ಗೋಡೆಗಳನ್ನು ಕೆಡವಿದರೆ ನಿಂತ ಜಾಗ ವಿಸ್ತಾರವಾಗುವುದಿಲ್ಲವೇ? ಬಯಲು ವಿಶಾಲವಲ್ಲವೇ? ಹಾಗೆಯೇ ಹೆಸರು, ಮನೆತನ, ಜಾತಿ, ಸಮಾಜ ಎಂಬೆಲ್ಲ ಗೋಡೆಗಳನ್ನು ಕೆಡವುತ್ತಾ ಕೆಡವುತ್ತಾ ಸಮಷ್ಟಿಯ ಬಯಲಲ್ಲಿ ನಿಲ್ಲಲು ಪ್ರಯತ್ನಿಸಬೇಕು. ಆಗಷ್ಟೇ ಬಯಲಲ್ಲೂ ಸರಿಯಾದ ದಿಕ್ಕಿನ ನಡಿಗೆ ಸಾಧ್ಯವಾಗುವುದು… | ಅಲಾವಿಕಾ
ಸಹಸ್ರಮಾನಗಳ ಹಿಂದೆ ಗೋಡೆಗಳೇ ಇಲ್ಲದ ವಿಶಾಲ ಬಯಲಿನಲ್ಲಿ, ಕಾಡಿನಲ್ಲಿ ಒಂದು ಸಮುದಾಯವಾಗಿ ಅಲೆದಾಡಿಕೊಂಡಿದ್ದ ಮನುಷ್ಯ ಅನಂತರದ ದಿನಗಳಲ್ಲಿ ಪ್ರಕೃತಿಯ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದೆ ಹಾಗೂ ಸಹಜೀವಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ಗುಡಿಸಲುಗಳನ್ನು ಕಟ್ಟಿಕೊಂಡ. ಯಾವಾಗ ಬದುಕು ಬಯಲಿನಿಂದ ಆಲಯಕ್ಕೆ ವರ್ಗಾವಣೆಯಾಯಿತೋ ಆಗ ಸಮುದಾಯ ಭಾವನೆ ಸಂಕುಚಿತವಾಗತೊಡಗಿತು.
ಮನೆ ಎಂದ ಮೇಲೆ ಮನೆಯಲ್ಲಿ ಹಿಡಿಸುವಷ್ಟು ಮಂದಿ ಇರಬೇಕು. ಹೀಗಿದ್ದಾಗ ಅವರು ಸಂಬಂಧಿಗಳಾಗಿದ್ದಾರೆ ಒಳ್ಳೆಯದು. ಈ ಸಂಬಂಧ ಸ್ಥಾಪನೆಗೆ ಒಂದು ಸಂಸಾರ ಕಟ್ಟಿಕೊಳ್ಳಬೇಕು. ಹೀಗೆ ಶುರುವಾದ ಪ್ರಕ್ರಿಯೆ ಅಗಾಧ ಸಮುದಾಯದ ಬಾಂಧವ್ಯದಿಂದ ಪರಸ್ಪರ ಸಂಗಾತಕ್ಕೆ,ಅದಕ್ಕೆ ಸೇರಿದಂತಹ ಸಂಬಂಧಗಳಿಗೆ ಸೀಮಿತವಾಯಿತು. ಮುಂದುವರೆದ ಕಾಲಕ್ಕೆ ಮನೆ ಎನ್ನುವುದು ಸಂಬಂಧಿಗಳನ್ನೂ ದೂರವಿಟ್ಟು ಕೇವಲ ಸಂಗಾತಿಗಳು ಹಾಗೂ ಅವರ ಮಕ್ಕಳು ಇರುವ ತಾಣವಾಯಿತು. ಈಗ ಮಕ್ಕಳು ಹಾಗೂ ಪೋಷಕರು ಒಂದೇ ಸೂರಿನಡಿ ಇರುವ ಕಾಲವೂ ಇಲ್ಲ. ಅದಾಗಲೇ ಸಂಗಾತಿಗಳು ಮನೆಯೊಳಗೆ ಮತ್ತೊಂದು ಮನೆಯನ್ನು ಸೃಷ್ಟಿಸಿಕೊಂಡು, ಅಂದರೆ ಪ್ರತ್ಯೇಕ ಕೋಣೆಗಳನ್ನು ಮಾಡಿಕೊಂಡು ವಾಸಿಸುವ ಪರಿಸ್ಥಿತಿ ಇದೆ. ಮತ್ತು ಈ ಪ್ರತ್ಯೇಕ ಕೋಣೆಗಳಲ್ಲಿಯೂ ಅವರು ತಮ್ಮೊಳಗೇ ತಾವು ವಿಭಜಿತರಾಗುತ್ತಾರೆ, ಪ್ರತ್ಯೇಕಗೊಳ್ಳುತ್ತಾರೆ. ಮತ್ತು ಇಂಥಾ ತಮ್ಮೊಂದಿಗೆ ತಾವೂ ಇಲ್ಲದ ಜಗತ್ತಿನ ಸುಖ ಸವಲತ್ತುಗಳು ಕೀರ್ತಿ ಪ್ರತಿಷ್ಠೆಗಳು ಕುರಿತಾಗಿಯೂ ಅಥವಾ ಅನುದಿನದ ಜೀವನ ನಿರ್ವಹಣೆಯ ಕುರಿತಾಗಿಯೂ ಚಿಂತಿಸುತ್ತಾ ಕಳೆದುಹೋಗುತ್ತಾರೆ.
ನಾವು ಇದೆಂತಹ ಪರಿಸ್ಥಿತಿಗೆ ಬಂದು ತಲುಪಿದ್ದೇವೆ! ಇದಕ್ಕೆ ಪರಿಹಾರವಿಲ್ಲವೆ?
~
ಆಧ್ಯಾತ್ಮವು ಆತ್ಮ ಕೇಂದ್ರಿತ ಬದುಕನ್ನು ಬೋಧಿಸುತ್ತದೆ ಲೌಕಿಕವು ಸ್ವಯಂ ಕೇಂದ್ರಿತ ಬದುಕಿನತ್ತ ಸೆಳೆಯುತ್ತದೆ. ಆತ್ಮವು ಸಕಲ ಜೀವರಾಶಿಗಳಲ್ಲಿ ಪ್ರತಿಬಿಂಬವಾಗುವ ಪರಮ ಪ್ರತಿಬಿಂಬಿತವಾಗುವ ಪರಮ ಅಸ್ತಿತ್ವವೇ ಆಗಿರುವುದರಿಂದ, ಆತ್ಮ ಕೇಂದ್ರಿತವಾದ ಬದುಕು ಎಲ್ಲವನ್ನೂ ಎಲ್ಲರನ್ನೂ ಒಳಗೊಳಿಸಿಕೊಳ್ಳುವ ವೈಶಾಲ್ಯವನ್ನು ಹೊಂದಿರುತ್ತದೆ. ಪರಮಾತ್ಮನು ಸರ್ವಾಂತರ್ಯಾಮಿ. ಪ್ರತಿಯೊಂದು ಜೀವಿಯ ಒಳಗೆ ಇರುವುದು ಪರಮಾತ್ಮನೇ. ಆತ್ಮ ಕೇಂದ್ರಿತ ಚಿಂತನೆಯು ಈ ಸತ್ಯವನ್ನು ಮನವರಿಕೆ ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಗೆ ಪ್ರತಿಯೊಂದರಲ್ಲೂ ತನ್ನನ್ನೇ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ಎಲ್ಲವೂ ಒಂದೇ ಎಂದು ಅರಿವಾದಾಗ ವ್ಯಕ್ತಿ ಸಹಜವಾಗಿ ಎಲ್ಲದರ ಒಳಿತಿಗೆ ಶ್ರಮಿಸುತ್ತಾನೆ/ಳೆ ಪ್ರಾರ್ಥಿಸತೊಡಗುತ್ತಾನೆ/ಳೆ.
