ಪ್ರೇಮ ಅಪಾಯಕಾರಿ. ಯಾಕೆಂದರೆ… । ಅಧ್ಯಾತ್ಮ ಡೈರಿ

ಪ್ರೇಮ ಚಲನಶೀಲ. ಚಲನಶೀಲತೆಯ ಕಾರಣದಿಂದ ಪ್ರೀತಿ ಅನಿಶ್ಚಿತ. ಯಾಕೆಂದರೆ ಚಲನೆಗೆ ನಿಂತ ನೆಲದಿಂದ ಹೆಜ್ಜೆ ಕೀಳಬೇಕು. ಹೆಜ್ಜೆ ಕಿತ್ತ ಕ್ಷಣದಲ್ಲಿ ಅನಿಶ್ಚಿತತೆಯ ಭಾವನೆ ಹೊಮ್ಮುವುದು. ಹೆಜ್ಜೆ ಕೀಳೋದು ಅಪಾಯಕಾರಿ ಕೂಡಾ. ಯಾಕೆಂದರೆ ಮುಂದೆ ಹೆಜ್ಜೆಯೂರಲು ನೆಲವಿರುವುದೋ ಇಲ್ಲವೋ ಬಲ್ಲವರು ಯಾರು! ಆದ್ದರಿಂದ ಪ್ರೀತಿ ಅಪಾಯಕಾರಿಯೂ. । ಚೇತನಾ ತೀರ್ಥಹಳ್ಳಿ

ಹೌದು. ಪ್ರೇಮ ಅಪಾಯಕಾರಿಯೇ! ಯಾಕೆಂದರೆ…

ಯಾವುದು ಶಾಶ್ವತವೋ ಅದು ಅನಿಶ್ಚಿತ. ಯಾವುದು ಸತ್ಯವೋ ಅದು ಕ್ಷಣ ಕ್ಷಣದ ಸುಳ್ಳು. ಯಾವುದು ಅಪಾಯಕಾರಿಯೋ ಅದೇ ಆತ್ಯಂತಿಕ ಸುರಕ್ಷೆ. ಮಿತಿಯ ಗ್ರಹಿಕೆಯಲ್ಲಿ ಅನಿಶ್ಚಿತವಾಗಿ, ನಶ್ವರವಾಗಿ, ಸುಳ್ಳಾಗಿ ಕಾಣೋದೆಲ್ಲವೂ ಅಮಿತ ಸೃಷ್ಟಿಯಲ್ಲಿ ಖಚಿತ, ಶಾಶ್ವತ ಮತ್ತು ಸತ್ಯ.

ಸತ್ಯವನ್ನ ಋತ – ಚಲನಶೀಲ ಅನ್ನೋದೇ ಆ ಕಾರಣಕ್ಕೆ. ಯಾವುದು ಚಲಿಸುತ್ತದೋ ಅದು ನಿಶ್ಚಿತವಾಗಲು ಹೇಗೆ ಸಾಧ್ಯ? ಯಾಕೆಂದರೆ ಚಲಿಸುವ ಪ್ರತಿಯೊಂದೂ ಪ್ರತಿಕ್ಷಣವೂ ಹೊಸತಾಗುತ್ತದೆ, ಹಿಂದಿಗಿಂತ ಇಂದು ಇಂದಿಗಿಂತ ನಾಳೆ ಬೇರೆಯಾಗುತ್ತದೆ. ಆದರೆ ಅದರ ಒಟ್ಟಂದ ಮತ್ತು ಪರಿಣಾಮ ಅಚಲವಾಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ ಅಲ್ವಾ?

ಬಹುಶಃ ಪ್ರೀತಿಯೂ ಹಾಗೇ, ಚಲನಶೀಲ. ಚಲನಶೀಲತೆಯ ಕಾರಣದಿಂದ ಪ್ರೀತಿ ಅನಿಶ್ಚಿತ. ಯಾಕೆಂದರೆ ಚಲನೆಗೆ ನಿಂತ ನೆಲದಿಂದ ಹೆಜ್ಜೆ ಕೀಳಬೇಕು. ಹೆಜ್ಜೆ ಕಿತ್ತ ಕ್ಷಣದಲ್ಲಿ ಅನಿಶ್ಚಿತತೆಯ ಭಾವನೆ ಹೊಮ್ಮುವುದು. ಹೆಜ್ಜೆ ಕೀಳೋದು ಅಪಾಯಕಾರಿ ಕೂಡಾ. ಯಾಕೆಂದರೆ ಮುಂದೆ ಹೆಜ್ಜೆಯೂರಲು ನೆಲವಿರುವುದೋ ಇಲ್ಲವೋ ಬಲ್ಲವರು ಯಾರು! ಆದ್ದರಿಂದ ಪ್ರೀತಿ ಅಪಾಯಕಾರಿಯೂ.

