ಮನುಷ್ಯ ಜಾತಿಯ ದುಸ್ಥಿತಿಗೆ ಕಾರಣ ಯಾರು ಗೊತ್ತೇ : ಯೂಜಿ ಮಾತು

ನನ್ನೊಳಗೆ ಬದಲಾಯಿಸಿಕೊಳ್ಳುವಂಥದು ಏನೂ ಇಲ್ಲ ಮತ್ತು ನಾನು ಯಾವುದನ್ನೂ ಬದಲಾಯಿಸಿಕೊಳ್ಳಬೇಕಿಲ್ಲ, ಬುದ್ಧಿ-ಮನಸ್ಸು (mind) ಎನ್ನುವ ಯಾವುದೂ ಇಲ್ಲ ಮತ್ತು ಸಾಕ್ಷಾತ್ಕರಿಸಿಕೊಳ್ಳಬೇಕಾದ ಯಾವ ಸ್ವಂತವೂ (self realisation) ಇಲ್ಲ| ಯುಜಿ ಕೃಷ್ಣಮೂರ್ತಿ ; ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರಶ್ನೆ : ಯಾಕೆ ಜಗತ್ತಿನ ಆಗುಹೋಗುಗಳ ಬಗ್ಗೆ ನಿಮಗೆ ಇಷ್ಟು ನಿರುತ್ಸಾಹದ ದೃಷ್ಟಿಕೋನ?

ಯೂಜಿ : ಒಂದು ಕಾಲದಲ್ಲಿ ನಾನು ಎಲ್ಲ ಥರದ ಧಾರ್ಮಿಕ, ಅಧ್ಯಾತ್ಮಿಕ ಜನರಿಂದ ಸುತ್ತುವರಿಯಲ್ಪಟ್ಟಿದ್ದೆ. ನನಗೆ ಅವರ ವ್ಯವಹಾರಗಳು ತಮಾಷೆ ಅನಿಸತೊಡಗಿದವು. ಅವರ ನಂಬಿಕೆಗಳ ಮತ್ತು ಬದುಕಿನ ನಡುವೆ ಅಪಾರ ವೈರುಧ್ಯವಿತ್ತು ಮತ್ತು ಈ ಸಂಗತಿ ಯಾವಾಗಲೂ ನನ್ನ ಕಾಡುತ್ತಿತ್ತು. ಆದರೆ ನಾನು ಅವರನ್ನ ಕಪಟಿಗಳು (hypocrites) ಎಂದೆಲ್ಲ ಆರೋಪ ಮಾಡುವುದಿಲ್ಲ. ಅವರ ನಂಬಿಕೆಗಳಲ್ಲಿಯೇ ಏನೋ ತೊಂದರೆಯಿತ್ತು. ಬಹುಶಃ ಅವರಲ್ಲಿ ಈ ನಂಬಿಕೆಗಳನ್ನ ಹುಟ್ಟಿಸಿದ ಮೂಲಗಳಲ್ಲಿಯೇ ತಪ್ಪು ಇರಬಹುದು. ಮನುಷ್ಯ ಜಾತಿಯನ್ನು ಪ್ರಭಾವಿಸಿದ ಎಲ್ಲ ಗುರುಗಳು ವಿಶೇಷವಾಗಿ ಅಧ್ಯಾತ್ಮಿಕ ಗುರುಗಳು ತಮ್ಮನ್ನು ವಂಚಿಸಿಕೊಳ್ಳುವುದಷ್ಟೇ ಅಲ್ಲ ಇಡೀ ಮನುಷ್ಯ ಜಾತಿಯನ್ನ ವಂಚಿಸಿದರು. ಆದ್ದರಿಂದಲೇ ನಾನು ಸ್ವತಃ ನನ್ನ ಹುಡುಕಾಟವನ್ನ ಮುನ್ನಡೆಸಬೇಕಿತ್ತು ಮತ್ತು ಇನ್ನೊಬ್ಬರ ಮೇಲೆ ನಾನು ಅವಲಂಬಿತನಾಗಿರುವವರೆಗೆ ಇದು ಅಸಾಧ್ಯವಾಗಿತ್ತು.

