ಶ್ರೀ ರಾಮಾನುಜಾಚಾರ್ಯ: ಜ್ಞಾನ ಭಕ್ತಿ ಸಮನ್ವಯದ ವಿಶಿಷ್ಟ ವೇದಾಂತಿ

ಇಂದು ರಾಮಾನುಜ ಜಯಂತಿ. ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು. ಮತ್ತು ಅಲ್ಲಿ ಜಾತಿಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಳಿಸಿಕೊಂಡರು. ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು… | ಸಾ.ಹಿರಣ್ಮಯಿ

ಹನ್ನೊಂದನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ವೇದಾಂತಿ ರಾಮಾನುಜಾಚಾರ್ಯರು ಭಾರತೀಯ (ಹಿಂದೂ) ತತ್ತ್ವಜ್ಞಾನಕ್ಕೆ ನೀಡಿದ ಕೊಡುಗೆ ಗಣನೀಯವಾದದ್ದು. ಶ್ರೀವೈಷ್ಣವ ಸಂಪ್ರದಾಯದ ಮುಖ್ಯ ಪ್ರವರ್ತಕರಾಗಿ ಗುರುತಿಸಲ್ಪಡುವ ರಾಮಾನುಜಾಚಾರ್ಯರು, ಭಕ್ತಿ ಚಳವಳಿಗೆ ಪ್ರೇರೇಪಣೆ ನೀಡಿದ ‘ವಿಶಿಷ್ಟಾದ್ವೈತ’ವನ್ನು ಪ್ರಚುರಪಡಿಸಿದರು.

ರಾಮಾನುಜಾಚಾರ್ಯರ ಜೀವನವೂ ಬಹಳ ವಿಶಿಷ್ಟ. ಗುರು ಗೋಷ್ಠಿ ಪೂರ್ಣರನ್ನು ಒಲಿಸಿಕೊಳ್ಳಲು ತಾವು ನೆಲೆಸಿದ್ದ ಶ್ರೀರಂಗಂನಿಂದ ಮಧುರೈಗೆ ಹದಿನೆಂಟು ಬಾರಿ ಅಲೆದಿದ್ದರು ರಾಮಾನುಜರು. ಕೊನೆಗೂ ಗೋಷ್ಟಿಪೂರ್ಣರು ಅವರನ್ನು ಶಿಷ್ಯರನ್ನಾಗಿ ಒಪ್ಪಿಕೊಂಡು, ‘ಅಷ್ಟಾಕ್ಷರಿ ಮಂತ್ರ’ ದೀಕ್ಷೆ ನಿಡಿದರು. “ಜೀವಿಗಳನ್ನು ಜನನಮರಣ ಚಕ್ರದಿಂದ ಮುಕ್ತಗೊಳಿಸುವ ಇದು ಅತ್ಯಂತ ರಹಸ್ಯ ಮತ್ತು ಪವಿತ್ರ ಮಂತ್ರ. ಇದನ್ನು ಗಟ್ಟಿಯಾಗಿ ಉಚ್ಚರಿಸಬೇಡ, ಯಾರಿಗೂ ನೀಡಬೇಡ. ಹಾಗೇನಾದರೂ ಮಾಡಿದರೆ ನರಕಕ್ಕೆ ಹೋಗಬೇಕಾದೀತು” ಎಂದೂ ಎಚ್ಚರಿಸಿದ್ದರು.

ರಾಮಾನುಜರು ಬಿಟ್ಟಾರೆಯೇ? ಗುರು ನೀಡಿದ ಮಂತ್ರವನ್ನು ಮನನ ಮಾಡಿಕೊಂಡರು. ತಿರುಕೋಟ್ಟೈಮಾರಿನ ನರಸಿಂಹ ದೇವಸ್ಥಾನದ ಗೋಪುರದ ಮೇಲೆ ನಿಂತು, “ಮಂತ್ರವನ್ನು ಕೊಡುತ್ತೇನೆ ಬನ್ನಿ” ಎಂದು ಜನರನ್ನು ಸೆಳೆದು, ಗಟ್ಟಿಯಾಗಿ ಮಂತ್ರೋಚ್ಚಾರ ಮಾಡಿದರು. “ಇದನ್ನು ಜಪಿಸಿ, ಮುಕ್ತಿ ಹೊಂದಿ” ಎಂದು ಸೂಚಿಸಿದರು. ಗೋಷ್ಟಿ ಪೂರ್ಣರಿಗೆ ಸಿಟ್ಟೇ ಬಂದಿತು. “ಏನಿದು ಅಧಿಕಪ್ರಸಂಗ?” ಎಂದು ವಿಚಾರಿಸಲಾಗಿ, “ಮಂತ್ರ ನೀಡುವ ನಾನೊಬ್ಬ ನರಕಕ್ಕೆ ಹೋದರೆ ತಾನೇ ಏನು? ಅದನ್ನು ಪಡೆದ ಅವರೆಲ್ಲ ಸ್ವರ್ಗಕ್ಕೆ ಹೋಗುತ್ತಾರಲ್ಲವೆ?” ಎಂಬ ಉತ್ತರ ಬಂತು.

