ಆತ್ಮ ಮತ್ತು ಅಹಂ : ಬೆಳಗಿನ ಹೊಳಹು

ನಿಜವಾಗಿಯೂ ಒಬ್ಬ ಮನುಷ್ಯ ಯಾರು ಎಂದರೆ, ಅದು ಅವನ ಆತ್ಮ. ಆದರೆ ಅವನು ಇತರರಿಗೆ ಕಾಣಿಸಿಕೊಳ್ಳುವ ಬಗೆಯೇ ಅವನ ಅಹಂ! ~ ( Atmavarta article -1-Shivoham Jay ); ಕನ್ನಡಕ್ಕೆ: ಚಿದಂಬರ ನರೇಂದ್ರ

ಯುವಕನೊಬ್ಬ ಸಂತನನ್ನು ಪ್ರಶ್ನೆ ಮಾಡಿದ,
“ ಅಹಂ ಎಂದರೆ ಏನು? “

ಸಂತ, ಆ ಯುವಕನಿಗೆ ಮರಳಿ ಪ್ರಶ್ನೆ ಮಾಡಿದ, “ ನೀನು ಯಾರು?”

ಯುವಕ, ಸಂತನಿಗೆ ತನ್ನ ಹೆಸರು ಹೇಳಿದ,
“ ನಾನು ಮೋಹನ “

“ನಾನು ನಿನ್ನ ಹೆಸರು ಕೇಳುತ್ತಿಲ್ಲ, ನೀನು ಯಾರೆಂದು ಪ್ರಶ್ನೆ ಮಾಡುತ್ತಿದ್ದೇನೆ“ ಸಂತ ಮತ್ತೆ ಕೇಳಿದ.

“ನಾನೊಬ್ಬ ವಿದ್ಯಾರ್ಥಿ” ಯುವಕ ಉತ್ತರಿಸಿದ.

“ ಅದು ನಿನ್ನ ಬದುಕಿನ ಒಂದು ಸ್ಥಿತಿ, ನೀನು ಯಾರು? ಅದನ್ನ ಹೇಳು” ಸಂತ ಪಟ್ಟು ಬಿಡಲಿಲ್ಲ.

ನಾನು ಇಂಥಿಂಥವರ ಮಗ ಎಂದು ಯುವಕ ಉತ್ತರಿಸಿದ.

“ ಅದು ನಿನ್ನ ತಂದೆ ತಾಯಿಯ ಪರಿಚಯವಾಯ್ತು, ನೀನಿನ್ನೂ ನೀನು ಯಾರೆಂದು ಹೇಳಲಿಲ್ಲ” ಸಂತ ನಕ್ಕ.

ನಾನು ಬೆಂಗಾಲಿ.

ಅದು ನಿನ್ನ ಮಾತೃಭಾಷೆ.

ನಾನು ಹಿಂದೂ, ಭಾರತೀಯ.

ಅವು ನಿನ್ನ ಧರ್ಮ ಮತ್ತು ದೇಶ.

“ ನಾನು ಒಬ್ಬ ಮನುಷ್ಯ” ಯುವಕ, ಸಂತನ ಪ್ರಶ್ನೆಗಳ ಸುರಿಮಳೆಗೆ ಸುಸ್ತಾದ.

“ ಅದು ಜಗತ್ತಿನಲ್ಲಿ ನಿನ್ನ ಪ್ರಾಣಿ ಪ್ರಬೇಧ, ನೀನು ಯಾರು? “ ಸಂತ ಮತ್ತೆ ಪ್ರಶ್ನೆ ಮಾಡಿದ.

ಯುವಕ ನಿರುತ್ತರನಾದ.

ಸಂತ ತನ್ನ ಮಾತು ಮುಂದುವರೆಸಿದ,
“ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವೇದಾಂತ ಸಹಾಯ ಮಾಡುತ್ತದೆ. ವೇದಾಂತದ ಪ್ರಕಾರ, ಮನುಷ್ಯ ಆಳದಲ್ಲಿ, ಅವನ ತಿರುಳಿನಂತಿರುವ (essence) ಆತ್ಮ, ಈ ಯಾವ ಬಾಹ್ಯ ವಿವರಗಳಿಂದಲೂ ಆತ್ಮ ಗುರುತಿಸಲ್ಪಡುವುದಿಲ್ಲ, ಯಾವ ಗುರುತಿಸುವಿಕೆಯಿಂದಲೂ ಅದು ಪ್ರಭಾವಿತವಾಗಿಲ್ಲ. ನಿಜವಾಗಿಯೂ ಒಬ್ಬ ಮನುಷ್ಯ ಯಾರು ಎಂದರೆ, ಅದು ಅವನ ಆತ್ಮ. ಆದರೆ ಅವನು ಇತರರಿಗೆ ಕಾಣಿಸಿಕೊಳ್ಳುವ ಬಗೆಯೇ ಅವನ ಅಹಂ. ಆತ್ಮ ಸತ್ಯ, ಅಹಂ ಮಿಥ್ಯ. ಆತ್ಮ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ. ಆದರೆ ಅಹಂ, ಅಜ್ಞಾನ ಕಾರಣವಾಗಿ ಹುಟ್ಟುತ್ತದೆ ಮತ್ತು ಅರಿವು ಮೂಡಿದಾಗ ಸತ್ತು ಹೋಗುತ್ತದೆ.”

Leave a Reply