ನಿಜದ ಗುರುವಿಗೆ ಗೊತ್ತು, ಅವನು ನಿಮಗೆ ಏನನ್ನೂ ಕೊಡುವುದು ಸಾಧ್ಯವಿಲ್ಲ ಏಕೆಂದರೆ, ನೀವು ಏನೇನೆಲ್ಲ ಬಯಸುತ್ತಿದ್ದೀರೋ ಅದು ಈಗಾಗಲೇ ನಿಮ್ಮೊಳಗೆ ಇದೆ. ಮತ್ತು ಈ ಎಲ್ಲವೂ ಅಪಾರ ಕಸದ ಮೂಟೆಯ ಕೆಳಗೆ ಅವಿತುಕೊಂಡಿದೆ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ಉಪದೇಶ ಮಾಡುವ ಗುರುಗಳು,
ತಂತ್ರಗಳನ್ನು ಕಲಿಸಲು
ಶುರು ಮಾಡುತ್ತಿದ್ದಂತೆಯೇ
ನಾವು ದೂರ ಹೋಗಿ ನಿಲ್ಲುವುದು
ಜಾಣತನ.
ಕೆಲ ದೇವರುಗಳಿಗೆ ಸಂಯಮ ಕಡಿಮೆ.
ಸಿಟ್ಟು ಬಂದರೆ ಚಪ್ಪಲಿ ತೆಗೆದು
ಆ ಗುರುವಿನತ್ತ ಎಸೆದುಬಿಡುತ್ತಾರೆ.
– ಹಾಫಿಜ್
***************
ಗುರುವಿನ ಕೆಲಸ ಶಿಷ್ಯನಿಗೆ ಏನಾದರೂ ಕೊಡುವುದಲ್ಲ ಬದಲಾಗಿ ಶಿಷ್ಯನ ಬಳಿ ಇರುವುದನ್ನೆಲ್ಲ ಖಾಲೀ ಮಾಡುವುದು. ಶಿಷ್ಯ ಗುರುವಿನ ಬಳಿ ಬರುವುದು, ಗುರು ತನಗೇನಾದರೂ ಕೊಡುತ್ತಾನೆ ಎನ್ನುವ ಭರವಸೆಯಿಂದ ಆದರೆ ನಿಜದ ಗುರು ಇಂಥ ಭರವಸೆಯನ್ನು ಪೂರ್ತಿ ನಿರಾಶೆಗೊಳಿಸುತ್ತಾನೆ.
ಕೇವಲ ಸುಳ್ಳು ಗುರು ಮಾತ್ರ ನಿಮಗೆ ಸಾಂತ್ವನ ನೀಡುತ್ತಾನೆ, ಜ್ಞಾನ, ತಿಳುವಳಿಕೆ, ಜ್ಞಾನೋದಯ ಮುಂತಾದವುಗಳ ಆಸೆ ಹುಟ್ಟಿಸುತ್ತಾನೆ ಆದರೆ ನಿಜದ ಗುರು ನಿಮ್ಮ ಎಲ್ಲ ಬಯಕೆಗಳನ್ನ ಕುಟ್ಟಿ ಪುಡಿ ಪುಡಿ ಮಾಡುತ್ತಾನೆ. ನಿಜದ ಗುರುವಿಗೆ ಗೊತ್ತು, ಅವನು ನಿಮಗೆ ಏನನ್ನೂ ಕೊಡುವುದು ಸಾಧ್ಯವಿಲ್ಲ ಏಕೆಂದರೆ, ನೀವು ಏನೇನೆಲ್ಲ ಬಯಸುತ್ತಿದ್ದೀರೋ ಅದು ಈಗಾಗಲೇ ನಿಮ್ಮೊಳಗೆ ಇದೆ. ಮತ್ತು ಈ ಎಲ್ಲವೂ ಅಪಾರ ಕಸದ ಮೂಟೆಯ ಕೆಳಗೆ ಅವಿತುಕೊಂಡಿದೆ. ಆದರೆ ಈ ಕಸವನ್ನೇ ನೀವು ನಿಮ್ಮ ಆಸ್ತಿ ಎಂದುಕೊಂಡು ಸಂಭ್ರಮಿಸುತ್ತಿದ್ದೀರ, ನಿಜದ ಗುರು ಈ ಕಸವನ್ನೆಲ್ಲ ತೆಗೆದು ಹಾಕಲು ಶುರು ಮಾಡಿದಾಗ ನಿಮಗೆ ಗಾಬರಿಯಾಗುತ್ತದೆ, ನೀವು ನೋವು ಅನುಭವಿಸುತ್ತೀರ.