ಇದನ್ನು ಸರಳವಾಗಿ ಹೇಳಬೇಕೆಂದರೆ, ನಿಜವಾದ ಪ್ರೀತಿ ಯಾರನ್ನೂ ಕಟ್ಟಿಹಾಕುವುದಿಲ್ಲ. ಪ್ರೀತಿಸುವುದು ಅಂದರೆ ಮುಕ್ತಗೊಳಿಸುವುದು. ಆದರೆ ಬದ್ಧತೆ ರೂಢಿಯಾಗಿಬಿಟ್ಟಿರುವ ಸಾಮಾನ್ಯ ಮನುಷ್ಯರಿಗೆ ಕಟ್ಟಿಹಾಕದ ಪ್ರೀತಿ ಅನಿಶ್ಚಿತವಾಗಿಯೇ ತೋರುವುದು. (ಪ್ರೀತಿಸಿದವರು ಮದುವೆಯಾಗದಿದ್ದರೆ ಹೇಗೋ ಅನ್ನುವ ಭಯದಂತೆ – ಇದು ತೀರಾ ಸರಳ ವ್ಯಾಖ್ಯಾನ). ಹಾಗೇ ನಮ್ಮಿಂದ ನಮ್ಮನ್ನು ಬಿಡುಗಡೆಗೊಳಿಸಬಲ್ಲ ಪ್ರೇಮಿ ನಮಗೆ ಅಪಾಯಕಾರಿಯಾಗೇ ಕಾಣುವರು. ಯಾಕೆಂದರೆ ನಾವು ಅವನೊ/ಳೊಡನೆ ಬಂಧನದಲ್ಲಿ ಇದ್ದುಬಿಡಲು ಬಯಸುತ್ತಿರುವೆವು.

ಆದ್ದರಿಂದ ಮನುಷ್ಯರು ಪ್ರೀತಿಗೆ ಹೆದರುತ್ತಾರೆ. ಅವರೇನಿದ್ದರೂ ದೇಹದ ಆಕರ್ಷಣೆಗೆ ಒಳಗಾಗಬಲ್ಲರು, ಮದುವೆಯಾಗಿ ಸಂಬಂಧ ಕಟ್ಟಿಕೊಳ್ಳಬಲ್ಲರು, ರಾಖಿ ಕಟ್ಟಿ – ಕಟ್ಟಿಸಿಕೊಂಡು ಸೋದರ ಸೋದರಿಯಾಗಬಲ್ಲರು, ಫ್ರೆಂಡ್ ಬ್ಯಾಂಡಲ್ಲಿ ಗೆಳೆಯರಾಗಬಲ್ಲರು, ಗುರು ಶಿಷ್ಯರಾಗಬಲ್ಲರು. ಆದರೆ ಮನುಷ್ಯರು ಯಾವ ಬಂಧ – ಸಂಬಂಧದ ಹೆಸರೂ ಇಲ್ಲದ ಪ್ರೇಮಿಗಳಾಗಲು, ಅಕಾರಣವಾಗಿ ಪ್ರೇಮಿಸಲ್ಪಡಲು ಹಿಂಜರಿಯುವುದು ಈ ಮುಕ್ತತೆಯ ಕಾರಣಕ್ಕೇ.

ಮುಕ್ತತೆ ಬಯಲಿನಂತೆ. ಬಯಲಲ್ಲಿ ನಡೆದಷ್ಟೂ ದಾರಿಯೇ. ಆದರೆ ನಮಗೆ ಸಂಬಂಧಗಳೆಂಬ ಕೊರೆದಿಟ್ಟ ದಾರಿಯಲ್ಲೇ ನಡೆದು ರೂಢಿ. ಆದ್ದರಿಂದ ಪ್ರೇಮವೆಂಬ ವಿಶಾಲವಾದ – ದಾರಿಯಿಲ್ಲದ ಬಯಲು ನಮ್ಮಲ್ಲಿ ಭಯ ಹುಟ್ಟಿಸುವುದು. ಅಪಾಯಕಾರಿ ಅನಿಸುವುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply