ವಸುಗುಪ್ತನ ಶಿವಸೂತ್ರಗಳು : ಕನ್ನಡ ವ್ಯಾಖ್ಯಾನ ಸರಣಿ #1

ಶಿವನನ್ನು ಅರಿಯುವುದು, ಶಿವನನ್ನು ಹೊಂದುವುದು – ಇವೆಲ್ಲ ನಮ್ಮನ್ನು ನಾವು ಅರಿಯುವ, ನಮ್ಮನ್ನು ನಾವು ಹೊಂದುವ ಪ್ರಯತ್ನಗಳೇ ಆಗಿವೆ. ಶಿವನನ್ನು ಉದ್ದೇಶಿಸಿದ ಈ ಕ್ರುತಿಯ ಪ್ರತಿಯೊಂದು ಹೇಳಿಕೆಯೂ ವಿವರಣೆಯೂ ಕೇವಲ ಯಾವುದೋ ಒಂದು ಗುರುತಿಗೆ ಸೀಮಿತವಾಗದೆ, ವೈಶ್ವಿಕವಾಗಿರುವುದನ್ನು ನಾವು ನೋಡಬಹುದು. ಆ ಕಾರಣದಿಂದಲೇ ಶತಮಾನಗಳ ನಂತರವೂ ವಸುಗುಪ್ತನ ‘ಶಿವಸೂತ್ರಗಳು’ ಕೃತಿ ತನ್ನ ಮಹತ್ವ ಉಳಿಸಿಕೊಂಡಿರುವುದು. ಪ್ರಸ್ತುತ ‘ಅರಳಿಮರ’ಕ್ಕಾಗಿ ಈ ಕೃತಿಯ ಮೂಲ ಸಂಸ್ಕೃತ ಶ್ಲೋಕಗಳು ಮತ್ತು ಇಂಗ್ಲಿಶ್ ವಾಕ್ಯಾರ್ಥ ಆಕರಗಳನ್ನು ಇಟ್ಟುಕೊಂಡು ‘ಶಿವ ಸೂತ್ರ’ಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಇದಾಗಿದೆ… । ಚೇತನಾ ತೀರ್ಥಹಳ್ಳಿ.

ವಸುಗುಪ್ತನ ‘ಶಿವಸೂತ್ರಗಳು’, ಶಿವನತ್ತ ಮುಖಮಾಡಲು ತೋರುಬೆರಳಿನಂಥ ಕೃತಿ. ಕಾಶ್ಮೀರಿ ಶೈವ ಪರಂಪರೆಯ ಅದ್ವೈತಿಯಾಗಿದ್ದ ವಸುಗುಪ್ತನ ಶಿಷ್ಯ ಭಟ್ಟ ಕಲ್ಲಟ ಇದಕ್ಕೆ ‘ಸ್ಪಂದ ಕಾರಿಕಾ’ ಅನ್ನುವ ವ್ಯಾಖ್ಯಾನ ಬರೆದಿದ್ದಾನೆ. (ಕೆಲವು ವಾದಗಳ ಪ್ರಕಾರ ವ್ಯಾಖ್ಯಾನ ಬರೆದವನೂ ವಸುಗುಪ್ತನೇ).