ಸ್ವಯಂ ಕೇಂದ್ರಿತ ಚಿಂತನೆಯು ಇದಕ್ಕೆ ಸಂಪೂರ್ಣ ವಿರುದ್ಧ. ಅದು ವ್ಯಕ್ತಿಯನ್ನು ದೇಹದ ಗುರುತಿಗೆ ಸಿಲುಕಿಸುತ್ತದೆ. ಇದರಿಂದ ವ್ಯಕ್ತಿಯು ಜಗತ್ತಿನ ಇತರ ಜೀವಿಗಳಿಗಿಂತ ತನ್ನನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ಪ್ರತ್ಯೇಕತೆ ಆತನಲ್ಲಿ ಅಭದ್ರತೆಯನ್ನು ಉಂಟುಮಾಡುತ್ತದೆ.
ಇಲ್ಲೊಂದು ಪ್ರಶ್ನೆ ಏಳುತ್ತದೆ; ಪ್ರತ್ಯೇಕತೆ ಅಭದ್ರತೆಯನ್ನು ಏಕೆ ಮಾಡಬೇಕು? ಸಹಜವೇ. ಏಕೆಂದರೆ ಮನುಷ್ಯನ ಮೂಲಗುಣ ಸಾಮುದಾಯಿಕ ಬದುಕು. ಸಮುದಾಯದಲ್ಲಿ, ಪ್ರಕೃತಿಯ ಮಡಿಲಿನಲ್ಲಿ ಅಸ್ತಿತ್ವದ ದೇಣಿಗ ಗಳೆಲ್ಲವನ್ನೂ ಪಡೆಯುತ್ತಾ ಇದ್ದವನು ಕಾಲಾಂತರದಲ್ಲಿ ಬುದ್ಧಿ ವೈಪರೀತ್ಯದಿಂದಾಗಿ ಒಂಟಿಯಾಗುತ್ತಾ ಸಾಗಿ ಬಂದಿದ್ದಾನೆ ಮನುಷ್ಯ. ಹೀಗಿದ್ದರೂ ಆತನ ಅಂತರಂಗವು ಬಹಿರಂಗದೊಡನೆ ಒಂದಾಗದೆ ಮೂಲಗುಣವನ್ನು ಉಳಿಸಿಕೊಂಡಿದೆ. ಯಾವಾಗ ಅವನು ತನ್ನನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವನೋ, ಆಗ ಆತನ ಅಂತರಂಗವು ಸವಾಲುಗಳನ್ನು ತಾನು ಏಕಾಂಗಿಯಾಗಿ ಗೆಲ್ಲಲಾರೆ ಎಂಬ ಚಿಂತೆಗೆ ಬೀಳುತ್ತದೆ. ಇದರ ಪರಿಣಾಮವೇ ಅಭದ್ರತೆ.
ಯಾವ ಮನುಷ್ಯ ತನ್ನ ಸಹಜೀವಿಗಳ ಜೊತೆ ಸ್ನೇಹದಿಂದ ಇರುವುದಿಲ್ಲವೋ ಮತ್ತು ಪರಮಸ್ವಾರ್ಥಿಯೋ, ಮತ್ತು ಸಂಕುಚಿತ ಬುದ್ಧಿಯವನಾಗಿರುತ್ತಾನೋ ಅವನು ಎಂದಿಗೂ ನೆಮ್ಮದಿಯಾಗಿರುವುದಿಲ್ಲ. ಹಸನ್ಮುಖಿಯಾಗಿ ಇರುವುದಿಲ್ಲ. ಯಾವಾಗ ವ್ಯಕ್ತಿಯನ್ನು ಅಭದ್ರತೆ ಕಾಡಲಾರಂಭಿಸುತ್ತದೆಯೋ ಆಗ ಅವನು ತನ್ನನ್ನು ತಾನು ರಕ್ಷಿಸಿಕೊಳ್ಳುವ ಧಾವಂತಕ್ಕೆ ಬೀಳುತ್ತಾನೆ. ಸ್ವಯಂ ಕೇಂದ್ರಿತ ಚಿಂತನೆಯು ಭೌತಿಕ ಮನಸ್ಥಿತಿಯವರು ಸಾಮಾನ್ಯ ಗುಣವಾದ್ದರಿಂದ ಭೌತಿಕ ಸಂಗತಿಗಳೇ ತಮ್ಮನ್ನು ಕಾಪಾಡಬೇಕು ಎಂದು ಅವರು ಯೋಚಿಸುತ್ತಾರೆ. ಹಾಗೆಂದೇ ಸಂಪತ್ತಿನ ಕ್ರೋಢೀಕರಣಕ್ಕೆ ಮುಂದಾಗುತ್ತಾರೆ. ತಮ್ಮ ಬಲ ವೃದ್ಧಿಗಾಗಿ, ಹೆಸರು ಪ್ರತಿಷ್ಠೆಗಳ ಹಿಂದೋಡತೊಡಗುತ್ತಾರೆ. ಈ ಧಾವಂತದಲ್ಲಿ ಅವರು ಹೆಚ್ಚು ಸಂಕುಚಿತರೂ ಕ್ರೂರಿಗಳೂ ವಂಚಕರೂ ಆಗುತ್ತಾ ಸಾಗುತ್ತಾರೆ.
