ನಿಜವಾದ ಸಂತೋಷ ಯಾವುದು? : ಸ್ವಾಮಿ ರಾಮತೀರ್ಥ

ಮಗುವಾಗಿದ್ದಾಗ ಹಾಲು, ಬೆಳೆಯುತ್ತ ಆಟಿಕೆಗಳು, ಯೌವನದಲ್ಲಿ ಸಾಂಗತ್ಯ, ವಯಸ್ಕ ಜೀವನದಲ್ಲಿ ದಾಂಪತ್ಯ, ಸಂತಾನ – ಇವೆಲ್ಲವನ್ನೂ ಪಡೆದು ನಾವು ಅವನ್ನೇ ಶಾಶ್ವತ ಸಂತೋಷ ಎಂದು ಭಾವಿಸುತ್ತೇವೆ. ಆದರೆ, ನಿಜವಾದ ಸಂತೋಷ ಪಡೆಯುವುದರಲ್ಲಿ ಇಲ್ಲ, ತ್ಯಾಗ ಮಾಡುವುದರಲ್ಲಿ ಇದೆ. ಅನ್ನುತ್ತಾರೆ ಸ್ವಾಮಿ ರಾಮತೀರ್ಥ | ಸಂಗ್ರಹ ಮತ್ತು ಅನುವಾದ ಪ್ರಣವ ಚೈತನ್ಯ

ಸಂತೋಷ ಎಂದರೆ ಏನು? ಅದು ಮನುಷ್ಯನ ಜೀವನದಲ್ಲಿ ಎಷ್ಟು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ? ಸಂತೋಷ ಅಥವಾ ಖುಷಿ ಎಂದರೆ ನಿಜವಾಗಿಯೂ ಏನು?

ಒಂದು ಮಗು ತಾನು ಹುಟ್ಟಿದಾಗ ತನ್ನ ತಾಯಿಯ ಎದೆಹಾಲು ಕುಡಿದು ಸಂತೋಷಪಡುತ್ತದೆ. ಆ ಮಗು ಇದಕ್ಕಿಂತ ದೊಡ್ಡ ಸಂತೋಷ ಜಗತ್ತಲ್ಲಿ ಸಿಗಲು ಸಾದ್ಯವೇ ಇಲ್ಲ ಎಂದು ಭಾವಿಸುತ್ತದೆ. ಅದೇ ಮಗುವಿಗೆ ಎರಡು ಮೂರು ವರ್ಷ ಬಿಟ್ಟು ಆಟ ಸಾಮಾನುಗಳನ್ನು ಕೊಟ್ಟರೆ, ಆಗ ಆ ಮಗು ಅವುಗಳ ಜೊತೆ ಆಟವಾಡುತ್ತಾ ನಾನು ಇದಕ್ಕಿಂತ ಸಂತೋಷವಾಗಿರಲು ಸಾದ್ಯವೇ ಇಲ್ಲ ಎಂದು ಯೋಚಿಸುತ್ತದೆ. ಕಾಲ ಮುಂದುವರೆದಂತೆ ಆ ಮಗು ಇನ್ನೂ ದೊಡ್ಡದಾಗುತ್ತದೆ, ಶಾಲೆಗೆ ಹೋಗಲು ಪ್ರಾರಂಭಿಸುತ್ತದೆ. ತನ್ನ ಮಲೆಯಲ್ಲಿ ಸಿಗುವ ಪ್ರೀತಿ ವಿಶ್ವಾಸ, ಸಿಹಿ ತಿಂಡಿಗಳು, ಆಟೋಟಗಳು ಎಲ್ಲವನ್ನೂ ಆನಂದಿಸತೊಡಗುತ್ತದೆ. ಇದಕ್ಕಿಂತ ಸಂತೋಷವಾಗಿರಲು ಸಾದ್ಯವೇ ಎಂದು ಆ ಮಗು ಯೋಚಿಸುತ್ತದೆ.

ಆ ಮಗು ಯಾವಾಗ ಯುವಕನಾಗುತ್ತಾನೋ ಆಗ ಅವನು ಬೇರೆ ರೀತಿಯ ಸಂತೋಷಗಳನ್ನು ಬಯಸುತ್ತಾನೆ. ಅವನು ಒಂದು ಯುವಕಿಯನ್ನು ಪ್ರೀತಿಸಿದಾಗ ಅವರಿಬ್ಬರ ಮಿಲನವಾದಾಗ ಆ ಯುವಕನು ಇದಕ್ಕಿಂತ ದೊಡ್ಡ ಸಂತೋಷ ತನಗೆ ಎಂದು ಸಿಗಲು ಸಾದ್ಯವೇ ಇಲ್ಲ ಎಂದು ಯೋಚಿಸುತ್ತಾನೆ. ಅವನಿಗೆ ಮದುವೆಯಾದಾಗ ಅವನು ಇನ್ನೂ ಸಂತೋಷಪಡುತ್ತಾನೆ. ಅವನಿಗೊಂದು ಮಗು ಜನಿಸಿದಾಗ ಅವನು ಮತ್ತಷ್ಟು ಸಂತೋಷಪಡುತ್ತಾನೆ. ಆಗ ಅವನು ಈ ಪ್ರಪಂಚದಲ್ಲೇ ಅತ್ಯಂತ ಸಂತುಷ್ಟ ಮನುಷ್ಯನಾಗಿರುತ್ತಾನೆ.

