ಪ್ರತೀ ಮಾನವ ಜೀವಿಯೂ ಭಿನ್ನ, ಅನನ್ಯ… | ಯೂಜಿ ಮಾತು

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಪ್ರಶ್ನೆ : ನಾನು ಮತ್ತು ನೀವು ಹೇಗೆ ಬೇರೆ ಬೇರೆ? ಗ್ರಹಿಕೆಯ ವಿಚಾರ? ಅಥವಾ ಇನ್ನೂ ಬೇರೆ ಏನಾದರೂ ?

ಯೂಜಿ : ನಾನು ನಿಮಗಿಂತ ಬೇರೆ ಎನ್ನುವ ವಿಚಾರ ಯಾವತ್ತೂ ನನ್ನ ತಲೆಯೊಳಗೆ ಬರುವುದಿಲ್ಲ. ನಿಮ್ಮ ‘ಆಲೋಚನೆ’ ನಿಮ್ಮನ್ನ ನನ್ನಿಂದ ಬೇರೆ ಮಾಡಿ, ನಾನು ನಿಮಗಿಂತ ಬೇರೆ, ನಾನು ನಿಮಗಿಂತ ಬೇರೆ ಥರ ಬದುಕುತ್ತಿದ್ದೆನೆ ಎಂದು ಹೇಳುತ್ತದೆ. ಆದರೆ ನಾನು ಮತ್ತು ನೀವು ನೂರಕ್ಕೆ ನೂರರಷ್ಟು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆವೆ.

ಪ್ರಶ್ನೆ : ……….. ಕೇವಲ ಒಂದು ವ್ಯತ್ಯಾಸ, ನಾವು ವಿಷಯ ತಿಳಿದುಕೊಳ್ಳುವ ಸಲುವಾಗಿ ವಿಚಾರಗಳನ್ನ ಬಳಸಿ ಆಲೋಚನೆ ಮಾಡುತ್ತಿದ್ದೆವೆ.

ಯೂಜಿ : ಹೌದು, ನಿಮಗೆ ತಿಳಿದುಕೊಳ್ಳುವ ಬಯಕೆ. ಮನುಷ್ಯ ಜೀವಿ ಥೇಟ್ ವಿಶೇಷ ಜಾಣತನ ಉಳ್ಳ ಕಂಪ್ಯೂಟರ್ ನಂತೆ, ಟೇಪ್ ರೆಕಾರ್ಡರ್ ಕಾರ್ಯ ನಿರ್ವಹಿಸುವ ರೀತಿಯಲ್ಲೇ ಅವನ ಕಾರ್ಯ ನಿರ್ವಹಣೆ ಕೂಡ. “ ನಾನು ಹೇಗೆ ಕೆಲಸ ಮಾಡುತ್ತೇನೆ? “ ಎನ್ನುವ ಪ್ರಶ್ನೆಯನ್ನ ಯಾವ ಟೇಪ್ ರಿಕಾರ್ಡರ್ ಕೂಡ ಕೇಳುವುದಿಲ್ಲ. ಅದಕ್ಕೆ ಕೆಲಸ ಮಾಡಲು ವಿದ್ಯುತ್ ಶಕ್ತಿ ಇದ್ದರೆ ಸಾಕು. ಆದರೆ ಇಲ್ಲಿ ಶಕ್ತಿ ಬದುಕಿನ ಒಂದು ಅಭಿವ್ಯಕ್ತಿ, ಇಲ್ಲಿ ಶಕ್ತಿ ಇದ್ದೇ ಇದೆ ಆದರೂ ನೀವು ಯಾವಾಗಲೂ ಪ್ರಶ್ನೆಗಳ ಹಿಂದೆ ಬಿದ್ದಿರುವಿರಿ.

