ಬದುಕೆಂದರೆ ಚಂದ್ರಬಿಂಬದಂತೆ ತೇಲುವುದು! : ಅಧ್ಯಾತ್ಮ ಡೈರಿ

‘ಬದುಕು ಕ್ಷಣಿಕ’ – ಇದು ಬಲ್ಲವರ ಮಾತು. ಇದರ ಅರ್ಥ ತಾತ್ಕಾಲಿಕ, ನಶ್ವರ ಎಂದೇನೋ ಹೌದು. ಅದಕ್ಕಿಂತ ಹೆಚ್ಚಾಗಿ ‘ಕ್ಷಣಿಕ’ – ಕ್ಷಣಕ್ಕೆ ಸಂಬಂಧಪಟ್ಟಿದ್ದು ಎಂದೂ ಹೌದು. ನಮ್ಮೆಲ್ಲರ ಬದುಕು ಕ್ಷಣ-ಕ್ಷಣಕ್ಕೆ, ಪ್ರತಿಕ್ಷಣಕ್ಕೆ ಸಂಬಂಧಪಟ್ಟಿದ್ದು. ಇದನ್ನು ಆಯಾ ಕ್ಷಣವೇ ಬಾಳಬೇಕು. ಮತ್ತು, ಈ ಬಾಳುವುದು ಅಂದರೆ ಅದರಲ್ಲಿ ಮುಳುಗುವುದಲ್ಲ, ಚಂದ್ರಬಿಂಬದಂತೆ ತೇಲುವುದು! ಗಾಳಿ – ಘಮಲಿನಂತೆ ಅಂಟದೆಯೂ ಸಾಗುವುದು… । ಚೇತನಾ ತೀರ್ಥಹಳ್ಳಿ

ಸುಖವಿದ್ದಾಗ ಮೈಮರೆಯಬೇಡ, ಕಷ್ಟವಿದ್ದಾಗ ಕೈಚೆಲ್ಲಬೇಡ! ಇದು ನಮ್ಮೆಲ್ಲಾ ಹಿರಿಯರು ಹೇಳುವ ಮಾತು. ಅವರು ಹಾಗಿದ್ದರೋ ಇಲ್ಲವೋ, ಬದುಕಿನ ಬಂಡಿ ನೂಕುತ್ತ ನೂಕುತ್ತ ಕಲಿತ ಪಾಠವಂತೂ ಹೌದು. ಬಹುಶಃ ಅವರ ಹಿರಿಯರೂ ಅವರಿಗೆ ಅಂಥದೇ ಕಿವಿಮಾತು ಹೇಳಿರಬೇಕು! ಅದನ್ನು ನಮಗೆ ದಾಟಿಸಿರುತ್ತಾರೆ.

ಅಥವಾ, ನಮ್ಮ ಹಿರಿಯರಲ್ಲಿ ಕೆಲವರಾದರೂ ಸುಖಕ್ಕೆ ಹಿಗ್ಗದೆ, ಕಷ್ಟಕ್ಕೆ ಕುಗ್ಗದೆ ಬಾಳ್ವೆ ಮಾಡಿರಬಹುದು. ಅಥವಾ ಹಿಗ್ಗುತ್ತಲೂ ಕುಗ್ಗುತ್ತಲೂ ಆ ಇಲ್ಲಿಂದಲ್ಲಿಗೆ – ಅಲ್ಲಿಂದಿಲ್ಲಿಗೆ ಬದಲಾಗುವ ಪ್ರಕ್ರಿಯೆಯಿಂದಲೂ ಬಸವಳಿದಿರಬಹುದು. ಆದರೂ ಅಲ್ಲಲ್ಲಿ ಸಾವಧಾನ ಸಾಗಿ, ಸುಧಾರಿಸಿಕೊಂಡು ಬದುಕು ಮಾಡಿರಬಹುದು.

ಇಷ್ಟೇ. ಇದುವೇ ಬದುಕು. ಅರಿವುಳ್ಳವರು ಸಮಾಧಾನದಿಂದ, ಇಲ್ಲದವರು ಉದ್ವೇಗದಿಂದ ಬಾಳುವುದು. ಹೇಗೆ ಬಾಳಿದರೂ ಅದು ಕ್ಷಣದಿಂದ ಕ್ಷಣಕ್ಕೆ ಸರಿದುಹೋಗುತ್ತಲೇ ಇರುವುದು!

‘ಬದುಕು ಕ್ಷಣಿಕ’ – ಇದು ಬಲ್ಲವರ ಮಾತು. ಇದರ ಅರ್ಥ ತಾತ್ಕಾಲಿಕ, ನಶ್ವರ ಎಂದೇನೋ ಹೌದು. ಅದಕ್ಕಿಂತ ಹೆಚ್ಚಾಗಿ ‘ಕ್ಷಣಿಕ’ – ಕ್ಷಣಕ್ಕೆ ಸಂಬಂಧಪಟ್ಟಿದ್ದು ಎಂದೂ ಹೌದು. ನಮ್ಮೆಲ್ಲರ ಬದುಕು ಕ್ಷಣ-ಕ್ಷಣಕ್ಕೆ, ಪ್ರತಿಕ್ಷಣಕ್ಕೆ ಸಂಬಂಧಪಟ್ಟಿದ್ದು. ಇದನ್ನು ಆಯಾ ಕ್ಷಣವೇ ಬಾಳಬೇಕು. ಮತ್ತು, ಈ ಬಾಳುವುದು ಅಂದರೆ ಅದರಲ್ಲಿ ಮುಳುಗುವುದಲ್ಲ, ಚಂದ್ರಬಿಂಬದಂತೆ ತೇಲುವುದು! ಗಾಳಿ – ಘಮಲಿನಂತೆ ಅಂಟದೆಯೂ ಸಾಗುವುದು.

ಚಂದ್ರಬಿಂಬ ನದಿಯಲ್ಲೋ ಕೊಡದಲ್ಲೋ ಮತ್ತೆಲ್ಲೋ ಮೂಡಿದರೂ ಆಯಾ ಪಾತ್ರದಲ್ಲಿ ಮುಳುಗುವುದಿಲ್ಲ. ಒದ್ದೆಯಾಗೋದಿಲ್ಲ. ಹಾಗೇ ಗಾಳಿಗಂಟಿದ ಘಮಲೂ. ಗಾಳಿ ಘಮಲನ್ನು ಹೊತ್ತು ಸುಳಿದರೂ ಅದನ್ನೊಂದು ಹೊರಯಾಗಿಸಿಕೊಳ್ಳೋದಿಲ್ಲ. ಘಮಲು ಯಾವತ್ತೂ ಗಾಳಿಗೆ ಭಾರವಲ್ಲ!

ಸರ್ವಂ ಅನಿತ್ಯಮ್, ಏತದಪಿ ಗಮಿಷ್ಯತಿ – ಅಂದಿದಾರೆ ಪೂರ್ವಜರು. This too shall pass. “ಯಾವುದನ್ನೂ ಹೊರೆಯಾಗಿಸಿಕೊಳ್ಳಬೇಡಿ, ಈ ಕ್ಷಣ, ಈ ಸಂದರ್ಭ, ಈ ಸನ್ನಿವೇಶವೂ ಸರಿದುಹೋಗುವುದು” ಎಂದು ಇದರ ಅರ್ಥ.

ರೊಟ್ಟಿ ಕಾವಲಿ ಮುಂದೆ ನಿಂತವರನ್ನು ನೋಡಿ. ಸುಡು ಕಾವಲಿ ಮೇಲೇ ಕೈಯಾಡಿಸುತ್ತಾ ರೊಟ್ಟಿ ತಟ್ಟುತ್ತಾರೆ. ಅವರ ಬೆರಳು ಕಾವಲಿ ಮೇಲಿರುವುದು ಅರೆಯಲ್ಲಿ ಅರೆಕ್ಷಣವಷ್ಟೇ! ಅವರ ಉದ್ದೇಶ ರೊಟ್ಟಿ ತಟ್ಟುವುದು. ಅವರು ಅದನ್ನಷ್ಟೆ ಮಾಡುತ್ತಿದ್ದಾರೆ. ಅದರ ವಿನಾ ಬೇರೇನೂ ಮಾಡುತ್ತಿಲ್ಲ. ಅಕಸ್ಮಾತ್ ಅವರು ಕಾವಲಿ ಸುಡುವುದೆಂದು ಯೋಚಿಸುತ್ತ ಬೆರಳಾಡಿಸಲು ಹೊರಟರೆ ಸುಟ್ಟುಕೊಳ್ಳೋದು ಖಚಿತ! ಆದ್ದರಿಂದಲೇ ಅವರು ಎಷ್ಟು ಬೇಕೋ ಅಷ್ಟು ಕಾವಲಿ ಸ್ಪರ್ಷಿಸುತ್ತಾರೆ. ಅದೇ ಕಾವಲಿ, ಅದೇ ಸುಡುವ ತಾಪಮಾನ. ಆದರೂ ಅವರ ಕೈಬೆರಳು ಸುರಕ್ಷಿತವಾಗಿವೆ. ರೊಟ್ಟಿಯೂ ರುಚಿಯಾಗಿದೆ.

ಬದುಕೂ ಹಾಗೇ. ಎಷ್ಟು ಬೇಕೋ ಅಷ್ಟು ಹೊರೆ ಹೊತ್ತುಕೊಳ್ಳಬೇಕು. ಮತ್ತು ಈ ಹೊರೆ ನಮ್ಮ ಬದುಕಿನ ‘ಹೊಣೆ’ಗೆ ಸೀಮಿತವಾಗಿರಬೇಕು. ಆಗ ನಮ್ಮ ಬದುಕೂ ರುಚಿಯಾಗುತ್ತದೆ. ಇಲ್ಲವಾದರೆ, ಅಗತ್ಯಕ್ಕಿಂತ ಹೆಚ್ಚು ಕಾಲ ಕಾವಲಿ ಮೇಲೆ ಬೆರಳಿಟ್ಟರೆ ಬರೆ ಬೀಳುವಂತೆ ನಮ್ಮ ಬದುಕಿಗೂ ಬರೆ ಬೀಳುತ್ತದೆ. ಬಹಳ ಕಾಲದವರೆಗೆ ಅದರ ಬರೆ ಹೊತ್ತೇ ಸಾಗಬೇಕಾಗುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply