ಪಂಡಿತ ಮತ್ತು ಅಂಬಿಗ : ರೂಮಿಯ ‘ಮಸ್ನವಿ’ ಕೃತಿಯಿಂದ #6

ಸ್ವಲ್ಪ ದೂರ ಸಾಗುವಷ್ಟರಲ್ಲಿ ಗಾಳಿ ಜೋರಾಯಿತು. ಗುಡುಗು – ಸಿಡಿಲುಗಳ ಆರ್ಭಟ ಶುರುವಾಯ್ತು. ಪಂಡಿತನಿಗೆ ಭಯ… ಅವನ ಮುಖ ಬಿಳುಚಿಕೊಂಡು ಹೋಗಿತ್ತು. ಅಷ್ಟು ಹೊತ್ತು ಅಂಬಿಗನ ಮುಂದೆ ತನ್ನ ಪಾಂಡಿತ್ಯ ಕೊಚ್ಚಿಕೊಳ್ಳುತ್ತಿದ್ದವ ಬಾಯಿ ಬರದೆ ಮೂಕವಾಗಿ ಹೋದ!  । ಮೂಲ: ಜಲಾಲುದ್ದೀನ್ ರೂಮಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಅದೊಂದು ಇಳಿ ಸಂಜೆ ಪಂಡಿತನೊಬ್ಬ ನದೀ ತೀರಕ್ಕೆ ಬಂದ. ಅವನು ಕತ್ತಲಾಗುವ ಮೊದಲು ನಡುಗಡ್ಡೆಯಲ್ಲಿದ್ದ ತನ್ನ ಮನೆಗೆ ಸೇರಿಕೊಳ್ಳುವ ಆತುರದಲ್ಲಿದ್ದ. ಅವನು ಅಲ್ಲಿಗೆ ಬರುವ ವೇಳೆಗೂ ಅಂಬಿಗ ಗೂಟಕ್ಕೆ ಕಟ್ಟಿದ್ದ ತನ್ನ ದೋಣಿ ಬಿಚ್ಚುವುದಕ್ಕೂ ಸರಿಹೋಯಿತು.

“ಬೇಗ ನಡಿ ಅಂಬಿಗ!” ಪಂಡಿತ ಅವಸರಿಸಿದ. “ಮಳೆ ಬರುವ ಹಾಗಿದೆ, ಬೇಗ ಮನೆ ತಲುಪಿಕೋಬೇಕು”

ಅಂಬಿಗ ತಲೆದೂಗುತ್ತಾ ಹುಟ್ಟು ಹಿಡಿದು ತನ್ನ ಜಾಗದಲ್ಲಿ ಕುಳಿತುಕೊಂಡ. ಪಂಡಿತನೂ ದೋಣಿಯ ಒಂದು ಬದಿಯಲ್ಲಿ ತನ್ನ ಅನುಕೂಲದ ಭಂಗಿಯಲ್ಲಿ ಕುಳಿತುಕೊಂಡ.

ದೋಣಿ ಚಲಿಸಲಾರಂಭಿಸಿತು. ಪಂಡಿತನಿಗೆ ಬಾಯಿ ಕಡಿತ. ತನ್ನ ಪಾಡಿಗೆ ಹುಟ್ಟು ಹಾಕುತ್ತಿದ್ದ ಅಂಬಿಗನನ್ನು ಮಾತಿಗೆ ಕರೆಯುತ್ತಾ, “ನೀನೇನು ಓದಿದ್ದೀಯ?” ಅಂದ. ಪಂಡಿತನಿಗೆ ಈತ ಓದು ಬರಹ ಗೊತ್ತಿಲ್ಲದವ ಎಂದು ಮೊದಲೇ ತಿಳಿದಿತ್ತು. ಆದರೂ ತನ್ನ ಒಣಜಂಭ ತೋರಿಸಿಕೊಳ್ಳಲೋಸುಗ ಅಂಬಿಗನನ್ನು ಕೆದಕಿದ.

“ನಾನು ಶಾಲೆಗೆ ಹೋಗಿಲ್ಲ. ನನಗೆ ಓದು – ಬರಹ ಬರೋದಿಲ್ಲ” ಅಂಬಿಗ ಪ್ರಾಮಾಣಿಕವಾಗಿ ಉತ್ತರಿಸಿದ.

“ಅಯ್ಯಯ್ಯೊ! ನಿನ್ನ ಜೀವನವೇ ವ್ಯರ್ಥವಾಗಿಹೋಯ್ತಲ್ಲಯ್ಯ! ನಿನ್ನ ಪಾಲಿನ ಅರ್ಧದಷ್ಟು ಬದುಕೇ ಕತ್ತಲಲ್ಲಿ ಮುಳುಗಿಹೋಗಿದೆ” ಎಂದು ಮೂದಲಿಸುವಂತೆ ಸಂತಾಪ ಸೂಚಿಸಿದ.

