ವಚನೇ ಕಾ ದರಿದ್ರತಾ? ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ… ಸಂಕ್ರಾಂತಿ ಶುಭಾಶಯ

ಒಳ್ಳೆ ಮಾತುಗಳು ಇಂದಿನ ಅತ್ಯಂತ ತುರ್ತು. ಒಳ್ಳೆ ಕೆಲಸಗಳನ್ನು ಎಷ್ಟು ಮಾಡಲಾಗುತ್ತದೆಯೋ, ಕೊನೆಪಕ್ಷ ಒಳ್ಳೆ ಮಾತುಗಳನ್ನಾಡುವ (ಪೊಳ್ಳು ಅಥವಾ ನಯವಂತಿಕೆಯ ಮಾತುಗಳಲ್ಲ, ಸತ್ವಯುತ ಒಳ್ಳೆ ಮಾತುಗಳು) ಸಂಕಲ್ಪ ತೊಡೋಣ. ‘ಅರಳಿಬಳಗ’ದ ವತಿಯಿಂದ ಎಲ್ಲರಿಗೂ ಸಂಕ್ರಾಂತಿ ಶುಭಾಶಯಗಳು.


ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವಿದು. ಅಯಣ ಸಂಕ್ರಮಣಗಳು ಎರಡು. ಸೂರ್ಯನು ಭೂ ಮಧ್ಯೆಯ ರೇಖೆಗೆ ಉತ್ತರಾಭಿಮುಖವಾಗಿ ಚಲಿಸುವ ಕಾಲ, ಉತ್ತರಾಯಣ ಪರ್ವಕಾಲ. ಸೂರ್ಯನು ಭೂ ಮಧ್ಯೆ ರೇಖೆಗೆ ದಕ್ಷಿಣಾಭಿಮುಖವಾಗಿ ಚಲಿಸುವ ಕಾಲ, ದಕ್ಷಿಣಾಯಣ ಪರ್ವಕಾಲ. ಮಕರ ಸಂಕ್ರಮಣ ಅಥವಾ ಸಂಕ್ರಾಂತಿ, ಉತ್ತರಾಯಣದ ಪರ್ವಕಾಲವನ್ನು ಸ್ವಾಗತಿಸುವ ಸಂಭ್ರಮವಾಗಿದೆ.

ಉತ್ತರಾಯಣಮಪ್ಯುಕ್ತಂ ಮಕರಸ್ತೇದಿವಾಕರೇ | ಕರ್ಕಾಟಾದಿಸ್ತೀತೇ ಭಾನೌ ದಕ್ಷೀಣಾಯಣ ಮುಚ್ಯತೇ ||
“ಉತ್ತರಾಯಣದಲ್ಲಿ ಸೂರ್ಯನು ಬಲಿಷ್ಠ ನಾಗಿರುವನು ದಕ್ಷಿಣಾಯಣದಲ್ಲಿ ಬಲಹೀನನಾಗಿರುವನು. ಮಕರರಾಶಿಗೆ ಸೂರ್ಯನು ಪ್ರವೇಶಿ ಸಿದ ಕಾಲದ ನಂತರ ಮೂವತ್ತು ಘಳಿಗೆಗಳು ಪುಣ್ಯಕಾಲವಾಗಿದೆ” ಎಂದು ಶಾಸ್ತ್ರಗಳು ಹೇಳುತ್ತವೆ. ಈ ಪುಣ್ಯಕಾಲವನ್ನು ಸಂಭ್ರಮದಿಂದ ಸ್ವಾಗತಿಸುವ ಹಬ್ಬವೇ ಸಂಕ್ರಾಂತಿ.

ನಮಗೆಲ್ಲ ತಿಳಿದಿರುವ ಹಾಗೆ, ಮುಖ್ಯವಾಗಿ ಇದು ರೈತರ ಹಬ್ಬ. ಸುಗ್ಗಿಯ ಹಬ್ಬ. ಉತ್ತರ ಭಾರತದಲ್ಲಿ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುವುದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಈ ದಿನದ ಆಚರಣೆ ನಡೆಯುತ್ತದೆ. ದಕ್ಷಿಣದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದಲ್ಲಿ ಇದರ ಸಡಗರ ಹೆಚ್ಚು. ಇಲ್ಲೂ ಎರಡು ಬೇರೆ ದಿನಗಳಲ್ಲಿ ಸಂಕ್ರಾಂತಿ ಆಚರಣೆ ನಡೆಯುತ್ತದೆ. ಉಳಿದೆಲ್ಲ ಕಡೆ ಮಕರ ಸಂಕ್ರಮಣ ಆಚರಿಸಿದರೆ, ಕರಾವಳಿ ಭಾಗದಲ್ಲಿ ತುಲಾ ಸಂಕ್ರಮಣ ಆಚರಣೆ ನಡೆಯುತ್ತದೆ.
ಅದೇನೇ ಇದ್ದರೂ ಹಬ್ಬದ ಸಂಭ್ರಮಕ್ಕೆ ಎಳ್ಳು – ಬೆಲ್ಲ ಮುಖ್ಯ ಆಕರ್ಷಣೆ. ಮನೆಮನೆಗೆ ತೆರಳಿ ಎಳ್ಳು ಬೀರಿ, “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂದು ಹಾರೈಸುವುದು ರೂಢಿ.

ಒಳ್ಳೆ ಮಾತುಗಳು ಇಂದಿನ ಅತ್ಯಂತ ತುರ್ತು. “ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಟನ್ತಿ ಜನ್ತವಃ | ತಸ್ಮಾದ್ ತದೇವ ವಕ್ತವ್ಯಮ್ ವಚನೇ ಕಾ ದರಿದ್ರತಾ?” ಅನ್ನುವ ಮಾತಿದೆ. “ಒಳ್ಳೆಯ ಮಾತುಗಳಿಂದ ಎಲ್ಲ ಜೀವಿಗಳೂ ಸಂತಸಪಡುತ್ತವೆ. ಹೀಗಿರುವಾಗ ಮಾತಾಡಲೇನು ಬಡತನ?” ಎಂದು ಇದರರ್ಥ. ನಮ್ಮಿಂದ ಒಳ್ಳೆ ಕೆಲಸಗಳನ್ನು ಎಷ್ಟು ಮಾಡಲಾಗುತ್ತದೆಯೋ, ಕೊನೆಪಕ್ಷ ಒಳ್ಳೆ ಮಾತುಗಳನ್ನಾಡುವ (ಪೊಳ್ಳು ಅಥವಾ ನಯವಂತಿಕೆಯ ಮಾತುಗಳಲ್ಲ, ಸತ್ವಯುತ ಒಳ್ಳೆ ಮಾತುಗಳು; ಸತ್ಯವುಳ್ಳ ಮಾತುಗಳು) ಸಂಕಲ್ಪ ತೊಡೋಣ.

‘ಅರಳಿಬಳಗ’ದ ವತಿಯಿಂದ ಎಲ್ಲರಿಗೂ ಸಂಕ್ರಾಂತಿ ಶುಭಾಶಯಗಳು.

Leave a Reply