಕೆಯ ಮೂಲಕ ತಮ್ಮ ಅರಿವನ್ನು ಕಟ್ಟಿಕೊಳ್ಳಲಾಗದು. ಆತ್ಯಂತಿಕವಾದುದನ್ನು ದಕ್ಕಿಸಿಕೊಳ್ಳಲಾಗದು. ಲೌಕಿಕದಲ್ಲಿ ಸತ್ಯ ಸ್ಥಾಯಿಯಲ್ಲ, ಸಾಪೇಕ್ಷ. ಆದ್ದರಿಂದ ನಮ್ಮ ನಮ್ಮ ಸಂದರ್ಭ, ಸನ್ನಿವೇಶ, ಉದ್ದೇಶ, ವ್ಯವಹಾರದ ಮಿತಿಯಲ್ಲಿ ನಮ್ಮ ನಮ್ಮ ಕಾಣ್ಕೆಗಳು ಇರಬೇಕು, ಇರುತ್ತವೆ.

ಮಹನೀಯರು, ಸಾಧಕರೇ ಹಾಗೆ ಹೇಳಿಯಾಗಿರುವಾಗ ಮತ್ತೊಂದು ಬಗೆಯಲ್ಲಿ ಆಲೋಚಿಸಲು ನಾವೆಷ್ಟು ಯೋಗ್ಯರು ಅನ್ನುವ ಸಂದೇಹ ಬೇಡವೇ ಬೇಡ. ಆ ಸಾಧಕ/ಮಹನೀಯರಿಗೂ ಹಿಂದೆ ಅವರು ಹೇಳಿದ್ದಕ್ಕಿಂತ ಭಿನ್ನವಾಗಿ ಕಂಡವರು, ಹೇಳಿದವರು ಇದ್ದೇ ಇದ್ದಾರೆ. ಮತ್ತು ಈ ಮಹನೀಯರು “ನಾವೆಷ್ಟರವರು?” ಅಂದುಕೊಂಡು ಕುಳಿತಿದ್ದರೆ, ಅವರು ಇಂದು ಏನಾಗಿದ್ದಾರೋ ಅದಾಗಿರುತ್ತಿರಲಿಲ್ಲ.

ನಮಗೆ ಪ್ರತಿಯೊಬ್ಬರಿಗೂ ನಮ್ಮದೇ ವಿಚಾರ, ಅನ್ನಿಸಿಕೆ, ಪರಿಕಲ್ಪನೆ, ಸಿದ್ಧಾಂತ, ವಾದ, ಅಭಿಮತ, ಅಭಿಪ್ರಾಯ, ತರ್ಕ – ವಾದಗಳನ್ನು ಹೊಂದಿರುವ ಹಕ್ಕಿದೆ, ಸ್ವಾತಂತ್ರ್ಯವಿದೆ, ಅರ್ಹತೆಯೂ ಇದೆ.

ಆದರೆ, ಈ ಅಂಶಗಳು ನಮ್ಮ ಸಹಜೀವಿಗಳನ್ನು ಅವಮಾನಿಸುವಂತೆ, ಶೋಷಿಸುವಂತೆ, ಕೀಳಾಗಿ ಕಾಣುವಂತೆ, ನಾವೇ ಹೆಚ್ಚೆಂದು ಬೀಗುವಂತೆ, ಶ್ರೇಷ್ಟತೆಯ ವ್ಯಸನ ಬೆಳೆಸುವಂತೆ ಇರಬಾರದು – ಇದು ಬಹಳ ಮುಖ್ಯ.

ಹಾಗೆಯೇ, “ನನ್ನ ವಿಚಾರ ತಪ್ಪಿದ್ದರೂ ಇರಬಹುದು” ಅನ್ನುವ ವಿನಯ ಇರಬೇಕಾದುದೂ ಮುಖ್ಯ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply