ಮನುಷ್ಯನೊಂದೇ ಜಾತಿ. ಅದೇ ನಮ್ಮ ಮತ… | ಗುರು ವಚನ #5

ಮತ ಯಾವುದಾದರೂ ಮನುಷ್ಯ ಒಳ್ಳೆಯವನಾಗಲು ಶ್ರಮಿಸುತ್ತಲೇ ಇರಬೇಕು. ಇಲ್ಲವಾದರೆ ಅವನು ಕೆಳಗಿಳಿಯುತ್ತಲೇ ಹೋಗುತ್ತಾನೆ. ವರ್ತನೆ ಶುದ್ಧವಾಗಿರಬೇಕು. ಮಾತು ಮತ್ತು ವಿಚಾರಗಳು ಶುದ್ಧವಾಗಿರಬೇಕು. ಈ ಮೂರರಲ್ಲೂ ತಪ್ಪುಗಳಾಗಬಾರದು…

ಕೆ. ಅಯ್ಯಪ್ಪನ್ (1889-1968) ಎಂಬ ಹೆಸರಿನ ಈ ವಿಚಾರವಾದಿ, ಲೇಖಕ, ಕವಿ, ಚಿಂತಕ, ಸಮಾಜ ಸುಧಾರಕ ಪ್ರಖ್ಯಾತರಾಗಿರುವುದು ಸಹೋದರನ್ ಅಯ್ಯಪ್ಪನ್ ಎಂಬ ಹೆಸರಿನಲ್ಲಿ. ತಮ್ಮ ‘ಸಹೋದರ ಸಂಘ’ದ ಮೂಲಕ ಸಹಭೋಜನವನ್ನೇ ಒಂದು ಚಳವಳಿಯಾಗಿ ಕಟ್ಟಿದವರು. ಪ್ರಖರ ವಿಚಾರವಾದಿ. ಇವರನ್ನು ವೈಚಾರಿಕ ಕೇರಳದ ಶಿಲ್ಪಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ. ನಾರಾಯಣ ಗುರುಗಳ ಚಿಂತನೆಯ ಅನುಷ್ಠಾನದಲ್ಲಿ ಅಯ್ಯಪ್ಪನ್ ಅವರದ್ದೊಂದು ವಿಶಿಷ್ಟ ಮಾರ್ಗ. ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂನ ಪ್ರಧಾನ ಕಾರ್ಯದರ್ಶಿಯಾಗಿದ್ದ ಕವಿ ಕುಮಾರನ್ ಆಶಾನ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ವಿವೇಕೋದಯಂ’ನಲ್ಲಿ ಪ್ರಕಟವಾದ ನಾರಾಯಣ ಗುರು ಮತ್ತು ಅಯ್ಯಪ್ಪನ್ ಸಂವಾದದ ತುಣುಕೊಂದು ಇಲ್ಲಿದೆ. ಇದರ ಅನುವಾದ ನನ್ನದು. ಈ ಸಂವಾದಕ್ಕೆ ಮತ್ತೊಂದು ಮಹತ್ವವೂ ಇದೆ. ಈಗ ಮಲಯಾಳಂ ಭಾಷೆಯ ಗಾದೆ ಅಥವಾ ನುಡಿಗಟ್ಟಾಗಿ ಪರಿವರ್ತನೆಗೊಂಡಿರುವ ‘ಮತಮೇದಾಯಾಲುಂ ಮನುಷ್ಯನ್ ನನ್ನಾಕಣಂ’ (ಮತ ಯಾವುದೇ ಆಗಿದ್ದರೂ ಮನುಷ್ಯ ಒಳ್ಳೆಯವನಾಗಬೇಕು) ಎಂಬುದು ವಾಸ್ತವದಲ್ಲಿ ನಾರಾಯಣ ಗುರುವಚನ. ಆ ಮಾತು ಗುರು ಮುಖದಿಂದ ಹೊರಬಿದ್ದದ್ದು ಈ ಸಂವಾದದಲ್ಲಿ. । ಎನ್.ಎ.ಎಂ.ಇಸ್ಮಾಯಿಲ್

ನಾರಾಯಣ ಗುರು: ಅಯ್ಯಪ್ಪನ್… ಡಾಕ್ಟರು [ಪಲ್ಪು] ಮತಾಂತರವಾಗಬೇಕು ಅನ್ನುತ್ತಿದ್ದಾರಲ್ಲಾ…?

ಅಯ್ಯಪ್ಪನ್: ಮತಾಂತರಗೊಳ್ಳುವುದು ಅನಿವಾರ್ಯ ಎಂದು ಹಲವರು ಭಾವಿಸಿದ್ದಾರೆ.

