ಕೇರಳದ ಮೊದಲ ಕಾರ್ಮಿಕ ಸಂಘಟನೆಗೆ ಕಾರಣರಾದ ನಾರಾಯಣ ಗುರು

ಕೇರಳದ ಮೊದಲ ಕಾರ್ಮಿಕರ ಮುಷ್ಕರವನ್ನು ಸಂಘಟಿಸಿದ್ದು ಮಹಾತ್ಮಾ ಆಯ್ಯಂಕಾಳಿ ಸ್ವಾಮಿಗಳಾಗಿದ್ದರೆ, ಕೇರಳದ ಮೊಟ್ಟ ಮೊದಲ ನೋಂದಾಯಿತ ಕಾರ್ಮಿಕ ಸಂಘಟನೆಗೆ ಕಾರಣವಾದದ್ದು ನಾರಾಯಣ ಗುರುಗಳು. ಇದಕ್ಕೆ ಸಂಬಂಧಿಸಿದ ವಿವರಗಳು ‘ಕೇರಳ ಕೌಮುದಿ’ ಪತ್ರಿಕೆಯಲ್ಲಿ ಪ್ರಕಟವಾದ ಸಜೀವ್ ಕೃಷ್ಣನ್ ಅವರ ಲೇಖನದಲ್ಲಿ ಲಭ್ಯ । ಎನ್.ಎ.ಎಂ.ಇಸ್ಮಾಯಿಲ್

ಆಲಪ್ಪುಳದ ಕಿಡಙಾಂಪರಂಬ್‌ನ ದೇಗುಲಕ್ಕೆ ನಾರಾಯಣ ಗುರುಗಳು ಬಂದಿದ್ದಾರೆಂಬ ಸಂಗತಿ ಟಿ.ಸಿ. ಕೇಶವನ್ ವೈದ್ಯರ ಮೂಲಕ ವಡಪ್ಪುರಂ ಪಿ.ಕೆ. ಬಾವಾ ಅವರಿಗೆ ತಿಳಿಯಿತು. ತಕ್ಷಣವೇ ಅವರು ಗುರುಗಳಿದ್ದ ದೇಗುಲ ತಲುಪಿದರು. ಆಲಪ್ಪುಳದಲ್ಲಿ ಬ್ರಿಟಿಷರ ಮಾಲಿಕತ್ವದಲ್ಲಿದ್ದ ಡರಾಸ್ ಮೇಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಹಳ ಕಷ್ಟಗಳನ್ನು ಅನುಭವಿಸಬೇಕಿತ್ತು. ಚಾಟಿಯೇಟಿನಿಂದ ತೊಡಗಿ ಹಲ ಬಗೆಯ ಶಿಕ್ಷೆಗಳನ್ನು ಮಾಲೀಕರು ನೀಡುತ್ತಿದ್ದರು. ಇಷ್ಟೆಲ್ಲಾ ಅನುಭವಿಸಿದ ನಂತರವೂ ಕಾರ್ಮಿಕರಿಗೆ ದೊರೆಯುತ್ತಿದ್ದದ್ದು ಪುಡಿಗಾಸು. ಹೀಗೆ ಶೋಷಣೆಗೆ ಒಳಗಾಗಿದ್ದ ಕಾರ್ಮಿಕರಲ್ಲಿ ಬಾವಾ ಕೂಡಾ ಒಬ್ಬರು. ಗುರುಗಳನ್ನು ಭೇಟಿಯಾದ ಅವರು ತಮ್ಮನ್ನೂ  ಸಹ ಕಾರ್ಮಿಕರನ್ನೂ ಶೋಷಣೆಯಿಂದ ರಕ್ಷಿಸುವಂತೆ ಮೊರೆಯಿಟ್ಟರು.

ಗುರುಗಳು ಕೇಳಿದರು “ನನ್ನ ಉಪದೇಶ ನಿಮಗೆ ರಕ್ಷೆಯಾಗಬಹುದೇ?”

“ನಿಮ್ಮಿಂದ ಮಾತ್ರ ನಮ್ಮ ರಕ್ಷಣೆ ಸಾಧ್ಯ” ಎಂಬುದು ಬಾವಾ ಅವರ ಉತ್ತರವಾಗಿತ್ತು.