ನಾವು ನೆಮ್ಮದಿಯಿಂದ, ನಿಶ್ಚಿಂತೆಯಿಂದ ಇರಬೇಕೆಂದರೆ ಎಲ್ಲಕ್ಕಿಂತ ಮೊದಲು ಸಂಕುಚಿತ ಮನೋಭಾವನೆಯಿಂದ ಹೊರಗೆ ಬರಬೇಕು. ನಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ, ಅಂಚುಗಳಿಲ್ಲದ ಆಕಾಶದಂತೆ ಆಗಬೇಕು. ಹೀಗಾಗಬೇಕು ಎಂದರೆ ಒಬ್ಬ ವ್ಯಕ್ತಿಯಾಗಿ ಯೋಚಿಸುವುದನ್ನು ಬಿಟ್ಟು ಸಮಷ್ಟಿಯಾಗಿ ಯೋಚಿಸಲು, ಬಾಳಲು ಕಲಿಯಬೇಕು.
ಕೇಳಲು ಈ ಮಾತು ಎಷ್ಟು ಸುಲಭದ್ದು ಅನಿಸುತ್ತದೆ. ನಾವು ನಮ್ಮ ಚಿಂತೆ ಬಿಟ್ಟು ಎಲ್ಲರೊಂದಿಗೆ ನಾವು ಅಂದುಕೊಂಡು ಬಾಳಬೇಕು. ನಾವು ಮಾಡಬೇಕಿರುವುದು ಇಷ್ಟೆ.
ಆದರೆ ವಾಸ್ತವವೇನು ಗೊತ್ತೇ? ಯಾವುದು ತುಂಬಾ ಸರಳವೋ ಅದರಂತೆ ನಡೆದುಕೊಳ್ಳುವುದು ಕಡುಕಷ್ಟ. ಏಕೆಂದರೆ ಸರಳವಾಗಿ ನಡೆದುಕೊಳ್ಳಲು, ಬಾಳಲು ನಮ್ಮ ಅಹಂಕಾರ ಬಿಡುವುದಿಲ್ಲ. ಅದು ಯಾವತ್ತೂ ಹುಲಿಯೊಡನೆ ಕಾದಾಡಲು ಬಯಸುತ್ತದೆಯೇ ಹೊರತು ಇರುವೆ ಕಡಿತವನ್ನು ತಾಳಿಕೊಳ್ಳಲು ಸಿದ್ಧವಿರುವುದಿಲ್ಲ.
ಆದ್ದರಿಂದ ನಾವು ಚಿಕ್ಕ ಹೆಜ್ಜೆಯಿಂದ ಈ ನಡಿಗೆ ಆರಂಭಿಸಬೇಕು. ಮೊದಲು ನಮ್ಮ ದೇಹದೊಡಗಿನ ಗುರುತಿನಿಂದ ಬಿಡಿಳಸಿಕೊಳ್ಳಬೇಕು. ಅದು ಹೇಗೆಂದರೆ, ನಾನು ಮಿಸ್ಟರ್ ಎಕ್ಸ್ ಅಥವಾ ಮಿಸ್ ಎಕ್ಸ್ ಆಗಿದ್ದೇನೆ ಅನ್ನುವ ಯೋಚನೆಯಿಂದ ಹೊರಬಂದು, ನಾನು ಮಿಸ್ಟರ್ ಅಥವಾ ಮಿಸ್ ಎಕ್ಸ್, ಸಮಾಜದ ಒಂದು ಭಾಗವಾಗಿದ್ದೇನೆ, ಈ ಸಮಾಜವು ಇಂಥಾ ಒಂದು ಪರಿಸರದಲ್ಲಿದೆ. ಈ ಪರಿಸರವು ಭೂಮಿಯ ಒಂದು ತುಣುಕಾಗಿದೆ. ಭೂಮಿಯು ಬ್ರಹ್ಮಾಂಡದ ಒಂದು ಭಾಗ… ಹೀಗೆ ನಮ್ಮ ಗುರುತಿಸಿಕೊಳ್ಳುವಿಕೆ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು.