“ನೀವು ನಮಗಿಂತ ಬೇರೆ ಅಲ್ವಾ ಹಾಗಾದರೆ?” ಎನ್ನುವ ನಿಮ್ಮ ಪ್ರಶ್ನೆಗೆ, ನನ್ನ ಈ ಕಂಪ್ಯೂಟರ್ ನಲ್ಲಿ ಸೇರಿಸಲಾಗಿರುವ, ನನ್ನನ್ನ ನಿಮ್ಮಿಂದ ಬೇರ್ಪಡಿಸುವ ಎಲ್ಲ ತಿಳುವಳಿಕೆಗಳು ಹೊರ ಬಂದು ಉತ್ತರ ಹೇಳುತ್ತವೆ, ನಾನು ಗಂಡು ನೀನು ಹೆಣ್ಣು, ನಿನ್ನ ತಿಳುವಳಿಕೆ ನನಗಿಂತ ಹೆಚ್ಚು ಹೀಗೆ ಮುಂತಾಗಿ…..ಈ ಕಂಪ್ಯೂಟರ್ ( ತಮ್ಮ ತಲೆಯತ್ತ ಬೆರಳು ಮಾಡುತ್ತ) ನಲ್ಲಿ ಸೇರಿಸಲಾಗಿರುವ ಎಲ್ಲ ಮಾಹಿತಿಯನ್ನ ನಾನು ನಿಮ್ಮ ಪ್ರಶ್ನೆಗೆ ಉತ್ತರ ಎಂಬಂತೆ ಹೇಳುತ್ತೇನೆ. ಇದು ಎರಡು ಕಂಪ್ಯೂಟರ್ ಗಳು ಸಂಭಾಷಣೆ ಮಾಡುವಂತೆ ಆದರೆ ನೀವು ಈ ಕಂಪ್ಯೂಟರ್ ಗೆ( ಮನುಷ್ಯ ಜೀವಿಗೆ) ಯಾವುದು ಸಹಜವಲ್ಲವೋ ಆ ಸಂಗತಿಯನ್ನ ಬಳಸಲು ಪ್ರಯತ್ನಿಸುತ್ತೀರಿ ಅದಕ್ಕೆಂದೇ ನಿಮಗೆ ನನ್ನೊಳಗೆ ಏನೋ ಭಿನ್ನವಾದದ್ದು ಇದೆ ಎಂಬ ಆಲೋಚನೆ.

ಪ್ರಶ್ನೆ : ಹಾಗಾದರೆ ನಾವು ಈ ಭೇದವನ್ನು ಕಲ್ಪಿಸಿಕೊಳ್ಳುತ್ತಿದ್ದೀವಾ ?

ಯೂಜಿ: ಖಂಡಿತ. ನೀವೇ ಈ ಭೇದವನ್ನ ಹುಟ್ಟು ಹಾಕುತ್ತಿರುವವರು. ಈ ಪ್ರಶ್ನೆಯೇ ಅಂಥದ್ದು, ಭೇದವನ್ನು ಸೃಷ್ಟಿಸುವಂಥದ್ದು. ಆದರೆ ನಿಜದಲ್ಲಿ ಪ್ರಶ್ನೆಗಳೆನ್ನುವುದು ಇಲ್ಲವೇ ಇಲ್ಲ. ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಂಡಿರೋದು ನಮಗೆ ಈಗಾಗಲೇ ಗೊತ್ತಿರುವ ಉತ್ತರಗಳು ಕಾರಣವಾಗಿ. ಅವು ನಿಜದ ಪ್ರಶ್ನೆಗಳಲ್ಲವೇ ಅಲ್ಲ.

ಪ್ರಶ್ನೆ : ಹಾಗಾದರೆ ನಾವು ಪ್ರಶ್ನೆ ಕೇಳದೇ ಸುಮ್ಮನಿರುವುದು ಒಳ್ಳೆಯದೆ?

ಯೂಜಿ : ಸುಮ್ಮನಿರುವುದು ತಿಳಿದುಕೊಳ್ಳುವ ಒಂದು ಮಾರ್ಗ ಎನ್ನುವುದು ನಿಮ್ಮಮಾತಿನ ಅರ್ಥವೆ? ಇದು ಧಾರ್ಮಿಕರ ಒಂದು ಕಪಟ. ಮೌನದ ಮೂಲಕವೂ ತಾವು ಏನೂ ಹೇಳುತ್ತಿದ್ದೆವೆ ಎನ್ನುವ ನಾಟಕ. ನಿಜದ ಮೌನದಲ್ಲಿ ಯಾವ ಸಂಭಾಷಣೆ ಸಾಧ್ಯವಾಗುವುದಿಲ್ಲ ಮತ್ತು ಅದರ ಅಗತ್ಯವೂ ಇರುವುದಿಲ್ಲ.