ಗುರು: ಮನುಷ್ಯ ಒಳ್ಳೆಯವನಾದರೆ ಸಾಕಲ್ಲವೇ? ಮತವನ್ನು ಬದಲಾಯಿಸುವುದು ಎಂದರೆ ಅದೇ ತಾನೇ? ಅದಕ್ಕೆ ಹೊರತಾದ ಮತ್ಯಾವುದೋ ಬದಲಾವಣೆಯ ಬಗ್ಗೆ ಇವರೆಲ್ಲಾ ಹೇಳುತ್ತಿದ್ದಾರೆಯೇ?

ಅಯ್ಯಪ್ಪನ್: ಮನುಷ್ಯ ಒಳ್ಳೆಯವನಾಗುವುದಕ್ಕೆ ಅತಿ ಹೆಚ್ಚು ಮಾರ್ಗಗಳು ಬುದ್ಧ ಮತದಲ್ಲಿರುವಂತೆ ಕಾಣಿಸುತ್ತದೆ.

ಗುರು: ಬೌದ್ಧರೆಲ್ಲಾ ಒಳ್ಳೆಯ ಮನುಷ್ಯರೇ? ಮದ್ಯಪಾನ ಮಾಡುವವರು, ಅಸಮಾನತೆಯನ್ನು ಆಚರಿಸುವವರೂ ಅಲ್ಲೂ ಸಾಕಷ್ಟೂ ಮಂದಿಯಿದ್ದಾರೆಂದು ನಾವು ಕೇಳಿ ಬಲ್ಲೆವು.

ಅಯ್ಯಪ್ಪನ್: ಆ ದೃಷ್ಟಿಯಲ್ಲಿ ಈಗಿನ ಬೌದ್ಧರಲ್ಲಿ ಒಳ್ಳೆಯವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಬಹುದು.

ಗುರು: ಹಾಗೋ… ನಾವೂ ಅದನ್ನು ಕೇಳಿ ಬಲ್ಲೆವು. ಬೌದ್ಧ ಸನ್ಯಾಸಿಗಳು ತಮಗೆ ಭಿಕ್ಷೆಯಾಗಿ ದೊರೆತದ್ದನ್ನು ತಿನ್ನಬೇಕಲ್ಲವೇ? ಭಿಕ್ಷುವಿಗೆ ಯಾವುದಾದರೊಂದು ಪದಾರ್ಥ ರುಚಿಸಿದರೆ, ಭಿಕ್ಷೆ ನೀಡುವವರೂ ಅದನ್ನು ಅರಿತು ಮತ್ತೆ ಮತ್ತೆ ಅದನ್ನೇ ಭಿಕ್ಷೆಯಾಗಿ ಕೊಡುತ್ತಿದ್ದರೆ ಅದು ಸನ್ಯಾಸವನ್ನೇ ಕೆಡಿಸುವುದಲ್ಲವೇ? ಅದು ಒಳ್ಳೆಯದೇ?

ಅಯ್ಯಪ್ಪನ್: ಈ ನಡುವೆ ಬೌದ್ಧ ಧರ್ಮವೂ ಕೆಟ್ಟಿದೆ. ಆದರೂ ಮನುಷ್ಯ ಒಳ್ಳೆಯವನಾಗುವುದಕ್ಕೆ ಬುದ್ಧನ ಬೋಧನೆಗಳಷ್ಟು ಉತ್ತಮವಾದುದು ಮತ್ತೊಂದಿಲ್ಲ.

ಗುರು: ಕ್ರೈಸ್ತ ಧರ್ಮದ ಬೋಧನೆಗಳು ಒಳ್ಳೆಯವಲ್ಲವೇ?  ಪ್ರವಾದಿ ಮುಹಮ್ಮದರ ಬೋಧನೆಗಳೂ ಒಳ್ಳೆಯವೇ ತಾನೇ? ಹಾಗಿರುವುದರಿಂದ ಮತ ಯಾವುದಾದರೂ ಮನುಷ್ಯ ಒಳ್ಳೆಯವನಾಗಲು ಶ್ರಮಿಸುತ್ತಲೇ ಇರಬೇಕು. ಇಲ್ಲವಾದರೆ ಅವನು ಕೆಳಗಿಳಿಯುತ್ತಲೇ ಹೋಗುತ್ತಾನೆ. ವರ್ತನೆ ಶುದ್ಧವಾಗಿರಬೇಕು. ಮಾತು ಮತ್ತು ವಿಚಾರಗಳು ಶುದ್ಧವಾಗಿರಬೇಕು. ಈ ಮೂರರಲ್ಲೂ ತಪ್ಪುಗಳಾಗಬಾರದು. ತಪ್ಪಾದ ನಂತರ ಅಯ್ಯೋ! ತಪ್ಪಾಯಿತಲ್ಲಾ ಎಂದು ತಿದ್ದಿಕೊಳ್ಳುವ ಸ್ಥಿತಿ ಬಾರದಷ್ಟು ಮನಸ್ಸು ಶುದ್ಧವಾಗಿರಬೇಕು. ಇದುವೇ ಜೀವನ್ಮುಕ್ತ ಸ್ಥಿತಿ.

