ಪ್ರೇಮ ನಮ್ಮನ್ನು ಸಂಬಂಧಗಳ ಬಂಧನದಲ್ಲಿ ಕಟ್ಟಿ ಹಾಕುವುದಿಲ್ಲ. ಕಟ್ಟಿ ಹಾಕಿದರೆ, ಅದು ಪ್ರೇಮವಾಗಿ ಉಳಿಯುವುದಿಲ್ಲ. ಯಾವುದು ನಮ್ಮನ್ನು ಮುಕ್ತಗೊಳಿಸುವುದೋ, ಅದು ಪ್ರೇಮ. ಉದಾಹರಣೆಗೆ ಬಿಲ್ವಮಂಗಳನ ಈ ಕತೆಯನ್ನೇ ನೋಡಿ… ~ ಚೇತನಾ ತೀರ್ಥಹಳ್ಳಿ
ಬಿಲ್ವಮಂಗಳ ಒಬ್ಬ ಸಜ್ಜನ, ಶ್ರೀಮಂತ. ಜೊತೆಗೆ ಮಹಾನ್ ಹರಿಭಕ್ತ. ನಿದ್ರೆ, ಹಸಿವು, ಮೈಥುನಗಳಷ್ಟೇ ಭಕ್ತಿಯೂ ಸಹಜವೇನೋ ಅನ್ನುವಷ್ಟು ತೀವ್ರತೆ ಇತ್ತು ಅವನಲ್ಲಿ.
ಚೂಡಾಮಣಿ, ಸೌಂದರ್ಯ ಶಿರೋಮಣಿ. ಹುಟ್ಟಿದ್ದು ವೇಶ್ಯೆಯರ ಕುಲದಲ್ಲಿ. ಇವಳು ಬಿಲ್ವಮಂಗಳನ ಮನದನ್ನೆ. ಅವರಿಬ್ಬರ ಪ್ರೇಮಕ್ಕೆ ಅವರ ಸುತ್ತಮುತ್ತಲಿನ ಜಗತ್ತು ಬೆರಗಾಗಿತ್ತು. ಮದುವೆಯಿಲ್ಲ ಅನ್ನುವುದೊಂದು ಬಿಟ್ಟರೆ ಯಾವ ದೇವದಂಪತಿಗೂ ಕಡಿಮೆ ಇಲ್ಲದಂತೆ ಸಾಂಗತ್ಯಸುಖ ಅನುಭವಿಸುತ್ತಿದ್ದರು ಅವರಿಬ್ಬರೂ.
ಒಮ್ಮೆ ಹೀಗಾಯ್ತು.
ಆ ರಾತ್ರಿ ಧೋ ಎಂದು ಮಳೆ ಸುರಿಯುತ್ತಿತ್ತು. ಕಾರ್ಗತ್ತಲು ಬೇರೆ. ಮನೆಯಲ್ಲೇ ಉಳಿಯಬೇಕಾಗಿ ಬಂದು ಬಿಲ್ವಮಂಗಳ ಚಡಪಡಿಸಿಹೋಗಿದ್ದ. ಚೂಡಾಮಣಿಯನ್ನು ಕಾಣದೆ, ಅವಳ ಅಂಗಸುಖ ಅನುಭವಿಸದೆ ತನಗೆ ಹುಚ್ಚೇ ಹಿಡಿಯುವುದು ಅನ್ನಿಸಿತು ಅವನಿಗೆ.
ಅತ್ತ ಚೂಡಾಮಣಿ, ಈ ಮಳೆಯಲ್ಲಿ ಪ್ರಿಯತಮ ಬರಲಾರನೆಂದು ಹೊದ್ದು ಮಲಗಿದಳು. ನಿದ್ರೆಯಿಲ್ಲದ ಹೊರಳಿದ ಮಗ್ಗಲುಗಳ ಲೆಕ್ಕ ಹಾಕುತ್ತಾ ಉಳಿದಳು.
ಹೀಗೇ ಸರಿ ರಾತ್ರಿ ಕಳೆದಿರಬಹುದು. ಬಾಘಿಲು ಬಡಿಯುವ ಸದ್ದು, ಗುಡುಗು – ಸಿಡಿಲನ್ನೂ ಮೀರಿ ತೂರಿ ಬರುತ್ತಿತ್ತು. “ಬಿಲ್ವಮಂಗಳ ಬಂದನೇ!?: ಚೂಡಾಮಣಿಗೆ ಅಚ್ಚರಿ… ಗಾಭರಿ ಕೂಡಾ! ಬಾಗಿಲು ತೆರೆದರೆ ತೊಯ್ದು ತೊಪ್ಪಡಿಯಾಗಿದ್ದ ಬಿಲ್ವಮಂಗಳ ಹೊಸ್ತಿಲಿಗೆ ಆತುಕೊಂಡು ನಿಂತಿದ್ದ. ಅದರಾಚೆ ಒಳನುಗ್ಗಲು ಹವಣಿಸುತ್ತಿದ್ದ ಕೆರೆ ಖೋಡಿ ಒಡೆದ ನೀರು. ಅವನ ಬೆನ್ನ ಹಿಂದೆ ಸಿಡಿಲಿಗೆ ಸುಟ್ಟು ಕರಕಲಾದ ಮರದಲ್ಲಿ ಇನ್ನೂ ಹೊಗೆಯಾಡುತ್ತಿತ್ತು!
ಒಳಕರೆದು ಬಾಚಿ ತಬ್ಬಿದವಳೇ ಬಿಕ್ಕಿಬಿಕ್ಕಿ ಅತ್ತಳು ಚೂಡಾಮಣಿ. ”ನಿನಗೇನಾದರೂ ಆಗಿಹೋಗಿದ್ದರೆ!?” ಅವಳ ಆತಂಕ ಮೇರೆಮೀರಿತ್ತು.
ಬಿಲ್ವಮಂಗಳ ಅವಳ ನೆತ್ತಿಯನ್ನುಜ್ಜುತ್ತಾ ಅಂದ, “ಹುಚ್ಚಿ! ನಿನಗಾಗಿ ನಾನು ಏನೆಲ್ಲ ಮಾಡಬಲ್ಲೆ ನೋಡು!
ಥಟ್ಟನೆ ತಲೆ ಎತ್ತಿದ ಚೂಡಾಮಣಿ ಅಂದಳು, “ಛೆ! ಏನೂ ನೀಡದ ಈ ಮೂಳೆ ಮಾಂಸದ ದೇಹವನ್ನು ನೋಡಲಿಕ್ಕೆ, ಪಡೆಯಲಿಕ್ಕೆ ಇಷ್ಟು ಸಾಹಸಪಡುವ ಬದಲು ಭಗವಂತನ್ನ ಪಡೆಯುವ ಸಾಃಸ ಮಾಡಿದ್ದರೆ!? ಬ್ರಹ್ಮಾನಂದವೇ ನಿಮ್ಮ ಮುಂದೆ ಕಾಲುಮುರಿದುಕೊಂಡು ಬಿದ್ದಿರುತ್ತಿತ್ತು!!”
ಹೊರಗಿನ ಮಳೆ ಬಿಲ್ವಮಂಗಳನ ಎದೆಯಲ್ಲೂ ಸುರಿಯಿತು. ಮನದೊಳಗೆ ಮಿಂಚಾಯಿತು. ಕಾಲ ಕೂಡಿ ಬಂದಿತ್ತು. ಅವಳ ಪಾದಕ್ಕೆ ಮುತ್ತಿಟ್ಟವನೇ ಎದ್ದು ಹೊರಟ. ಬೆಳಗಾಗುವವರೆಗೂ ಜಡಿಮಳೆಯಲ್ಲೇ ನಡೆದ. ಬೆಳಕು ಮೂಡುವ ಹೊತ್ತಿಗೆ ಸರಿಯಾಗಿ ದೇವಾಲಯದಲ್ಲಿ ನಿಂತಿದ್ದ.
ಮುಂದೆ ಬಿಲ್ವಮಂಗಳ ಮಹಾ ಸಾಧಕನೆಂದು ಹೆಸರು ಪಡೆದ. ವೈಷ್ಣವ ಪಂಥವೊಂದರ ಪ್ರಮುಖ ಗುರುವೂ ಆದ. ತನ್ನ ಸಾಧನೆಗೆ ದಾರಿ ತೋರಿದ ಚೂಡಾಮಣಿಯನ್ನು ಗುರುವೆಂದು ಕರೆದು, ತನ್ನ ಕೃತಿಗಳಲ್ಲಿ ಅವಳ ಹೆಸರನ್ನು ಅಜರಾಮರಗೊಳಿಸಿದ.