ಇಂಥಾ ಶಿಷ್ಯನಿಂದ ಸಂಪ್ರೀತರಾಗದ ಗುರು ಯಾರಿದ್ದಾರು ಹೇಳಿ!

ಹೀಗೆ ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು. ಮತ್ತು ಅಲ್ಲಿ ಜಾತಿಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಳಿಸಿಕೊಂಡರು.

ಅಂದಿನ ಕಾಲಕ್ಕೆ (ಇಂದಿನ ಪರಿಸ್ಥಿತಿ ತೀರಾ ಭಿನ್ನವಾಗೇನೂ ಇಲ್ಲ) ರಾಮಾನುಜರ ಈ ನಡೆ ಅತ್ಯಂತ ಕ್ರಾಂತಿಕಾರಕ ನಡೆ. ಕಾವೇರಿಯಲ್ಲಿ ಮಿಂದ ನಂತರ ಧನುರ್ದಾಸನೆಂಬ (ಸಮಾಜದ ಶ್ರೇಣೀಕರಣದಂತೆ) ಕೆಳಜಾತಿಯವನ ಹೆಗಲ ಮೇಲೆ ಕೈಹಾಕಿಕೊಂಡು ದೇವಸ್ಥಾನಕ್ಕೆ ನಡೆದುಹೋಗುತ್ತಿದ್ದರು ರಾಮಾನುಜರು. ಭಕ್ತಿಯ ಪರಾಕಾಷ್ಠೆಯಲ್ಲಿ ಎಲ್ಲವೂ ಸಮಾನವಾಗಿಯೇ ಕಾಣುತ್ತದೆ. ಅಥವಾ ಎಲ್ಲವೂ ಸಮನಾಗಿ ಕಾಣುವ ಹಂತವೇ ಭಕ್ತಿಯ ಪರಾಕಾಷ್ಠೆ. ರಾಮಾನುಜರು ಆ ಔನ್ನತ್ಯವನ್ನು ತಲುಪಿದ್ದರು. ಆದರೆ ಸುತ್ತಲಿನ ಸಮಾಜ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಕೂಡಾ ಪ್ರಬುದ್ಧವಾಗಿರಲಿಲ್ಲ. ಹೀಗಾಗಿ ರಾಮಾನುಜರು ತಮ್ಮ ಜೀವಿತಾವಧಿಯಲ್ಲಿ ಎಷ್ಟು ಗೌರವಾದರಗಳನ್ನು ಪಡೆದರೋ ಅಷ್ಟೇ ವಿರೋಧವನ್ನೂ ಎದುರಿಸಿದರು. ಹೀಗಾಗಿಯೇ ಸದಾ ಒಂದು ಊರು ಬಿಟ್ಟು ಮತ್ತೊಂದಕ್ಕೆ, ಅಲ್ಲಿಂದ ಇನ್ನೊಂದಕ್ಕೆ – ಹೀಗೆ ಸಂಚರಿಸುತ್ತಲೇ ಇರುತ್ತಿದ್ದರು.

ಸಂಸಾರವನ್ನು ಬಹಳ ಹಿಂದೆಯೇ ತೊರಿದ್ದ ರಾಮಾನುಜರು ಗುರು ಮಹಾಪೂರ್ಣರಿಂದ ತಮ್ಮ ಮೂವತ್ತನೇ ವಯಸ್ಸಿನಲ್ಲಿ ದೀಕ್ಷೆ ಪಡೆದರು. ನಮ್ಮ ಕನ್ನಡ ನಾಡಿನ ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು ಪ್ರತಿಷ್ಠಾಪಿಸಿ, ಉತ್ಸವ ಮೂರ್ತಿಯಾಗಿ ‘ರಾಮಪ್ರಿಯ’ನನ್ನೂ ತಂದು ವೈರಮುಡಿ ಉತ್ಸವಕ್ಕೆ ಚಾಲನೆ ನೀಡಿದರು. ಹೊಯ್ಸಳ ದೊರೆ ಬಿಟ್ಟಿದೇವನಿಗೆ ಶ್ರೀವೈಷ್ಣವ ದೀಕ್ಷೆಯನ್ನಿತ್ತು, ಆತನನ್ನು ‘ವಿಷ್ಣುವರ್ಧನ’ ಎಂದು ಕರೆದರು. ಅವನಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಕಟ್ಟಿಸಿದರು. ಹೀಗೆ ರಾಮಾನುಜರು ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದಲ್ಲೆಲ್ಲಾ ಸಂಚರಿಸಿದರು.