ನಾನು ಬಯಸುತ್ತಿರುವ ಎಲ್ಲವೂ, ಅವರು (ಧಾರ್ಮಿಕ ಮತ್ತು ಅಧ್ಯಾತ್ಮಿಕ ಗುರುಗಳು) ನಾನು ಬಯಸಬೇಕೆಂದು ಬಯಸಿದ ಸಂಗತಿಗಳೇ ಆಗಿದ್ದವು ಎನ್ನುವುದನ್ನ ನಾನು ಬಹುಬೇಗ ಕಂಡುಕೊಂಡೆ. ನಾನು ವಿಚಾರ ಮಾಡುತ್ತಿರುವ ಸಂಗತಿಗಳೆಲ್ಲ ನಾನು ವಿಚಾರ ಮಾಡಬೇಕೆಂದು ಅವರು ಬಯಸಿದ ಸಂಗತಿಗಳೇ ಆಗಿದ್ದವು. ಇದೊಂದು ವಿಷವೃತ್ತ. ಹೀಗಿರುವಾಗ ಏನೊ ಒಂದು ಮಿಂಚು ಅಚಾನಕ್ ಆಗಿ ನನ್ನ ಅಪ್ಪಳಿಸಿತು :

“ ನನ್ನೊಳಗೆ ಬದಲಾಯಿಸಿಕೊಳ್ಳುವಂಥದು ಏನೂ ಇಲ್ಲ ಮತ್ತು ನಾನು ಯಾವುದನ್ನೂ ಬದಲಾಯಿಸಿಕೊಳ್ಳಬೇಕಿಲ್ಲ, ಬುದ್ಧಿ-ಮನಸ್ಸು (mind) ಎನ್ನುವ ಯಾವುದೂ ಇಲ್ಲ ಮತ್ತು ಸಾಕ್ಷಾತ್ಕರಿಸಿಕೊಳ್ಳಬೇಕಾದ ಯಾವ ಸ್ವಂತವೂ (self realisation) ಇಲ್ಲ”

ಒಂದು ಮಿಂಚಿನ ಸೆಳಕಿನಂತೆ ತಾಕಿದ ಈ ಹೊಳಹು, ನನ್ನ ಕಲಿಕೆಯ ರಚನೆಯನ್ನೇ ಭೂಕಂಪದಂತೆ ಅಲ್ಲಾಡಿಸಿ, ಇಷ್ಟು ದಿನ ನಾನು ಸಾಕಿಕೊಂಡಿದ್ದ ಎಲ್ಲವನ್ನೂ ನಾಶ ಮಾಡಿತು, ಎಲ್ಲ ಸಾಂಸ್ಕೃತಿಕ ಪ್ರಭಾವಗಳು ಧೂಳಿಪಟವಾದವು, ಪ್ರತೀ ಮನುಷ್ಯನನ್ನು ಆವರಿಸಿಕೊಂಡಿರುವ ಪ್ರತೀ ವಿಚಾರವೂ, ಪ್ರತೀ ಅನುಭವವೂ ನನ್ನ ವ್ಯವಸ್ಥೆಯಿಂದ ಹೊರ ಹಾಕಲ್ಪಟ್ಟಿತು. ನನ್ನ ಅಸ್ಮಿತೆಯೇ ನಾಶವಾಯ್ತು, ಅಸ್ಮಿತೆ ಎಂದರೆನೇ ನಮ್ಮ ಮೇಲಿನ ಸಾಂಸ್ಕೃತಿಕ ಪ್ರಭಾವಗಳ ಒಟ್ಟು ಮೊತ್ತ.