ಶಿವಸೂತ್ರಗಳು ಒಟ್ಟು ಮೂರು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ಶಾಂಭವೋಪಾಯ, ಶಾಕ್ತೋಪಾಯ ಮತ್ತು ಆಣವೋಪಾಯ. ಇಲ್ಲಿ ಉಪಾಯ ಎಂದರೆ ವಿಧಾನ ಅಥವಾ ದಾರಿ. ಕ್ರಮವಾಗಿ ಶಂಭು, ಶಕ್ತಿ ಮತ್ತು ಸೂಕ್ಷ್ಮ ವಿಧಾನಗಳನ್ನು ಇವು ಸೂಚಿಸುತ್ತವೆ. ಇನ್ನು ‘ಸೂತ್ರ’ಗಳೆಂದರೆ ನಾವು ಇಂಗ್ಲಿಶ್ ನಲ್ಲಿ ಹೇಳುವ ಫಾರ್ಮುಲಾ. ಹೇಗೆ ದೊಡ್ಡ ದೊಡ್ಡ ವಿವರಣೆಗಳನ್ನು ಒಂದು ಫಾರ್ಮುಲಾದಲ್ಲಿ ಕ್ರೋಢೀಕರಿಸಿ ನೆನಪಿಟ್ಟುಕೊಳ್ಳುತ್ತೀವೋ; ಮತ್ತು ಆ ಫಾರ್ಮುಲಾ ಮೂಲಕ ವಿವರಗಳನ್ನು ಮತ್ತೊಬ್ಬರಿಗೆ ದಾಟಿಸುತ್ತೀವೋ, ಹಾಗೇ ಇದು ಕೂಡಾ. ವಸುದತ್ತ ನೀಡಿರುವ ಪ್ರತಿಯೊಂದು ಸೂತ್ರವೂ ಶಿವನ ಅಖಂಡ ಗುಣಗಳನ್ನು ಹಿಡಿದಿಟ್ಟುಕೊಂಡ ಚಿಕ್ಕ ಚಿಕ್ಕ ಫಾರ್ಮುಲಾಗಳೇ ಆಗಿವೆ. ಈ ಸೂತ್ರಗಳು ಮರಗಳಿಂದ ಕಾಪಿಟ್ಟ ಬೀಜಗಳಿದ್ದಂತೆ. ಬೀಜಗಳಲ್ಲಿ ಮತ್ತೆ ನೂರಾರು ಸಾವಿರಾರು ಮರಗಳು ಹುಟ್ಟಿ ಬೆಳೆಯುವ ಸಾಧ್ಯತೆ ಅಡಗಿರುತ್ತದೆ. ಅದೇ ರೀತಿ, ಒಂದು ವಿವರಣೆಯ ಬೀಜವು ನಮ್ಮ ನಮ್ಮ ಅರಿವಿನ ಮೂಸೆಯಲ್ಲಿ ಮೊಳೆತಾಗ ಮತ್ತಷ್ಟು ಅಗಾಧ ಅರ್ಥವ್ಯಾಖ್ಯಾನವನ್ನು, ಅರಿವನ್ನು ಹೊಮ್ಮಿಸಬಹುದು. ಹಣ್ಣುಗಳಿಂದ ಬೀಜ ಸಂಗ್ರಹಿಸಿ ಮರದ ನಿರಂತರತೆಯನ್ನು ಕಾಯ್ದವರ ಕೈಮೀರಿ ಈ ಅರ್ಥಗಳ ಬಳ್ಳಿ ಹಬ್ಬಬಹುದು. ಸೂತ್ರಗಳ ಸೌಂದರ್ಯವೇ ಇದು.

‘ಶಿವಸೂತ್ರಗಳು’ ಕೃತಿಯ ಮೊದಲನೆ ಭಾಗ ಶಾಂಭವೋಪಾಯದಲ್ಲಿ 22 ಸೂತ್ರಗಳಿದ್ದು, ಇವು ಶಿವನನ್ನು ಅರ್ಥಮಾಡಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸುತ್ತವೆ. ಎರಡನೆಯ ಭಾಗ ಶಾಕ್ತೋಪಾಯದಲ್ಲಿ 10 ಸೂತ್ರಗಳಿದ್ದು, ಇವು ನಮ್ಮ ಮನೋಬಲದ ಆಧಾರದ ಮೇಲೆ ನಮ್ಮನ್ನು ವಿಕಾಸಗೊಳಿಸುತ್ತವೆ. ಕೊನೆಯ ಭಾಗ ಆಣವೋಪಾಯದಲ್ಲಿ 45 ಸೂತ್ರಗಳಿದ್ದು, ಯೌಗಿಕ ಸಾಧನೆಗಳ ಮೂಲಕ ಶಿವನನ್ನು ತಲುಪುವ ಮಾರ್ಗ ಸೂಚಿಸುತ್ತವೆ.