ಹೀಗೆ ಕಾಲ ಮುಂದುವರೆದು ಅವನ ಮಗು ಅವನನ್ನು ಬಿಟ್ಟು ಮದುವೆಯಾಗಿ ತನ್ನ ಜೀವನ ಸಾಗಿಸಲು ತನ್ನಿಂದ ದೂರವಾದಾಗ ಈ ವಯಸ್ಸಾದ ಮನುಷ್ಯ ಯೋಚಿಸುತ್ತಾನೆ, “ತಾನು ಹುಟ್ಟಿನಿಂದ ಹುಡುಕಿದ ಸಂತೋಷ ತನಗೆ ದೊರಕಿತೆ? ನಿಜವಾದ ಸಂತೋಷ ಯಾವುದು? ಈವರೆಗೆ ಅವನು ಅನುಭವಿಸಿದ್ದೆಲ್ಲ ಸಂತೋಷವೇ ಅಲ್ಲವೆ?”

ಇಲ್ಲ, ಅವನು ಚಿಕ್ಕವನಿಂದ ಅನುಭವಿಸಿದ ಸಂತೋಷದ ಕ್ಷಣಗಳೆಲ್ಲ ನಿಜವಾದ ಸಂತೋಷಕ್ಕೆ ನಿಜವಾದ ಸ್ವರ್ಗಕ್ಕೆ ಕರೆದುಕೊಂಡುಹೋಗುವ ದಾರಿಯಷ್ಟೆ. ನಿಜವಾದ ಸಂತೋಷವು ಆ ಮನುಷ್ಯನಿಗೆ ತನ್ನ ಜೀವ ತ್ಯಾಗ ಮಾಡಿದ ಮೇಲೆ ಸಿಗುತ್ತದೆ. ನಾವು ಹುಟ್ಟಿನಿಂದ ಅನುಭವ ಕ್ಷಣಗಳೆಲ್ಲವೂ ಆ ರಾಮನು ನಮ್ಮ ಜೀವನಕ್ಕೆ ಕೊಡುವ ತಾತ್ಕಾಲಿಕ ಸಂತೋಷದ ಕ್ಷಣಗಳು.

ಪಡೆಯುವುದರಲ್ಲಿ ಸಂತೋಷವಿಲ್ಲ. ಮಗುವಾಗಿದ್ದಾಗ ಹಾಲು, ಬೆಳೆಯುತ್ತ ಆಟಿಕೆಗಳು, ಯೌವನದಲ್ಲಿ ಸಾಂಗತ್ಯ, ವಯಸ್ಕ ಜೀವನದಲ್ಲಿ ದಾಂಪತ್ಯ, ಸಂತಾನ – ಇವೆಲ್ಲವನ್ನೂ ಪಡೆದು ನಾವು ಅವನ್ನೇ ಶಾಶ್ವತ ಸಂತೋಷ ಎಂದು ಭಾವಿಸುತ್ತೇವೆ. ಆದರೆ, ನಿಜವಾದ ಸಂತೋಷ ಪಡೆಯುವುದರಲ್ಲಿ ಇಲ್ಲ, ತ್ಯಾಗ ಮಾಡುವುದರಲ್ಲಿ ಇದೆ. ಎಲ್ಲವನ್ನು ಪಡೆದೂ ಅವುಗಳೊಡನೆಯ ಬಾಂಧವ್ಯವನ್ನು, ಅವುಗಳ ಮೇಲಿನ ಮಮಕಾರವನ್ನು ತ್ಯಾಗ ಮಾಡಿದಾಗಲಷ್ಟೆ ನಮಗೆ ನಿಜವಾದ ಸಂತೋಷ ಲಭಿಸುವುದು.

ಯಾವಾಗ ಒಬ್ಬ ಮನುಷ್ಯನು ತನ್ನ ದೇಹವನ್ನು ತ್ಯಜಿಸಿ, ಆ ದೇವರೊಂದಿಗೆ ಲೀನನಾಗುತ್ತಾನೊ, ತನ್ನೊಳಗಿನ ರಾಮನನ್ನು ಎಚ್ಚರಗೊಳಿಸಿಕೊಳ್ಳುತ್ತಾನೋ, ಆಗಲೇ ಆ ಮನುಷ್ಯನಿಗೆ ಶಾಶ್ವತವಾದ ಸಂತೋಷ ದೊರೆಯುತ್ತದೆ. ಆಗಲೇ ಆ ಮನುಷ್ಯನಿಗೆ ನಿಜವಾದ ಸಂತೋಷದ ಅರಿವಾಗುವುದು.

(ಆಕರ : In the woods of God realization | Swami Ramteertha)

Leave a Reply