ಮನುಷ್ಯ ವಿಕಾಸದ ಯಾವುದೋ ಹಂತದಲ್ಲಿ ಮನುಷ್ಯ ತನ್ನ ಮೇಲೆ ಸ್ವಕೀಯ ಪ್ರಜ್ಞೆಯನ್ನ (Self Consciousness ) ಆರೋಪಿಸಿಕೊಂಡ. ಈ ಸ್ವಕೀಯ ಪ್ರಜ್ಞೆ ಅವನನ್ನ ಇತರ ಎಲ್ಲ ಸಂಗತಿಗಳ ಒಟ್ಟು ಮೊತ್ತದಿಂದ ಬೇರೆ ಮಾಡಿತು. ಆತ ತನ್ನನ್ನು ಪ್ರಕೃತಿಯಿಂದ ಬೇರೆ ಮಾಡಿಕೊಂಡು ಬದುಕಲಾರಂಭಿಸಿದ. ತನ್ನ ಹತೋಟಿಗೆ ನಿಲುಕದ ಎಲ್ಲವನ್ನೂ ಭಯಭೀತ ಮನುಷ್ಯ ದೈವಿಕ, ಕಾಸ್ಮಿಕ್ ಎಂದೆಲ್ಲ ಗುರುತಿಸಿ ಪೂಜೆ ಮಾಡಲಾರಂಭಿಸಿದ. ಮನುಷ್ಯನ ಈ ಮನಸ್ಥಿತಿಯಲ್ಲಿ ಹುಟ್ಟಿಕೊಂಡದ್ದೇ ‘ದೇವರು’ ಎನ್ನುವ ಸ್ಥಿತಿ. ಆದ್ದರಿಂದಲೇ ನಮ್ಮ ಇಂದಿನ ಸ್ಥಿತಿಗೆ ನಮ್ಮ ಮೇಲಿನ ಸಂಸ್ಕೃತಿಯ ಪ್ರಭಾವವೇ ಕಾರಣ. ಮನುಷ್ಯನ ಈ ಧಾರ್ಮಿಕ ಮನಸ್ಥಿತಿಯೇ ಮುಂದುವರೆದು ನಮ್ಮ ಎಲ್ಲ ರಾಜಕೀಯ ಸಂಸ್ಥೆಗಳ ಹುಟ್ಟಿಗೂ, ಸಿದ್ಧಾಂತಗಳ ಉಗಮಕ್ಕೂ ಕಾರಣವಾಯ್ತು. ಮನುಷ್ಯ ಜಾತಿಯ ದುಸ್ಥಿತಿಗೆ ಒಂದು ಬಗೆಯಿಂದ ಅಧ್ಯಾತ್ಮಿಕ, ಧಾರ್ಮಿಕ ನಾಯಕರೇ ಕಾರಣರಾದರು.

ನಾನು ಏನು ಹೇಳ ಬಯಸುತ್ತಿದ್ದೇನೆಂದರೆ, ನಮ್ಮ ಮೇಲೆ ವಿಚಾರಗಳ (thought) ಪ್ರಭಾವ ಅತ್ಯಂತ ಪ್ರಭಲ. ವಿಚಾರ ತನ್ನ ಹುಟ್ಟಿನಲ್ಲಿ, ತನ್ನ ವಿಷಯ ಸಮಗ್ರತೆಯಲ್ಲಿ, ತನ್ನ ಅಭಿವ್ಯಕ್ತಿಯಲ್ಲಿ ಮತ್ತು ತನ್ನ ಕಾರ್ಯಾಚರಣೆಯಲ್ಲಿ ಮೂಲಭೂತವಾಗಿ ಪ್ರತಿಗಾಮಿ (fascist) ಮನೋಭಾವ ಹೊಂದಿರುವಂಥದು. ಅದು ಎಲ್ಲದರ ಮೆಲೆ ತನ್ನ ಹತೋಟಿಯನ್ನು ಸ್ಥಾಪಿಸಲು ಬಯಸುತ್ತದೆ. ಆದ್ದರಿಂದಲೇ ನಾವು ಈಗ ಎದುರಿಸುತ್ತಿರುವ ಸವಾಲುಗಳನ್ನ ನಿವಾರಿಸಿಕೊಳ್ಳಲು ಥಾಟ್ ಉಪಯುಕ್ತ ಸಾಧನ ಅಲ್ಲ. ನಾವು ಪ್ರಶ್ನೆಗಳನ್ನ ಕೇಳಿಕೊಳ್ಳುತ್ತ ವೈಯಕ್ತಿಕವಾಗಿ ಉತ್ತರಗಳನ್ನ ಕಂಡುಕೊಳ್ಳುತ್ತ ಕಾಲಹರಣ ಮಾಡಬಲ್ಲೆವೇ ಹೊರತು ಸಮಗ್ರವಾಗಿ ಏನನ್ನೂ ಸಾಧಿಸಲಾಗುವುದಿಲ್ಲ.

Leave a Reply