ನಿಮ್ಮೊಳಗಿನ ಬುದ್ಧತನ: ಓಶೋ ವ್ಯಾಖ್ಯಾನ

ಬುದ್ಧ ನಿದ್ದೆಯಲ್ಲಿರಬಹುದು ಆದರೂ ಅವನು ಬುದ್ಧನೇ. ತನ್ನ ಬುದ್ಧತನದ ಬಗ್ಗೆ ಗೊತ್ತಿರದ ಬುದ್ಧನೂ, ಬುದ್ಧನೇ… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ

ಮಳೆ
ಧಾರಾಕಾರವಾಗಿ ಸುರಿಯುತ್ತಿರುವಾಗ,
ದಟ್ಟ ಚಳಿ
ಸುತ್ತ ಆವರಿಸಿಕೊಂಡಿರುವಾಗ
ನೀನು ಇನ್ನಷ್ಟು
ದಿವ್ಯವಾಗಿ ಅನಾವರಣಗೊಳ್ಳುತ್ತೀ.

ಹಿಮ
ನನ್ನನ್ನು ಇನ್ನಷ್ಟು ನಿನ್ನ
ತುಟಿಗಳ ಹತ್ತಿರ ಕರೆದೊಯ್ಯುತ್ತದೆ.

ಆ ಒಳಗಿನ ರಹಸ್ಯ
ಯಾವುದು ಇನ್ನೂ ಹುಟ್ಟೇ ಇಲ್ಲವೋ
ಆ ತಾಜಾತನ
ಮನೆ ಮಾಡಿದೆ ನಿನ್ನಲ್ಲಿ,
ಮತ್ತು ಒಂದಾಗಿದ್ದೇನೆ ನಾನು
ನಿನ್ನ ಈ ಹೊಸತನದಲ್ಲಿ.

ಈ ಬರುವಿಕೆ, ಹೋಗುವಿಕೆ ಎಲ್ಲ
ವಿವರಣೆಗೆ ನಿಲುಕುವ ಮಾತುಗಳಲ್ಲ,

ಆದರೆ, ಥಟ್ಟನೇ ನೀನು ನನ್ನೊಳಗೆ
ದಾಖಲಾಗಿದ್ದು
ಹಾಗು ನಿನ್ನ ಭವ್ಯತೆಯಲ್ಲಿ
ನಾನು ಮತ್ತೆ ಕಳೆದುಹೋಗಿದ್ದನ್ನು ಮಾತ್ರ
ನಮೂದು ಮಾಡಬಲ್ಲೆ ನಾನು.

~ ರೂಮಿ

**************

ಚೈನಾ ದೇಶದ ಬೌದ್ಧ ದೇವಾಲಯವೊಂದರಲ್ಲಿ ಬುದ್ಧನ ಮೂರ್ತಿ ಇಲ್ಲ. ಮೂರ್ತಿಯ ಜಾಗದಲ್ಲಿ ಒಂದು ಕನ್ನಡಿಯನ್ನು ಇರಿಸಲಾಗಿದೆ. ಕನ್ನಡಿಯ ಹೊರತಾಗಿ ಆ ದೇವಾಲಯದಲ್ಲಿ ಬೇರೆ ಏನೂ ಇಲ್ಲ. ಬಹುಶಃ ಈ ದೇವಾಲಯವನ್ನು ಕಟ್ಟಿದವರು ಶ್ರೇಷ್ಠಮಟ್ಟದ ಧ್ಯಾನಿಗಳಾಗಿರಬೇಕು. ಕನ್ನಡಿ ನಿಮಗೆ ನಿಮ್ಮ ಒಳಗಿನ ಬುದ್ಧನನ್ನು ನೆನಪಿಸುವಂಥದು.

ನಾಳೆ ನೀವು ಬುದ್ಧ ಆಗಬೇಕೆಂದು ನಾನು ಬಯಸುವುದಿಲ್ಲ. ನಾಳೆಯವರೆಗೆ ಕಾಯುವ ಅಗತ್ಯವೂ ಇಲ್ಲ. ಬುದ್ಧ ನಿಮ್ಮ ಪ್ರಕೃತಿ. ಅಗತ್ಯವಾಗಿ ಆಗಬೇಕಾಗಿರುವುದು ನಿಮ್ಮ ಪ್ರಕೃತಿಯೊಂದಿಗೆ ನಿಮ್ಮ ಪರಿಚಯ ಮಾತ್ರ. ನೀವೇ ಬುದ್ಧರು, ಬಹುಶಃ ಈ ವಿಷಯ ನಿಮಗೆ ಗೊತ್ತಿರಲಿಕ್ಕಿಲ್ಲ ಅಥವಾ ನೀವು ನಿದ್ದೆಯಲ್ಲಿರಬಹುದು ಆದರೆ ಇದು ಅಂಥ ವ್ಯತ್ಯಾಸವನ್ನೇನೂ ಮಾಡುವುದಿಲ್ಲ, ಬುದ್ಧ ನಿದ್ದೆಯಲ್ಲಿರಬಹುದು ಆದರೂ ಅವನು ಬುದ್ಧನೇ. ತನ್ನ ಬುದ್ಧತನದ ಬಗ್ಗೆ ಗೊತ್ತಿರದ ಬುದ್ಧನೂ, ಬುದ್ಧನೇ.