ಪ್ರಶ್ನೆ : ಜ್ಞಾನದ ಪ್ರಕೃತಿ ಎಂತಹದು? ಮತ್ತು ಆ ಶಬ್ದದ ಅರ್ಥ ನಿಮ್ಮ ಪ್ರಕಾರ ಏನು?

ಯೂಜಿ: ನನಗೆ ಗೊತ್ತಿರೋದು ಕೂಡ ನಿಘಂಟುವಿನ ಅರ್ಥವೇ. ನೀವು ನನಗಿಂತ ಹೆಚ್ಚು ಜ್ಞಾನಿಗಳು, ಕೆಲವು ಮಾಪ ದಂಡಗಳನ್ನು ಬಳಸಿ ಇದನ್ನ ಅಳತೆ ಮಾಡಬಹುದು. ಇದು ನನಗೆ ಒಪ್ಪಿಗೆ. ಆದರೆ ನನ್ನ ಈ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳುವುದು, ಬದಲಾಯಿಸಿಕೊಳ್ಳುವುದು, ಉತ್ತಮಗೊಳಿಸಿಕೊಳ್ಳುವುದು ಮುಂತಾದವಕ್ಕೆಲ್ಲ ಅಪರಿಮಿತ ಶಕ್ತಿ ವ್ಯಯವಾಗುತ್ತದೆ. ನಿಜದ ಜ್ಞಾನ ಈ ಯಾವುದಕ್ಕೂ ಹಾತೊರೆಯುವುದಿಲ್ಲ. ಈ ದಿಕ್ಕುಗಳಲ್ಲಿ ನಮ್ಮ ಚಲನೆ ನಿಂತಾಗ ನಮ್ಮ ಬಳಿ ಉಳಿಯೋದು ಅಸಾಮಾನ್ಯ ತಿಳುವಳಿಕೆ. ಈ ತಿಳುವಳಿಕೆ ತನ್ನದೇ ರೀತಿಯಲ್ಲಿ ಒಂದು ಅನನ್ಯ. ಪ್ರತೀ ಜೀವಿಯೂ ಅನನ್ಯ. ಪ್ರಕೃತಿ, ಪರಿಪೂರ್ಣ ಪ್ರಭೇದಗಳನ್ನು (Species) ಸೃಷ್ಟಿ ಮಾಡುತ್ತದೆಯೇ ಹೊರತು ಪರಿಪೂರ್ಣ ವ್ಯಕ್ತಿ (individuals) ಗಳನ್ನಲ್ಲ.

ಪರಿಪೂರ್ಣ ವ್ಯಕ್ತಿಗಳನ್ನು ಸೃಷ್ಟಿಮಾಡುತ್ತೇವೆ ಎನ್ನುವುದು ಧಾರ್ಮಿಕ ಮನುಷ್ಯರ ಕಪಟ. ನಾವು ನಮ್ಮೆದುರಿಗೆ ಬುದ್ಧ, ಜೀಸಸ್, ರಾಮ ಮುಂತಾದವರ ಮಾದರಿಗಳನ್ನ ಕಟ್ಟಿಕೊಂಡು ಕಷ್ಟಪಡುತ್ತಿದ್ದೇವೆ. ಪ್ರತೀ ಮಾನವ ಜೀವಿಯೂ ಭಿನ್ನ, ಅನನ್ಯ. ನಿನ್ನ ಹಾಗಿರುವ ಇನ್ನೊಬ್ಬ ಈ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ, ಇದು ಪ್ರಕೃತಿಯ ಅನನ್ಯ ಕಲೆಗಾರಿಕೆ. ಹಾಗಿರುವಾಗ ಯಾಕೆ ಈ ಧರ್ಮಗಳು ಮನುಷ್ಯನನ್ನು ಒಂದೇ ಎರಕಕ್ಕೆ ಗುರಿಮಾಡಿ ಪ್ರಕೃತಿಯ ಕಲೆಗಾರಿಕೆಗೆ ಅಪಮಾನ ಮಾಡುತ್ತಿವೆ?

Leave a Reply