ಹಳತು – ಹೊಸತು ದೋಷವಲ್ಲ : ಇಂದಿನ ಸುಭಾಷಿತ

farm land during sunset

ಹಳತೆಲ್ಲವೂ ಶ್ರೇಷ್ಠ, ಹೊಸತೆಲ್ಲವೂ ಅಳ್ಳಕ ಅನ್ನುವ ವ್ಯಸನವಾಗಲೀ; ಹಳತೆಲ್ಲವೂ ತುಚ್ಛ, ಹೊಸತೆಲ್ಲವೂ ಉಚ್ಚ ಅನ್ನುವ ತಾತ್ಸಾರವಾಗಲೀ ಸಲ್ಲದು ಅನ್ನುತ್ತದೆ ಈ ಸುಭಾಷಿತ । ಸಾ.ಹಿರಣ್ಮಯೀ

ತದಾತ್ವೇ ನೂತನಂ ಸರ್ವಂ ಆಯತ್ಯಾಂ
ಚ ಪುರಾತನಂ |
ನ ದೋಷಾಯೈ ತದುಭಯಂ ನ
ಗುಣಾಯ ಚ ಕಲ್ಪತೇ ||

ಅರ್ಥ : ಪ್ರತಿಯೊಂದೂ ಸಹ ಅದರ ಕಾಲಕ್ಕೆ ಅದು ಹೊಸದಾಗಿರುತ್ತದೆ, ಕಾಲ ಕಳೆದರೆ ಹಳೆಯದಾಗುತ್ತದೆ. ಆದುದರಿಂದ ಹೊಸತನವಾಗಲೀ ಹಳೆಯತನವಾಗಲೀ ಗುಣದೋಷಗಳಿಗೆ ಕಾರಣವಾಗುವುದಿಲ್ಲ.

ತಾತ್ಪರ್ಯ: ಯಾವುದಾದರೂ ಒಂದು ಸಂಗತಿಯನ್ನು ಹೊಸತು ಅಥವಾ ಹಳತು ಎಂದು ಬೆಟ್ಟು ಮಾಡಿ ಹೇಳುವಾಗ ಅದು ಯಾರಿಗೆ ಹೊಸತು ಅಥವಾ ಹಳತು ಅನ್ನುವುದು ಮುಖ್ಯವಾಗುತ್ತದೆ. ಯಾಕೆಂದರೆ ಇವೆರಡೂ ಸಾಪೇಕ್ಷ ಸಂಗತಿಗಳೇ. ಐಸ್ ತಣ್ಣಗಿರುತ್ತದೆ ಅನ್ನುವುದು ನಮಗೆ ಹಳೆಯ ಸಂಗತಿಯಾದರೆ ಮಗುವಿಗೆ ಅದು ಹೊಸ ಸಂಗತಿ. ಯಾವುದೋ ಒಂದು ಅರಿವು ನಮಗೆ ಹೊಸತಾಗಿ ಕಂಡರೆ ನಮ್ಮ ಹಿರಿಯರಿಗೆ ಅದು ಹಳತಾಗಿರಬಹುದು.

ಯಾವುದೋ ಒಂದು ವಸ್ತು ಒಂದಷ್ಟು ಕಾಲದ ಹಿಂದೆ ಕೊಂಡಿದ್ದು ಅನ್ನುವ ಕಾರಣಕ್ಕಾಗಿ ನಮಗೆ ಹಳತಾಗಿ ತೋರಬಹುದು. ವಾಸ್ತವದಲ್ಲಿ, ಆ ವಸ್ತು ನಮಗೆ ಹಳತಾದಂತೆ ನಾವೂ ಆ ವಸ್ತುವಿಗೆ ಹಳತಾಗುತ್ತೇವೆ. ಆ ವಸ್ತು ಮತ್ತು ನಾವು ಸಮಕಾಲೀನರೇ ಆಗಿರುತ್ತೇವೆ. ಆದ್ದರಿಂದ ನಾವೇ ಕೊಂಡ ಅಥವಾ ನಮ್ಮ ಬಳಿ ಇರುವ ಯಾವ ವಸ್ತುವೂ ನಮ್ಮ ಪಾಲಿಗೆ ಹಳತಾಗಲು ಸಾಧ್ಯವಿಲ್ಲ.

ಹಾಗೆಯೇ ಕೆಲವೊಮ್ಮೆ ಹಳತನ್ನು ಅನುಭವಕ್ಕೂ ಹೊಸತನ್ನು ಕಲಿಕೆಗೂ ತಳಕು ಹಾಕುವುದುಂಟು. ಆದರೆ ಹಳತೆಲ್ಲವೂ ಅನುಭವದ ಕಾರಣಕ್ಕೆ ಶ್ರೇಷ್ಠವಾಗಬೇಕಿಲ್ಲ. ಯಾಕೆಂದರೆ ಅನುಭವ ಈ ಕ್ಷಣದ ಗತದ ವರ್ತಮಾನದ ಘಟನೆ! ಅದು ಆ ದೇಶ – ಕಾಲ ಸಂಯೋಗದಲ್ಲಿ ಮಥಿಸಿ ಬಂದ ಅರಿವು. ಅದು ಸಾರ್ವಕಾಲಿಕವಾಗಬೇಕಿಲ್ಲ. ಅಕಸ್ಮಾತ್ ಆದರೆ, ಅದು ಒಳಿತೇ. ಆ ವಿಷಯ ಬೇರೆ.

ಹಾಗೆಯೇ ಹೊಸತು ತನ್ನ ತಾಜಾತನ ಮತ್ತು ಪ್ರಸ್ತುತತೆಯ ಕಾರಣಕ್ಕೆ ಶ್ರೇಷ್ಠವಾಗಬೇಕಿಲ್ಲ. ಈ ಕ್ಷಣಕ್ಕೆ ಪ್ರಸ್ತುತವಾದದ್ದು ಮರುಕ್ಷಣಕ್ಕೆ ಹಳತಾಗುವುದು. ಆದ್ದರಿಂದ ಹೊಸತು ಮಾತ್ರವೇ ಉತ್ತಮ ಅನ್ನುವ ಹುಸಿ ನಂಬಿಕೆ ಸಲ್ಲದು.

ಹಾಗೆಂದೇ ಕವಿವಾಣಿ “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಅಂದಿರುವುದು. ಎಲ್ಲವೂ ಇರಬೇಕಾದ ಪ್ರಮಾಣದಲ್ಲಿ ಬೆರೆತಿದ್ದರಷ್ಟೇ ನಮ್ಮ ಬದುಕು ಸುಂದರ, ಸಹನೀಯ.

Leave a Reply