ಶ್ರೀ ರಾಮಾನುಜಾಚಾರ್ಯರು ಸಂಸ್ಕೃತದಲ್ಲಿ ‘ಒಂಬತ್ತು’ ಗ್ರಂಥಗಳನ್ನು ರಚಿಸಿದ್ದು; ವೇದಗಳ ಅರ್ಥ ಮತ್ತು ಸಾರವನ್ನೊಳಗೊಂಡ ‘ವೇದಾರ್ಥ ಸಂಗ್ರಹ’,  ಭಗವದ್ಗೀತೆಯ ಟೀಕೆ ಮತ್ತು ವ್ಯಾಖ್ಯಾನವನ್ನೊಳಗೊಂಡ ‘ಭಗವದ್ಗೀತಾ ಭಾಷ್ಯ’ ಹಾಗೂ ಬ್ರಹ್ಮ ಸೂತ್ರಗಳಿಗೆ ವ್ಯಾಖ್ಯಾನವಾಗಿರುವ ‘ಶ್ರೀ ಭಾಷ್ಯ’ –   ಇವು ಹೆಚ್ಚು ಜನಪ್ರಿಯವಾಗಿವೆ.

ಶರಣಾಗತಿ ಗದ್ಯ, ಶ್ರೀರಂಗ ಗದ್ಯ ಮತ್ತು ವೈಕುಂಠ ಗದ್ಯಗಳನ್ನೊಳಗೊಂಡ ‘ಗದ್ಯ ತ್ರಯ’, ವೇದಾಂತ ದೀಪ, ವೇದಾಂತ ಸಾರ ಮತ್ತು ನಿತ್ಯಗ್ರಂಥಮ್ – ಇವು ರಾಮಾನುಜರ ಇತರ ಕೃತಿಗಳು.

“ಈಶ್ವರನದು ಶುದ್ಧ ಸತ್ವ ಗುಣ. ಪ್ರಳಯದಲ್ಲಿ ಜೀವ, ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಅವನದು ಶುದ್ಧ ಸತ್ವಗುಣ . ಪ್ರಳಯ ಕಾಲದಲ್ಲಿ ಜೀವ -ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಜಗತ್ತು ವ್ಯಕ್ತವಾದಾಗ ಕರ್ಮಾನುಸಾರವಾಗಿ ದೇಹಗಳು ಒದಗುತ್ತವೆ. ಶ್ರೀಮನ್ನಾರಾಯಣನೇ ಪರಬ್ರಹ್ಮ . ಅವನ ಶಕ್ತಿಯೇ ಲಕ್ಷ್ಮಿ. ವೈಕುಂಠವು ಸತ್ವದಿಂದಾಗಿದೆ. ಸರ್ವಕಲ್ಯಾಣ ಗುಣಗಳಿಂದ ಕೂಡಿದ ಶ್ರೀಮನ್ನಾರಾಯಣನು ತನ್ನ ಲೀಲೆಗಾಗಿ ಪ್ರಪಂಚವನ್ನು ಸೃಷ್ಟಿಸುತ್ತಾನೆ” ಎನ್ನುವುದು ವಿಶಿಷ್ಟಾದ್ವೈತದ ಪ್ರತಿಪಾದನೆ. “ಶ್ರೀ ಲಕ್ಷ್ಮೀನಾರಾಯಣನೇ ಪರತತ್ತ್ವ, ಚೇತನ, ಅಚೇತನಗಳೆಲ್ಲವೂ ಅವನಿಗೆ ಅಧೀನವಾದುವು ಮಾನವನು ತನ್ನ ಆತ್ಮೋನ್ನತಿ ಮತ್ತು ಶಾಶ್ವತ ಸುಖವಾದ ಮೋಕ್ಷ ಇವೆರಡನ್ನೂ ಪಡೆಯಲು ನಾರಾಯಣನಲ್ಲಿ ದೃಢವಾದ ವಿಶ್ವಾಸಪೂರ್ವಕ ಶರಣಾಗತಿಯಲ್ಲಿದೆ ಬೇರೆ ಗತಿ ಇಲ್ಲ” – ಇದು ರಾಮಾನುಜರ ಉಪದೇಶ ಸಾರ.

Leave a Reply