ರಾಮಕೃಷ್ಣರು ಹೇಳಿದ ಒಂದು ದೃಷ್ಟಾಂತ ಕತೆ…
ರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಎಂಥಾ ಕಷ್ಟದ ಕಾರ್ಯವನ್ನೂ ಸಾಧಿಸಬಹುದು ಎಂದು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಸಾಧನೆಯ ಹಾದಿಯಲ್ಲಿ ತೊಡಕುಗಳು ಎದುರಾಯಿತೆಂದು ಶಿಷ್ಯರು ಅವರ ಬಳಿ ಬಂದಾಗೆಲ್ಲ ಅವರು ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದೇ ಹೇಳುತ್ತಿದ್ದುದು. ಅಂತಹ ಒಂದು ಪ್ರಸಂಗದಲ್ಲಿ ನೀಡಿದ ಬೋಧನೆ ಇಲ್ಲಿದೆ:
ಸಮುದ್ರದಲ್ಲಿ ಒಮ್ಮೆ ಮುಳುಗಿದಾಗ ಅಲ್ಲಿ ಮುತ್ತು ಸಿಗದೇ ಇದ್ದರೆ ಅಲ್ಲಿ ಮುತ್ತೇ ಇಲ್ಲವೆಂದು ತಿಳಿಯಬೇಡಿ. ಸಮುದ್ರದಲ್ಲಿ ಲೆಕ್ಕವಿಲ್ಲದಷ್ಟು ಮುತ್ತುಗಳು ಹುದುಗಿವೆ. ಸ್ವಲ್ಪ ಸಾಧನೆಯನ್ನು ಮಾಡಿದ ಮೇಲೆ ಫಲ ದೊರೆಯುವ ಲಕ್ಷಣಗಳು ಕಾಣುತ್ತಿಲ್ಲವೆಂದು ಎದೆಗೆಡಬೇಡಿ. ಸಮಾಧಾನದಿಂದ ಸಾಧನೆಯನ್ನು ಮಾಡಿ. ಸಕಾಲದಲ್ಲಿ ಫಲಗಳು ಖಚಿತವಾಗಿ ದೊರೆಯುತ್ತವೆ.
ಸೌದೆ ಒಡೆಯುವವನೊಬ್ಬ ತಾನು ಕಾಡಿನಿಂದ ತಂದ ಸೌದೆಯನ್ನು ಮಾರಿ ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದನು. ಒಂದು ದಿನ ಅವನು ಸಣ್ಣ ಪುಳ್ಳೆಯ ಹೊರೆಯನ್ನು ಹೊತ್ತು ತರುತ್ತಿರುವಾಗ ದಾರಿಗೆದುರಾದ ಒಬ್ಬನು “ಇದೇ ದಾರಿಯಲ್ಲಿ ಇನ್ನೂ ಸ್ವಲ್ಪ ಮುಂದೆ ಹೋಗು” ಎಂದು ಸಲಹೆ ನೀಡಿದನು. ಅದರಂತೆ ಸೌದೆ ಒಡೆಯುವವನು ಮುಂದೆ ಹೋದನು. ಅಲ್ಲಿ ಅವನಿಗೆ ಸಾಕಷ್ಟು ದೊಡ್ಡ ಹೊರೆಯಾಗುವಷ್ಟು ಸೌದೆ ಸಿಕ್ಕಿತು. ಅದನ್ನು ಕೆಇದು, ಮಾರಿ, ಅವನು ಹೆಚ್ಚಿನ ಹಣವನ್ನು ಪಡೆದನು.
ತನಗೆ ಬಂದ ಲಾಭದಿಂದ ಸಂತುಷ್ಟನಾದ ಸೌದೆಯವನು, ತನಗೆ “ಮುಂದೆ ಹೋಗು” ಎಂದು ಸೂಚನೆ ನೀಡಿದ್ದವನನ್ನು ನೆನೆದನು. ಮತ್ತು ತಾನು ಈ ದಿನ ಕಾಡಿನೊಳಗೆ ಮತ್ತಷ್ಟು ದೂರ ಕ್ರಮಿಸುವುದಾಗಿ ನಿಶ್ಚಯಿಸಿದನು. ಅದರಂತೆ ಮಾಡಲಾಗಿ, ಅವನು ಗಂಧದ ಮರಗಳ ತಾವನ್ನು ಹೊಕ್ಕನು. ಗಂಧದ ಮರಗಳನ್ನು ಕಡಿದು ತಂದು, ಮಾರಿ, ಮತ್ತಷ್ಟು ಲಾಭ ಗಳಿಸಿದನು. ಮರುದಿನ ಗಂಧದ ತಾವಿಗಿಂತಲೂ ದೂರ ಕ್ರಮಿಸಿ ತಾಮ್ರದ ಗಣಿ ಇರುವ ಪ್ರದೇಶಕ್ಕೆ ಬಂದನು. ಅಲ್ಲಿ ತಾಮ್ರವನ್ನು ಬಗೆದು, ಮಾರಿ ಹೆಚ್ಚಿನ ಲಾಭ ಪಡೆದನು. ಹೀಗೆಯೇ ಅವನು ದಿನದಿಂದ ದಿನಕ್ಕೆ ದೂರ ದೂರ ಸಾಗುತ್ತಾ ಚಿನ್ನ, ಬೆಳ್ಳಿ, ವಜ್ರದ ಗಣಿಗಳನ್ನು ಪ್ರವೇಶಿಸಿ, ಆಯಾ ವಷ್ತುಗಳನ್ನು ಸಂಗ್ರಹಿಸಿ ಅಧಿಕ ಮೊತ್ತದ ಲಾಭವನ್ನು ಪಡೆಯುತ್ತಾ ಹೋದನು.
ಆಧ್ಯಾತ್ಮಿಕ ದಾರಿಯಲ್ಲಿಯೂ ನೀವು ಹೀಗೆಯೇ ದಿನದಿಂದ ದಿನಕ್ಕೆ ಮುಂದೆ ಸಾಗುತ್ತಲೇ ಇರಬೇಕು. ಸೌದೆಯವನು ಗಂಧದ ಮರಗಳಿಗೇ ಸಂತೃಪ್ತನಾಗಿಬಿಟ್ಟಿದ್ದರೆ ಅವನು ವಜ್ರದ ಗಣಿಯವರೆಗೆ ತಲುಪುತ್ತಲೇ ಇರಲಿಲ್ಲ. ಹಾಗೆಯೇ ನೀವೂ ಆರಂಭಿಕ ಫಲಗಳಿಗೆ ತೃಪ್ತಿಪಟ್ಟುಕೊಂಡರೆ, ಅತ್ಯಮೂಲ್ಯ ಫಲವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ಪ್ರತಿದಿನವೂ ಸಾಧ್ಯವಾದಷ್ಟು ಪ್ರಯತ್ನ ಹಾಕಿ, ಮುಂದಕ್ಕೆ, ಇನ್ನೂ ಮುಂದಕ್ಕೆ ಸಾಗುತ್ತಲೇ ಇರಿ, ಮುನ್ನಡೆಯಿರಿ.