ಅಕ್ಕ, ಲಲ್ಲಾ, ರಾಬಿಯಾ… 3 ಪದ್ಯಗಳು

ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೆ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ. ಮಹಿಳಾ ದಿನದ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ…

ಅಕ್ಕ ಕಂಡ ಚೆನ್ನಮಲ್ಲಯ್ಯನ ಕನಸು…

ಚೆನ್ನಮಲ್ಲಿಕಾರ್ಜುನನ್ನು ಕನಸಿನಲ್ಲಿ ಕಂಡ ಕುರಿತು ಅಕ್ಕ ಮಹಾದೇವಿ ರಚಿಸಿರುವ ಎರಡು ವಚನಗಳು ಇಲ್ಲಿವೆ: ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ.  ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು  ಬಂದೆನ್ನ ನೆರೆದ ನೋಡವ್ವಾ.  ಆತನನಪ್ಪಿಕೊಂಡು ತಳವೆಳಗಾದೆನು.  ಚೆನ್ನಮಲ್ಲಿಕಾರ್ಜುನನ ಕಂಡು  ಕಣ್ಣಮುಚ್ಚಿ ತೆರೆದು ತಳವೆಳಗಾದೆನು.  ~ ಅಕ್ಕ ಕೇಳೌ, ನಾನೊಂದು ಕನಸ ಕಂಡೆ.  ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.  ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು  ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.  ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.  […]