ಏಸುವಿನೊಡನೆ ಒಂದು ಸಂಭಾಷಣೆ : ನಿತ್ಯ ಚೈತನ್ಯ ಯತಿ

ನಾರಾಯಣ ಗುರುಗಳ ಪರಂಪರೆಯ ಗುರು ನಿತ್ಯಚೈತನ್ಯ ಯತಿಗಳು ಎಲ್ಲ ಧರ್ಮಗಳ ಬಗ್ಗೆಯೂ ಆಳವಾದ ಅರಿವಿದ್ದವರು. ದೇಹಕ್ಕೆ ಬಾಧಿಸುವ ರೋಗಗಳಿಗಿಂತಲೂ ಹೆಚ್ಚಾಗಿ ಮನುಷ್ಯನನ್ನು ಕಾಡುವುದು ಮನಸ್ಸಿಗೆ ಬಾಧಿಸುವ ಆಧ್ಯಾತ್ಮಿಕ ರೋಗಗಳು. ಈ ರೋಗಗಳನ್ನು ಪರಿಹರಿಸಿದ ಮಹಾವೈದ್ಯರಲ್ಲಿ ಯೇಸು ಕ್ರಿಸ್ತರೂ ಇದ್ದಾರೆಂಬುದು ಯತಿಗಳ ಅನಿಸಿಕೆ. ಅವರು ಈ ಬಗೆಯ ಅಪೂರ್ವ ವೈದ್ಯರ ಕುರಿತು ರಚಿಸಿರುವ ಗ್ರಂಥದಲ್ಲಿರುವ ಯೇಸುವಿನ ಕುರಿತ ಬರೆಹದ ಭಾವಾನುವಾದ ಇಲ್ಲಿದೆ. ಎನ್ ಎ ಎಂ ಇಸ್ಮಾಯಿಲ್ ಅವರ ಬ್ಲಾಗ್ ನಿಂದ ಇದನ್ನು ಮರುಪ್ರಕಟಿಸಲಾಗುತ್ತಿದೆ.

ಏಸುಕ್ರಿಸ್ತ : ಬೆಟ್ಟದ ಮೇಲಿನ ಬೋಧನೆಗಳು

ಏಸು ಕ್ರಿಸ್ತ ಗೆಲಿಲಿಯೋ ಪ್ರಾಂತ್ಯದಲ್ಲಿ ಸಂಚರಿಸುತ್ತಿದ್ದಾಗ ಸಾವಿರಾರು ಜನ ನೆರೆದು, ತಮಗೆ ಉಪದೇಶ ನೀಡಬೇಕೆಂದು ಕೇಳಿಕೊಂಡರು. ಆಗ ಏಸುಕ್ರಿಸ್ತನು ಊರಿನ ಅಂಚಿನಲ್ಲಿದ್ದ ಬೆಟ್ಟವೊಂದರ ಮೇಲೆ ಕುಳಿತು ಮಾತನಾಡತೊಡಗಿದನು. ಈ ಸಂದರ್ಭದಲ್ಲಿ ನೀಡಿದ ಉಪದೇಶಗಳು ‘ಬೆಟ್ಟದ ಮೇಲಿನ ಬೋಧನೆಗಳು’ ಎಂದು ಖ್ಯಾತವಾಗಿವೆ. ಈ ಪ್ರಸಂಗ ಬೈಬಲ್ಲಿನ ‘ಹೊಸ ಒಡಂಬಡಿಕೆ’ಯಲ್ಲಿ ಕಾಣಸಿಗುತ್ತದೆ.