“ಹಾಗಿದ್ದರೆ ಅಲ್ಲಿ ಕೆಲಸ ಮಾಡುವವರೆಲ್ಲಾ ಒಟ್ಟು ಸೇರಿ ಸಂಘ ಕಟ್ಟಲಿ. ಸಂಘದ ಶಕ್ತಿಯಲ್ಲಿ ಅವರು ಸ್ವತಂತ್ರರೂ ಬಲಶಾಲಿಗಳೂ ಆಗಲಿ”

ಕಾರ್ಮಿಕರ ಸ್ವಾತಂತ್ರ್ಯವನ್ನು ಘೋಷಿಸಿದ ಈ ನುಡಿಗಳನ್ನು ಕೇಳಿ ಬಾವಾ ಸಂಘಟನಾ ಕಾರ್ಯದಲ್ಲಿ ತೊಡಗಿದರು. 1922ರ ಮಾರ್ಚ್ 31ರಂದು ಆಲಂಮೂಟ್ಟಿಲ್ ಕೇಶವನ್ ಅವರ ಸ್ಥಳದಲ್ಲಿ ಕೇರಳ ಮೊಟ್ಟ ಮೊದಲ ಕಾರ್ಮಿಕ ಸಂಘಟನೆಯನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ವಾಡಪ್ಪುರಂ ಪಿ.ಕೆ. ಬಾವಾ ಅವರ ಜೊತೆಗೆ ಎನ್.ಕೃಷ್ಣನ್ ಕೂಡಾ ಇದ್ದರು. ಗುರುಗಳ ಮಾತಿನಂತೆ ಈ ಸಂಘವನ್ನು ಕಟ್ಟುತ್ತಿದ್ದೇವೆಂದು ವಿವರಿಸಿದ್ದರ ಹಿಂದೆಯೇ ಕಾರ್ಮಿಕರ ಮನಸ್ಸಿನಲ್ಲಿದ್ದ ಸಂಶಯಗಳೆಲ್ಲವೂ ಪರಿಹಾರಗೊಂಡವು. 1922ರ ಏಪ್ರಿಲ್ 23ರಂದು ಆಲಪ್ಪುಳ ಕಳಪ್ಪುರ ದೇಗುಲದ ಮೈದಾನದಲ್ಲಿ ‘ತಿರುವಿದಾಂಕೂರ್ ಲೇಬರ್ ಅಸೋಸಿಯೇಷನ್’ ಎಂಬ ಕೇರಳದ ಮೊದಲ ಕಾರ್ಮಿಕ ಸಂಘಟನೆಯ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಗುರುಗಳ ಪರವಾಗಿ ಸ್ವಾಮಿ ಸತ್ಯವ್ರತ ಭಾಗವಹಿಸಿದ್ದರು. ಅವರು ಅಂದು ಓದಿದ ಗುರು ಸಂದೇಶ ಹೀಗಿತ್ತು “ಯಾವ ಭಯವೂ ಬೇಕಿಲ್ಲ… ಇನ್ನು ಬರಲಿರುವುದು ಕಾರ್ಮಿಕರ ಯುಗ. ಧೈರ್ಯದಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಿರಿ”.

ಈ ಸಂಘಟನೆಯ ಶಕ್ತಿಯೆದುರು ಮಾಲೀಕತ್ವ ಮಣಿಯಿತು ಎಂಬುದು ಈಗ ಇತಿಹಾಸ. ಇದಾದ 16 ವರ್ಷಗಳ ನಂತರ ಕೇರಳದಲ್ಲಿ ಕಮ್ಯುನಿಸ್ಟ್ ಸಂಘಟನೆಗಳು ರೂಪುಗೊಂಡವು. ಅದರ ಹಿಂದೆ ನಾರಾಯಣ ಗುರುಗಳ ಪ್ರೇರಣೆಯಿಂದ ಆರಂಭವಾದ ಕಾರ್ಮಿಕ ಸಂಘಟನೆಯ ಪಾತ್ರವಿತ್ತು. ಪಿ. ಕೃಷ್ಣಪಿಳ್ಳ, ಆರ್. ಸುಗತನ್, ಕೆ.ಪಿ. ಪತ್ರೋಸ್, ಟಿ.ವಿ. ಥಾಮಸ್, ಪಿ. ಕೇಶವದೇವ್ ಮುಂತಾದ ಕಮ್ಯುನಿಸ್ಟ್ ಪ್ರಮುಖರೆಲ್ಲರ ಹಿನ್ನೆಲೆಯಲ್ಲೂ ಗುರು ಪ್ರೇರಣೆಯಿಂದ ಸ್ಥಾಪಿತವಾದ ಸಂಘಟನೆಯಿತ್ತು.

Leave a Reply