ಭಾವುಕತೆ ಮತ್ತು ಭಾವೋದ್ವೇಗ ಮತ್ತು ಕ್ರೌರ್ಯದ ಹುಟ್ಟು | ಜಿಡ್ಡು ಕಂಡ ಹಾಗೆ

ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಭಾವುಕತೆ ಮತ್ತು ಭಾವೋದ್ವೇಗ ಅಸೊಯೆಗೆ ಕಾರಣವಾಗುತ್ತವೆ ಮತ್ತು ಅಸೂಯೆ ಇರುವಲ್ಲಿ ಪ್ರೇಮ ಇರಲು ಬಯಸುವುದಿಲ್ಲ | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೇಮ ಇರುವಲ್ಲಿ ಭಾವುಕತೆ ಮತ್ತು ಭಾವೋದ್ವೇಗಕ್ಕೆ ಜಾಗವಿಲ್ಲ. ಭಾವುಕತೆ ಮತ್ತು ಭಾವೋದ್ವೇಗ ನಮ್ಮ ಇಷ್ಟಪಡುವಿಕೆ ಮತ್ತು ಇಷ್ಟಪಡದಿರುವಿಕೆಗಳ ಅಭಿವ್ಯಕ್ತಿ ಮಾತ್ರ. ನಾನು ನಿನ್ನನ್ನ ಇಷ್ಟಪಡುತ್ತೇನೆ, ನಿನ್ನ ಬಗ್ಗೆ ನನಗೆ ಅತಿ ಉತ್ಸಾಹ, ಓಹ್ ನನಗೆ ಈ ಜಾಗ ಇಷ್ಟ, ಎಷ್ಟು ಸುಂದರ ಇದು ಮತ್ತು ಮುಂತಾದವು, ಹಾಗೆಂದರೆ ಬಾಕಿ ಎಲ್ಲವನ್ನೂ ನಾನು ಇಷ್ಟಪಡುವುದಿಲ್ಲ ಎಂದಂತೆಯೇ. ಹಾಗಾಗಿಯೇ ಭಾವುಕತೆ ಮತ್ತು ಭಾವೋದ್ವೇಗ ಕ್ರೌರ್ಯವನ್ನು ಹುಟ್ಟಿಹಾಕುತ್ತವೆ.

ನೀವು ಗಮನಿಸಿರುವಿರಾ? ರಾಷ್ಟ್ರಧ್ವಜದೊಡನೆ ನಿಮ್ಮನ್ನು ನೀವು ಗುರುತಿಸಿಕೊಳ್ಳುವುದು ಭಾವುಕತೆ ಮತ್ತು ಭಾವೋದ್ವೇಗದ ಸಂಗತಿ ಮತ್ತು ಈ ಒಂದು ಅಂಶಕ್ಕಾಗಿ ನೀವು ಇನ್ನೊಬ್ಬರನ್ನು ಕೊಲ್ಲಲೂ ಸಿದ್ಧರಿರುವಿರಿ ಮತ್ತು ಈ ಕೊಲ್ಲುವಿಕೆಯನ್ನ ದೇಶಪ್ರೇಮ ಎಂದು ನಂಬಿಕೊಂಡಿರುವಿರಿ.

ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಭಾವುಕತೆ ಮತ್ತು ಭಾವೋದ್ವೇಗ ಅಸೊಯೆಗೆ ಕಾರಣವಾಗುತ್ತವೆ ಮತ್ತು ಅಸೂಯೆ ಇರುವಲ್ಲಿ ಪ್ರೇಮ ಇರಲು ಬಯಸುವುದಿಲ್ಲ.

ನೀನು ನನಗಿಂತ ಸುಂದರ, ಶ್ರೀಮಂತ, ಜಾಣ ಇವೆಲ್ಲ ಅಸೂಯೆಯ ಕಾರಣಗಳು ಆದರೆ ನಾವು ಒಪ್ಪಿಕೊಳ್ಳುವುದಿಲ್ಲ ನಮಗೇ ಗೊತ್ತಾಗದಂತೆ ಸ್ಪರ್ಧೆಗೆ ಇಳಿದಿರುತ್ತೇವೆ. ಒಮ್ಮೆ ಸ್ಪರ್ಧೆಗೆ ಇಳಿದೆವೆಂದರೆ ನಮ್ಮನ್ನು ನಾವು ಪ್ರೇಮದಿಂದ ದೂರ ಮಾಡಿಕೊಂಡಂತೆ.

ಆದ್ದರಿಂದಲೇ ಅಸೂಯೆಯನ್ನು ಒರೆಸಿ ನಿಮ್ಮನ್ನು ನೀವು ಸ್ವಚ್ಛ ಮಾಡಿಕೊಳ್ಳಿ. ಅಸೂಯೆಯಿಂದ ದೂರವಾಗುವ ತಂತ್ರಗಳನ್ನು ಅಭ್ಯಾಸ ಮಾಡುತ್ತ ಜೊತೆ ಜೊತೆಗೆ ಅಸೂಯೆಪಡುತ್ತ ಕ್ರೌರ್ಯವನ್ನು ಹುಟ್ಟು ಹಾಕಬೇಡಿ. ಬಿರುಸಿನ ಮಳೆ ಎಲೆಗಳ ಮೇಲೆ ಕುಳಿತಿರುವ ಧೂಳನ್ನು ಒಮ್ಮೆಲೇ ಕಿತ್ತೆಸೆದು ಸ್ವಚ್ಛವಾಗುವಂತೆ ಅಸೂಯೆ, ಭಾವುಕತೆ ಮತ್ತು ಭಾವೋದ್ವೇಗಗಳನ್ನು ನಿಮ್ಮಿಂದ ಕಿತ್ತುಹಾಕಿಬಿಡಿ.

Leave a Reply