ಬ್ರಹ್ಮಲೋಕದಲ್ಲಿ ಮಹಾರಾಜ ಕುಕುದ್ಮಿ ಮತ್ತು ರೇವತಿ

ಭೂಮಂಡಲವನ್ನು ಬಿಟ್ಟು ಬೇರೆ ಲೋಕಕ್ಕೆ ಹೋದರೆ ಅಲ್ಲಿಗೂ ಇಲ್ಲಿಗೂ ಸಮಯ ಎಷ್ಟು ವ್ಯತ್ಯಾಸವಾಗುತ್ತದೆ ಅನ್ನುವ ಅಚ್ಚರಿಯ ಅರಿವು ಈ ಕಥೆಯಲ್ಲಿದೆ… | ಭಾಗವತ ಪುರಾಣದಿಂದ…

ಕುಕುದ್ಮಿ ಎಂಬ ಅರಸನಿಗೆ ರೇವತಿ ಎಂಬ ಮಗಳಿರುತ್ತಾಳೆ. ರೂಪ ಗುಣಗಳಲ್ಲಿ ಅಪ್ರತಿಮಳಾದ ಆಕೆಯನ್ನು ಮದುವೆಯಾಗಲು ಬಯಸಿ ಸುತ್ತಲಿನ ಹಲವು ರಾಜಕುಮಾರರು ಒಕ್ಕಣೆ ಕಳುಹಿಸಿರುತ್ತಾರೆ. ಅವರೆಲ್ಲರೂ ಒಬ್ಬರಿಗಿಂತ ಒಬ್ಬರು ಶೂರರೂ ಧೀರರೂ ಸುಂದರರೂ ಆಗಿದ್ದು, ಸೂಕ್ತ ವರನ ಆಯಕೆಯಲ್ಲಿ ತಂದೆ ಮಗಳಿಬ್ಬರೂ ಸೋಲುತ್ತಾರೆ.

ಕುಕುದ್ಮಿಗೆ ತನ್ನ ಮಗಳ ಹಣೆಯಲ್ಲಿ ಯಾರ ಹೆಸರು ಬರೆಯಲಾಗಿದೆಯೋ ಆತನೇ ಮದುವೆಯಾಗುವನು. ಆದರೆ ಬ್ರಹ್ಮ ದೇವ ಯಾರನ್ನು ಆಕೆಯ ಪತಿಯನ್ನಾಗಿ ಬರೆದಿರಬಹುದು? ಎಂಬ ಕುತೂಹಲ ಉಂಟಾಗುತ್ತದೆ. ಸೂಕ್ತನಾದ ವರ ತಾನಾಗಿಯೇ ಬರುವವರೆಗೆ ಕಾಯುವುದಕ್ಕಿಂತ ಒಮ್ಮೆ ಬ್ರಹ್ಮನನ್ನೇ ಕೇಳಿಕೊಂಡು ಬರೋಣವೆಂದು ಮಗಳು ರೇವತಿಯನ್ನೂ ಕರೆದುಕೊಂಡು ಬ್ರಹ್ಮಲೋಕಕ್ಕೆ ಹೊರಡುತ್ತಾನೆ. ಕುಕುದ್ಮಿ ಒಬ್ಬ ಧರ್ಮಭೀರುವಾದ, ಮಹಾತ್ಮನಾದ ಅರಸ. ಬ್ರಹ್ಮ ಲೋಕ ಪ್ರವೇಶಕ್ಕೆ ಬೇಕಾದ ಅರ್ಹತೆಗಳಲ್ಲವೂ ಆತನಲ್ಲಿ ಇದ್ದುದರಿಂದ ಸುಲಭವಾಗಿ ಪ್ರವೇಶ ದೊರಕುತ್ತದೆ.

ತಂದೆ ಮಗಳಿಬ್ಬರೂ ಬ್ರಹ್ಮನೆದುರು ಕೈಮುಗಿದು ನಿಲ್ಲುತ್ತಾರೆ ಆ ಸಮಯದಲ್ಲಿ ಹಲವು ಗಂಧರ್ವರು ಅಲ್ಲಿ ಸಂಗೀತ ಸೇವೆ ನಡೆಸುತ್ತಿರುತ್ತಾರೆ. ಅದು ಮುಗಿಯುವವರೆಗೂ ಕಾದಿದ್ದು, ಅನಂತರ ಕುಕುದ್ಮಿಯು ಬ್ರಹ್ಮನಿಗೆ ತಾವು ಬಂದ ಕಾರಣವನ್ನು ತಿಳಿಸುತ್ತಾನೆ. ಅದನ್ನು ಕೇಳಿದ ಬ್ರಹ್ಮದೇವನು ಗಟ್ಟಿಯಾಗಿ ನಕ್ಕುಬಿಡುತ್ತಾನೆ. ಮತ್ತು ಕುಕುದ್ಮಿಯನ್ನು ಕುರಿತು, `ರಾಜನೇ! ನೀನು ಭೂಲೋಕವನ್ನು ತೊರೆದು 27 ಚತುರ್ಯುಗಗಳು ಕಳೆದಿವೆ. ಅಂದರೆ, 108 ಯುಗಗಳು ಸಂದುಹೋಗಿವೆ. ಈಗ ನೀನು ಭೂಮಿಗೆ ಮರಳಿದಾಗ ನಿನ್ನದೆನಿಸಿದ್ದ ರಾಜ್ಯ, ಪ್ರಜೆಗಳು, ಆಪ್ತೇಷ್ಟರು, ಅಷ್ಟೇ ಯಾಕೆ, ನಿನ್ನ ಮಗಳಿಗೆಂದು ನೀನು ನಿಕ್ಕಿ ಮಾಡಿಕೊಂಡಿರುವ ವರಗಳು – ಇವರ್ಯಾರೂ ಇರುವುದಿಲ್ಲ. ಅವರೆಲ್ಲ ನಶಿಸಿ, ಅವರ ತಲೆಮಾರುಗಳೂ ನಶಿಸಿ, ಯುಗಯುಗಗಳೇ ಬದಲಾಗಿಹೋಗಿವೆ.’ ಎನ್ನುತ್ತಾನೆ.

ಇದರಿಂದ ಕುಕುದ್ಮಿ ಹಾಗೂ ರೇವತಿಯರು ಗಾಬರಿಗೊಳ್ಳುತ್ತಾರೆ. ಅವರನ್ನು ಸಮಾಧಾನಿಸುವ ಬ್ರಹ್ಮ ದೇವ ಯದುಕುಲದ ಬಲರಾಮನಿಗೆ ರೇವತಿಯನ್ನು ಕೊಟ್ಟು ಮದುವೆಮಾಡುವಂತೆಯೂ ಅನಂತರ ಕುಕುದ್ಮಿಗೆ ವಾನಪ್ರಸ್ಥ ಸ್ವೀಕರಿಸುವಂತೆಯೂ ತಿಳಿಸುತ್ತಾನೆ.

ಅದರಂತೆ ಭೂಮಿಗೆ ಮರಳುವ ತಂದೆ ಮಗಳಿಬ್ಬರೂ ಬದಲಾದ ಭೂಮಂಡಲವನ್ನು ಕಂಡು ಅಚ್ಚರಿಗೊಳ್ಳುತ್ತಾರೆ. ಅವರ ಗಾತ್ರದ ಅರ್ಧದಷ್ಟು ಶರೀರದ ಜನರು, ಅವರ – ಅವರ ರಾಜ್ಯದ ಹೆಸರೂ ಕೇಳಿಲ್ಲದ ಜನರು ಅವರಿಗೆ ಎದುರಾಗುತ್ತಾರೆ. ಹೀಗಿರುವಾಗ ರೇವತಿಯನ್ನು ಮದುವೆಯಾಗಲಿರುವ ಬಲರಾಮನೂ ಗಾತ್ರದಲ್ಲಿ ಕಿರಿಯನಾದರೆ ಏನು ಮಾಡುವುದೆಂಬ ಯೋಚನೆ ಕುಕುದ್ಮಿಯನ್ನು ಕಾಡುತ್ತದೆ. ಅದೇ ಯೋಚನೆಯಲ್ಲೇ ತಂದೆ ಮಗಳಿಬ್ಬರೂ ದ್ವಾರಕೆಗೆ ಬರುತ್ತಾರೆ. ಅತ್ತ ಬಲರಾಮನೂ ತನ್ನ ಗಾತ್ರಕ್ಕೆ ತಕ್ಕ ಹೆಣ್ಣು ಸಿಗದೆ ಮದುವೆಯನ್ನು ಮುಂದೂಡುತ್ತ ಇರುತ್ತಾನೆ. ರಾಜಾ  ಕುಕುದ್ಮಿ ತನ್ನ ಮಗಳನ್ನು ಮದುವೆಯಾಗುವ ಪ್ರಸ್ತಾಪ ಮುಂದಿಡುತ್ತಲೇ ಬಲರಾಮ ಒಪ್ಪಿ ಸಂಭ್ರಮದಿಂದ ರೇವತಿಯನ್ನು ಮದುವೆಯಾಗುತ್ತಾನೆ. 

ಭೂಮಂಡಲವನ್ನು ಬಿಟ್ಟು ಬೇರೆ ಲೋಕಕ್ಕೆ ಹೋದರೆ ಅಲ್ಲಿಗೂ ಇಲ್ಲಿಗೂ ಸಮಯ ಎಷ್ಟು ವ್ಯತ್ಯಾಸವಾಗುತ್ತದೆ ಅನ್ನುವ ಅಚ್ಚರಿಯ ಅರಿವು ಈ ಕಥೆಯಲ್ಲಿದೆ. ಇವತ್ತಿನ Sci-Fi ಕಥೆಗಳು ಇಂಥ ಸ್ವಾರಸ್ಯ ಚರ್ಚಿಸುವುದನ್ನು ನೀವು ನೋಡಿರಬಹುದು. ಕುಕುದ್ಮಿ – ರೇವತಿಯ ವೃತ್ತಾಂತ, ಅಂಥಾ ಸ್ವಾರಸ್ಯಗಳಲ್ಲಿ ಅತ್ಯಂತ ಪ್ರಾಚೀನವಾದುದು ಎಂದು ಹೇಳಲಡ್ಡಿಯಿಲ್ಲ.

ಅಂದ ಹಾಗೆ ಈ ಕತೆ, ಭಾಗವತ ಪುರಾಣದಲ್ಲಿ ಬರುತ್ತದೆ.

1 Comment

Leave a Reply