ನಮ್ಮ ಪ್ರತಿ ಸಮಸ್ಯೆಗೂ ಉತ್ತರ ಅಸ್ತಿತ್ವದ ಹರಿವಿನಲ್ಲಿದೆ. ಆದರೆ ನಾವು ಅದನ್ನು ಮತ್ತೆಲ್ಲೋ ಹುಡುಕುತ್ತ, ಪ್ರಯತ್ನಪಡುತ್ತ ಆ ಹರಿವನ್ನು ಕದಡುತ್ತೇವೆ. ಒಡ್ಡು ಕಟ್ಟುತ್ತೇವೆ. ನಮ್ಮೆಲ್ಲ ಪ್ರಯತ್ನಗಳು ಮುಗಿದ ನಂತರ, ಒಡ್ಡು ಒಡೆದ ನಂತರ, ಅಸ್ತಿತ್ವ ತನ್ನ ಪರಿಹಾರವನ್ನು ಹರಿಬಿಡುತ್ತದೆ. ಈ ಸಹಜ ಪ್ರಕ್ರಿಯೆಯ ನಡುವೆ ನಾವು ಹಸ್ತಕ್ಷೇಪ ಮಾಡದೆ ಸಹನೆಯಿಂದ ಇದ್ದರೆ, ಯಾವುದು ಸಂಭವಿಸಿಯೇ ತೀರುವುದೋ ಅದು ನಮ್ಮ ಮನಶ್ಶಾಂತಿ ಕೆಡದಂತೆ ತಾನೇತಾನಾಗಿ ಸಂಭವಿಸುತ್ತದೆ. । ಅಲಾವಿಕಾ
ಸಹನೆ ಎಂದರೆ ಕೇವಲ ತಾಳಿಕೊಳ್ಳುವುದಲ್ಲ. ತಾಳಿಕೊಳ್ಳುವಿಕೆ ಅಥವಾ ಸಹಿಸುವಿಕೆಯಲ್ಲೂ ನಾವು ಒಂದು ಕ್ರಿಯೆಯಲ್ಲಿ ತೊಡಗಿರುತ್ತೇವೆ. ಸಹನೆ ಎಂದರೆ ಸುಮ್ಮನಿರುವುದು. ಅದು ಕಾಯುವುದೂ ಅಲ್ಲ, ಬರಿದೇ ಸುಮ್ಮನಿರುವುದು. ಯಾವಾಗ ನಮ್ಮಿಂದ ಯಾವ ಕ್ರಿಯೆಯೂ ನಡೆಯುತ್ತಿರುವುದಿಲ್ಲವೋ ಆಗ ಅಸ್ತಿತ್ವ ತನ್ನ ದಾಳ ಬೀಸುತ್ತದೆ. ಆಗ ಮಹತ್ತಾದುದೊಂದು ಘಟಿಸುತ್ತದೆ. ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತಿಳಿವು ಮೂಡುತ್ತದೆ. ಅದರ ಬದಲು, ನಾವೇ ಏನಾದರೊಂದು ಮಾಡುತ್ತ ಉಳಿದಾಗ, ನಮ್ಮಪಾಳಿ ಮುಗಿಯಲೆಂದು ಅಸ್ತಿತ್ವ ಕಾಯುತ್ತದೆ. ನಾವು ಸುಮ್ಮನಾಗದೆ, ಅದರ ಪಾಳಿ ಬರದೇ, ಘಟಿಸಬೇಕಾದ್ದು ಘಟಿಸದೇ ಹೋಗುವ ಸಾಧ್ಯತೆಯೇ ಹೆಚ್ಚಾಗುತ್ತದೆ!
ನಮ್ಮ ಪ್ರತಿ ಸಮಸ್ಯೆಗೂ ಉತ್ತರ ಅಸ್ತಿತ್ವದ ಹರಿವಿನಲ್ಲಿದೆ. ಆದರೆ ನಾವು ಅದನ್ನು ಮತ್ತೆಲ್ಲೋ ಹುಡುಕುತ್ತ, ಪ್ರಯತ್ನಪಡುತ್ತ ಆ ಹರಿವನ್ನು ಕದಡುತ್ತೇವೆ. ಒಡ್ಡು ಕಟ್ಟುತ್ತೇವೆ. ನಮ್ಮೆಲ್ಲ ಪ್ರಯತ್ನಗಳು ಮುಗಿದ ನಂತರ, ಒಡ್ಡು ಒಡೆದ ನಂತರ, ಅಸ್ತಿತ್ವ ತನ್ನ ಪರಿಹಾರವನ್ನು ಹರಿಬಿಡುತ್ತದೆ. ಈ ಸಹಜ ಪ್ರಕ್ರಿಯೆಯ ನಡುವೆ ನಾವು ಹಸ್ತಕ್ಷೇಪ ಮಾಡದೆ ಸಹನೆಯಿಂದ ಇದ್ದರೆ, ಯಾವುದು ಸಂಭವಿಸಿಯೇ ತೀರುವುದೋ ಅದು ನಮ್ಮ ಮನಶ್ಶಾಂತಿ ಕೆಡದಂತೆ ತಾನೇತಾನಾಗಿ ಸಂಭವಿಸುತ್ತದೆ. ಈ ಸೈರಣೆಯನ್ನು, ಶರಣಾಗತಿಯನ್ನು, ಹರಿವಿಗೆ ಕೊಟ್ಟುಕೊಳ್ಳುವುದನ್ನು ನಾವು ಕಲಿತುಕೊಳ್ಳಬೇಕಷ್ಟೆ.
ಎಲ್ಲಿಯವರೆಗೆ ನಾವು ಅಹಮ್ಮಿನ ಆಸರೆಯಲ್ಲಿ ಇರುತ್ತೇವೋ ಅಲ್ಲಿಯವರೆಗೆ ನಾವು ದಡ ಸೇರುವುದು ಸಾಧ್ಯವಿಲ್ಲ. ದಡದಲ್ಲಿನ ಮರದ ಬೊಡ್ಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಈಜುತ್ತೇನೆ ಎಂದು ಹೊರಟರೆ ಈಜಲು ಸಾಧ್ಯವೇ? ಪರಿಹಾರ ನಮ್ಮೊಳಗೇ ಇದೆ ಎನ್ನುವ ಹಮ್ಮಿಟ್ಟುಕೊಂಡು ಪರಮ ಅಸ್ತಿತ್ವವೇ ಕಾಪಾಡು ಎಂದು ಮೊರೆ ಇಟ್ಟರೆ ಅದು ಕೃತಕವಾಗುವುದಿಲ್ಲವೆ? ನಮ್ಮ ಚಡಪಡಿಕೆಗಳನ್ನು ಅಹಂಕಾರ – ಆತಂಕಗಳನ್ನು ಕೈಬಿಟ್ಟು ಸುಮ್ಮನಾದ ಕ್ಷಣ ನಮಗೆ ಪರಿಹಾರ ದೊರಕುತ್ತದೆ.
ಕಲ್ಲಿನಲಿ ಹುಟ್ಟಿತಾ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಿಗಲ್ಲಿಗೆ ಆಹಾರವನಿತ್ತವರು ಯಾರೋ
ಬಲ್ಲಿದನು ಆದಿಕೇಶವರಾಯ ಎಲ್ಲರನು
ಸಲಹುವನು ಇದಕೆ ಸಂಶಯ ಬೇಡ
– ಎಂದು ಹಾಡಿದ್ದಾರೆ ಕನಕ ದಾಸರು.
ಬೆಟ್ಟದ ತುದಿಯಲ್ಲಿಹುಟ್ಟಿದ ವೃಕ್ಷವನ್ನು ಪೋಷಿಸುವ ಭಗವಂತ, ಹುಟ್ಟಿಸಿದ ಕರುವಿಗೆ ಹುಲ್ಲನ್ನೂ ಕರುಣಿಸುವ ಭಗವಂತ, ಮನುಷ್ಯ ಕುಲವೊಂದನ್ನು ಯಾಕೆ ತಾನೆ ಬೇರೆ ಇಟ್ಟಾನು?
ಇಲ್ಲಿ ಭಗವಂತ ಅಂದರೆ ಪರಮ ಅಸ್ತಿತ್ವ. ಸುಲಭ ತಿಳಿವಿಗೆ ಪ್ರಕೃತಿ ಎಂದು. ಪಂಚಭೂತಗಳು ಗೋಡೆ ಮೇಲಿನ ಮೊಳಕೆಗೂ ತಾನೊಡೆದು ಗಿಡವಾಗಲು ಅನುಕೂಲ ಮಾಡಿಕೊಡುತ್ತವೆ. ಹೀಗಿರುವಾಗ ಮನುಷ್ಯನಿಗೆ ಏನೋ ಧಾವಂತ. ಮೊಳಕೆ ಸುಮ್ಮನಿರುತ್ತದೆ. ಅಸ್ತಿತ್ವ ಅದರ ಕಾಳಜಿವಹಿಸಿ ಗಿಡವಾಗಿ ಬೆಳೆಸುತ್ತದೆ.
ಪ್ರಾಣಿಗಳಾದರೂ ಅಸ್ತಿತ್ವ ಕರುಣಿಸಿದ ಬೇಟೆಯನ್ನು ಆಹಾರವನ್ನು ಒದಗಿಸಿಕೊಂಡು ಹೊಟ್ಟೆಹೊರೆಯುತ್ತವೆ. ಅವಕ್ಕೂ ಯಾವ ಬಗೆಯ ಚಿಂತೆ ಇಲ್ಲ. ಆದರೆ ಮನುಷ್ಯ ಮಾತ್ರ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ದಾಸ್ತಾನಿಡುತ್ತಾನೆ. ಅಸ್ತಿತ್ವದಲ್ಲಿ ನಂಬಿಕೆಯಿಡದೆ ತನ್ನ ಅಹಂಕಾರದ ಮೊರೆ ಹೋಗುತ್ತಾನೆ. ಲೋಭಿಯಾಗುತ್ತಾನೆ. ಧಾವಂತ ಪಡುತ್ತಾನೆ. ಅವನ ಈ ಧಾವಂತ ಕೊನೆಗೆ ತನ್ನನ್ನೇ ತಾನು ಮುಗಿಸಿಕೊಳ್ಳುವ ಹಂತ ತಲುಪುತ್ತದೆ.
ಸಹನೆ ಪೋಷಣೆ ನೀಡುತ್ತದೆ, ಧಾವಂತ ನಮ್ಮನ್ನೇ ಮುಗಿಸುತ್ತದೆ.
ಗಜೇಂದ್ರ ಮೋಕ್ಷದ ಕಥೆ ನೆನಪಿಸಿಕೊಳ್ಳಿ. ಮೊಸಳೆ ಬಾಯಿಗೆ ಕಾಲು ಸಿಕ್ಕಿಸಿಕೊಂಡ ಗಜೇಂದ್ರ ಕಾಪಾಡೆಂದು ಶ್ರೀಹರಿಯನ್ನ ಬೇಡುತ್ತಾನೆ. ಎಷ್ಟು ಸಮಯವಾದರೂ ಹರಿ ಬಾರನು. ಯಾವಾಗ ಗಜೇಂದ್ರ ಆಸರೆಗೆಂದು ತನ್ನಸೊಂಡಿಲಿನಿಂದ ಗಟ್ಟಿಯಾಗಿ ಹಿಡಿದಿದ್ದ ಜೊಂಡನ್ನು ಬಿಡುತ್ತಾನೋ ಆಗ ಹರಿಯು ಕಾಣಿಸಿಕೊಳ್ಳುತ್ತಾನೆ. ಸಹಾಯಕ್ಕೆ ನಮ್ಮ ಮೊರೆ ಪ್ರಾಮಾಣಿಕವಾಗಿದ್ದರೆ ಸಹಾಯ ಒದಗುವುದು ಶತಸ್ಸಿದ್ದ. ಆದರೆ ಅದು ಅಹಂಕಾರ ರಹಿತವೂ ಆಗಿರಬೇಕು.
ಅಹಂಕಾರ ಪ್ರವೃತ್ತಿಯ ಸದಾ ಗುರುತನ್ನು ಬಯಸುತ್ತ ಇರುತ್ತದೆ. ಅದನ್ನು ಉಳಿಸಿಕೊಳ್ಳಲು ಚಡಪಡಿಸುತ್ತಿರುತ್ತದೆ. ಅದಕ್ಕಾಗಿ ಏನೆಲ್ಲ ಹೋರಾಟಗಳನ್ನು ಮಾಡುತ್ತದೆ. ಸ್ಪರ್ಧೆಗಿಳಿಯುತ್ತದೆ, ಹೊಟ್ಟೆಕಿಚ್ಚು ಪಡುತ್ತದೆ, ಮೋಸ ವಂಚನೆಗಳಿಗೂ ಹಿಂಜರಿಯುವುದಿಲ್ಲ. ಈ ಎಲ್ಲ ಗೋಜಲುಗಳಿಂದಾಗಿ ಅಂತರಂಗ ಕಲುಷಿತಗೊಳ್ಳುತ್ತದೆ. ತಿಳಿಗೊಳದಂಥ ನಮ್ಮ ಆಂತರ್ಯವು ಕಲುಷಿತಗೊಂಡಾಗ, ತಳದಲ್ಲಿರುವ ಪರಿಹಾರ ನಮಗೆ ಕಾಣದೆ ಹೋಗುತ್ತದೆ.
ಆದ್ದರಿಂದ ನಮ್ಮಪ್ರಯತ್ನಗಳನ್ನೂ ಅಹಂಕಾರದ ಪರಿಧಿಯಿಂದ ಹೊರಗಿಟ್ಟುಕೊಂಡೇ ನಾವು ವ್ಯವಹರಿಸಬೇಕು. ಅಹಂಕಾರ ಕಳೆದ ಘಳಿಗೆಯಲ್ಲೇ ಪ್ರಯತ್ನಗಳೂ ಇಲ್ಲವಾಗುತ್ತವೆ. ಆಗ ಸಹನೆ ಸಾಧ್ಯವಾಗುತ್ತದೆ, ಸುಮ್ಮನಿರುವುದು ಕೂಡಾ.
ಈಗ, ಇಲ್ಲೊಂದು ಪ್ರಶ್ನೆ ಹುಟ್ಟಿಕೊಳ್ಳಬಹುದು. ಗಜೇಂದ್ರನ ಉದಾಹರಣೆಯಲ್ಲಿ ಆತ ಸುಮ್ಮನೆ ಎಲ್ಲಿದ್ದ, ಆತ ಹರಿನಾಮ ಸ್ಮರಣೆ ಮಾಡುತ್ತಿದ್ದನಲ್ಲವೆ? ಆತ ಏನೋ ಒಂದು ಪ್ರಕ್ರಿಯೆಯಲ್ಲಿ ಇದ್ದನಲ್ಲವೆ – ಎಂದು.