ಅಂಬಿಗನಿಗೆ ಅವಮಾನವಾದಂತಾಯ್ತು. ಅಡ್ಡಿಯಿಲ್ಲ, ನನಗೂ ಒಂದು ಕಾಲ ಬರುತ್ತೆ ಅಂದುಕೊಂಡು ತನ್ನ ಕೆಲಸ ಮುಂದುವರೆಸಿದ.

ಸ್ವಲ್ಪ ದೂರ ಸಾಗುವಷ್ಟರಲ್ಲಿ ಗಾಳಿ ಜೋರಾಯಿತು. ಗುಡುಗು – ಸಿಡಿಲುಗಳ ಆರ್ಭಟ ಶುರುವಾಯ್ತು. ಪಂಡಿತನಿಗೆ ಭಯ… ಅವನ ಮುಖ ಬಿಳುಚಿಕೊಂಡು ಹೋಗಿತ್ತು. ಅಷ್ಟು ಹೊತ್ತು ತನ್ನ ಪಾಂಡಿತ್ಯ ಕೊಚ್ಚಿಕೊಳ್ಳುತ್ತಿದ್ದವ ಬಾಯಿ ಬರದೆ ಮೂಕವಾಗಿ ಹೋದ!

ಅವನ ಅವಸ್ಥೆ ಕಂಡ ಅಂಬಿಗ ಇದೇ ಸರಿಯಾದ ಸಮಯ ಅಂದುಕೊಳ್ಳುತ್ತಾ ಕೇಳಿದ, “ಪಂಡಿತರೇ, ನಿಮಗೆ ಈಜು ಬರುತ್ತಾ?”

ಪಂಡಿತನಿಗೆ ಗಾಬರಿಯಾಯ್ತು. ಅವನಿಗೆ ಈಜು ಬರುತ್ತಿರಲಿಲ್ಲ. “ಅಯ್ಯೋ ಇಲ್ಲ ಕಣಯ್ಯ, ನನಗೆ ಈಜಲು ಬರೋದಿಲ್ಲ. ಈಗ್ಯಾಕೆ ಆ ವಿಷಯ?” ಎಂದು ಅಂಜುತ್ತಲೇ ಕೇಳಿದ.

“ಯಾಕೆಂದರೆ ಪಂಡಿತರೇ”, ಅಂಬಿಗ ಉತ್ತರಿಸಿದ; “ಈ ಹೊತ್ತು ನಿಮ್ಮ ಪಾಂಡಿತ್ಯ ಪ್ರಯೋಜನಕ್ಕೆ ಬರೋದಿಲ್ಲ. ನಡು ನೀರಿನಲ್ಲಿ ಏನಿದ್ರೂ ಈಜೇ ಪ್ರಯೋಜನಕ್ಕೆ ಬರೋದು. ಈಗಾಗಲೇ ಗುಡುಗು ಸಿಡಿಲು ಶುರುವಾಗಿದೆ. ನದಿ ಉಕ್ಕತೊಡಗಿದ್ರೆ ನಿಮ್ಮ ಉಳಿದರ್ಧ ಬದುಕು ಮುಳುಗಿಹೋಗುತ್ತೆ. ನಿಮ್ಮ ಜೀವನವೇ ವ್ಯರ್ಥವಾಗಿ ಹೋಗುತ್ತೆ” ಅಂದ. ನೀವು ನನ್ನನ್ನು ಓದು – ಬರಹ ಬರದ ಮೂರ್ಖ ಅಂದುಕೊಂಡಿರಿ. ಈಗ ನೋಡಿ, ನಿಮ್ಮ ಅವಸ್ಥೆ ಕೆಸರಿಗೆ ಬಿದ್ದ ಕತ್ತೆಯಂತಾಗಲಿದೆ!”


ಮಸ್ನವಿ, ಜಲಾಲುದ್ದೀನ್ ರೂಮಿಯ ಅನುಭಾವ ಕತೆಗಳ ಸಂಗ್ರಹ. ಮೇಲ್ನೋಟಕ್ಕೆ ಸರಳ ದೃಷ್ಟಾಂತ / ಸಾಮತಿ ಇಲ್ಲವೇ ಸರಳ ಕತೆಗಳಂತೆ ಕಂಡರೂ ಈ ಕೃತಿಯ ಪ್ರತಿಯೊಂದು ಕತೆಯೂ ಒಂದು ಗೂಢಾರ್ಥವನ್ನು, ಪರಮಾರ್ಥ ಚಿಂತನೆಯನ್ನು, ವ್ಯಕ್ತಿತ್ವ – ಆತ್ಮ ವಿಕಸನ ಪಾಠವನ್ನು ಹೊತ್ತುಕೊಂಡಿವೆ.

Leave a Reply