ಒಂಟಿಯಾಗಿರುವ ನೀವು ಇನ್ನೊಬ್ಬ ಒಂಟಿ ವ್ಯಕ್ತಿಯನ್ನ ಭೇಟಿ ಮಾಡಿದಾಗ. ಮೊದಲು ಒಂದು ಮಧುಚಂದ್ರ, ಒಂದು ಭಾವಪರವಶತೆ ನಿಮ್ಮಿಬ್ಬರ ನಡುವೆ. ನಿಮ್ಮ ಒಂಟಿತನ ಕಳೆದು ಹೋದದ್ದರ ಕುರಿತು ಅಪಾರ ಸಂತಸ. ಆದರೆ ಮೂರು ದಿನಗಳಾದ ಮೇಲೆ, ಅಕಸ್ಮಾತ್ ನೀವು ಜಾಣರಾಗಿದ್ದರೆ ಕೇವಲ ಮೂರುಗಂಟೆಗಳಲ್ಲಿ ನಿಮಗೆ ನಿಮ್ಮ ಸಮಸ್ಯೆ ಗೊತ್ತಾಗುತ್ತದೆ! ~ Osho – “Guida Spirituale” । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಬೇಟೆಗಾರ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ. ಮೂರು ದಿನ ಕಾಡೆಲ್ಲ ಸುತ್ತಾಡಿದ ಆದರೆ ಅವನಿಗೆ ದಾರಿ ತೋರಿಸುವವರು ಯಾರೂ ಕಾಣಲಿಲ್ಲ. ಅವನ ಆತಂಕ ದಿನೆೇ ದಿನೇ ಹೆಚ್ಚಾಗುತ್ತ ಹೋಯಿತು. ಮೂರು ದಿನ ಆಹಾರವಿಲ್ಲದೇ, ನಿರಂತರವಾಗಿ ಕಾಡು ಪ್ರಾಣಿಗಳ ಭಯದಲ್ಲಿ ಬೇಟೆಗಾರ ನಿತ್ರಾಣನಾದ. ಯಾವಾಗ ಕಾಡು ಮೃಗಗಳು ಆಕ್ರಮಣ ಮಾಡುತ್ತವೋ ಎನ್ನುವ ಭಯದಲ್ಲಿ ಮರದ ಮೇಲೆ ನಿದ್ದೆಯಿಲ್ಲದೇ ಆ ಮನುಷ್ಯ ಕಾಲಕಳೆದ. ಕಾಡಿನಲ್ಲಿ ಹಾವು, ಸಿಂಹ, ಚಿರತೆಗಳು ಓಡಾಡುವುದನ್ನ ಗಾಬರಿಯಿಂದ ಗಮನಿಸುತ್ತ ಭಯಭೀತನಾಗಿ ತನಗೆ ದಾರಿ ತೋರುವವರ ನಿರೀಕ್ಷೆಯಲ್ಲಿ ಬೇಟೆಗಾರ ಕಾಲಕಳೆಯುತ್ತಿದ್ದ.
ನಾಲ್ಕನೇಯ ದಿನ ಮುಂಜಾನೆ, ಅವನಿಗೆ ಎಚ್ಚರವಾದಾಗ ಮರದ ಕೆಳಗೆ ಒಬ್ಬ ಮನುಷ್ಯ ಕುಳಿತಿದ್ದು ಅವನಿಗೆ ಕಾಣಿಸಿತು. ಸರಸರನೇ ಬೇಟೆಗಾರ ಮರ ಇಳಿದವನೇ ಓಡಿ ಹೋಗಿ ಆ ಮನುಷ್ಯನನ್ನು ಅಪ್ಪಿಕೊಂಡ. ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂಧ ಭಾಷ್ಪ ತುಂಬಿ ಹರಿಯುತ್ತಿತ್ತು.
“ ಎಂಥ ಖುಶಿ ಇದು “ ಬೇಟೆಗಾರ ಹೃದಯತುಂಬಿ ಉದ್ಗರಿಸಿದ. ಬೇಟೆಗಾರನನ್ನು ನೋಡಿ ಆ ಇನ್ನೊಬ್ಬ ಮನುಷ್ಯನಿಗೂ ತುಂಬ ಖುಶಿಯಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವುಕರಾದರು.
“ ಯಾಕೆ ಇಷ್ಟು ಖುಶಿ ನಿನ್ನ ಕಣ್ಣಲ್ಲಿ? “ ಆ ಇನ್ನೊಬ್ಬ ಮನುಷ್ಯ ಬೇಟೆಗಾರನನ್ನು ಕೇಳಿದ.
“ ಮೂರು ದಿನಗಳ ಹಿಂದೆ, ನಾನು ಈ ದುರ್ಗಮ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದೆ , ಯಾರಾದರೂ ನನಗೆ ದಾರಿ ತೋರಿಸುವವರು ಸಿಗುತ್ತಾರಾ ಎಂದು ಕಾಡಿನಲ್ಲೆಲ್ಲ ಸುತ್ತಾಡಿದೆ, ಈಗ ನಿನ್ನನ್ನು ಇಲ್ಲಿ ಕಂಡು ನನಗೆ ಬಹಳ ಖುಶಿಯಾಗಿದೆ. “ ಬೇಟೆಗಾರ ಆ ಮನುಷ್ಯನಿಗೆ ತನ್ನ ಖುಶಿಯ ಕಾರಣ ತಿಳಿಸಿದ.