ಅಯ್ಯಪ್ಪನ್: ಬೌದ್ಧರು ಅದನ್ನು ನಿರ್ವಾಣ ಎನ್ನುತ್ತಾರೆ.

ಗುರು: ಹಾಗೋ… ಇರಬಹುದು. ಜಾತಿ ಮನುಷ್ಯನೊಳಕ್ಕೆ ಪ್ರವೇಶ ಪಡೆದು ಬಲಗೊಂಡುಬಿಟ್ಟಿತು. ಶಂಕರಾಚಾರ್ಯರೂ ಈ ವಿಚಾರದಲ್ಲಿ ತಪ್ಪಿದರೇನೋ… ಬ್ರಹ್ಮಸೂತ್ರವನ್ನೂ ಗೀತೆಯನ್ನೂ ಬರೆದ ವ್ಯಾಸ ಕೂಡಾ ಚಾತುರ್ವರ್ಣದ ಕುರಿತು ಎರಡು ಕಡೆ ಎರಡು ಬಗೆಯಲ್ಲಿ ಹೇಳಿದ್ದಾನಲ್ಲವೇ… ಜಾತಿಯನ್ನು ನಾಶ ಮಾಡಬೇಕು. ಅದಲ್ಲದೇ ಬೇರೇ ಮಾರ್ಗವೇ ಇಲ್ಲ. ಮನುಷ್ಯರೆಲ್ಲಾ ಒಂದೇ ಸಮುದಾಯವಲ್ಲವೇ. ಈ ಮಟ್ಟಿಗೆ ಜಾತಿಯನ್ನು ನಿರ್ಲಕ್ಷಿಸಬೇಕು. ಮತಾಂತರದ ಬಗ್ಗೆ ಕುಮಾರನ್ ಆಶಾನ್‌ರ ಅಭಿಪ್ರಾಯವೇನು?

ಅಯ್ಯಪ್ಪನ್: ಗುರುಗಳ ಅಭಿಪ್ರಾಯವನ್ನು ಅರಿಯದೇ ಮತಾಂತರಕ್ಕೆ ಮುಂದಾಗುವುದು ಗುರುಗಳನ್ನು ನಿರ್ಲಕ್ಷಿಸಿದಂತೆ ಎಂಬುದು ಆಶಾನ್ ಅವರ ನಿಲುವು.

ಗುರು: ಹೌದೇ?

ಅಯ್ಯಪ್ಪನ್: ಈ ವಿಚಾರದಲ್ಲಿ ಗುರುಗಳ ಅಭಿಪ್ರಾಯವೇನೆಂದು ತಿಳಿಯಬೇಕೆಂಬುದು ಆಶಾನ್‌ ಅವರ ಅಪೇಕ್ಷೆ.

ಗುರು: ನಮ್ಮ ಅಭಿಪ್ರಾಯವೇನೆಂದು ಇಲ್ಲಿಯ ತನಕ ಸ್ಪಷ್ಟವಾಗಲಿಲ್ಲವೇ? ನಮ್ಮ ಅಭಿಪ್ರಾಯವೇನೆಂದು ನಿಮಗಾದರೂ ಗೊತ್ತೇ?

ಅಯ್ಯಪ್ಪನ್: ನನಗೆ ಗೊತ್ತು. ಗುರುಗಳಿಗೆ ಯಾವ ಮತದ ಬಗೆಗೂ ತಿರಸ್ಕಾರವಿಲ್ಲ. ಮತ, ಉಡುಪು, ಭಾಷೆಗಳು ಯಾವುದೇ ಆಗಿದ್ದರೂ ಮನುಷ್ಯರು ಒಂದು ಸಮಾಜವಾಗಿ ಬದುಕಬೇಕೆಂಬುದು ಗುರುಗಳ ನಿಲುವು ಎಂಬುದು ನನಗೆ ಸ್ಪಷ್ಟವಾಗಿದೆ.

ಗುರು: ಹೌದು, ಅದುವೇ ನಮ್ಮ ನಿಲುವು. ಮತ ಎಂದರೆ ಅಭಿಪ್ರಾಯ. ಅದೇ ಯಾವುದೇ ಆಗಿದ್ದರೂ ಮನುಷ್ಯರು ಒಟ್ಟಾಗಿ ಬದುಕಬಹುದು. ಜಾತಿ ಭೇದ ಬರಕೂಡದು. ಅದು ಸಾಧ್ಯ, ಸತ್ಯವ್ರತನನ್ನೇ ನೋಡಿ (ಸತ್ಯವ್ರತ ಸ್ವಾಮಿಗಳು). ಅವನೊಳಗೆ ಸ್ವಲ್ಪವಾದರೂ ಜಾತಿಯಿದೆಯೇ?