ಗೋಡೆಗಳನ್ನು ಕೆಡವಿದರೆ ನಿಂತ ಜಾಗ ವಿಸ್ತಾರವಾಗುವುದಿಲ್ಲವೇ? ಬಯಲು ವಿಶಾಲವಲ್ಲವೇ? ಹಾಗೆಯೇ ಹೆಸರು, ಮನೆತನ, ಜಾತಿ, ಸಮಾಜ ಎಂಬೆಲ್ಲ ಗೋಡೆಗಳನ್ನು ಕೆಡವುತ್ತಾ ಕೆಡವುತ್ತಾ ಸಮಷ್ಟಿಯ ಬಯಲಲ್ಲಿ ನಿಲ್ಲಲು ಪ್ರಯತ್ನಿಸಬೇಕು. ಆಗಷ್ಟೇ ಬಯಲಲ್ಲೂ ಸರಿಯಾದ ದಿಕ್ಕಿನ ನಡಿಗೆ ಸಾಧ್ಯವಾಗುವುದು.
ಬಯಲಾಗುವುದು ಎಂದರೆ ಬೆತ್ತಲಾಗುವುದು ಎಂದು ಅರ್ಥವಿದೆ. ಇಲ್ಲಿ ಬೆತ್ತಲೆ ಎಂದರೆ ದೇಹದ ಬೆತ್ತಲೆಯಲ್ಲ. ಸುಳ್ಳು ಕಪಟ ವಂಚನೆಗಳ ಪದರುಗಳನ್ನು ಕಳಚಿ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳುವುದು ಎಂದು. ಬಯಲು ಬೆಳಕಿಗೆ ಪರ್ಯಾಯ. ಎಲ್ಲಿ ಗೋಡೆ ಛಾವಣಿಗಳು ಇರುವುದಿಲ್ಲವೋ ಅಲ್ಲಿ ಬೆಳಕೇ ಬೆಳಕು!
ನಾವು ಅನಿತ್ಯವಾದ ದೇಹದ ಗುರುತಿನ ಗೋಡೆಗಳನ್ನು ಕಟ್ಟಿಕೊಂಡು ಸಹಜ ಸುಂದರವಾದ ಬೆಳಕಿನಿಂದ ನಮ್ಮನ್ನು ವಂಚಿಸಿಕೊಳ್ಳುತ್ತಿದ್ದೇವೆ ಯಾವ ವಸ್ತುವಿನ ಮೇಲೆ ಬೆಳಕು ಹಾಯುವುದಿಲ್ಲವೋ ಅದು ಬೆಳೆಯಲಾರದು ಅದು ಸಂಕುಚಿತವಾಗೇ ಉಳಿದು ಕೊನೆಗೊಮ್ಮೆ ಮುರುಟಿ ಹೋಗುವುದು. ಆದ್ದರಿಂದ ನಾವು ನಮ್ಮನ್ನು ಸಮುದಾಯದಿಂದ ವಿಭಜಿಸಿಕೊಂಡು ಕೋಣೆಗಳಾಗುವುಗದೆ, ಬಯಲಾಗಿ ಬೆಳಕಿಗೆ ಬದುಕನ್ನು ಒಡ್ಡಿಕೊಳ್ಳುವ ಮನಸ್ಸು ಮಾಡೋದು ಒಳ್ಳೆಯದು.
ಉತ್ತಮ ಚಿಂತನೆ…