ನಿದ್ಧೆಯಲ್ಲಿರುವ ಮತ್ತು ಎಚ್ಚರದಲ್ಲಿರುವವರ ನಡುವಿನ ವ್ಯತ್ಯಾಸ ಇರುವಿಕೆಯಲ್ಲಿಲ್ಲ, ಅರಿಯುವಿಕೆಯಲ್ಲಿದೆ. ಇದು ಯಾರೋ ಒಬ್ಬರು ನಿದ್ದೆಯಲ್ಲಿದ್ದಾರೆ ಮತ್ತು ನೀವು ಎಚ್ಚರವಾಗಿದ್ದೀರಿ ಎನ್ನುವ ವಿಷಯವಷ್ಟೇ, ನಿಮ್ಮಿಬ್ಬರ ಇರುವಿಕೆಯಲ್ಲಿ ಯಾವ ವ್ಯತ್ಯಾಸವಿಲ್ಲ, ನಿಮ್ಮಿಬ್ಬರ ತಿಳುವಳಿಕೆಯಲ್ಲಿ ವ್ಯತ್ಯಾಸವಿದೆಯಷ್ಟೇ.

ಧ್ಯಾನದ ಮುಖ್ಯ ಉದ್ದೇಶವೇ ನಿಮ್ಮನ್ನು ಎಚ್ಚರಿಕೆಯಲ್ಲಿರುವಂತೆ ಮಾಡುವುದು. ನಿಮ್ಮ ಎಲ್ಲ ಬಯಕೆ, ಕನಸುಗಳಿಂದ ನಿಮ್ಮನ್ನು ಹೊರಗೆಳೆಯುವುದು, ನಿಮಗೆ ನಿಮ್ಮ ನಿಜದ ಪರಿಚಯ ಮಾಡಿಸುವುದು. ಒಮ್ಮೆ ನಿಮಗೆ ನಿಮ್ಮ ನಿಜ ಗೊತ್ತಾಗಿಬಿಟ್ಟರೆ ನೀವು ಮತ್ತೆ ಕನಸಿಗೆ ಮರಳುವ ಸಾಧ್ಯತೆ ಇಲ್ಲ. ಹೇಗೆ ಕಳಚಿಬಿದ್ದ ಹೂವು ಮತ್ತೆ ಮರಳಿ ಗಿಡದ ಕೊಂಬೆಗೆ ಮರಳಲಾರದೋ ಹಾಗೆ ಒಮ್ಮೆ ನೀವು ನಿಮ್ಮೊಳಗಿನ ಬುದ್ಧನನ್ನು ಪರಿಚಯಮಾಡಿಕೊಂಡುಬಿಟ್ಟರೆ ಮತ್ತೆ ನಿದ್ದೆಗೆ ಮರಳಲಾರಿರಿ. ಆಗ ನೀವು ಸ್ವತಃ ಬುದ್ಧನ ದೇವಾಲಯ.

ಒಮ್ಮೆ ಒಬ್ಬ ಝೆನ್ ಮಾಸ್ಟರ್ ತನ್ನ ಶಿಷ್ಯರನ್ನು ಪ್ರಶ್ನೆ ಮಾಡಿದ.

“ ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “

ಒಬ್ಬ ಶಿಷ್ಯ : ದೂರದಿಂದ ನಾವು , ಯಾವುದು ನರಿ ಯಾವುದು ನಾಯಿ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.

ಮಾಸ್ಟರ್ ಗೆ ಈ ಉತ್ತರ ಹಿಡಿಸಲಿಲ್ಲ.

ಇನ್ನೊಬ್ಬ ಶಿಷ್ಯ : ದೂರದಿಂದ ನಾವು , ಯಾವುದು ಆಲದ ಮರ, ಯಾವುದು ಅರಳಿ ಮರ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.

ಮಾಸ್ಟರ್ ಗೆ ಈ ಉತ್ತರವೂ ಇಷ್ಟವಾಗಲಿಲ್ಲ.

ನೀವೇ ಹೇಳಿ ಮಾಸ್ಟರ್, ಶಿಷ್ಯರೆಲ್ಲ ಒತ್ತಾಯಿಸಿದರು.

ಮಾಸ್ಟರ್ : ಯಾವಾಗ ಅಪರಿಚಿತನೊಬ್ಬ ಎದುರಾದಾಗ, ನಮಗೆ ನಮ್ಮ ಮನೆಯವನ ಹಾಗೆ ಕಾಣುತ್ತಾನೋ ಆವಾಗ.

Leave a Reply