ಅಯ್ಯಪ್ಪನ್: ಸತ್ಯವ್ರತ ಸ್ವಾಮಿಗಳೊಳಗೆ ಜಾತಿಯೇ…!

ಗುರು: ನಾವ್ಯಾರೂ ಅಷ್ಟರ ಮಟ್ಟಿಗೆ ಜಾತಿಯನ್ನು ಕಳೆದುಕೊಂಡಿಲ್ಲ ಅನ್ನಿಸುತ್ತದೆ. ಬುದ್ಧನಾದರೂ ಅದನ್ನು ಕಳೆದುಕೊಂಡಿದ್ದನೇ… ಸತ್ಯವ್ರತನಲ್ಲಂತೂ ಜಾತಿಯ ಲವಲೇಶವೂ ಇಲ್ಲ. ಹಾಗೆ ಬದುಕಬಹುದಲ್ಲವೇ?

ಅಯ್ಯಪ್ಪನ್: ಮತಾಂತರ ಯಾಕೆ? ನಮಗೆ ನಾರಾಯಣ ಮತವೇ ಸಾಕಲ್ಲವೇ ಎಂದು ಹಲವು ಕೇಳುತ್ತಿದ್ದಾರೆ.

ಗುರು: ಅದೇಕೆ? ಎಲ್ಲರಿಗೂ ಅವರಿಗಿಷ್ಟವಿರುವ ಮತವನ್ನು ಅನುಸರಿಸುವ ಸ್ವಾತಂತ್ರ್ಯವಿದೆಯಲ್ಲವೇ. ಮತ ಯಾವುದಾದರೇನು….

ಅಯ್ಯಪ್ಪನ್: ಗುರುಗಳ ಅಭಿಪ್ರಾಯ ಮೊದಲು ಹೇಳಿದಂತೆಯೇ…

ಗುರು: ನಮಗೆ ಈಗ ಇರುವ ಅಭಿಪ್ರಾಯ ಹಿಂದೆ ಅಭಿಪ್ರಾಯಗಳೆರಡೂ ಒಂದೇ. ಯಾರಿಗಾದರೂ ಮತಾಂತರ ಅಗತ್ಯವೆನಿಸಿದರೆ ಅವರದನ್ನು ಮಾಡಲಿ. ಅದಕ್ಕೆ ಸ್ವಾತಂತ್ರ್ಯವಿರಬೇಕು. ಮತಾಂತರಗೊಂಡು ಹೊರಗೆ ಸುಳ್ಳು ಹೇಳುವುದು ಪಾಪ. ಮತವೆಂಬುದು ಅವರವರ ಇಷ್ಟ. ಅಪ್ಪನ ಮತವೇ ಮಗನಿಗೂ ಇಷ್ಟವಾಗಬೇಕೆಂದೇನೂ ಇಲ್ಲ. ಮನುಷ್ಯರಿಗೆ ತಮಗೆ ಬೇಕನ್ನಿಸುವ ಮತವನ್ನು ಅನುಸರಿಸುವ ಸ್ವಾತಂತ್ರ್ಯವಿರಬೇಕೆಂಬುದು ನಮ್ಮ ಅಭಿಪ್ರಾಯ. ನಿಮಗೂ ಹಾಗೆ ಹೇಳಲು ಸಾಧ್ಯವೇ?

ಅಯ್ಯಪ್ಪನ್: ನಾನಂತೂ ಹಾಗೇ ಹೇಳುತ್ತಿದ್ದೇನೆ. ಇತ್ತೀಚೆಗೆ ಒಂದು ದಾಖಲೆಯಲ್ಲಿ ನನ್ನದು ಬೌದ್ಧ ಮತವೆಂದು ದಾಖಲಿಸಿದೆ.

ಗುರು: (ನಗುತ್ತಾ) ಜಾತಿಯ ಹೆಸರು ಬರೆಯಲಿಲ್ಲ ತಾನೇ. ಜಾತಿ ಬರಕೂಡದು. ಎಲ್ಲೂ ಜಾತಿ ಇರಬಾರದು. ಮನುಷ್ಯರೆಲ್ಲಾ ಒಂದು ಜಾತಿಯಾಗಿ ಬದುಕಬೇಕು. ಇದೇ ಅಭಿಪ್ರಾಯ ಎಲ್ಲೆಡೆಯೂ ಹರಡಬೇಕು. ಮನುಷ್ಯನೊಂದೇ ಜಾತಿ. ಅದೇ ನಮ್ಮ ಮತ.

Leave a Reply