ನಾಮ ಸ್ಮರಣೆ ಅಥವಾ ಶರಣಾಗತಿಯಲ್ಲೂ ಒಂದು ಬಗೆಯಿದೆ. ನಿರೀಕ್ಷೆ ಇಟ್ಟುಕೊಂಡು ಮಾಡುವಂಥ ನಾಮ ಸ್ಮರಣೆಯಾಗಲೀ ಶರಣಾಗತಿಯಾಗಲೀ ಆತ್ಯಂತಿಕ ಫಲವನ್ನು ಕೊಡುವುದಿಲ್ಲ. ಹಿಂದೆಲ್ಲ ಸಾಧು ಸಂತರು ನಾಮ ಸ್ಮರಣೆ ಮಾಡುತ್ತ ಮಾಡುತ್ತ ಒಂದು ಹಂತದ ನಂತರ ತಾವು ಹಾಗೆ ಮಾಡುತ್ತಿದ್ದೇವೆ ಎಂಬ ಅರಿವನ್ನೂ ಮೀರಿ ಸಾಗುತ್ತಿದ್ದರು. ಅಲ್ಲಿಂದ ಮುಂದೆ ನಾಮ ಸ್ಮರಣೆ ತನ್ನಿಂತಾನೆ ನಡೆಯುವ ಕ್ರಿಯೆಯಾಗುತ್ತಿತ್ತು. ಸಂತ ತುಳಸೀದಾಸರು ನಿದ್ರಿಸುತ್ತಿದ್ದಾಗ ಅವರ ರೋಮ ರೋಮಗಳಿಂದ ರಾಮನಾಮ ಹೊಮ್ಮುತ್ತಿತ್ತಂತೆ!
ಸಾಧಕರು ಏನನ್ನೂ ಮಾಡುವ ಗೋಜಿಗೆ ಹೋಗುವುದಿಲ್ಲ. ಎಲ್ಲಕ್ಕೂ ತಮ್ಮನ್ನು ಕೊಟ್ಟುಕೊಳ್ಳುತ್ತಾರಾದ್ದರಿಂದ ಅವರ ಪಾಲಿನ ಎಲ್ಲವೂ ತಾನಾಗೇ ನಡೆಯುತ್ತವೆ. ಶರಣಾಗತಿಯೂ ಅಷ್ಟೇ. ನಾನು ಶರಣಾಗತನಾಗುತ್ತೇನೆ, ಅದಕ್ಕೆ ಬದಲಿಯಾಗಿ ನನ್ನನ್ನು ರಕ್ಷಿಸು ಎನ್ನುವಂಥ ಕರಾರು ಲೌಕಿಕದಲ್ಲಿ ಮಾತ್ರ ಸಲ್ಲುವಂಥದ್ದು. ಅಧ್ಯಾತ್ಮದಲ್ಲಿ ಹಾಗಾಗುವುದಿಲ್ಲ. ಶರಣಾಗತಿಯೆಂದರೆ ಎಲ್ಲವನ್ನೂ; ನಿರೀಕ್ಷೆಯನ್ನೂ ಅಪೇಕ್ಷೆಯನ್ನೂ ಗುರುತನ್ನೂ ಅಹಂಕಾರವನ್ನೂ ಬಿಟ್ಟುಕೊಟ್ಟು ಬರುವುದು. ಅವೆಲ್ಲವನ್ನೂ ಬಿಟ್ಟಮೇಲೆ ಏನು ತಾನೆ ಉಳಿಯುವುದು!? ಹೀಗೆ ಎಲ್ಲವನ್ನೂ ಬಿಟ್ಟಮೇಲೆ ಏನು ಉಳಿಯುತ್ತದೆಯೋ ಅದು ಸ್ವಯಂಬೋಧೆ. ಈ ಬೋಧೆಯು ನಮ್ಮನ್ನು ಜಂಜಡಗಳಿಂದ, ಲೌಕಿಕದ ಸಂಘರ್ಷಗಳಿಂದ ದೂರ ಉಳಿಸುವುದು. ಈ ಮೂಲಕ ಶಾಂತಿ, ನೆಮ್ಮದಿ ನಮ್ಮಪಾಲಿಗೆ ಒದಗುವವು.