ಆದ್ದರಿಂದ ಎಲ್ಲರೂ ನಿಜದ ಗುರುವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಾವಿರಾರು ಬಾರಿ ನೀವು ನಿಜದ ಗುರುವಿನಿಂದ ದೂರವಾಗಲು ಪ್ರಯತ್ನಿಸುತ್ತೀರ ಏಕೆಂದರೆ ಅವನು ನಿಮ್ಮ ಯಾವ ಅಹಂ ನ ಕೂಡ ಪೋಷಿಸುತ್ತಿಲ್ಲ ಬದಲಾಗಿ ಅವನು ನಿಮ್ಮ ಅಹಂ ಗೆ ಘಾಸಿ ಮಾಡಿ ಅದನ್ನು ಚೂರು ಚೂರು ಮಾಡುತ್ತಿದ್ದಾನೆ. ನೀವು ಒಂದು ಐಡಿಯಾ ಇಟ್ಟುಕೊಂಡು ಗುರುವಿನ ಬಳಿ ಬಂದಿರುವಿರಿ ಆದರೆ ಗುರುವಿನ ಕೆಲಸವೇ ಎಲ್ಲ ಐಡಿಯಾಗಳಿಂದ ನಿಮ್ಮನ್ನ ಮುಕ್ತರನ್ನಾಗಿಸುವುದು.
ಒಬ್ಬ ನಿಜದ ಗುರುವಿನ ಬಳಿ ಬಂದಾಗ ಶಿಷ್ಯನಿಗೆ ಅವನ ಬಗ್ಗೆ ಕಲ್ಪನೆಗಳಿರುತ್ತವೆ, ನಿಜವಾಗಿ ಜ್ಞಾನೋದಯ ಹೊಂದಿದ ಮನುಷ್ಯ ಹೇಗಿರುತ್ತಾನೆ ಎನ್ನುವ ಬಗ್ಗೆ ಅನೇಕ ಐಡಿಯಾಗಳಿರುತ್ತವೆ. ಆದರೆ ಜ್ಞಾನವನ್ನು, ಜ್ಞಾನೋದಯವನ್ನು ಪಳಗಿಸುವುದು ಸಾಧ್ಯವಿಲ್ಲ. ಆಗಲೇ ನಿಮ್ಮ ಕಲ್ಪನೆಗಳಿಗೆ ಐಡಿಯಾಗಳಿಗೆ ಧಕ್ಕೆಯಾಗುತ್ತದೆ, ನಿರಾಶೆಯಾಗುತ್ತದೆ. ಇಂಥ ಗುರುವಿನ ಸಹವಾಸ ತುಂಬ ಕಠಿಣ, ಬಹಳ ಧೈರ್ಯಶಾಲಿಗಳು ಮಾತ್ರ ತಾವು ಬದಲಾಗುವವರೆಗೆ ಗುರುವಿನ ಬಳಿ ಉಳಿದುಕೊಳ್ಳುತ್ತಾರೆ.
ನಿಜದ ಗುರು ನಂಬಿಕೆ ಎನ್ನುವುದನ್ನೇ ಅಸಾಧ್ಯವನ್ನಾಗಿಸಿಬಿಡುತ್ತಾನೆ. ನಂಬಿಕೆ ಅಸಾಧ್ಯವಾಗಿರುವಾಗಲೂ ನೀವು ಅದರಲ್ಲಿ ವಿಶ್ವಾಸವಿಡುವಿರಾದರೆ ಆಗ ಅದು ಕೆಲಸ ಮಾಡಲು ಶುರು ಮಾಡುತ್ತದೆ, ಆಗ ಮಾತ್ರ ನಿಮ್ಮ ನಂಬಿಕೆ ಕಾರ್ಯಗತವಾಗಲು ಆರಂಭಿಸುತ್ತದೆ. ಗುರು ನಂಬಿಕೆಯನ್ನ ಸಾಧ್ಯ ಮತ್ತು ಸರಳ ಮಾಡಿಬಿಟ್ಟನಾದರೆ, ನಿಮ್ಮ ಕಲ್ಪನೆಯ ಗುರುವಿನ ಎಲ್ಲ ಐಡಿಯಾಗಳನ್ನೂ ಪೂರೈಸಿಬಿಡಬಲ್ಲನಾದರೆ, ಆಗ ಅಂಥ ನಂಬಿಕೆ ಬೆಲೆ ಕಳೆದುಕೊಳ್ಳುತ್ತದೆ ಹಾಗೆಯೇ ಅರ್ಥವನ್ನೂ.
ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.
ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ
ಮಾಸ್ಟರ್ : ಯಾಕೆ? ಏನು ವಿಷಯ?
ಯುವಕ : ನಾನು ದೇವರನ್ನು ಹುಡುಕಬೇಕು
ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.
ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.
ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?
ಯುವಕ : ಗಾಳಿ, ಗಾಳಿ ಬೇಕನಿಸಿತ್ತು ಮಾಸ್ಟರ್.
ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.