“ ಓಹ್ ! ನಾನು ಕೂಡ ಹಾದಿ ತಪ್ಪಿಸಿಕೊಂಡವನೇ, ನಾನೂ ಒಂಟಿಯಾಗಿ ಈ ಕಾಡಿನಲ್ಲಿ ನನಗೆ ದಾರಿ ತೋರಿಸುವವರನ್ನು ಹುಡುಕುತ್ತ ಅಲೆಯುತ್ತಿದ್ದೇನೆ. ನಿನ್ನ ಇಲ್ಲಿ ನೋಡಿದಾಗ, ನೀನು ನನಗೆ ದಾರಿ ತೋರಿಸಬಹುದೆಂದು ಖುಶಿಯಾಯಿತು. ಆದರೆ ನಮ್ಮಿಬ್ಬರ ಖುಶಿ ಎಂಥ ಮೂರ್ಖತನದ್ದು. ನಾವಿಬ್ಬರೂ ದಾರಿ ಹುಡುಕುತ್ತಿರುವ ಒಂಟಿ ಮನುಷ್ಯರೇ. ಈಗ ನಾವಿಬ್ಬರೂ ಈ ಕಾಡಿನಲ್ಲಿ ಕಳೆದುಕೊಂಡವರು“ ಆ ಮನುಷ್ಯ ನಿರಾಶೆಯ ಮಾತುಗಳನ್ನಾಡಿದ.
ಹೀಗೆ ಆಗುತ್ತದೆ, ಒಂಟಿಯಾಗಿರುವ ನೀವು ಇನ್ನೊಬ್ಬ ಒಂಟಿ ವ್ಯಕ್ತಿಯನ್ನ ಭೇಟಿ ಮಾಡಿದಾಗ. ಮೊದಲು ಒಂದು ಮಧುಚಂದ್ರ, ಒಂದು ಭಾವಪರವಶತೆ ನಿಮ್ಮಿಬ್ಬರ ನಡುವೆ. ನಿಮ್ಮ ಒಂಟಿತನ ಕಳೆದು ಹೋದದ್ದರ ಕುರಿತು ಅಪಾರ ಸಂತಸ. ಆದರೆ ಮೂರು ದಿನಗಳಾದ ಮೇಲೆ, ಅಕಸ್ಮಾತ್ ನೀವು ಜಾಣರಾಗಿದ್ದರೆ ಕೇವಲ ಮೂರುಗಂಟೆಗಳಲ್ಲಿ ನಿಮಗೆ ನಿಮ್ಮ ಸಮಸ್ಯೆ ಗೊತ್ತಾಗುತ್ತದೆ. ಕೆಲವರಂತೂ ಕೇವಲ ಮೂರು ನಿಮಿಷಗಳಲ್ಲಿ ಇನ್ನೊಬ್ಬರ ಒಂಟಿತನವನ್ನು ಪತ್ತೆ ಹಚ್ಚಿಬಿಡುತ್ತಾರೆ. ಆದರೆ ಕೆಲವರು ವರ್ಷಗಳಾದರೂ ಪರಸ್ಪರರ ಒಂಟಿತನವನ್ನ ಗುರುತಿಸಲಾರದೇ ಇಬ್ಬರೂ ಸಂಕಟ ಪಡುತ್ತಿರುತ್ತಾರೆ.
ಹಾಗಾದರೆ ಏನು ಮಾಡುವುದು ? ನಿಮ್ಮ ನಡುವಿನ ಸಂಬಂಧ ನಿಮ್ಮಿಬ್ಬರಿಗೂ ಪೂರಕವಲ್ಲ, ನೀವಿಬ್ಬರೂ ಬದುಕಿನ ಕಾಡಿನಲ್ಲಿ ದಾರಿ ಕಳೆದುಕೊಂಡವರು, ನೀವು ನಿಮ್ಮ ಸಂಗಾತಿಗೆ ಸಹಾಯ ಮಾಡಲಾರಿರಿ. ಎರಡು ಗಾಯಗಳು ಸೇರಿದಾಗ ಇನ್ನೂ ಹೆಚ್ಚಾಗುತ್ತದೆ ನೋವು.
ಕಬೀರ ಹೇಳುತ್ತಾನೆ…….
“ ನೀವಿಬ್ಬರೂ ಬಾವಿಯಲ್ಲಿ ಬೀಳುವವರು, ಒಮ್ಮೆ ಬೇಗ ಬೀಳಬಹುದು ಅಥವಾ ಒಮ್ಮೊಮ್ಮೆ ಬೀಳುವುದು ತಡವಾಗಬಹುದು, ಬಹುತೇಕ ನೀವು ಬಾವಿಯಲ್ಲಿ ಬೀಳುವುದು ಆದಷ್ಟು ಬೇಗ.