ಶಿವನನ್ನು ಅರಿಯುವುದು, ಶಿವನನ್ನು ಹೊಂದುವುದು – ಇವೆಲ್ಲ ನಮ್ಮನ್ನು ನಾವು ಅರಿಯುವ, ನಮ್ಮನ್ನು ನಾವು ಹೊಂದುವ ಪ್ರಯತ್ನಗಳೇ ಆಗಿವೆ. ಶಿವನನ್ನು ಉದ್ದೇಶಿಸಿದ ಈ ಕೃತಿಯ ಪ್ರತಿಯೊಂದು ಹೇಳಿಕೆಯೂ ವಿವರಣೆಯೂ ಕೇವಲ ಯಾವುದೋ ಒಂದು ಗುರುತಿಗೆ ಸೀಮಿತವಾಗದೆ, ವೈಶ್ವಿಕವಾಗಿರುವುದನ್ನು ನಾವು ನೋಡಬಹುದು. ಆ ಕಾರಣದಿಂದಲೇ ಶತಮಾನಗಳ ನಂತರವೂ ‘ಶಿವಸೂತ್ರಗಳು’ ಕೃತಿ ತನ್ನ ಮಹತ್ವ ಉಳಿಸಿಕೊಂಡಿರುವುದು.

‘ಶಿವ ಸೂತ್ರ’ಗಳ ಮೊದಲನೆ ಭಾಗದ 22 ಸೂತ್ರಗಳು ಹೀಗಿವೆ:

 • ಚೈತನ್ಯಮಾತ್ಮಾ  1-1.
 • ಜ್ಞಾನಮ್ ಬಂಧಃ  1-2.
 • ಯೋನಿವರ್ಗಃ ಕಲಾಶರೀರಮ್  1-3.
 • ಜ್ಞಾನಾಧಿಷ್ಟಾನಮ್ ಮಾತೃಕಾ  1-4.
 • ಉದ್ಯಮೋ ಭೈರವಃ 1-5.
 • ಶಕ್ತಿಚಕ್ರಸಂಧಾನೇ ವಿಶ್ವಸಂಹಾರಃ 1-6.
 • ಜಾಗೃತ್ – ಸ್ವಪ್ನ – ಸುಷುಪ್ತ ಭೇದೇ ತುರ್ಯಾಭೋಗಸಂಭವಃ 1-7.
 • ಜ್ಞಾನಮ್ ಜಾಗ್ರತ್ 1-8.
 • ಸ್ವಪ್ನೋ ವಿಕಲ್ಪಾಃ 1-9.
 • ಅವಿವೇಕೋ ಮಾಯಾಸೌಷುಪ್ತಮ್ 1-10.
 • ತ್ರಿತಯಭೋಕ್ತಾ ವೀರೇಶಃ 1-11.
 • ವಿಸ್ಮಯೋ ಯೋಗಭೂಮಿಕಾಃ 1-12.
 • ಇಚ್ಛಾ ಶಕ್ತಿರುಮಾ ಕುಮಾರೀ 1-13.
 • ದೃಶ್ಯಮ್ ಶರೀರಮ್ 1-14.
 • ಹೃದಯೇ ಚಿತ್ತಸಂಘಟ್ಟಾದ್ ದೃಶ್ಯಸ್ವಾಪದರ್ಶನಂ  1-15.
 • ಶುದ್ಧತತ್ತ್ವಸಂಧಾನಾದ್ವಾಪಶುಶಕ್ತಿಃ 1-16.
 • ವಿತರ್ಕ ಆತ್ಮಜ್ಞಾನಮ್ 1-17.
 • ಲೋಕಾನಂದಃ ಸಮಾಧಿಸುಖಮ್ 1-18.
 • ಶಕ್ತಿಸಂಧಾನೇ ಶರೀರೋತ್ಪತ್ತಿಃ 1-19.
 • ಭೂತಸಂಧಾನ ಭೂತಪೃಥಕ್ತ್ವ ವಿಶ್ವಸಂಘಟ್ಟಾಃ 1-20.
 • ಶುದ್ಧವಿದ್ಯೋದಯಾಚ್ಚಕ್ರೇಶತ್ವ ಸಿದ್ಧಿಃ 1-21.
 • ಮಹಾಹ್ರದಾನುಸಂಧಾನಾನಾನ್ಮಂತ್ರವೀರ್ಯಾನುಭವಃ 1-22.

(ಮುಂದುವರಿಯುವುದು…)

Leave a Reply